
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, 17 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವ ನಿರೀಕ್ಷೆ ಇದ್ದರೂ, ನ್ಯಾಯಾಲಯ ಅದನ್ನು ನಾಳೆ (ಏ.17)ಗೆ ಮುಂದೂಡಿದೆ.
ಇಂದು ನಡೆದ ವಿಚಾರಣೆಯಲ್ಲಿ ಅಪರಾಧಿಗಳ ಪರ ವಾದ-ಪ್ರತಿವಾದಗಳು ನಡೆದಿದ್ದು, ಹಲವು ಆರೋಪಿಗಳು ತಮ್ಮ ವೈಯಕ್ತಿಕ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಶಿಕ್ಷೆ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಕುಟುಂಬದ ಜವಾಬ್ದಾರಿಗಳು, ಅನಾರೋಗ್ಯ ಮತ್ತು ಆರ್ಥಿಕ ಸ್ಥಿತಿ ಕುರಿತು ಹೇಳಿಕೆ ನೀಡಿ ನ್ಯಾಯಾಧೀಶರ ಮುಂದೆ ವಿನಂತಿಸಿದ್ದಾರೆ.
ಪ್ರಮುಖ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಸಹ ತಮ್ಮ ಮೇಲೆ ರಾಜಕೀಯ ಕಾರಣಗಳಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿ, ಕುಟುಂಬದ ಹೊಣೆಗಾರಿಕೆಗಳನ್ನು ಉಲ್ಲೇಖಿಸಿ ಕರುಣೆ ತೋರಿಸುವಂತೆ ಕೇಳಿಕೊಂಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣದ ಅಂತಿಮ ತೀರ್ಪು ನಾಳೆ ಹೊರಬೀಳಲಿದ್ದು, ಪ್ರತಿಯೊಬ್ಬ ಆರೋಪಿಯ ಪಾತ್ರದ ಆಧಾರದ ಮೇಲೆ ಶಿಕ್ಷೆ ಘೋಷಣೆಯಾಗಲಿದೆ.


































