
ಬಜ್ಪೆ: ಹಿಂದೂ ಜಾಗರಣ ವೇದಿಕೆ ಮುಖಂಡ ಸಮಿತ್ ರಾಜ್ ಎಂಬವರು ಯುವತಿಯೊಬ್ಬಳ ನಗ್ನ ಫೋಟೋಗಳನ್ನು ಪಡೆದುಕೊಂಡು ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಕೊಲೆ ಬೆದರಿಕೆ ಹಾಕಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಸೆ. 27ರಂದು ಪ್ರಕರಣ ದಾಖಲಾಗಿದೆ.
ಸಮಿತ್ ರಾಜ್ ಹಿಂದೂ ಜಾಗರಣ ವೇದಿಕೆ ಮುಖಂಡ ಹಾಗೂ ಮೂಲ್ಕಿ-ಮೂಡುಬಿದರೆ ಶಾಸಕ ಉಮನಾಥ್ ಕೋಟ್ಯಾನ್ ಅವರ ಆಪ್ತರಾಗಿದ್ದು 2023ರಲ್ಲಿ ಸಂತ್ರಸ್ತೆಯ ಸಹೋದರನಿಗೆ ಅಪಘಾತವಾದ ಸಂದರ್ಭದಲ್ಲಿ, ಶಾಸಕರಿಂದ ಆರ್ಥಿಕ ಸಹಾಯ ಮಾಡುವ ಮೂಲಕ ಪರಿಚಯವಾಗಿದ್ದ ಸಮಿತ್ ರಾಜ್ ಪದೇ ಪದೇ ಸಂತ್ರಸ್ತೆ ಮೊಬೈಲ್ ಫೋನ್ ಗೆ ಕರೆ ಮಾಡಿ ಸ್ನೇಹ ಬೆಳೆಸಿಕೊಂಡು ಬಳಿಕ ಪ್ರೀತಿ ಮಾಡಿ ಮದುವೆಯಾಗುವುದಾಗಿ ಹೇಳಿದ್ದ.
ಯುವತಿಯು ಮನೆಯವರೊಂದಿಗೆ ಮಾತನಾಡುವಂತೆ ತಿಳಿಸಿದಾಗ ಆಕೆಯ ತಾಯಿಯು ಸಣ್ಣ ವಯಸ್ಸಿಗೆ ಮದುವೆ ಮಾಡಿಸುವುದಿಲ್ಲ ಎಂದು ತಿಳಿಸಿದರು. ಆದರೂ ಈತ ಪದೇ ಪದೇ ಆಕೆಗೆ ಕರೆ ಮಾಡುತ್ತಿದ್ದು ಕರೆ ಸ್ವೀಕರಿಸದಿದ್ದಾಗ ಮನೆ ಬಳಿ ಬರುವುದಾಗಿ ಬೆದರಿಸುತ್ತಿದ್ದರಿಂದ ಆತನ ಒತ್ತಡಕ್ಕೆ ಮಣಿದು ಸಂತ್ರಸ್ತೆ ಮಾತನಾಡುತ್ತಿದ್ದಳು.
2023 ಮಾರ್ಚ್ 23 ರಂದು ಕಾಲೇಜಿನಿಂದ ಹಿಂದಿರುಗುತ್ತಿದ್ದ ವೇಳೆ ಆರೋಪಿಯು ಕಾರಿನಲ್ಲಿ ಬಂದು ಆಕೆಯನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಬಲತ್ಕಾರವಾಗಿ ಅತ್ಯಾಚಾರಕ್ಕೆ ಯತ್ನಿಸಿ, ಈ ವಿಚಾರ ಯಾರಿಗಾದರೂ ಹೇಳಿದರೆ ನನ್ನನ್ನು ಮತ್ತು ನನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಆಕೆಯ ಅಶ್ಲೀಲ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ ನಗ್ನ ಫೋಟೋಗಳನ್ನು ಕಳಿಸುವಂತೆ ಕೇಳುತ್ತಿದ್ದು, ಇದಕ್ಕೆ ಹೆದರಿದ ಯುವತಿ ನಗ್ನ ಫೋಟೋಗಳನ್ನು ಕಳುಹಿಸಿದ್ದೆ ಎಂದು ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಬಜ್ಪೆ ಪೊಲೀಸರು IPC 1860 (U/s-354(A),504,506)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.






















































