27.2 C
Udupi
Wednesday, December 31, 2025
spot_img
spot_img
HomeBlogಯುವಜನತೆಯ ದಿಕ್ಕು ತಪ್ಪಿಸುತ್ತಿರುವ, ಹೊಸ ವರ್ಷಾಚರಣೆ

ಯುವಜನತೆಯ ದಿಕ್ಕು ತಪ್ಪಿಸುತ್ತಿರುವ, ಹೊಸ ವರ್ಷಾಚರಣೆ

ಸಂಸ್ಕೃತಿ ,ಸಂಸ್ಕಾರ, ಸಂಪ್ರದಾಯ, ನಂಬಿಕೆಗಳು ಅರ್ಥ ಕಳೆದುಕೊಳ್ಳುತ್ತಿವೆ”

ಡಾ. ಸುಮತಿ ಪಿ

ಯುವಜನತೆಯ ದಿಕ್ಕು ತಪ್ಪಿಸುತ್ತಿರುವ ಹೊಸ ವರ್ಷಾಚರಣೆ

ನವ ವರ್ಷ ಅಥವಾ ಹೊಸ ವರ್ಷ ಎಂದಾಗ ಅದೇನೊ ಪುಳಕ, ಹೊಸದನ್ನು ಸ್ವೀಕರಿಸಬೇಕೆನ್ನುವ ಮನೋಲ್ಲಾಸ. ಹಳೆಯದನ್ನು ಮರೆತು, ಹೊಸತನವನ್ನು ಮೈಗೂಡಿಸಿಕೊಂಡು,ತಮ್ಮ ಜೀವನದ ಕನಸನ್ನು ಕಾಣುವ ಯುವಕರು ಹೊಸ ವರ್ಷಾಚರಣೆಯ ಗುಂಗಿನಲ್ಲಿ ಕಳೆದು ಹೋಗಿ, ಅನೇಕ ಅಪಾಯಗಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ.

ಹೊಸ ವರ್ಷದ ಆಚರಣೆ ನಡೆದುಕೊಂಡು ಬಂದಿರುವುದು ಇಂದು ನಿನ್ನೆಯಿಂದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬುದಕ್ಕೆ ಸಾಕಷ್ಟು ಸುಳುಹುಗಳನ್ನು ನಾವು ಇತಿಹಾಸದಲ್ಲಿ ಕಾಣುತ್ತೇವೆ. ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮ ಎಲ್ಲೆಡೆ ಕಾಣಸಿಗುತ್ತದೆ. ಪ್ರಾಚೀನ ಕಾಲದಲ್ಲೂ ಜನರು ಹೊಸ ವರ್ಷ ವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದರು ಎಂಬುದನ್ನು ನಾವು ಓದಿ ತಿಳಿದುಕೊಂಡಿದ್ದೇವೆ.

ಹಿಂದಿನ ಕಾಲದಲ್ಲಿ ಧಾರ್ಮಿಕ ಹಾಗೂ ಸಂಪ್ರದಾಯಿಕ ಹಿನ್ನೆಲೆಯಿಂದ ಆಚರಿಸಿಕೊಂಡು ಬರುತ್ತಿದ್ದಂತಹ ಹೊಸ ವರ್ಷದ ಆಚರಣೆ ಇಂದು ಬದಲಾವಣೆಗೊಳ್ಳುತ್ತಾ, ಹೊಸ ರೂಪವನ್ನು ಪಡೆದಿದೆ. ಇಂದು ಮೋಜು, ಮಸ್ತಿ, ಕುಡಿತ ,ಕುಣಿತ ಇವೇ ಹೊಸ ವರ್ಷಾಚರಣೆಯ ಸಂಭ್ರಮವನ್ನು ಆಕ್ರಮಿಸಿ ಕೊಂಡಿವೆ.ಈಗಿನ ಯುವ ಜನತೆಗೆ ಹೊಸ ವರ್ಷದ ಆಚರಣೆ ಎಂದರೆ ಅದೊಂದು ಮೋಜಿನಾಟವಲ್ಲದೇ ಬೇರೇನೂ ಅಲ್ಲ. ಮನೆಯಲ್ಲಿನ ಹಿರಿಯರು ಮೂಲೆಗುಂಪಾಗು ತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕೃತಿ,ಸಂಸ್ಕಾರ, ಸಂಪ್ರದಾಯ, ನಂಬಿಕೆ, ವಿಶ್ವಾಸಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಸ್ಮಾರ್ಟ್ ಫೋನ್, ವಾಟ್ಸ್ ಆ್ಯಪ್‌ಗಳ ಹಾವಳಿಯಿಂದಾಗಿ ಇಂದಿನ ಯುವಕರು ಬೀಚ್‌ನಲ್ಲೋ, ಪಬ್‌ನಲ್ಲೋ ಕುಳಿತುಕೊಂಡು ಊರಿನಲ್ಲಿರುವ,ಮನೆಯಲ್ಲಿರುವ ಹೆತ್ತವರಿಗೆ ಹೊಸ ವರ್ಷದ ಸಂದೇಶ ಕಳಿಸುವ ಪರಿಪಾಠ ಬೆಳೆಯುತ್ತಿದೆ.

ಹೊಸ ವರ್ಷಾಚರಣೆಗಾಗಿಯೇ ನಗರದ ಪ್ರತಿಷ್ಠಿತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ರೆಸಾರ್ಟ್‌ಗಳು, ಡಾಬಾಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.ಡಿ ಜೆ ಗೆ ಹೆಜ್ಜೆ ಹಾಕುವ ಪ್ರೇಮಿಗಳ ಕಲರವ ಯುವಕರ ಮನಸ್ಸನ್ನು ಹುಚ್ಚುಗಟ್ಟಿಸುವಂತಿರುತ್ತದೆ. ಇಂತಹ ಹೊಸ ವರ್ಷ ಆಚರಣೆಯಲ್ಲಿ ಮುಳುಗಿದ ಯುವಕರು ಅನೇಕ ದುರಭ್ಯಾಸಗಳಿಗೆ ಅಂಟಿಕೊಳ್ಳುತ್ತಾರೆ. ಅಲ್ಲದೆ ಪಬ್ಬು, ಪಾರ್ಟಿ ಎಂದು ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ, ವೃತ್ತಿಯಲ್ಲಿ ಬದ್ಧತೆಯನ್ನೂ ಕಳೆದುಕೊಳ್ಳುವವರು ಇದ್ದಾರೆ. ಕುಟುಂಬದವರನ್ನು ನಿರ್ಲಕ್ಷಿಸಿ,ತಮ್ಮದೇ ಆದ ದಾರಿಯನ್ನು ಹಿಡಿದು ಜೀವನವನ್ನು ಹಾಳು ಮಾಡಿಕೊಳ್ಳುವವರೂ ಇದ್ದಾರೆ. ಇದನ್ನೆಲ್ಲ ನೋಡುವಾಗ ಇಂದಿನ ಹೊಸ ವರ್ಷಾಚರಣೆ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದರೆ ಸುಳ್ಳಾಗಲಾರದು.ಹೊಸ ವರ್ಷದಲ್ಲಿ ಸಂಭ್ರಮ ಪಡುವುದಕ್ಕೆ ಹೋಗಿ,ಏನೇನೋ ಅನಾಹುತಗಳನ್ನು ಮಾಡಿಕೊಂಡು, ಸಂಕಷ್ಟಕ್ಕೆ ಈಡಾಗುತ್ತಾ, ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿ ಜೀವನವನ್ನು ಅಂತ್ಯಗಾಣಿಸುವವರೂ ಇದ್ದಾರೆ .

ಮೊದಲೆಲ್ಲ ಹೊಸ ವರ್ಷಾಚರಣೆ ಎಂದರೆ ಬದುಕಿನಲ್ಲಿ ನಡೆದ ಕಷ್ಟಗಳನ್ನು ಮರೆತು, ಕಳೆದುಹೋದ ಬದುಕಿನ ದಿನಗಳ ಚಿಂತನ ಮಂಥನ ಮಾಡಿಕೊಂಡು ಮುಂದಿನ ಬದುಕಿನಲ್ಲಿ ನಡೆಯಬೇಕಾದ ಜೀವನದ ರೂಪುರೇಷೆಯನ್ನು ಹಾಕಿಕೊಳ್ಳುತ್ತಾ, ಒಮ್ಮೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯನ್ನು ವಹಿಸಲು ಮುಂಜಾಗ್ರತ ಕ್ರಮವಾಗಿ ಮುಂದಿನ ವರುಷದ ಜೀವನ ನಡೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವಂತಹ ಸುಸಂದರ್ಭವು ಹೊಸ ವರ್ಷವಾಗಿರುತ್ತಿತ್ತು ಇದೀಗ ಹೊಸ ವರ್ಷಾಚರಣೆ ಹೊಸ ಹೊಸ ರೂಪಗಳನ್ನು ಪಡೆಯುತ್ತಿದ್ದು, ಯುವಕರನ್ನು ಮೋಡಿ ಮಾಡುತ್ತಿದೆ. ಹೊಸ ವರ್ಷಾಚರಣೆ ಎಂದರೆ ಯುವಕರು ಕುಡಿಯುವುದು, ಮೋಜು, ಮಸ್ತಿ ಎಂದೇ ಭಾವಿಸಿರುವಂತೆ ಕಾಣಿಸುತ್ತದೆ.

ದೇವಸ್ಥಾನಕ್ಕೆ ಹೋಗಿಯೋ ಅಥವಾ ಮನೆ ದೇವರನ್ನು ವಿಶೇಷ ಭಕ್ತಿಯಿಂದ ಭಜಿಸಿಯೋ,ಮಾಡಿದ ತಪ್ಪುಗಳನ್ನು ಮನ್ನಿಸುವಂತೆ ಕೇಳಿಕೊಂಡು, ಹೊಸ ವರ್ಷದಲ್ಲಿ ಹೊಸ ರೀತಿಯ ಸುಂದರ ಜೀವನವನ್ನು ಕರುಣಿಸಬೇಕೆಂದು ಬೇಡುವಂತಹ ಸಂಸ್ಕಾರ ನಮ್ಮ ಹಿಂದಿನ ಅವಿಭಕ್ತ ಕುಟುಂಬದಲ್ಲಿತ್ತು. ಆದರೆ ಈಗ ಅಂತಹ ಯಾವುದೇ ಸಂಸ್ಕಾರ ನಮಗೆ ಕಾಣಿಸಿಗದು. ಹೊಸ ವರ್ಷವೆಂದರೆ ಅದೇನೋ ಸಂಭ್ರಮ!.ಹುಚ್ಚು ಆಚರಣೆ! ಮನೆಯಿಂದ ಹೊರಗಡೆ ಹೋಗಿ ಪಾರ್ಟಿಗಳಲ್ಲೋ ಅಥವಾ ಪಬ್ಬುಗಳಲ್ಲೋ ಚೆನ್ನಾಗಿ ತಿಂದುಂಡು ಕುಡಿದು ಕುಣಿಯುವುದೇ ಸಂಭ್ರಮ ಎಂದುಕೊಂಡಂತಿದೆ ನಮ್ಮ ಮಕ್ಕಳು.

ಇಂತಹ ಹೊಸ ವರ್ಷದ ಆಚರಣೆಯಲ್ಲಿ ಮುಳುಗಿ ಹೋಗುವ ಎಷ್ಟೋ ಮಕ್ಕಳು ತಮಗರಿವಿಲ್ಲದಂತೆಯೇ ತಮ್ಮ ಜೀವನದಲ್ಲಿ ಅನೇಕ ಅಪಾಯಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಕುಡಿದು ಮೋಜು ಮಸ್ತಿ ಮಾಡುವಾಗ ಸಂಘರ್ಷಗಳು ಉಂಟಾಗಿ ಜಗಳಗಳು ಕೊಲೆಯಲ್ಲಿ ಕೊನೆಗೊಳ್ಳುವುದೂ ಇದೆ.ಪಾರ್ಟಿಗಳಲ್ಲಿ ಕುಡಿದು, ಕುಣಿದು ಕುಪ್ಪಳಿಸುವ ಯುವಕರು ಹೊಸ ವರ್ಷದ ದಿನ ತಾವು ” ಸರ್ವ ಸ್ವತಂತ್ರರು” ಎಂಬಭ್ರಮೆಯಲ್ಲಿರುತ್ತಾರೆ. ಇದರಿಂದಾಗಿ ಮಹಿಳೆಯರನ್ನು ಚುಡಾಯಿಸುವುದು ಮುಂತಾದ ಅಹಿತಕರ ಘಟನೆಗಳು ನಡೆಯುತ್ತವೆ. ಅಲ್ಲದೇ ಸಮಾಜದ ಶಾಂತಿ ಕದಡುತ್ತದೆ. ಹೊಸ ವರ್ಷದ ದಿನ ಅಂದರೆ ಡಿಸೆಂಬರ್ 31ರ ರಾತ್ರಿ ಸಮಾಜದಲ್ಲಿ ಶಿಸ್ತು ಸಂಯಮವನ್ನು ಕಾಪಾಡುವಂತೆ ನೋಡಿಕೊಳ್ಳುವುದು ಪೊಲೀಸರಿಗೂ ಸವಾಲಿನ ಕೆಲಸವಾಗಿರುತ್ತದೆ.
ಹೊಸ ವರ್ಷ ಆಚರಣೆಯಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವುದಕ್ಕಾಗಿ ಸರಕಾರ ಎಷ್ಟೇ ಮುಂಜಾಗ್ರತ ಕ್ರಮಗಳನ್ನು ವಹಿಸಿಕೊಂಡರೂ, ಯುವಕರ ಹುಚ್ಚುತನದಿಂದಾಗಿ ಅನಾಹುತಗಳು ನಡೆಯುತ್ತಲೇ ಇರುತ್ತವೆ.ಇತ್ತೀಚಿನ ದಿನಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ನಿಟ್ಟಿನಲ್ಲಿ ಯುವಕರು ನಡೆಸುತ್ತಿರುವ ದುಂದುವೆಚ್ಚವನ್ನು ಗಮನಿಸಿದರೆ, ನಮ್ಮ ಯುವಕರು ಎತ್ತ ಸಾಗುತ್ತಿದ್ದಾರೆ ಎಂಬ ಭಯ ಮೂಡುತ್ತದೆ. ಕಂಠಪೂರ್ತಿ ಮದ್ಯ ಕುಡಿದು, ಕುಣಿದು, ಕುಪ್ಪಳಿಸುವ ವಿದೇಶಿ ಸಂಸ್ಕೃತಿ ನಮ್ಮ ಯುವಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತ ಇರುವುದು ಕಳವಳಕಾರಿ ಸಂಗತಿಯಾಗಿದೆ.

ರಾತ್ರಿಯ ವೇಳೆ ಹೊಸ ವರ್ಷಾಚರಣೆ ಸಂಭ್ರಮದ ನೆಪದಲ್ಲಿ ನಡೆಯುವ ಪಾರ್ಟಿಗಳ ಜೊತೆ ಜೊತೆಗೆ, ಸಮಾಜದಲ್ಲಿ ಶಾಂತಿ ಕದಡುವ, ಅಸಭ್ಯವಾಗಿ ವರ್ತಿಸುವವರ ಪ್ರಮಾಣವು ಹೆಚ್ಚುತ್ತಿದೆ. ಯುವತಿಯರು ಕೂಡಾ ಮದ್ಯದ ನಶೆಯಲ್ಲಿ ತೇಲುವ, ಆಶ್ಲೀಲವಾಗಿ ವರ್ತಿಸುವ ದೃಶ್ಯಗಳು ಪ್ರತಿವರ್ಷ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುತ್ತವೆ.ಕೊಲೆ, ಅಪರಾಧ ಕೃತ್ಯಗಳು ನಡೆಯುತ್ತಿರುತ್ತವೆ.ಇದೆಲ್ಲ ನಿಲ್ಲಬೇಕು. ನಮ್ಮ ಯುವ ಜನತೆಗೆ ಜೀವನ ಸಂಸ್ಕಾರವನ್ನು ನೀಡಬೇಕು

ಹೊಸ ವರ್ಷಾಚರಣೆಯಂದು ವರ್ಷದುದ್ದಕ್ಕೂ ತಮ್ಮ ಜೀವನ ಸಾಗಿ ಬಂದ ಬಗ್ಗೆ ಅವಲೋಕನ ಮಾಡುತ್ತಾ,. ತಿಳಿದೋ, ತಿಳಿಯದೆಯೋ ಮಾಡಿರುವ ತಪ್ಪುಗಳಿದ್ದರೆ ಅವುಗಳನ್ನು ತಿದ್ದಿಕೊಂಡು,ಸನ್ನಡತೆಯಿಂದ ಬದುಕುವ ಸಂಕಲ್ಪ ಕೈಗೊಳ್ಳಬೇಕು.ತಮ್ಮ ಕುಟುಂಬದ ಸದಸ್ಯರೊಂದಿಗೆ ಸೇರಿ ಹೊಸ ವರ್ಷಾಚರಣೆ ಮಾಡುವುದು ಒಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಹೊಸ ವರ್ಷದ ದಿನ ಅನಾಥಾಶ್ರಮ, ಆಸ್ಪತ್ರೆ, ವೃದ್ಧಾಶ್ರಮಗಳಲ್ಲಿ ಒಂದಷ್ಟು ಅಶಕ್ತರ ಸೇವೆ ಮಾಡುವುದು, ಅವರಿಗೆ ಆಹಾರ ಹಂಚುವುದು. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದು, ರಕ್ತದಾನ ಮಾಡುವುದು,ಪರಿಸರ ಸಂರಕ್ಷಣೆಯ ಕೆಲಸದಲ್ಲಿ ನಿರತರಾಗುವುದು ಮುಂತಾದ ಸಾಮಾಜಿಕ ಒಳಿತನ್ನುಂಟುಮಾಡುವ ಕಾರ್ಯಗಳನ್ನು ಕೈಗೊಂಡು ಹೊಸ ವರ್ಷಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು.

ಹೊಸ ವರ್ಷವೆಂದರೆ ಕೇವಲ ದಿನಾಂಕದ ಬದಲಾವಣೆ ಅಲ್ಲ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿರ್ಧಾರ ಕೈಗೊಳ್ಳುವ ಅಪೂರ್ವ ಅವಕಾಶ. ಕಳೆದ ವರ್ಷದ ತಪ್ಪುಗಳಿಂದ ಪಾಠ ಕಲಿತು, ಮುಂದಿನ ವರ್ಷವನ್ನು ಉತ್ತಮವಾಗಿ ಕಳೆಯಲು ಪ್ರೇರಣೆ ನೀಡುವ ಸಮಯ. ಹೊಸ ವರ್ಷಾಚರಣೆ ಎಂಬುದು ಆನಂದ, ನಂಬಿಕೆ ಮತ್ತು ಆಶಯಗಳ ಸಂಗಮವಾಗಲಿ. ಹೊಸ ವರ್ಷಾಚರಣೆ ಜನರನ್ನು ಒಂದುಗೂಡಿಸಿ, ಹೊಸ ಜೀವನದ ಆರಂಭಕ್ಕೆ ನಾಂದಿಯಾಗಲಿ.ಈ ದಿನದಂದು ಯುವ ಜನಾಂಗ ತಮ್ಮ ಜೀವನದ ಗುರಿಗಳನ್ನು ಮರುಪರಿಶೀಲಿಸಿ, ಸಕಾರಾತ್ಮಕ ಚಿಂತನೆಗಳಿಂದ ಮುನ್ನಡೆಯಲು ಸಂಕಲ್ಪ ಮಾಡಲಿ. ಈ ನಿಟ್ಟಿನಲ್ಲಿ ಮನೆಯ ಸಮಾಜದ ಹಾಗೂ ಪರಿಸರದ ಹಿರಿಯರು ಮಾರ್ಗದರ್ಶನ ನೀಡುವಂತವರಾಗಲಿ. ಹೊಸ ವರ್ಷ ಎಲ್ಲರ ಜೀವನದಲ್ಲೂ ಹೊಸ ಜೀವನವನ್ನು ಕರುಣಿಸಿ, ಸಂತೃಪ್ತಿಯನ್ನು ತರಲೆಂಬ ಆಶಯ ಪ್ರತಿಯೊಬ್ಬರ ಮನಸ್ಸಿನಲ್ಲಿರಲಿ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page