
ಕಾರ್ಕಳ :ಪರಶುರಾಮನ ನಕಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡಿ ಧರ್ಮ ದ್ರೋಹದ ಕೆಲಸ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷ ಸಂಘಟಿತ ಹೋರಾಟವನ್ನು ಕಳೆದ ಎರಡು ವರ್ಷಗಳಿಂದ ನಿರಂತರ ಮಾಡುತ್ತಾ ಬಂದಿದೆ, ಇದಕ್ಕೆ ಪಕ್ಷದ ಎಲ್ಲಾ ಹಿರಿಯ ನಾಯಕರ ಸಂಪೂರ್ಣ ಬೆಂಬಲವು ದೊರಕಿದ್ದು ಅವಿಭಜಿತ ದ.ಕ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಂದ ಸಾವಿರಾರು ಕಾರ್ಯಕರ್ತರು ಬೆಂಗಳೂರಿನಲ್ಲಿ ಸೇರಿ ಪ್ರತಿಭಟನೆಯನ್ನು ರಾಜ್ಯದ ರಾಜಧಾನಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಅಸಲಿ ಕಂಚಿನ ಪ್ರತಿಮೆಯನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶದಿಂದ ಹೋರಾಟವನ್ನು ಒಂದು ಹೊಸ ಆಯಾಮವನ್ನು ನೀಡುವ ಉದ್ದೇಶದಿಂದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಾ ವೇದಿಕೆಯನ್ನು ರಚಿಸಿ ಅದಕ್ಕೆ ಕೃಷ್ಣ ಶೆಟ್ಟಿ ಬಜಗೋಳಿ ಎಂಬ ವ್ಯಕ್ತಿಯನ್ನು ಅದರ ಅಧ್ಯಕ್ಷನಾಗಿ ಮಾಡಿ ಅವರ ಮೇಲೆ ಭರವಸೆಯನ್ನು ಇಟ್ಟು ಜವಾಬ್ದಾರಿಯನ್ನು ನೀಡಲಾಗಿತ್ತು ಆದರೆ ಇಂದು ಅದೇ ವ್ಯಕ್ತಿ ಪರಶುರಾಮನ ಪ್ರತಿಮೆಯ ವಿಚಾರವಾಗಿ ಪಕ್ಷದ ನಾಯಕರ ವಿರುದ್ದ ವ್ಯತಿರಿಕ್ತವಾಗಿ ಹೇಳಿಕೆಯನ್ನು ನೀಡಿ ಪಕ್ಷಕ್ಕೆ ಮತ್ತು ಪಕ್ಷದ ನಾಯಕರಿಗೆ ದ್ರೋಹ ಬಗೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಮತ್ತು ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರು ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾಡಿದ ಭಾಷಣವನ್ನು ಆಕ್ಷೇಪಿಸಿ ಭಾಷಣಕ್ಕೆ ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರ ವಿರುದ್ದವೇ ಹೇಳಿಕೆ ನೀಡಿರುವುದು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಎಸಗಿದ ದ್ರೋಹವಾಗಿದೆ. ತನಗೆ ಸ್ಥಾನ ಮಾನ ನೀಡಿದ ಪಕ್ಷವನ್ನು ಮತ್ತು ಪಕ್ಷದ ನಾಯಕರನ್ನು ಬಹಿರಂಗವಾಗಿ ಟೀಕಿಸುವ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹೇಳಿಕೆಯಲ್ಲಿ ಪಕ್ಷ ವಿರೋದಿ ಚಟುವಟಿಕೆಯ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತದೆ. ಪಕ್ಷದ ನಾಯಕರನ್ನೇ ಬ್ಲಾಕ್ ಮೇಲ್ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷದಿಂದ ತಕ್ಷಣ ಉಚ್ಚಾಟನೆ ಮಾಡಬೇಕು ಎಂದು ಕೆ.ಡಿ.ಪಿ ಸದಸ್ಯ ರುಕ್ಮಯ ಶೆಟ್ಟಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.