
ಗುರುವಾರ ಸಂಸತ್ತಿನ ಸಂಕೀರ್ಣ ಕೇವಲ ಗಲಭೆ ಗದ್ದಲಗಳಿಂದಲೇ ಕೂಡಿದ್ದು ಬಿಜೆಪಿ, ಕಾಂಗ್ರೆಸ್ ನಡುವೆ ನೂಕು ನುಗ್ಗಲುಗಳಿಂದ ಇವರು ತಳ್ಳಿದರೆಂದು ಅವರು ಅವರು ತಳ್ಳಿದರೆಂದು ಇವರು ಜಗಳ ಮಾಡುತ್ತಾ ಬೀಳುತ್ತಲೇ ಇದ್ದರು. ಇದೆಲ್ಲದರಿಂದ ತಾಳ್ಮೆ ಕಳೆದುಕೊಂಡ ಸ್ಪೀಕರ್ ಓಂ ಬಿರ್ಲಾ ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷಗಳು, ಸಂಸದರು ಅಥವಾ ಸಂಸದರ ಗುಂಪು ಸಂಸತ್ ಭವನದ ಯಾವುದೇ ಪ್ರವೇಶ ದ್ವಾರದಲ್ಲಿ ಯಾವುದೇ ರೀತಿಯ ಪ್ರತಿಭಟನೆ ಅಥವಾ ಪ್ರತಿಭಟನೆ ನಡೆಸಲು ಅನುಮತಿ ಇರುವುದಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸಂಸತ್ ಭವನದಲ್ಲಿ ನಡೆದ ಪ್ರತಿಭಟನೆಯ ವೇಳೆ ಇಬ್ಬರು ಬಿಜೆಪಿ ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಗಾಯಗೊಂಡಿದ್ದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಳ್ಳಿದ್ದರಿಂದ ಇಬ್ಬರೂ ಸಂಸದರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಬಿಜೆಪಿಯ ಈ ಆರೋಪಗಳನ್ನು ಕಾಂಗ್ರೆಸ್ ಸಾರಾಸಗಟಾಗಿ ತಳ್ಳಿಹಾಕಿದೆ.
ಬಿಜೆಪಿ ಲೋಕಸಭಾ ಸದಸ್ಯರಾದ ಅನುರಾಗ್ ಠಾಕೂರ್ ಮತ್ತು ಬಾನ್ಸುರಿ ಸ್ವರಾಜ್ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದು ದೆಹಲಿ ಪೊಲೀಸರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಆರೋಪವನ್ನು ತಳ್ಳಿ ಹಾಕಿರುವ ಕಾಂಗ್ರೆಸ್ ಬಿಜೆಪಿ ಸಂಸದರು ತಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಹಲವಾರು ಮಹಿಳಾ ಸಂಸದರನ್ನು ಸಂಸತ್ ಭವನಕ್ಕೆ ಪ್ರವೇಶಿಸದಂತೆ ತಡೆದು ಗದ್ದಲ ಮಾಡಿದರು ಎಂದು ಹೇಳಿಕೊಂಡಿದೆ.