ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು

ಉಡುಪಿ: ಉಡುಪಿಯ ಪೇಜಾವರ ಶ್ರೀಗಳು ಯಕ್ಷಗಾನ ಕಲಾವಿದರ ಸಲಿಂಗಕಾಮ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಯಕ್ಷಗಾನ ಕಲಾವಿದರು ಮಹಾನ್ ಕಲಾತಪಸ್ವಿಗಳು, ಯಕ್ಷಗಾನವನ್ನು ಮೆಚ್ಚುವ ಎಲ್ಲರಿಗೂ ಇದೇ ಅಭಿಪ್ರಾಯವಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು ಇತ್ತೀಚೆಗೆ ಸಮಾಜದಲ್ಲಿ ಹಿರಿಯರು, ಸಾಹಿತಿಗಳು ಎಂದು ಅನಿಸಿಕೊಂಡಿರುವ ಒಬ್ಬರು ಕಲಾ ತಪಸ್ವಿಗಳ ಬಗ್ಗೆ ಕೀಳು ಅಭಿರುಚಿಯ ಮಾತುಗಳನ್ನಾಡಿದ್ದಾರೆ. ಅವರ ಈ ಹೇಳಿಕೆ ಆಕಾಶವನ್ನು ನೋಡಿ ಉಗುಳಿದ ಹಾಗಾಗಿದೆ. ಅವರ ಮಾತಿನಿಂದ ಯಾವುದೇ ಕಲಾರಸಿಕರು ಕಿಂಚಿತ್ತೂ ವಿಚಲಿತರಾಗಲಿಲ್ಲ. ಕಲಾವಿದರು ಕೂಡ ಈ ಹೇಳಿಕೆಯ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.



















