
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ಹೊಣೆಯಲ್ಲ, ಬದಲಾಗಿ ಅದು ಕೇಂದ್ರ ಸರ್ಕಾರದ ಹೊಣೆಯಾಗಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಧಮ್ ಇದ್ದರೆ ಮೆಟ್ರೋ ಪ್ರಯಾಣ ದರ ಕಡಿಮೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಬಸ್ ಪ್ರಯಾಣ ದರ ಏರಿಕೆ ಮಾಡಿದಾಗ ಇದೇ ಬಿಜೆಪಿ ನಾಯಕರು ಗುಲಾಬಿ ಹೂ ಹಿಡಿದುಕೊಂಡು ಬಸ್ ನಿಲ್ದಾಣಕ್ಕೆ ಹೋಗಿ ಪ್ರಯಾಣಿಕರ ಬಳಿ ಕ್ಷಮೆ ಕೇಳಿದ್ದರು. ಈಗಲೂ ಬಿಜೆಪಿ ನಾಯಕರು ಮೆಟ್ರೋ ನಿಲ್ದಾಣಕ್ಕೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಕ್ಷಮೆ ಕೇಳಲಿ. ಬೇಕಾದರೆ ಗುಲಾಬಿ ಹೂ ನಾವೇ ತಂದು ಕೊಡುತ್ತೇವೆ ಎಂದು ವ್ಯಂಗ್ಯವಾಡಿರುವ ಪ್ರಿಯಾಂಕ್ ಖರ್ಗೆ ಪ್ರಯಾಣದರ ಹೆಚ್ಚು ಮಾಡಿದಾಗ ರಾಜ್ಯ ಸರ್ಕಾರದ ವಿರುದ್ಧ ಗೂಬೆ ಕೂರಿಸುವುದು, ಕಡಿಮೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದು ಬಿಡಲಿ ಎಂದು ಕಿಡಿಕಾರಿದರು.