
ಗುವಾಹಟಿ: ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದಾಗ ಪತಿಯನ್ನೆ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯ ಲಭಿಸಿದ್ದು, ಕೊಲೆಗೆ ಬಳಸಿದ್ದ ಮಚ್ಚು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ರಘುವಂಶಿ ಅವರ ಪೋಷಕರು ಸೋನಂಳ ಮನೆಯವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಕೊಲೆ ಹಿಂದೆ ಹಲವರ ಕೈವಾಡವಿರುವ ಶಂಕೆ ಇದೆ ಎಂದು ಹೇಳಿದ್ದಾರೆ.
ಮೊದಲ ಸಲ ಸೋನಂ ಮತ್ತು ಇತರ ನಾಲ್ವರು ಮದುವೆಗೂ 11 ದಿನಗಳ ಮುಂಚೆಯೇ ಇಂದೋರ್‌ನಲ್ಲಿ ಕೊಲ್ಲುವುದಕ್ಕೆ ಸಂಚು ರೂಪಿಸಿದ್ದರು. ಬಳಿಕ ಮದುವೆ ನಂತರ ಮೇ 19ರಂದು ಗುವಾಹಟಿಯಲ್ಲಿ ಮತ್ತೊಂದು ಸಂಚು ರೂಪುಗೊಂಡಿತ್ತು. ಆದರೆ ಅದು ಸಫಲಗೊಂಡಿರಲಿಲ್ಲ. ಅದಾದ ಬಳಿಕ ನೊಂಗ್ರಿಯಾಟ್‌ನಲ್ಲಿ ಸ್ಕೆಚ್ ಹಾಕಿದ್ದು ಅಲ್ಲಿಯೂ ರಘುವಂಶಿ ಬದುಕುಳಿದಿದ್ದ. ಅನಂತರ ಮಾವಲಕ್ಯಾತ್ ಮತ್ತು ವೈಸಾವ್ಡಾಂಗ್ ಬಳಿ ಎರಡು ವಿಫಲ ಪ್ರಯತ್ನಗಳು ನಡೆದಿದ್ದು ಆದರೆ ಕೊನೆಗೆ ವೈಸಾವ್ಡಾಂಗ್ ಜಲಪಾತದ ಬಳಿ ರಘುವಂಶಿಯನ್ನು ಮುಗಿಸುವಲ್ಲಿ ಸಫಲರಾಗಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಸಿನಿಮೀಯಾ ರೀತಿಯಲ್ಲಿ ಕಥೆ ಸೃಷ್ಟಿಸಿದ್ದ ಈ ಗ್ಯಾಂಗ್ ಸೋನಂ ಕೂಡ ಸತ್ತು ಹೋಗಿದ್ದಾಳೆಂದು ಬಿಂಬಿಸಲು ಎರಡು ರೀತಿಯಲ್ಲಿ ಸಂಚು ರೂಪಿಸಿದ್ದರು. ಒಂದು ಆಕೆ ನದಿಗೆ ಬಿದ್ದು ಸತ್ತಿದ್ದಾಳೆಂದು ಎಂದು ಬಿಂಬಿಸುವ ಕಾರಣಕ್ಕೆ ಆಕೆಯ ಸ್ಕೂಟಿ ಬಿಡುವ ಪ್ರಯತ್ನ. ಮತ್ತೊಂದು ಸಂಚಿನಲ್ಲಿ ಯಾವುದೋ ಮಹಿಳೆಯನ್ಜು ಕೊಲೆ ಮಾಡಿ ಆಕೆಯ ದೇಹವನ್ನು ಸುಟ್ಟಿ ಅದು ಸೋಂನಂ ಎಂದು ಬಿಂಬಿಸುವ ತಂತ್ರ. ಅದರಿಂದ ಎಲ್ಲರೂ ಆಕೆಯೂ ಸತ್ತು ಹೋಗಿದ್ದಾರೆ ಎಂದು ಬಿಂಬಿಸಿ, ಸೋನಂ ತಲೆ ಮರೆಸಿಕೊಳ್ಳುವ ತಂತ್ರ ಅವರದ್ದಾಗಿತ್ತು. ಆದರೆ ಅಷ್ಟರೊಳಗೆ ಮೇಘಾಲಯ ಪೊಲೀಸರು ಪ್ರಕರಣ ಬೇಧಿಸಿದ್ದರು.






















































