
ಮಂಗಳೂರು: ಇತ್ತೀಚೆಗೆ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಮೂಡಿಬಿದ್ರೆ ಇನ್ಸ್ಪೆಕ್ಟರ್ ಸಂದೇಶ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದ್ದು ಅದೇನೆಂದರೆ, ಈ ಕುರಿತು ನಡೆಸಲಾದ ಸಮಗ್ರ ಪ್ರಾಥಮಿಕ ತನಿಕೆಯಲ್ಲಿ ಈ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ತಿಳಿದು ಬಂದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ದೂರುದಾರರಾದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಅವರು ನೀಡಿದ ದೂರುಗಳು ದುರುದ್ದೇಶಪೂರಿತವಾಗಿದ್ದು ಅಧಿಕಾರಿಯನ್ನು ಸಿಲುಕಿಸುವ ಉದ್ದೇಶ ಹೊಂದಿದವರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪೂರಕ ಸಾಕ್ಷಿ ಆಧಾರಗಳು ಲಭ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಹೊರಿಸಲಾದ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳಾಗಿದ್ದರೂ ಆಡಿಯೋ ಮತ್ತು ವಿಡಿಯೋಗಳಲ್ಲಿ ಕಂಡುಬಂದಿರುವ ಅವರ ನೈಜ ದುರ್ನಡೆತೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಹೀಗಾಗಿ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಠಾಣೆಗೆ ಬರುವ ಮಹಿಳೆಯರ ರಕ್ಷಣೆ ಮತ್ತು ಅವರೊಂದಿಗೆ ಗೌರವಯುತವಾಗಿ ವರ್ತಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು ಈ ಪ್ರಕರಣವು ಇಲಾಖೆಗೆ ಪಾಠವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ವರ್ತನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.






















































