
ಮೂಡುಬಿದಿರೆ: ಗುರುವಾರ ರಾತ್ರಿ ಕಾಮಗಾರಿ ಹಂತದಲ್ಲಿದ್ದ ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಖ್ಯಾತ ಕಂಟೆಂಟ್ ಕ್ರಿಯೇಟರ್ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮಾರ್ಪಾಡಿ ಗ್ರಾಮದ ಕೋಟೆ ಬಾಗಿಲಿನ ಸದಾನಂದ ಸುವರ್ಣ- ರಾಜಶ್ರೀ ದಂಪತಿಯ ಪುತ್ರ, ಮೂಡಬಿದಿರೆಯ ರೋಟರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶ್ರವಣ್ ಮೃತ ದುರ್ದೈವಿಯಾಗಿದ್ದಾರೆ. ಮೂಡುಬಿದಿರೆಯ ಖ್ಯಾತ ಕಂಟೆಂಟ್ ಕ್ರಿಯೇಟರ್ ಸೂರಜ್ ಅಂಚನ್ ಬೈಕ್ ಚಲಾಯಿಸುತ್ತಿದ್ದು ಶ್ರವಣ್ ಹಿಂಬದಿ ಸವಾರರಾಗಿದ್ದರು. ಮಾಹಿತಿಯಂತೆ, ಬನ್ನಡ್ಕ ದೈವಸ್ಥಾನ ಸಮೀಪ ರಸ್ತೆ ದಾಟುತಿದ್ದ ವೇಳೆ ಮೂಡಬಿದಿರೆ ಕಡೆಯಿಂದ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಶ್ರವಣ್ ಸೇರಿದಂತೆ ಸೂರಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಮೊದಲು ಮೂಡಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ಥಿತಿ ಗಂಭೀರವಾಗಿದ್ದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ತೀವ್ರ ಅಪಘಾತದ ಪರಿಣಾಮ ಶ್ರವಣ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.



















