
ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರಚೋಧನಕಾರಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಹಾಪುರ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಣೇಶ ವಿಸರ್ಜನೆ ವೇಳೆ ಎಲ್ಲಾ ಕಡೆ ಕಲ್ಲು ತೂರುವ ಪ್ರವೃತ್ತಿ ಕಾಣಿಸ್ತಾ ಇದೆ. ಕಲ್ಲು ಹೊಡೆಯುವ ಪ್ರವೃತ್ತಿ ಮುಸ್ಲಿಮರಿಗೆ ಯಾಕೆ ಬರುತ್ತೆ… ಹಿಂದೂಗಳು ಕೈಯಲ್ಲಿ ಒಂದೊಂದು ಕಲ್ಲು ಹಿಡಿದುಕೊಂಡ್ರೆ ನಿಮ್ಮ ಕಥೆ ಏನು ಆಗುತ್ತದೆ..?. ನ್ಯೂಕ್ಲಿಯರ್ ಬಾಂಬ್ ಮಾಡಿದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡೋಕೆ ಬರಲ್ವಾ..?. ಟಾಂಗಾಗಳು, ಗುಜರಿಗಳು ಮಾಡುವ ಕೆಲಸವನ್ನು ಕ್ಷಣ ಮಾತ್ರದಲ್ಲಿ ಹಿಂದೂಗಳಿಗೆ ಮಾಡಲು ಬರುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದರು.
ಶಹಾಪುರ ಪಿಎಸ್ಐ ಡಿ.ವಿ.ನಾಯಕ ಅವರು ಧಾರ್ಮಿಕ ನಂಬಿಕೆಗಳಿಗೆ ಅವಮಾನಗೊಳಿಸಿ ಪ್ರತಾಪ್ ಸಿಂಹ ಧ್ವೇಷ ಭಾವನೆಯಿಂದ ಮಾತನಾಡಿದ್ದು ಗಲಭೆ ಮಾಡುವಂತಹ ಪ್ರಚೋಧನಕಾರಿ ಹೇಳಿಕೆ ನೀಡಿದಕ್ಕೆ ಶಹಾಪುರ ಠಾಣೆಯಲ್ಲಿ ಸ್ವಯಂಕೃತ ದೂರು ದಾಖಲಿಸಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ 5 ಜನರ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ 299, 192 ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.













