
ಮುದ್ರಾಡಿಯಲ್ಲಿ ಕಣ್ಣಿನ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ “ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿಕೊಂಡು ಜೀವನದಲ್ಲಿ ನೆಮ್ಮದಿಯ ಬದುಕನ್ನು ಸಾಗಿಸಿ “ಡಾ. ಎಂ. ಎಸ್. ರಾವ್ ಹೆಬ್ರಿ :ರೋಗಗಳು ಬರುವ ಮೊದಲೇ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ನಾವು ದಿನನಿತ್ಯ ಬಳಸುವ ಆಹಾರ ಪದ್ದತಿಯ ಬಗ್ಗೆ ಎಚ್ಚರ ವಹಿಸಿಕೊಂಡು ನಮ್ಮ ಆರೋಗ್ಯಕ್ಕೆ ಪೂರಕವಾಗುವ ನಿಯಮಿತ ಆಹಾರ ಸೇವನೆ ರೂಢಿಸಿಕೊಳ್ಳಬೇಕು.
ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು ಜೀವನದಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳಿ. ಆರೋಗ್ಯ ಶಿಬಿರಗಳಲ್ಲಿ ಎಲ್ಲರೂ ಪಾಲ್ಗೊಂಡು ಅದರ ಸದುಪಯೋಗವನ್ನು ತಮ್ಮದಾಗಿಸಿಕೊಳ್ಳಿ ಎಂದು ಮುದ್ರಾಡಿಯ ಖ್ಯಾತ ವೈದ್ಯರಾದ ಡಾ. ಎಂ. ಎಸ್. ರಾವ್ ಹೇಳಿದರು.ಅವರು ಮುದ್ರಾಡಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಹೆಬ್ರಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಮತ್ತು ಎಸ್. ಡಿ. ಎಂ.ಆಯುರ್ವೇದ ಆಸ್ಪತ್ರೆ ಕುತ್ಪಾಡಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಣ್ಣಿನ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಉಡುಪಿ ಕುತ್ಪಾಡಿಯ ವೈದ್ಯರಾದ ಡಾ. ಗಾಯತ್ರಿ ಪ್ರತಿಯೊಬ್ಬರೂ ವರ್ಷಕೊಮ್ಮೆಯಾದರು ಕಣ್ಣಿನ ತಪಾಸಣೆಯನ್ನು ಮಾಡಿಕೊಳ್ಳಬೇಕು. ಮಧುಮೇಹ ಕಾಯಿಲೆ ಇದ್ದವರಿಗೆ , ಧೂಮಪಾನ ಸೇವನೆ ಮಾಡುವವರಿಗೆ ಕಣ್ಣಿನ ಸಮಸ್ಯೆ ಬೇಗ ಕಾಣಿಸಿಕೊಳ್ಳುತ್ತದೆ.ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ತಲೆನೋವು ಬಂದವರು ವೈದ್ಯರ ಸಲಹೆ ಪಡೆಯದೆ ಔಷಧಿ ಅಂಗಡಿಗಳಿಂದ ಸ್ವಯಂಕೃತವಾಗಿ ಔಷಧಿ ಪಡೆದುಕೊಂಡು ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ ಎಂದು ಹೇಳಿದರು.
ಕಿರಿಯ ಆರೋಗ್ಯ ಸಹಾಯಕಿ ಉಷಾ ಹೆಗ್ಡೆ ಮಾತನಾಡಿ ಮಳೆಗಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು ಯಾವುದೇ ರೀತಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು ಮತ್ತು ಮಳೆಗಾಲದಲ್ಲಿ ಮಲೇರಿಯಾ ಸಹಿತ ವಿವಿಧ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗೃತೆ ವಹಿಸಬೇಕು ಎಂದರು.ವೈದ್ಯರಾದ ಶಬರೀಶ್, ಮುದ್ರಾಡಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಎಂ.ಮಂಜುನಾಥ್ ಪೂಜಾರಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಗಣಪತಿ ಎಂ., ಸಂಪನ್ಮೂಲ ಶಿಕ್ಷಕ ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಮುದ್ರಾಡಿ ವಲಯಾಧ್ಯಕ್ಷರಾದ ರತ್ನಾಕರ ಪೂಜಾರಿ ಮಾತಿಬೆಟ್ಟು, ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ನಿವೃತ್ತ ಹಿರಿಯ ಆರೋಗ್ಯ ಅಧಿಕಾರಿ ಬಾಲಚಂದ್ರ ಎಂ. ಪಾಲ್ಗೊಂಡು ಶುಭ ಹಾರೈಸಿದರು.ಮುದ್ರಾಡಿ ವಲಯ ಮೇಲ್ವಿಚಾರಕರಾದ ಸುಮಲತಾ, ವರಂಗ ಮತ್ತು ಮಾತಿಬೆಟ್ಟು ಒಕ್ಕೂಟದ ಅಧ್ಯಕ್ಷರುಗಳಾದ ರಮೇಶ್ ಕುಲಾಲ್ ಅಡ್ಕಮತ್ತು ಭೋಜು ಪೂಜಾರಿ ಮಾತಿಬೆಟ್ಟು , ಮಾಜಿ ವಲಯಾಧ್ಯಕ್ಷರಾದ ಸುಧಾಕರ್ ಶೆಟ್ಟಿ ಬಲ್ಲಾಡಿ, ಬಲ್ಲಾಡಿ ಒಕ್ಕೂಟದ ಮಾಜಿ ಅಧ್ಯಕ್ಷ ಹರೀಶ್ ಕುಲಾಲ್,ಸೇವಾಪ್ರತಿನಿಧಿಗಳಾದ ವನಿತಾ, ಸಂಧ್ಯಾ,ವಾಣಿ, ಚಿತ್ರಾ ಉಪಸ್ಥಿತರಿದ್ದರು.ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ 45 ವರ್ಷಗಳ ಕಾಲ ನಿಸ್ವಾರ್ಥ ಸೇವೆಗೈದ ಡಾ. ಎಂ. ಎಸ್. ರಾವ್ ಅವರನ್ನು ಗ್ರಾಮಭಿವೃದ್ಧಿ ಮತ್ತು ಜ್ಞಾನವಿಕಾಸ ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು..ಸೇವಾಪ್ರತಿನಿಧಿ ಮಮತಾ ಸ್ವಾಗತಿಸಿದರು.ಹೆಬ್ರಿ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸುಮಾರು ನೂರಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆ, ರಕ್ತದೊತ್ತಡ, ಮಧುಮೇಹ ಸಹಿತ ವಿವಿಧ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು.