
ಮುದ್ರಾಡಿ ಸೇವಾಸಂಗಮ ಶಿಶುಮಂದಿರದಲ್ಲಿ ಕ್ರೀಡಾಕೂಟ
ಹೆಬ್ರಿ:ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಲು ಕ್ರೀಡೆಗಳು ಅತಿ ಅವಶ್ಯಕ.ನಮ್ಮ ಜೀವನ ಒತ್ತಡದ ಗೂಡಾಗಿದೆ. ಕ್ರೀಡೆಗಳು ನಮ್ಮ ಆತ್ಮ ಸ್ಟೈರ್ಯವನ್ನು, ದೈಹಿಕ ಕ್ಷಮತೆಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಸೋಲು, ಗೆಲುವಿನ ಬಗ್ಗೆ ಚಿಂತಿಸದೆ ಖುಷಿಯಿಂದ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಿ. ರಜತಮಹೋತ್ಸವ ಆಚರಣೆಯನ್ನು ನಡೆಸಲಿರುವ ಶಿಶುಮಂದಿರದಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಸೇವಾ ಸಂಗಮ ಶಿಶು ಮಂದಿರದ ಗೌರವಾಧ್ಯಕ್ಷರಾದ ನಿವೃತ್ತ ಶಿಕ್ಷಕ ಗಣಪತಿ ಪೈ ಹೇಳಿದರು.
ಅವರು ಮುದ್ರಾಡಿ ಸುಬ್ಬಣ್ಣಕಟ್ಟೆ ಸೇವಾಸಂಗಮ ಶಿಶುಮಂದಿರದ ರಜತಮಹೋತ್ಸವ ಅಂಗವಾಗಿ ನಡೆದ ಮಾತೆಯರ, ಪುರುಷರ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಹೆಬ್ರಿ ಆಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಅಧ್ಯಕ್ಷೆ ಸುನೀತಾ ಹೆಬ್ಬಾರ್, ರಜತ ಮಹೋತ್ಸವ ಸಮಿತಿ ಗೌರವ ಸಲಹೆಗಾರರಾದ ಸಂತೋಷ್ ಕುಮಾರ್ ಶೆಟ್ಟಿ ಪಾಲ್ಗೊಂಡು ಶುಭ ಹಾರೈಸಿದರು. ಸಮಿತಿಯ ಉಪಾಧ್ಯಕ್ಷರಾದ ಸುಲತಾ ಗಂಗಾಧರ ಹೆಗ್ಡೆ, ಸಮಿತಿ ಕಾರ್ಯದರ್ಶಿ ಅನುಶ್ರೀ ಮಲ್ಯ, ಮಾತಾಜಿ ಸುಮತಿ, ವ್ಯವಸ್ಥಾಪನ ಸಮಿತಿ ಹಾಗೂ ರಜತಮಹೋತ್ಸವ ಸಮಿತಿ ಪದಾಧಿಕಾರಿಗಳು, ಮಾತೆಯರು, ಬಾಲಗೋಕುಲ ಮಕ್ಕಳು ಉಪಸ್ಥಿತರಿದ್ದರು. ಶಿಶು ಮಂದಿರದ ವ್ಯವಸ್ಥಾಪಕಿ ಶಿಲ್ಪಾ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಶಿಶುಮಂದಿರದ ಸಂಚಾಲಕರಾದ ಶ್ರೀಧರ ನಾಯಕ್ ಸ್ವಾಗತಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಸಮಿತಿ ಜತೆ ಕಾರ್ಯದರ್ಶಿ ಅಶ್ವಿನಿ ಶೆಟ್ಟಿಗಾರ್ ವಂದಿಸಿದರು.






















































