ಗೋಸಂಪತ್ತು ರಕ್ಷಣೆಯಿಂದ ದೇಶ ಸುಭಿಕ್ಷೆಯಾಗಲಿದೆ :ವಿದ್ವಾನ್ ಗಿಲ್ಲಾಳಿ ಪದ್ಮನಾಭ ಆಚಾರ್ಯ

ಹೆಬ್ರಿ : ಮನುಷ್ಯನಿಗೆ ಗೋವುಗಳು ಬಂಧುಗಳು. ಗೋವಿನಲ್ಲಿ ಸಕಲ ದೇವತೆಗಳು ವಾಸವಾಗಿದ್ದಾರೆ. ಗೋವುಗಳಿಗೆ ನೀಡಿದ ಒಂದು ಹಿಡಿ ಗ್ರಾಸದಿಂದಲೂ ಕೂಡ ಮನುಷ್ಯನಿಗೆ ಅಪಾರ ಪುಣ್ಯ ಲಭಿಸುತ್ತದೆ. ವೇದಗಳು, ಉಪನಿಷ ತ್ತುಗಳು, ಮಹಾಕಾವ್ಯಗಳಲ್ಲಿ ಗೋವಿನ ಮಹಿಮೆಯನ್ನು ಸಾರುವ ಅನೇಕ ಉಲ್ಲೇಖ ಗಳಿವೆ. ಗೋವುಗಳು ನೀಡುವ ಪ್ರತಿಯೊಂದು ವಸ್ತುವೂ ನಮ್ಮ ಜೀವನಕ್ಕೆ ಅತಿ ಮುಖ್ಯವಾಗಿರುತ್ತದೆ. ಹಸುವಿನ ಗೊಬ್ಬರದಿಂದ ಬೆಳೆಸಿದ ಆಹಾರವು ಆರೋಗ್ಯಪೂರ್ಣ ಮತ್ತು ಪೌಷ್ಟಿಕದಾಯಕ.ಪಾದಯಾತ್ರೆಯ ಮೂಲಕ ಗೋಶಾಲೆಗೆ ಆಗಮಿಸಿ ಗೋಸೇವೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಭಗವಂತನ ಅನುಗ್ರಹ ಸದಾ ಇರಲಿ.ಗೋಸೇವೆಯನ್ನು ಮಾಡಲು ವಿವಿಧ ರೂಪದಲ್ಲಿ ಅವಕಾಶಗಳು ಗಿಲ್ಲಾಳಿ ಗೋಶಾಲೆಯಲ್ಲಿ ಲಭ್ಯವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ. ಪ್ರತಿನಿತ್ಯವೂ ಗೋಸೇವೆ ಮಾಡುವುದರ ಮೂಲಕ ಗೋಪಾಲಕೃಷ್ಣನ ಅನುಗ್ರಹಕ್ಕೆ ನಾವೆಲ್ಲರೂ ಪಾತ್ರರಾಗೋಣ ಎಂದು ಗಿಲ್ಲಾಳಿ ಗೋಶಾಲೆಯ ಟ್ರಸ್ಟಿಗಳಾದ ವಿದ್ವಾನ್ ಪದ್ಮನಾಭ ಆಚಾರ್ಯ ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಕಲ್ಪನಾ ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ವತಿಯಿಂದ ಉಡುಪಿ ಪೇಜಾವರ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಹೆಬ್ರಿಯ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ “ಮನುಕುಲದ ಉಳಿವಿಗಾಗಿ ಗೋಸಂಪತ್ತು “ಕುರಿತಾಗಿ ನಡೆಸಿದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪರಿಸರ ಸಂಘದ ಅಧ್ಯಕ್ಷ ಶೋಭಿತ್ ಯು. ಪೂಜಾರಿ, ಪರಿಸರ ಸಂಘ ಮತ್ತು ವಿಜ್ಞಾನ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಶ್ಯಾಮಲಾ ಕೊಠಾರಿ ಮತ್ತು ಚಂದ್ರಕಾಂತಿ ಹೆಗ್ಡೆ, ಉದ್ಯಮಿ ನಾರಾಯಣ ಕೊಠಾರಿ, ಕೆರಾಡಿ, ಪಿ. ವಿ. ಆನಂದ ಸಾಲಿಗ್ರಾಮ, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್,ಶಿಕ್ಷಕೇತರ ಸಿಬ್ಬಂದಿ ಮಹೇಶ್, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತೀಕ್ಷಾ ಕುಲಾಲ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕ ಮಹೇಶ್ ನಾಯ್ಕ್ ಕೆ.ವಂದಿಸಿದರು. ಪಾದಯಾತ್ರೆಯ ಮೂಲಕ ಗೋಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಗೋಶಾಲೆಯ ಪ್ರಾಕೃತಿಕ ಸುಂದರ ಪರಿಸರವನ್ನು ಕಂಡು ಖುಷಿಪಟ್ಟರು.ಎಲ್ಲ ಗೋವುಗಳಿಗೆ ಮೇವು ಹಿಂಡಿಯನ್ನು ಹಾಕಿ ಸಂಭ್ರಮಿಸಿದರು.



















