
ಹೆಬ್ರಿ : ಆದಾಯದ ಒಂದು ಭಾಗವನ್ನು ದಾನ , ಧರ್ಮಕಾರ್ಯದಲ್ಲಿ ಸದ್ವಿನಿಯೋಗಗೊಳಿಸಿದಾಗ ಸಮಾಜದ ಅಭಿವೃದ್ಧಿ ನಿರಾಂತಕವಾಗಿ ಸಾಗುತ್ತದೆ. ವ್ಯಕ್ತಿ ಸಾಮಾಜಿಕವಾಗಿ ಬೆಳೆದಾಗಲಷ್ಟೇ ಊರು, ಗ್ರಾಮ ಬೆಳವಣಿಗೆ ಹೊಂದಲು ಸಾಧ್ಯ. ಹೆಬ್ರಿ ತಾಲೂಕಿನಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳ ಅಗತ್ಯತೆಯನ್ನು ಅರಿತು ಅಲ್ಲಿಗೆ ಸಂಪನ್ಮೂಲಗಳನ್ನು ಒದಗಿಸಿಕೊಡುತ್ತಿರುವ ವರಂಗ ವಿಶ್ವಾಸನಗರದ ಕೆಲ್ ಟೆಕ್ ಎನರ್ಜಿಸ್ ಲಿಮಿಟೆಡ್ ನ ಸಾಮಾಜಿಕ ಬದ್ದತೆಯ ಕಾರ್ಯ ಪ್ರಶಂಸನೀಯ ಮತ್ತು ಅನುಕರಣ ಯೋಗ್ಯ. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಅವರು ನೀಡುತ್ತಿರುವ ಸಹಕಾರ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದು ಮುದ್ರಾಡಿಯ ಹಿರಿಯ ಖ್ಯಾತ ವೈದ್ಯರಾದ ಡಾ|| ಎಂ. ಎಸ್. ರಾವ್ ಹೇಳಿದರು.
ಅವರು ಮುದ್ರಾಡಿಯ ಎಂ.ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವರಂಗ ಕೆಲ್ ಟೆಕ್ ಎನರ್ಜಿಸ್ ಲಿಮಿಟೆಡ್ ಅವರು ಮುದ್ರಾಡಿ ಪ್ರೌಢಶಾಲೆಗೆ ಕೊಡಮಾಡಿದ ವಿಜ್ಞಾನ ಪ್ರಯೋಗಾಲಯದ ಪರಿಕರಗಳ ಹಸ್ತಾಂತರ ನೆರವೇರಿಸಿ ಮಾತನಾಡಿದರು.
ಸಂಸ್ಥೆಯ ವಿಜ್ಞಾನ ಶಿಕ್ಷಕಿ ಶ್ಯಾಮಲಾ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಯೋಗಾಲಯ ಪರಿಕರಗಳ ಮಾಹಿತಿ ನೀಡಿದರು.
ವಿದ್ಯಾಸಾಗರ ಎಜ್ಯುಕೇಶನ್ ಟ್ರಸ್ಟ್ (ರಿ) ನ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಾಲೆಗೆ ಕೊಡುಗೆ ನೀಡಿದ ವರಂಗ ಕೆಲ್ ಟೆಕ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ ಪ್ರಯೋಗಾಲಯ ಪರಿಕರಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕ ಕಾರ್ತಿಕ್, ಮುಖ್ಯೋಪಾಧ್ಯಾಯ ಬಲ್ಲಾಡಿ ಚಂದ್ರಶೇಖರ ಭಟ್ ಇದ್ದರು.
ಹಿರಿಯ ಶಿಕ್ಷಕ ಮಹೇಶ ನಾಯ್ಕ ಕೆ. ನಿರೂಪಿಸಿ, ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ಪಿ. ವಿ. ಆನಂದ ವಂದಿಸಿದರು. ಶಿಕ್ಷಕರುಗಳಾದ ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಮಹೇಶ ಎಂ. ಸಹಕರಿಸಿದರು.









