
ಕೊಲ್ಕತ್ತಾ: ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಸುಮಾರು 10,000 ಮತಗಳ ಅಂತರದಿಂದ ಗೆದ್ದು, ಈ ಜಯಕ್ಕೆ ಹಿಂದೂ ಸಮುದಾಯದ ಬೆಂಬಲ ಕಾರಣವೆಂದು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇನ್ನುಮುಂದೆ ನಂದಿಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿ, ಆಡಳಿತಾರೂಢ ಟಿಎಂಸಿ ಪಕ್ಷವನ್ನು ಭ್ರಷ್ಟ ಮತ್ತು ಕುಟುಂಬ ರಾಜಕೀಯದ ಪಕ್ಷವೆಂದು ಟೀಕಿಸಿದರು. ಈ ಪಕ್ಷವು ಮುಂದಿನ 24 ಗಂಟೆಗಳಲ್ಲಿ ನಾಶವಾಗಲಿದೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ, ನರೇಂದ್ರ ಮೋದಿ ಮತ್ತು ಅಮಿತ್ ಷಾ ನೀಡಿದ ಭರವಸೆಗಳನ್ನು ಜಾರಿಗೆ ತರುವುದು ತಮ್ಮ ಗುರಿ ಎಂದು ಹೇಳಿದ್ದಾರೆ. ಭಬಾನಿಪುರದಲ್ಲೂ ಸ್ಪರ್ಧಿಸಿದ್ದ ಅವರು, ಮಮತಾ ಬ್ಯಾನರ್ಜಿ ವಿರುದ್ಧವೂ ಗಮನಾರ್ಹ ಗೆಲುವು ಸಾಧಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಲ್ಲಿ ಬಿಜೆಪಿ 206 ಗೆದ್ದು ಬಹುಮತ ಪಡೆದಿದ್ದು ಇದರಿಂದ ಟಿಎಂಸಿಯ ದೀರ್ಘ ಆಡಳಿತಕ್ಕೆ ತೆರೆ ಬಿದ್ದಿದೆ. ಈ ಮೂಲಕ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಲು ಸಿದ್ಧವಾಗಿದ್ದು ಈ ಜಯದ ಹಿನ್ನೆಲೆ ನರೇಂದ್ರ ಮೋದಿ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.
ಆದರೆ ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಪುನಃ ಬಲವಾಗಿ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.




















