
ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನವು ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ನಡೆಯಲಿದ್ದು, ಇದೇ ತಿಂಗಳ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ಒಟ್ಟು 14 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಅವಧಿಯಲ್ಲಿ ಸರ್ಕಾರದ ಪ್ರಮುಖ ನೀತಿ ನಿರ್ಣಯಗಳು ಹಾಗೂ ಚರ್ಚೆಗಳು ನಡೆಯಲಿವೆ. ಅಧಿವೇಶನದ ಮೊದಲ ದಿನವೇ ಮುಖ್ಯಮಂತ್ರಿ ಹಾಗೂ ರಾಜ್ಯದ ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ತಮ್ಮ ದಾಖಲೆಯ 17ನೇ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ಸಾರ್ವಜನಿಕರಲ್ಲೂ ಹೆಚ್ಚಿನ ನಿರೀಕ್ಷೆ ಮೂಡಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಮಾರ್ಚ್ 6ರಿಂದ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಒಟ್ಟು 14 ದಿನಗಳ ಕಾಲ ಕಲಾಪ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.



















