ಮಹಿಳಾ ಆಯೋಗದಿಂದ ನೋಟಿಸ್ ಜಾರಿ

ಪಾಟ್ನಾ: ಬಿಹಾರದ ಪೂರ್ನೆಯಾ ಕ್ಷೇತ್ರದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಮಹಿಳೆಯರ ರಾಜಕೀಯ ಪ್ರವೇಶ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಮಹಿಳೆಯರ ಮೇಲೆ ರಾಜಕೀಯದಲ್ಲಿ ನಡೆಯುವ ಶೋಷಣೆ ಕುರಿತು ಮಾತನಾಡಿದ ಅವರು, ‘ರಾಜಕೀಯ ನಾಯಕರ ಸಂಪರ್ಕವಿಲ್ಲದೆ ಶೇ.90% ರಷ್ಟು ಮಹಿಳೆಯರು ತಮ್ಮ ರಾಜಕೀಯ ಬದುಕನ್ನು ಆರಂಭಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಮಹಿಳೆಯರ ವಿರುದ್ಧದ ಅನ್ಯಾಯಕ್ಕೆ ರಾಜಕಾರಣಿಗಳೇ ಕಾರಣರಾಗಿದ್ದಾರೆ ಎಂದು ಆರೋಪಿಸಿದ ಪಪ್ಪು ಯಾದವ್, ರಾಜಕೀಯ ಪ್ರವೇಶಕ್ಕೂ ಮಹಿಳೆಯರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಶೋಷಣೆ ವ್ಯವಸ್ಥೆಯಲ್ಲೇ ಆಳವಾಗಿ ಬೇರೂರಿದೆ. ಶಾಲೆ, ಕಾಲೇಜು ಹಾಗೂ ಕಚೇರಿಗಳಲ್ಲೂ ಮಹಿಳೆಯರು ವಿವಿಧ ರೂಪದಲ್ಲಿ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವುದಿಲ್ಲ, ಹಲವಾರು ನಾಯಕರು ಮಹಿಳೆಯರ ಬಗ್ಗೆ ಅಸಭ್ಯವಾಗಿ ವರ್ತಿಸುತ್ತಾರೆ. ಹಿಂದುಳಿದ ವರ್ಗದ ಮಹಿಳೆಯರಿಗೆ ರಾಜಕೀಯದಲ್ಲಿ ಸಮರ್ಪಕ ಅವಕಾಶ ಸಿಗುತ್ತಿಲ್ಲ ಎಂದೂ ಹೇಳಿದ್ದಾರೆ.
ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಹಾರ ರಾಜ್ಯ ಮಹಿಳಾ ಆಯೋಗವು ಪಪ್ಪು ಯಾದವ್ ಅವರಿಗೆ ನೋಟಿಸ್ ನೀಡಿದ್ದು, ಮಹಿಳೆಯರ ಘನತೆಗೆ ಧಕ್ಕೆ ತರುವ ಹೇಳಿಕೆಗಳ ಬಗ್ಗೆ ವಿವರಣೆ ಕೇಳಿದೆ.
ಇದಲ್ಲದೆ ಪಪ್ಪು ಯಾದವ್ ಹೇಳಿಕೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಕಾಂಗ್ರೆಸ್‌ನ ಮನೋಭಾವವನ್ನು ಟೀಕಿಸಿದರೆ, ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಯಾದವ್ ಅವರನ್ನು ಖಂಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.













