
ಕಾರ್ಕಳ : ಕಾರ್ಕಳದಲ್ಲಿ ಮುಂದಿನ ವರ್ಷ ಐತಿಹಾಸಿಕ ಶ್ರೀ ಬಾಹುಬಲಿ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ದೇಶ ವಿದೇಶಗಳಿಂದ ಸಹಸ್ರಾರು ಯಾತ್ರಾತ್ರಿಗಳು, ಪ್ರವಾಸಿಗರು ಕಾರ್ಕಳ ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಜೈನ ಬಸದಿಗಳು, ಕೆರೆಗಳು, ದೇವಸ್ಥಾನಗಳು, ಯಾತ್ರಿ ನಿವಾಸಗಳನ್ನು ಜೊತೆಗೆ ಅನೇಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇರುತ್ತದೆ.
ಈ ಹಿನ್ನೆಲೆಯಲ್ಲಿ ಕಾರ್ಕಳ ಪ್ರವಾಸೋಧ್ಯಮ ದೃಷ್ಟಿಯಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಅನುದಾನ ನೀಡುವಂತೆ ದೆಹಲಿಯಲ್ಲಿ, ಶಾಸಕರಾದ ವಿ. ಸುನಿಲ್ ಕುಮಾರ್ ಮಾನ್ಯ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ನೀಡಿದರು. ಈ ಕುರಿತು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



















