27.4 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 86

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೮೬ ಮಹಾಭಾರತ

ಜರಾಸಂಧ ತನ್ನ ಮಿತ್ರನಾದ ಅಪ್ರತಿಮ ಪರಾಕ್ರಮಿ, ವರಬಲಾನ್ವಿತನಾದ ಯವನ ರಾಜ “ಕಾಲಯವನ” ಎಂಬವನನ್ನು ಪ್ರೇರೇಪಿಸಿ ಸೈನ್ಯ ಸಮೇತ ಮಥುರೆಯ ಮೇಲೆ ಆಕ್ರಮಣಕ್ಕೆ ಕಳುಹಿಸಿದ. ವಿರುದ್ಧ ದಿಕ್ಕಿನಿಂದ ಸ್ವತಃ ಜರಾಸಂಧನೂ ಅಸಂಖ್ಯ ವೀರ ಸೈನಿಕರನ್ನು ಕೂಡಿಕೊಂಡು ದಾಳಿ ಮಾಡಿದ. ಇಕ್ಕೆಲಗಳಿಂದ ದಾಳಿಯಾಗಿದೆ. ಮಥುರೆಯಲ್ಲಿ ಯಾದವ ಸೈನ್ಯ ಹೊರತು ಪಡಿಸಿ ಬೇರೇನೂ ಉಳಿದಿಲ್ಲ. ಜನ,ದನ, ಧನ, ಸಂಪತ್ತೆಲ್ಲವೂ ದ್ವಾರಕೆಗೆ ವರ್ಗಾವಣೆಯಾಗಿದೆ. ಕೃಷ್ಣ ಬಲರಾಮರು ಯಾದವ ಸೈನ್ಯವನ್ನು ಹುರಿದುಂಬಿಸಿ ಬಲರಾಮ – ಜರಾಸಂಧನ ದಾಳಿಯನ್ನೂ, ಇತ್ತ ಶ್ರೀ ಕೃಷ್ಣ ಕಾಲಯವನನ ಆಕ್ರಮಣವನ್ನೂ ಎದುರಿಸಿ ಹೋರಾಡತೊಡಗಿದರು. ಘನ ಘೋರ ಸಂಗ್ರಾಮ ಸಾಗುತ್ತಿತ್ತು. ಕಾಲಯವನ ಕೃಷ್ಣನ ಮೇಲೆ ಮುಗಿ ಬೀಳುತ್ತಿದ್ದಂತೆ ಕೃಷ್ಣ ರಥದಿಂದಿಳಿದು ಓಡತೊಡಗಿದ. ಕೃಷ್ಣನನ್ನು ಹಿಡಿದು ಕೊಲ್ಲಲೇ ಬೇಕೆಂದು ಬೆಂಬತ್ತಿದ. ಕಾಲಯವನ ಕೂಗಿ ಹೇಳಿದ “ಹೇ ಯಾದವ ಕುಲ ಸಂಜಾತ ಹೇಡಿಯೇ ನಿಲ್ಲು…..” ಕೃಷ್ಣ ಓಡುತ್ತಾ ಕೈಗೆ ಸಿಗುವಂತೆ ನಿಧಾನವಾಗಿಯೂ…. ಹತ್ತಿರವಾದ ಕೂಡಲೇ ಮತ್ತೆ ವೇಗದ ಓಟ ಹೀಗೆ ಕಾಲಯವನನನ್ನು ಕರೆದೊಯ್ಯುತ್ತಿದ್ದಾನೆ. ಕೃಷ್ಣನು ಗಿರಿ ಶಿಖರಗಳನ್ನೇರಿ ಓಡುತ್ತಿದ್ದಾನೆ.. ಕಾಲಯವನ ಹಿಂದುಳಿದಿದ್ದಾನೆ… ಗಮನಿಸಿದ ಕೃಷ್ಣ ನಡೆದುಕೊಂಡು ಹೋಗತೊಡಗಿದನು. ಕಾಲಯವನ ವೇಗವಾಗಿ ಬಂದು ಹಿಡಿದೇ ಬಿಟ್ಟ ಎನ್ನುವಷ್ಟರಲ್ಲಿ ಶ್ರೀ ಕೃಷ್ಣ ಓಡಿ ಗುಹೆಯೊಂದನ್ನು ಹೊಕ್ಕನು. ಒಳಗೆ ಕತ್ತಲೆ.. ಕೃಷ್ಣ ಕಾಣುತ್ತಿಲ್ಲ. ಹುಡುಕಾಡಿದ ಒಳ …ಒಳಗೆ… ಒಳಗೆ ಹೋಗಿ ಸಾಗಿ ಹುಡುಕಿದ. ಕಾಲಯವನನಿಗೆ ಪರಮಾನಂದವಾಯಿತು. ಕಾರಣ ಮಲಗಿದ ರೀತಿಯಲ್ಲಿ ಸಿಕ್ಕಿದ. ಸಿಕ್ಕಿಯೆ ಬಿಟ್ಟ ಎಂದು ಸಂತಸ ಪಟ್ಟ! “ಕಳ್ಳನೇ! ಹೆದರಿ ಓಡಿ ಬಂದ ರಣಹೇಡಿ, ಓಡಿ ಇಷ್ಟು ದೂರ ಬಂದು ದಣಿದು ಕತ್ತಲೆಯ ಗುಹೆಯಲ್ಲಿ ಮಲಗಿದ್ದೀಯಾ?” ಮಲಗಿದ್ದವನು ಕೃಷ್ಣನೇ ಎಂದು ತಿಳಿದು ಕಾಲಯವನ ಕಾಲನ್ನೆತ್ತಿ ಬಲವಾಗಿ ಹೊಟ್ಟೆಗೆ ಒದ್ದನು. ಒದ್ದ ಏಟಿಗೆ ಮಲಗಿದವನಿಗೆ ಎಚ್ಚರವಾಯಿತು. ನಿದ್ರಾ ಭಂಗವಾಯಿತು…ಮೆಲ್ಲ… ಮೆಲ್ಲನೆ ಕಣ್ತೆರೆದು ಎದುರು ನಿಂತಿದ್ದ ಕಾಲಯವನನನ್ನು ನೋಡುತ್ತಿದ್ದಂತೆ… ನೇತ್ರಾಗ್ನಿಯ ಜ್ವಾಲೆಗಳು ಧಗ್ಗನೆ ಚಿಮ್ಮಲ್ಪಟ್ಟು ಕಾಲಯವನ ಉರಿದು ಭಸ್ಮವಾದನು. ಹಿಡಿ ಭಸ್ಮವಾಗಿ ಗಾಳಿಯಲ್ಲಿ ಹಾರಿ ಗುಹೆಯ ಗೋಡೆಗಳಿಗೆ ಅಂಟಿಹೋದನು.

ಈ ರೀತಿ ಮಹಾ ವರ ಬಲಾನ್ವಿತನಾಗಿ ರಣಮುಖದಲ್ಲಿ ಅಜೇಯತ್ವ ಸಾಧಿಸಿದ್ದ ಕಾಲಯವನ ನನ್ನು ತನ್ನ ನೇತ್ರಾಗ್ನಿಯಿಂದ ಸುಟ್ಟು ಭಸ್ಮ ಮಾಡಿದವನೇ ಮುಚುಕುಂದ. ಮಹಾ ವಿಕ್ರಮಿಯಾದ ಈತ ರಾಜಾ ಮಾಂಧಾತನ ಮಗ. ಸ್ವರ್ಗಕ್ಕೆ ರಕ್ಕಸರ ದಾಳಿ ನಿರಂತರವಾದಾಗ, ಇಂದ್ರನಿಂದ ಆಮಂತ್ರಿಸಲ್ಪಟ್ಟು ದೇವಸೈನ್ಯಕ್ಕೆ ಸೇನಾಪತಿಯಾಗಿದ್ದ. ಬಹುಕಾಲ ದಾಳಿಗೈದ ರಕ್ಕಸರನ್ನು ಕೊಂದು ಸ್ವರ್ಗಪೀಠದ ರಕ್ಷಣಾ ಕಾರ್ಯ ನಿರತನಾಗಿದ್ದ. ಮಹಾದೇವ ಶಿವಪುತ್ರ ಷಣ್ಮುಗ ಜನಿಸಿ ದೇವ ಸೇನಾಪತಿಯಾದ ಬಳಿಕ ನಿವೃತ್ತನಾಗಿದ್ದವನು ಮುಚುಕುಂದ. ಮಹದುಪಕಾರಕ್ಕಾಗಿ ಇಂದ್ರಾದಿ ದೇವರುಗಳಿಂದ ವರ ಅನುಗ್ರಹ ಪಡೆದು ಸನ್ಮಾನಿತನೂ ಆಗಿದ್ದ. ಸುದೀರ್ಘ ಕಾಲ ರಣಭಯಂಕರನಾಗಿ ಬಿಡುವಿಲ್ಲದ ಯುದ್ದದಿಂದಾಗಿ ದಣಿದಿರುವ ಮುಚುಕುಂದ ವಿಶ್ರಾಂತಿಗಾಗಿ ಬಹುಕಾಲ ತಾನು ನಿದ್ರಾವಶನಾಗಿ ಇರಬೇಕು ಎಂದು ವರ ಬೇಡಿದ್ದನು. ಇಂದ್ರನು ಈತನ ಪರಾಕ್ರಮ, ದೇವಲೋಕದಲ್ಲಿ ಗೈದ ಸೇವೆಗೆ ಪ್ರತಿಯಾಗಿ ಯುಗಾಂತರ ಕಾಲ ನಿರಾಹಾರನಾಗಿದ್ದರೂ ಹಸಿವು, ತೃಷೆ, ಶೌಚ ಬಾಧಿಸದೆ ದಿವ್ಯ ಸುಖ ನಿದ್ರೆ ಪ್ರಾಪ್ತಿಯ ವರವನ್ನಿತ್ತಿದ್ದನು. ಯಾರಾದರು ನಿನ್ನ ನಿದ್ರಾಭಂಗಕ್ಕೆ ಕಾರಣರಾಗಿ ನಿನ್ನ ಮುಚ್ಚಿದ ಕಂಗಳು ತೆರೆಯಲ್ಪಟ್ಟರೆ ಆಗ ನಿನ್ನ ನೇತ್ರಾಗ್ನಿ ಜ್ವಾಲೆಗೆ ಅವರು ಸುಟ್ಟು ಭಸ್ಮವಾಗಿ ಹೋಗಲಿ. ಮಾತ್ರವಲ್ಲ ನೀನು ಎಚ್ಚೆತ್ತ ಆ ಕೂಡಲೇ ಶ್ರೀ ಹರಿ ದರ್ಶನವಾಗಲಿ ಎಂದು ಅನುಗ್ರಹಿಸಿದ್ದನು.

ಹೀಗೆ ತ್ರೇತಾಯುಗದ ಆದಿ ಭಾಗ ಈ ನಿರ್ಜನ ಗಿರಿ ಶಿಖರದ ಗುಹಾ ಗರ್ಭದೊಳಗೆ ಮಲಗಿದ ಮುಚುಕುಂದ ರಾಮಾವತಾರ ಕಳೆದು, ಕೃಷ್ಣಾವತಾರ ತಳೆದು ಬಂದರೂ ಎಚ್ಚರಗೊಳ್ಳದೆ ಮಲಗಿದ್ದನು. ಇಂದು ದುಷ್ಟನ ವಧೆಗೆ ಪೂರಕನಾಗಿ, ಶ್ರೀಕೃಷ್ಣ ಪ್ರೇರಕನಾಗಿ, ಕಾಲಯವನನಿಗೆ ಮಾರಕನಾಗಿ ಕಣ್ತೆರೆದು ನಿದ್ರೆ ಮುಗಿಸಿ ಎದ್ದಿದ್ದಾನೆ.

ಮರೆಯಲ್ಲಿ ನಿಂತು ಸಂಕಲ್ಪ ಪೂರೈಸಿದ ಶ್ರೀ ಕೃಷ್ಣ ಪರಮಾತ್ಮ ಸ್ವಯಂ ಪ್ರಭೆಯ ಬೆಳಕು ಚೆಲ್ಲುತ್ತಾ, ಗುಹೆಯ ಕತ್ತಲೆ ಕಳೆದು ಬೆಳಗಿಸಿ, ನಿಧಾನಕ್ಕೆ ಕೈ ಮುಗಿದು ಎದುರು ಬಂದನು. ಆಗ ಸಾಕ್ಷಾತ್ ಶ್ರೀಮನ್ನಾರಾಯಣನ ದರುಶನ ಮುಚುಕುಂದನಿಗೆ. ಆಹಾ ಏನಿದು ಮಹಾ ಸೌಭಾಗ್ಯ ಎನಗೆ ಒದಗಿದೆ ಎಂದು ಸಂತಸಗೊಂಡನು.
“ದರ್ಶನೀಯನೇ,
ಶ್ಯಾಮಲಾಂಗ, ಪೀತಾಂಬರಧರ,
ಶ್ರೀವತ್ಸವಕ್ಷಸ್ತ ಪ್ರಭೋ…. ,
ಕೌಸ್ತುಭಮಾಲಾಲಂಕೃತ,
ಪಾಂಚಜನ್ಯ – ಸುದರ್ಶನ,
ಕೌಮೋದಕೀ, ಅಭಯ ಕಮಲ ಹಸ್ತ ದೀರ್ಘ ಚತುರ್ಬಾಹುವಿಲಸಿತ,
ನವತಾಮರರಸದಳಲೋಚನ,
ನಿತ್ಯಾನಂದರೋಚನ,
ಸುಕಪೋಲ ಫಾಲತಲವಿಲೋಲ,
ಚಿಕುರಜಾಲ ಮಂದಹಾಸ,
ಸುಂದರವದನಾರವಿಂದಾತಿ
ಸುಂದರ
ನಮಾಮಿ ನಮಾಮಿ ನಮಾಮಿ”
ಎಂದು ಮುಚುಕುಂದ ಸ್ತುತಿಸಿದನು.

ಕೂಡಲೇ ಜಾಗೃತನಾಗಿ, ದೇವಾ ! ನನ್ನ ನೇತ್ರಾಗ್ನಿಗಳಿಂದ ದಹಿಸಲ್ಪಟ್ಟವನ್ಯಾರು ಎಂದು ಕೇಳಿದ. ಕೃಷ್ಣ ವಿಷಯ ವಿಸ್ತರಿಸಿ ಘಟನೆಯನ್ನು ವಿವರಿಸಿ ಕಾಲಯವನನಿಗಿದ್ದ ವರ – ಹಾಗು ವಧೆಯ ವಿಚಾರ ತಿಳಿಸಿದ.
ಬಳಿಕ ಮುಚುಕುಂದ ಮಾಧವ ವಾಸುದೇವ ಶ್ರೀಕೃಷ್ಣನಿಗೆ ನಮಿಸಿ, ತಪೋನಿರತನಾಗಿರಲು ಅಪ್ಪಣೆ ಪಡೆದು ಸುಸ್ಥಳವರಸಿ ಹೊರಟನು.

ಶ್ರೀ ಕೃಷ್ಣ ಕೂಡಲೇ ಮರಳಿ ಮಥುರೆಗೆ ಗಮಿಸಿ ಕಾಲಯವನನ ಸೈನ್ಯವನ್ನು ದ್ವಂಸಗೊಳಿಸತೊಡಗಿದ. ಅತ್ತ ಜರಾಸಂಧ ಬಲರಾಮರು ಅತಿ ಭಯಂಕರ ಕಾಳಗ ನಿರತರಾಗಿ ಸೆಣಸುತ್ತಿದ್ದಾರೆ. ಕೃಷ್ಣ ಅವಲೋಕಿಸಿ ಆಲೋಚಿಸಿದ. ಯಾದವ ಸೈನಿಕರು ಕೈಸಾಗದೆ ಸಾಯುತ್ತಿದ್ದಾರೆ. ತಕ್ಷಣ ಅವರಿಗೆ ರಣರಂಗದಿಂದ ವಿಮುಖರಾಗುವಂತೆ ಸೂಚನೆ ನೀಡಿದ. ಬಲರಾಮ ಕೃಷ್ಣರಿಬ್ಬರೇ ರಥಿಕರಾಗಿ ಜರಾಸಂಧನನ್ನು ಎದುರಿಸಲು ತೊಡಗಿದರು. ಸ್ವಲ್ಪ ಹೊತ್ತು ಸಾಗುತ್ತಿದ್ದಂತೆ ಕೃಷ್ಣ ಬಲರಾಮನಿಗೂ ಓಡಿ ಹೋಗಲು ಸನ್ನೆ ಮಾಡಿದ. ಇಬ್ಬರೂ ರಥ ಹಾರಿ, ಗಿರಿ ಏರಿ ಓಡತೊಡಗಿದರು. ಜರಾಸಂಧ ತಕ್ಷಣ ಗಿರಿಯನ್ನು ಸುತ್ತುವರಿಯಲು ಸೇನೆಗೆ ಆದೇಶ ನೀಡಿದ. ಅಷ್ಟ ದಿಕ್ಕುಗಳಿಂದಲೂ ಗಿರಿಗೆ ಬೆಂಕಿ ನೀಡಲು ಆಜ್ಞಾಪಿಸಿದ. ಅರೆಕ್ಷಣದಲಿ ಗಗನದೆತ್ತರಕ್ಕೆ ಹಬ್ಬಿತು ಬೆಂಕಿ. ಖಗ ಮೃಗ ಉರಗಾದಿಗಳು ಸುಟ್ಟು ಕರಕಲಾದವು. ಮರಗಿಡ ಬಳ್ಳಿಗಳೂ ಭಸ್ಮವಾಗತೊಡಗಿತು. ಬಂಡೆ ಕಲ್ಲುಗಳೂ ಉರಿಗೆ ಸಿಡಿದು ಸ್ಪೋಟಗೊಂಡವು. ಜರಾಸಂಧ ತನ್ನ ವೈರಿಗಳಾದ ಕೃಷ್ಣ ಬಲರಾಮರನ್ನು ಜೀವಂತ ಸುಟ್ಟ ಸಂಭ್ರಮದಲ್ಲಿದ್ದಾನೆ. ಆದರೆ ಕೃಷ್ಣ ಬಲರಾಮರು ಅಗ್ನಿ ಜ್ವಾಲೆಯ ಮಧ್ಯದಿಂದ ನೆಗೆದು ಹಾರಿ ಸಮುದ್ರಕ್ಕೆ ಬಿದ್ದು ಈಜಿ ದ್ವಾರಕೆ ಸೇರಿದ ವಿಚಾರ ಯಾರ ಕಣ್ಣಿಗೂ ಬೀಳಲಿಲ್ಲ. ಮಗಧದ ಸೇನೆಗೆ ಸಂಭ್ರಮ. ಬಹುಕಾಲದ ಹೋರಾಟ ಇಂದು ಜಯಪ್ರದವಾಯಿತೆಂದು…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page