28.9 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 81

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೮೧ ಮಹಾಭಾರತ

ಅನಾಥರಾದ ಕಂಸನ ರಾಣಿಯರಿಗೆ, ಅವಲಂಬಿತರಿಗೆ ಸಾಂತ್ವಾನದ ನುಡಿ ಹೇಳಿದ ಕೃಷ್ಣ, ಅಕ್ರೂರನನ್ನು ಕರೆದು ಮೃತ ಕಂಸ ಮತ್ತು ಅವನ ಅಜ್ಞಾನುವರ್ತಿ ವೀರರಿಗೆ ಮರಣೋತ್ತರ ಸದ್ಗತಿ ಕ್ರಿಯೆಗಳನ್ನು ನಡೆಸಲು ವಿನಂತಿಸಿದ. ಬಳಿಕ ಕಂಸ ರಾಜ್ಯಾಧಿಕಾರ ಪಡೆಯಲು ಕಾರಾಗೃಹದಲ್ಲಿರಿಸಿದ್ದ ಆತನ ಅಪ್ಪ ಉಗ್ರಸೇನ, ಪ್ರಾಣಭಯದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದ ತನ್ನ ಮಾತಾ ಪಿತ ವಸುದೇವ – ದೇವಕಿಯರ ಜೊತೆ ಆಪ್ತ ಬಳಗದವರೆಲ್ಲರನ್ನೂ ಬಂಧ ಮುಕ್ತಗೊಳಿಸಿದ.

ಕೃಷ್ಣ ಬಲರಾಮರು ತಂದೆ ತಾಯಿ ವಸುದೇವ ದೇವಕಿಯರ ಜೊತೆ ಮಥುರೆಗೆ ಬಂದು ನೆಲೆಸಿದರು. ಪರಮಾತ್ಮ ಕೃಷ್ಣನ ಆಗಮನದಿಂದ ಸಂತಸಗೊಂಡು ನಗರ ಜನರು ಭಕ್ತರಾಗಿ ಪೂಜಿಸತೊಡಗಿದರು. ತಮ್ಮ ಮಕ್ಕಳಲ್ಲಿ ಅತಿಮಾನುಷ ಲೀಲಾ ಶಕ್ತಿಯನ್ನು ನೋಡಿದ ಹೆತ್ತವರೂ ಅಂತರ ಕಾಯ್ದು ದೇವತಾ ಪುರುಷರೆಂದು ಆರಾಧಿಸ ತೊಡಗಿದರು. ಇದರಿಂದ ಹೆತ್ತವರ ವಾತ್ಸಲ್ಯ ವಂಚಿತರಾಗಿ ದುಃಖಿತರಾದರು ಕೃಷ್ಣ ಬಲರಾಮರು. ಬಂಧಕ ಶಕ್ತಿಯ ಕೃಪೆ ಬೀರಿ ತನ್ನ ಹೆತ್ತವರು ಸತ್ಯ – ತತ್ವವನ್ನು ಅರಿಯುವಂತೆ ಮಾಡಿದರು. ಯೋಗ್ಯತೆ, ದೇಶ, ಕಾಲ, ಅನಿವಾರ್ಯತೆ ಗಳನ್ನು ಅನುಸರಿಸಿ ಮನುಷ್ಯರ ಮಧ್ಯದಲ್ಲಿ ದೇವರು ಮನುಜನಾಗಿ ಬದುಕಿ ವಿಹರಿಸಲು ಬರುವ ತನ್ನ ಸಂಕಲ್ಪವನ್ನು ಜಗಮೋಹಕ ಮಂದಹಾಸ ಬೀರುತ್ತಾ ಬಿತ್ತರಿಸಿದ. ಹಾಗೆ ಬಂದು ಮನುಷ್ಯಧರ್ಮದಂತೆ ಬಾಳುವ ವಿಧಾನವನ್ನೂ ಅರ್ಥ ಮಾಡಿಸಿದರು.

ಹೀಗೆ ಸುಜ್ಞಾನದಿಂದ ಕರ್ಮ ಸಂಬಂಧ ಹಾಗು ಬದುಕಿನ ಉಪದೇಶ ಪ್ರಾಪ್ತಿಸಿಕೊಂಡ ಮಾತ ಪಿತರನ್ನುದ್ದೇಶಿಸಿ ಕೃಷ್ಣ ಬದುಕಿನ ವ್ಯಾಪ್ತಿಯನ್ನು ವಿವರಿಸತೊಡಗಿದ. “ಒಂದೆಡೆ ನೀವು ನಿತ್ಯ ಕಷ್ಟ ಅನುಭವಿಸುತ್ತಿದ್ದರೂ, ಇನ್ನೊಂದೆಡೆ ನಾವೇ ಮಕ್ಕಳಾಗಿದ್ದರೂ, ನಿಮ್ಮಿಂದ ದೂರ ಉಳಿದು ನಿಸ್ಸಹಾಯಕರಾಗಿದ್ದೆವು. ನಿಮ್ಮ ಲಾಲನೆ ಪಾಲನೆಯಿಂದ ವಂಚಿತರಾಗಿ ಬದುಕಬೇಕಾಯಿತು. ಪುರುಷಾರ್ಥ ಸಾಧನವಾದ ದೇಹವನ್ನು ಕೊಟ್ಟು ಪೋಷಿಸಿದ ತಂದೆ ತಾಯಂದಿರ ಋಣವನ್ನು ತೀರಿಸಲಾದೀತೇ? ಹೆತ್ತವರ ಸೇವೆ ಮಾಡದೆ, ಸಂತೋಷ ಪಡಿಸದೆ ಉಳಿದವನಿಗೆ ನರಕದಲ್ಲಿ ಯಮಭಟರು ಅವನ ಮಾಂಸವನ್ನು ಅವನಿಂದಲೇ ತಿನ್ನುವಂತೆ ಶಿಕ್ಷಿಸುವರು. ವೃದ್ಧರಾದ ಮಾತಾಪಿತೃಗಳನ್ನು, ಪತಿವೃತೆಯಾದ ಪತ್ನಿಯನ್ನು, ಚಿಕ್ಕವರಾದ ಮಕ್ಕಳನ್ನು, ಕಷ್ಟಪಡುತ್ತಿರುವ ಗುರುಗಳನ್ನು ಪೋಷಿಸದವನು ಜೀವಂತ ಶವ ಸಮಾನನಾಗಿ ಹೇಯ ಬದುಕು ಬಾಳಬೇಕಾಗುತ್ತದೆ. ಇಷ್ಟು ಕಾಲ ಕಂಸನ ಭಯದಿಂದ ಹೆದರಿ ದೂರವಿದ್ದು, ನೀವು ಕಷ್ಟ ಅನುಭವಿಸುತ್ತಿದ್ದರೂ ಪರಿಹರಿಸಲಾಗದೆ, ನೀವು ಬಹುಕಾಲ ದುಃಖ ಜೀವನ ಬಾಳುತ್ತಿರಬೇಕಾದರೆ ನಿಮ್ಮ ಸಂಕಷ್ಟದ ಸಹಭಾಗಿಯಾಗಿಯೋ ಇಲ್ಲ ಪರಿಹಾರಕರಾಗಿಯೋ ಇರದೆ ಪರಾಧೀನರಾಗಿದ್ದ ಕಾರಣ ನಾವು ದೋಷಿಗಳಾಗಿದ್ದೇವೆ. ನಮ್ಮನ್ನು ಕ್ಷಮಿಸಿ ಎಂದು ನಮಿಸಿ ಬೇಡಿಕೊಂಡರು.

ಹೀಗೆ ಮಕ್ಕಳಾಗಿ ಬೇಡಿದಾಗ ಕರ್ಮ ಬದುಕಿನ ಸುಜ್ಞಾನ ಪಡೆದ ಹೆತ್ತಬ್ಬೆ ದೇವಕಿ – ಜನ್ಮದಾತ ವಸುದೇವರ ಮನಕರಗಿ ಮಕ್ಕಳನ್ನು ಬಿಗಿದಪ್ಪಿ ಮುದ್ದಾಡಿದರು.

ಗೋಕುಲದಿಂದ ಬಂದಿದ್ದ ನಂದ ಗೋಪನಿಗೂ ವಂದಿಸಿದ. ಅಸಹಾಯಕ ಎಳೆ ಶಿಶುವಿನಿಂದ ಈ ತನಕ ಪೋಷಿಸಿ ಬೆಳೆಸಿದ ಸಾಕು ಪಿತನಿಗೆ ಋಣಿಯಾಗಿ ಕೃತಜ್ಞತಾ ಭಾವದಿಂದ ಪಾದಸ್ಪರ್ಶಿ ನಮನ, ಆಲಿಂಗನದ ಸುಖವಿತ್ತರು. ಮತ್ತೆ ಕಾಲ ಕೂಡಿ ಬಂದಾಗ ನಂದ ಗೋಕುಲಕ್ಕೆ ಬರುತ್ತೇವೆಂಬ ವಚನವಿತ್ತು, ಗೋಪಾಲಕ ವೀರರನ್ನೂ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿ ಧನ ಧಾನ್ಯಾದಿಗಳನ್ನಿತ್ತು ಮಾನಿಸಿ ನಂದ ಗೋಕುಲಕ್ಕೆ ಕಳುಹಿಸಿದರು. ನಂದಗೋಪ ಕೃಷ್ಣನಿಲ್ಲದ ಗೋಕುಲಕ್ಕೆ ಹೋಗಲೊಪ್ಪದೆ, ಒಲ್ಲದ ಮನಸ್ಸಿನಿಂದ ವೇದನೆ ಹೊತ್ತು ಹೊರಟನು.

ದಿನಕಳೆದು ಕಂಸ ಮತ್ತು ಮೃತ ವೀರರಿಗೆ ಉತ್ತರಕ್ರಿಯಾದಿ ಸದ್ಗತಿಗಳು ನೆರವೇರಿದವು. ಆ ಬಳಿಕ ಹಿರಿಯರು ಜೊತೆ ಸೇರಿ ಚರ್ಚಿಸಿ ಮತ್ತೆ ಉಗ್ರಸೇನ ನಿಗೆ ಮಥುರೆಯ ಮರು ಪಟ್ಟಾಭಿಷೇಕವೂ ನಡೆಯಿತು.

ಕಂಸನ ಭಯದಿಂದ ನಗರ ತೊರೆದಿದ್ದ ಯಾದವರು ಮರಳಿ ಮಥುರೆಗೆ ಬಂದು ಸೇರಿದರು. ಮಥುರಾ ನಗರಿ ಮರಳಿ ಧರ್ಮ ನ್ಯಾಯ ಅಭಯಪ್ರದ ರಾಜನ ಆಳ್ವಿಕೆಯಲ್ಲಿ ಸಮೃದ್ಧವಾಯಿತು.

ವಸುದೇವ ದೇವಕಿಯರು ಯಾದವ ಗುರು ಮಹರ್ಷಿ ಗಾರ್ಗ್ಯರನ್ನು ಆಮಂತ್ರಿಸಿ ಮಕ್ಕಳಾದ ಕೃಷ್ಣ ಬಲರಾಮರಿಗೆ ಬ್ರಹ್ಮೋಪದೇಶ ಉಪನಯನಾದಿ ವಿಧಿ ಪೂರೈಸಿದರು. ಗುರು ಗಾರ್ಗ್ಯಚಾರ್ಯರು ಗಾಯತ್ರಿ ಮಂತ್ರೋಪದೇಶ ಮಾಡಿದರು. ಸಕಲ ಮಂತ್ರ ಶಾಸ್ತ್ರಾಧಿಪತಿಯಾಗಿದ್ದರೂ ಶ್ರೀ ಹರಿ – ಕೃಷ್ಣನಾಗಿ ಬೋಧನೆಯನ್ನು ಶಿಷ್ಯನಾಗಿ ಸ್ವೀಕರಿಸಿದ. ವಸುದೇವನು ಮಕ್ಕಳ ಕ್ಷೇಮಕ್ಕಾಗಿ ಭೂರಿ ದಕ್ಷಿಣೆ, ವಸ್ತ್ರದಾನ, ಗೋದಾನ ಆದಿ ಪುಣ್ಯಪ್ರದ ದಾನಗಳನ್ನು ಮಾಡಿದನು. ಗುರು ಗಾರ್ಗ್ಯರ ನಿರ್ದೇಶನದಂತೆ ವಿದ್ಯಾರ್ಜನೆಗಾಗಿ ಕೃಷ್ಣ ಬಲರಾಮರು ಆವಂತಿನಗರದಲ್ಲಿರುವ ಸಾಂದೀಪನಿ ಆಚಾರ್ಯರ ಗುರುಕುಲ ಸೇರಿದರು.

ಸಾಂದೀಪನಿ ಗುರುಗಳ ಜೊತೆ ವಿನಯ, ಶೃದ್ದೆಯಿಂದ ಗುರು ಸೇವೆಗೈಯುತ್ತಾ ನೆಚ್ಚಿನ ಶಿಷ್ಯರಾಗಿದ್ದು ವಿದ್ಯಾರ್ಜನೆಗೈಯುತ್ತಿದ್ದರು. ಗುರುಕುಲದಲ್ಲಿ ಇತರ ಶಿಷ್ಯ ಮಿತ್ರರ ಜೊತೆ ಕಡು ಬಡವನಾದ ಚಿಂದಿ ಬಟ್ಟೆಯುಟ್ಟು, ಕೃಶ ಶರೀರಿಯಾದ ಕುಚೇಲ ಎಂಬವನು ಕೃಷ್ಣನಿಗೆ ಆಪ್ತ ಮಿತ್ರನಾದನು. ಪವಿತ್ರ ಮಿತ್ರತ್ವಕ್ಕೆ ಕುಲ, ಜಾತಿ, ಅಂತಸ್ತಿನ ಗಣನೆ ಇರದು ಎಂಬ ಸತ್ಯದ ಸಾಕ್ಷಾತ್ಕಾರಕ್ಕೂ ಕೃಷ್ಣ ಭಾಷ್ಯ ಬರೆದಂತಾಯಿತು. ಒಲವು, ಸಜ್ಜನಿಕೆ, ಸದ್ಗುಣ, ಪವಿತ್ರ ಪ್ರೇಮ, ಸ್ನೇಹ, ಆದರ್ಶಗಳೇ ಮೈತ್ರಿಗೆ ಅವಶ್ಯಕ ಹೊರತು ಇನ್ಯಾವುದೇ ಬಾಹ್ಯ ಸೌಂದರ್ಯ, ಸಂಪತ್ತು ನಗಣ್ಯ ಎಂಬುವುದು ಇವರ ಸಂಬಂಧದಿಂದ ಸ್ಪಷ್ಟವಾಗಿತ್ತು. ಹೀಗಿರಲು ಅರ್ವತ್ತನಾಲ್ಕು ದಿನಗಳಲ್ಲಿ ಏಕಪಾಠಿಗಳಾಗಿ ಗುರು ಬೋದಿತ ಸಕಲವಿದ್ಯಾ ಪಾರಂಗತರಾದರು ಕೃಷ್ಣ ಬಲರಾಮ. ಸಾಕ್ಷಾತ್ ದೇವರು, ಸರ್ವ ಶಾಸ್ತ್ರ – ಜ್ಞಾನದ ಅಧಿಪತಿಯೇ ಆಗಿದ್ದರೂ ಕೂಡ, ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬ ಆತ ಯಾರೇ ಆಗಿದ್ದರೂ, ಗುರುಮುಖದಿಂದ ಕಲಿತ ವಿದ್ಯೆಯಿಂದಲೇ ಶ್ರೇಯಸ್ಸು ಪಡೆಯಲು ಸಾಧ್ಯ ಎಂಬ ಸತ್ಯವನ್ನು ನೀತಿಯಾಗಿ ನಡೆದು ತೋರಿದರು ಕೃಷ್ಣ ಬಲರಾಮ. ಗುರುವಿನಿಂದ ಕಲಿತ ವಿದ್ಯೆಗೆ ಗುರುದಕ್ಷಿಣೆ ನೀಡಿದರೆ ಅದು ಸಂಪ್ರಾಪ್ತಿಯಾಗುವುದು. ಹಾಗೆಯೇ ಗುರು ಸಾಂದೀಪನಿ ಆಚಾರ್ಯರ ಪಾದ ಮೂಲದಲ್ಲಿ ಉಪವಿಶರಾಗಿ, ಗುರುಗಳಾದ ತಾವು ಮಾಡಿದ ವಿದ್ಯಾದಾನದ ಸತ್ಫಲ ಪ್ರಾಪ್ತಿಗೆ ಶಿಷ್ಯರಾದ ನಮ್ಮಿಂದ ಅಪೇಕ್ಷಿಸುವ ದಕ್ಷಿಣೆಯ ಬಗ್ಗೆ ಅಪ್ಪಣೆಯಾದರೆ ಸಮರ್ಪಣೆಗೆ ಸಿದ್ದರಿದ್ದೇವೆ ಎಂದು ಬಿನ್ನವಿಸಿದರು.

ಗುರುಕುಲಕ್ಕೆ ವಿದ್ಯಾರ್ಜನೆಗೆ ಬರುವ ಮೊದಲೇ ಕೃಷ್ಣ ಬಲರಾಮರು ಹುಟ್ಟಿನಿಂದಲೇ ತೋರಿದ ಮಹಿಮಾ ವಿಶೇಷ, ಕಂಸ ವಧೆಯಾದಿ ವೃತ್ತಾಂತವನ್ನು‌ ಆಚಾರ್ಯರು ಮೊದಲೆ ತಿಳಿದಿದ್ದರು. ಮಕ್ಕಳೇ ನಿಮಗೆ ಗುರುವಾಗಿ ಬೋಧಿಸುವ ಅವಕಾಶ ಸಿಕ್ಕಿದ್ದೇ ನನ್ನ ಪಾಲಿನ ಮಹಾ ಸೌಭಾಗ್ಯ. ನಿಮ್ಮನ್ನು ಹೆತ್ತ ವಸುದೇವ ದೇವಕಿ, ಸಾಕಿ ಸಲಹಿದ ನಂದಗೋಪ ಯಶೋದೆಯರು ನಿಜ ಪುಣ್ಯವಂತರು. ಜೊತೆಗೆ ನಿಮ್ಮ ಪಾದಸ್ಪರ್ಶದಿಂದ ನಂದಗೋಕುಲ, ಮಥುರೆ ಈಗ ಆವಂತಿನಗರವೂ ಪುಣ್ಯಭೂಮಿಯಾಯಿತು. ನನಗ್ಯಾವ ದಕ್ಷಿಣೆಯ ಅಪೇಕ್ಷೆಯೂ ಇಲ್ಲ. ನನಗಿದ್ದದ್ದು ಓರ್ವ ಮಗ. ಸೇವೆ, ಗುಣ, ನಡತೆ, ವಚನ, ಧರ್ಮ ಪಾಲನೆ, ಮಾತಾ ಪಿತೃ ಭಕ್ತಿಯಲ್ಲಿ ಸರ್ವ ಶ್ರೇಷ್ಟನೇ ಆಗಿದ್ದನು. ಅಂತಹ ಸತ್ಕರ್ಮ ಪುತ್ರನನ್ನೇ ಉಳಿಸಿಕೊಳ್ಳಲಾಗಲಿಲ್ಲ. ಒಮ್ಮೆ ಪ್ರಭಾಸ ಕ್ಷೇತ್ರದಲ್ಲಿ ಸ್ನಾನ ಮಾಡುತ್ತಿರಬೇಕಾದರೆ ಆತ ನೀರಿನಲ್ಲಿ ಮುಳುಗಿ ಹೋದನು. ಮತ್ತೆ ಪುನರಪಿ ನೋಡಲಾಗಲಿಲ್ಲ. ಮೃತ ಕಾಯವೂ ಸಿಗದೆ ಸದ್ಗತಿ ಮಾಡುವ ಭಾಗ್ಯವೂ ಇರದ ದೌರ್ಭಾಗ್ಯಶಾಲಿಗಳಾಗಿ ಹೋಗಿದ್ದೇವೆ. ಹೀಗಿರಲು ನಮಗೆ ದಕ್ಷಿಣೆಯಾದರೂ ಯಾಕೆ ಬೇಕು? ಯಾವ ಆಸೆಗೆ? ಯಾರಿಗಾಗಿ? ಎಂದು ದಯನೀಯ ಸ್ಥಿತಿಯಲ್ಲಿ ತನ್ನ ಬದುಕಿನ ವ್ಯಥೆಯ ಕಥೆ ಹೇಳಿ ನಿಸ್ವಾರ್ಥ ಸೇವೆಗೈಯುತ್ತಿರುವ ಗುರು ಸಾಂದೀಪನಿ ಆಚಾರ್ಯರು ನಿರಪೇಕ್ಷಿಯಾದರು. ಆಗ ಗುರುಪತ್ನಿ ಅತಿ ದುಃಖಿತಳಾಗಿದ್ದರೂ, ಶಿಷ್ಯರ ಮಹಿಮಾ ವಿಶೇಷ ಶಕ್ತಿ ಅರಿತು ಬಲ್ಲವಳಾಗಿದ್ದರಿಂದ “ಮಕ್ಕಳೇ ನೀವು ಸಮರ್ಥರೇ ಹೌದು ನಿಶ್ಸಂಶಯ ಸತ್ಯ. ಹಾಗಿರುವಾಗ ಗುರು ದಕ್ಷಿಣೆಯಾಗಿ ನಮ್ಮ ಸುಪುತ್ರನನ್ನು ಹುಡುಕಿ ತಂದು ಕೊಡಿ, ಅದೇ ನಮಗೆ ಮಹಾ ಗುರು ದಕ್ಷಿಣೆ” ಎಂದು ಕಣ್ಣೀರುಗರೆದು ಅಪೇಕ್ಷೆ ಮುಂದಿಟ್ಟಳು. ಗುರು ಸಾಂದೀಪನಿ ಆಚಾರ್ಯರ ಅನುಮೋದನೆಯೂ ಸಿಕ್ಕಿತು. ಕೃಷ್ಣ ಬಲರಾಮರು ಗುರುವರ್ಯ – ಮಾತೆ ಗುರುಪತ್ನಿಯನ್ನು ಸಮಾಧಾನಿಸಿ, ಧೈರ್ಯ ತುಂಬಿ, ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮನ್ನು ಆಶೀರ್ವದಿಸಿ ಕಳುಹಿಸಿ ಕೊಡಿ ಎಂದು ಶಿರ ಬಾಗಿ ನಮಿಸಿದರು. ಗುರುಗಳ ಆಶ್ರಮದಿಂದ ಅನುಗ್ರಹ ಪಡೆದು ಧನುರ್ಬಾಣಧಾರಿಗಳಾಗಿ ಹೊರಟರು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page