ಭಾಗ – 77
ಭರತೇಶ್ ಶೆಟ್ಟಿ, ಏಕ್ಕಾರ್

ಇತ್ತ ಮಥುರೆಯಲ್ಲಿ ಕಂಸ ಗೊಂದಲಕ್ಕೀಡಾಗಿದ್ದಾನೆ. ಅಪ್ರತಿಮ ವೀರ ಮಾಯಾವಿ ರಾಕ್ಷಸರನ್ನು ಕಳುಹಿ ಕಾದು ಕುಳಿತರೆ ಯಾರೂ ಮರಳಿ ಬರುತ್ತಿಲ್ಲ. ಕಂಗೆಟ್ಟು ವ್ಯಗ್ರನಾಗಿರುವ ಹೊತ್ತಿಗೆ ತನ್ನ ವೀಣೆ “ಮಹತಿ” ಯನ್ನು ಮೀಟುತ್ತಾ ನಾರಾಯಣ.. ನಾರಾಯಣ… ನಾಮಸ್ಮರಣೆಗೈಯುತ್ತಾ ನಾರದ ಮಹರ್ಷಿ ಬಂದರು. ಉಚಿತ ಸತ್ಕಾರ ಕುಶಲೋಪರಿ ಬಳಿಕ ಮಾತನಾಡುತ್ತಾ “ಕಂಸಾ, ಅಶರೀರವಾಣಿ ನಿಜವಾಗುತ್ತಿರುವಂತಿದೆ. ದೇವಕಿಯ ಕಂದ ಅಷ್ಟಮ ಗರ್ಭ ಸಂಜಾತ ಶ್ರೀ ಕೃಷ್ಣ ಆತನ ಅಣ್ಣ ಬಲಭದ್ರರು ನಂದಗೋಕುಲದಲ್ಲಿ …” ಇಷ್ಟು ಹೇಳುತ್ತಿರುವಾಗಲೇ ಕೇಳಿ ಕೆರಳಿ ಕ್ರೋಧವಶನಾದ ಕಂಸ. ವಸುದೇವ ದೇವಕಿಯರ ವಧೆಗೆ ಸಿದ್ದನಾಗಿ ಒರೆಯಿಂದ ಖಡ್ಗವನ್ನೆಳೆದು ಕೋಪದ ಕೈಗೆ ಬುದ್ಧಿ ನೀಡಲು ಹೊರಟ ಕಂಸನನ್ನು ತಡೆದು ನಿಲ್ಲಿಸಿದರು ನಾರದ ಮಹರ್ಷಿ. ಹಿತವಚನವಾಗಿ ವಿವೇಕವನ್ನು ತಾಳಲು ಪ್ರೇರೇಪಿಸಿ, ಈಗ ಎಲ್ಲಾ ಆಗಿ ಹೋದ ಮೇಲೆ ದೇವಕಿ ವಸುದೇವರನ್ನು ಕೊಂದು ಏನು ಫಲ. ನಿನ್ನ ಶತ್ರು ಕೃಷ್ಣನಲ್ಲವೇ? ನಿನ್ನ ಯೋಜನೆ ಏನಿದ್ದರು ಕೃಷ್ಣನ ಮೇಲಿರಲಿ. ತಂಗಿ ಭಾವರನ್ನು ಕೊಂದು ಏನು ಸಾಧಿಸುವೆ? ಎಂದು ನುಡಿದು ಕಂಸನ ಕೋಪದ ದಿಕ್ಕನ್ನು ಕೃಷ್ಣನತ್ತ ತಿರುಗಿಸಿ ಬ್ರಹ್ಮ ಮಾನಸ ಪುತ್ರ “ನಾರಾಯಣ ನಾರಾಯಣ….” ನಾಮಸ್ಮರಣೆಗೈಯುತ್ತಾ ಹೊರಟರು. ಮಹರ್ಷಿಗಳ ಬೋಧನೆ ಅರಿತು ಕೃಷ್ಣನ ಮಾತಾ ಪಿತರಿಗೆ ಜೀವದಾನ ನೀಡಿದ ಕಂಸ. ಆದರೂ ತನ್ನ ಶತ್ರುವಿಗೆ ಜನ್ಮವಿತ್ತ ದೇವಕಿ ವಸುದೇವರನ್ನು ಬಂಧಿಸಿ ಕಾರಾಗ್ರಹದಲ್ಲಿರಿಸಿ, ಕೃಷ್ಣನ ಜನ್ಮಕ್ಕೆ ಕಾರಣರಾದ ತಪ್ಪಿಗೆ ಶಿಕ್ಷಿಸತೊಡಗಿದ.
ನಾರದರು ನೇರವಾಗಿ ನಂದಗೋಕುಲಕ್ಕೆ ಬಂದು ಕೃಷ್ಣ ಪರಮಾತ್ಮನನ್ನು ಕಂಡು ನಮಿಸಿದರು. ತನ್ನಾಸೆಯಂತೆ ಮುರಳಿಯನೂದಲು ಬೇಡಿದರು. ಒಪ್ಪಿದ ಶ್ರೀ ಹರಿ ಕರ್ಣಾನಂದಕರ ಮೋಹನಗಾನ ಸುಧೆ ಹರಿಸಿದ. ತನು ಮನ ರೋಮಾಂಚನಗೊಳ್ಳತೊಡಗಿತು. ಅನಿರ್ವಚನೀಯ ನೀರವ ತನ್ಮಯತೆಯ ಭಕ್ತಿ ಪರವಶ ನಾರದರಿಗೆ ಅಸ್ಥಿರ ಬದುಕು ಒದಗಿದ್ದರೂ ಸ್ಥಿರವಾಗಿ ಇಲ್ಲೇ ಹೀಗೇ ಕುಳಿತು ಗಾನಾಮೃತ ಪಾನ ಮಾಡುತ್ತಿರಬೇಕೆಂಬ ವಾಂಛೆ ಮನದಾಳದಿಂದ ಸುಪ್ತವಾಗಿ ಮೂಡಿ, ಬೇಡಿ ಪಡೆಯುವ ಆಸೆಯಾಯಿತು. ಅದನ್ನು ಪ್ರಕಟಗೊಳಿಸಿ ಕೇಳಬೇಕೆನ್ನುವಷ್ಟರಲ್ಲಿ ನಿನಾದ ನಿಂತಿತು. ಬಾನ್ಸುರಿಯೊಳಗಿಂದ ಸೂಸುತ್ತಿದ್ದ ಮಾಧುರ್ಯ ಸ್ಥಗಿತವಾದಾಗ ಜಾಗೃತಗೊಂಡರು ನಾರದರು. ತಾನು ಬಂದ ಕಾರ್ಯ ಕಾರಣ ಹೇಳ ತೊಡಗಿದರು. “ದೇವಾ ಇನ್ನಾದರೂ ಕಶ್ಯಪ ಅದಿತಿಯ ಬಂಧನ ಮುಕ್ತಗೊಳಿಸಬಾರದೇ? ವರುಣನ ಶಾಪದ ವ್ಯಾಪ್ತಿಯ ಪರಿಧಿ ಮುಟ್ಟಿದ ಹಾಗನ್ನಿಸುತ್ತಿದೆ.
ಹಿಂದೆ ಕಶ್ಯಪ ಮಹರ್ಷಿಗೆ ದಿವ್ಯಯಾಗ ಮಾಡುವ ಮನಸ್ಸಾಗಿ ಸಿದ್ಧತೆಗಳನ್ನು ಮಾಡಿ, ಯಾಗಕ್ಕೆ ಬೇಕಾದ ಧೇನುವನ್ನು ವರುಣನಿಂದ ಎರವಲಾಗಿ ಕೇಳಿ ತಂದು ಯಾಗ ಮಾಡಿದರು. ಯಾಗ ಸಂಪನ್ನವಾಗಿ ಬಹುದಿನಗಳಾದರೂ ವರುಣನ ಧೇನುವಿನ ಮೇಲೆ ಪತ್ನಿ ಅದಿತಿಗಾದ ಅತಿ ಪ್ರೀತಿಯ ಕಾರಣ ಕಶ್ಯಪರು ಮರಳಿಸುವಲ್ಲಿ ಹಿಂದುಳಿದು ವಚನ ಭ್ರಷ್ಟರಾದರು. ವರುಣ ಲೋಕದ ಧೇನುವನ್ನು ಬಂಧನದಲ್ಲಿರಿಸಿದ ಕಶ್ಯಪನ ನಡೆ ವರುಣನ ಕೋಪಕ್ಕೆ ಕಾರಣವಾಯಿತು. “ಲೋಭಗ್ರಸ್ತನಾದ ಕಶ್ಯಪಾ, ನೀನು ಹಾಗು ನಿನ್ನ ಪತ್ನಿಯೂ ಮಾನವ ಜನ್ಮ ತಳೆದು ಕಷ್ಟ ಕಾರ್ಪಣ್ಯ ಅನುಭವಿಸಿ ಶೃಂಖಲಾ ಬದ್ಧರಾಗಿ ಬಂಧನದಲ್ಲಿ ಬದುಕಿ, ಪುತ್ರಶೋಕದ ಮಹಾ ದುಃಖ ಅನುಭವಿಸಿ” ಎಂದು ಶಪಿಸಿದ್ದನು. ಕಡು ದುಃಖಿಗಳಾಗಿ ಮರುಗಿ, ಕೊರಗಿ ಹರಿಯ ಮೊರೆ ಹೊಕ್ಕು ತಪಗೈದ ಕಶ್ಯಪರ ಭಕ್ತಿಗೆ ಒಲಿದ ಜಗದಪಾಲಕ ಶ್ರೀ ಮನ್ನಾರಾಯಣ ಅಂದೇ ಅನುಗ್ರಹ ಪ್ರದನಾಗಿ “ನಿಮ್ಮ ತಪ್ಪಿಗೆ ಶಾಪವಾಕ್ಯದಂತೆ ಶಿಕ್ಷೆ ಆಗಲಿದೆ. ಆದರೂ ಭಕ್ತಿ ಮಾರ್ಗದ ಮೂಲಕ ಪಶ್ಚಾತ್ತಾಪ ಹೊಂದಿದ ನೀವು ಸಂಕಲೆಯ ಬಂಧನದಲ್ಲಿದ್ದು ಬಹು ಪುತ್ರ ಶೋಕ ಅನುಭವಿಸಿದ ಬಳಿಕ ಪ್ರಾಯಶ್ಚಿತ್ತ ರೂಪದಲ್ಲಿ ನಾನೇ ನಿಮ್ಮ ಮಗನಾಗಿ ಹುಟ್ಟಿ ಬರುವೆ. ಯಥಾ ಸಾಧ್ಯ ಸುಖ ಸಂತೋಷವನ್ನೂ ಆ ಬಳಿಕ ನಿಮಗೆ ಕರುಣಿಸುವೆ’. ಹೀಗೆ ನೀನೇ ಮೂಲ ಸ್ವರೂಪದಲ್ಲಿ ಆಶೀರ್ವದಿಸಿರುವೆಯಲ್ಲಾ ದೇವಾ!” ಎಂದು ನಾರದರು ನೆನಪಿಸಿ ಬೇಡಿ ಕೈ ಮುಗಿದರು. ಎಲ್ಲಿಯೂ ನಿಲ್ಲಲಾಗದಂತಹ ಪ್ರಜಾಪತಿಯ ಶಾಪ ನಾರದರನ್ನು ಅಲ್ಲಿಂದ ತೆರಳುವಂತೆ ಮಾಡಿತೋ ಏನೋ! ವಂದಿಸಿ ಹೊರಟರು.
ನಾರದರು ಮಥುರೆಗೆ ಬಂದು ತಿಳಿಸಿದ ಸತ್ಯ ಕಂಸನ ರಕ್ತದ ಕಣ ಕಣ ಕುದಿಯುವಂತೆ ಮಾಡಿತ್ತು. ಚಿಗುರಲ್ಲೇ ಚಿವುಟಬೇಕು. ಮರವಾಗಲು ಬಿಟ್ಟರೆ ಕಡಿಯುವುದು ಕಷ್ಟವಾದೀತು ಎಂದು ತನ್ನ ಆಪ್ತ ಅಸುರ “ಕೇಶಿ” ಯನ್ನು ಕರೆದು ಕೃಷ್ಣನ ಸಂಹಾರ ಕಾರ್ಯ ವಹಿಸಿ ಕಳುಹಿಸಿದನು. ಬಲಯುತ ಕುದುರೆಯ ರೂಪ ತಳೆದು ಕೆನೆಯುತ್ತಾ ಬಂದ ಕೇಶಿ ಕೃಷ್ಣನನ್ನು ಗುರುತಿಸಿ ನೇರ ಆಕ್ರಮಣಕ್ಕೆ ಮುಂದಾದ. ಜಗನ್ನಾಟಕ ಸೂತ್ರಧಾರನ ಮುಂದೆ ಮಾಯಾ ರೂಪದ ಪ್ರದರ್ಶನ!! ನಡೆದೀತೇ? ಕೆನೆಯುವ ಕುದುರೆಯನ್ನು ಮಣಿಸಿ ಸವಾರನಾದ ಕೃಷ್ಣ. ಜಿಗಿದು ಕೆನೆದು ಓಲಾಡಿ ಹಾರಿ ಓಡಿ ದಣಿದನು ರಕ್ಕಸ. ಆಟಿಕೆಯಲ್ಲಿ ಆಡುವಂತೆ ನಗುತ್ತಾ ಕೃಷ್ಣ ರಂಜಿಸುತ್ತಿದ್ದ. ತನ್ನ ಆಟಾಟೋಪ ಸಾಗದೇ ಇದ್ದಾಗ ಅಸಹನೀಯ ರೋಷದ ಉರಿ ಏರಿ ನಿಜ ರೂಪ ಧರಿಸಿದ ರಾಕ್ಷಸ ಕೇಶಿ. ಇನ್ನೇನು ಬಾಕಿ ಉಳಿದಿದೆ. ಅಸುರಾರಿಗೆ ಹೊತ್ತು ಬೇಕೆ? ಕಂಸ ಕಳುಹಿದ ಕೇಶಿ ಮರಳಿ ಮಥುರೆಗೆ ಹೋಗದೆ ಯಮಪುರಿ ಶೈಮಿನಿ ಸೇರಿದ.
ಕಂಸನಿಗೆ ಮತ್ತೆ ಸೋಲು. ಇನ್ನು ಈ ದಾರಿ ಬೇಡ ಆಪ್ತರ ಮಂತ್ರಾಲೋಚನೆಯಂತೆ, ಕೃಷ್ಣ ಬಲರಾಮರನ್ನೇ ಮಥುರೆಗೆ ಕರೆಯಿಸಬೇಕು. ಯುಕ್ತಿ ಪ್ರಯುಕ್ತಿ ಮುಖೇನ ಶಕ್ತಿಯಿಂದಾಗದ ಕಾರ್ಯಸಾಧನೆಯಾಗಬೇಕು. ಹೀಗೆ ತರ್ಕಿಸಿ, “ಧನುರ್ಯಜ್ಞ” ಎಂಬ ಹಬ್ಬವನ್ನು ಸಮಾರಂಭವಾಗಿ ಮಾಡುವ ಬಗ್ಗೆ ಪ್ರಕಟಿಸಿದ. ಬಂಧು ಬಳಗ ಎಲ್ಲರೂ ಸೇರಿ ಸಂಭ್ರಮಿಸುವುದೆಂದು ಘೋಷಿಸಿದ.
ತನ್ನ ವೈರಿಯಾದ ದೇವಕಿ ಪುತ್ರನನ್ನು ಯೋಜಿಸಿದ ಬಲೆಯೊಳಗೆ ಬೀಳಿಸುವ ಕಾರ್ಯ ಸಾಧನೆಯಾಗಬೇಕಲ್ಲವೇ? ಮೊದಲ ಹೆಜ್ಜೆಯಾಗಿ ಕೃಷ್ಣ ಬಲರಾಮರನ್ನು ನಂದಗೋಕುಲದಿಂದ ಮಥುರೆಗೆ ಕರೆತರುವುದು. ಈ ಕೆಲಸಕ್ಕೆ ತನ್ನ ವಿಶ್ವಾಸನೀಯ ಮಂತ್ರಿ ಅಕ್ರೂರನನ್ನು ನೇಮಿಸಿದ. ಮಾವ ಕಂಸನು ಅಳಿಯಂದಿರಾದ ಕೃಷ್ಣ – ರಾಮರನ್ನು ಹಬ್ಬಕ್ಕೆ ಆಮಂತ್ರಿಸಿ ಕರೆತರಲು ನಿನ್ನನ್ನು ಕಳುಹಿಸಿರುವ ವಿಷಯ ಪ್ರಸ್ತಾಪಿಸಿ ಹಾಗೆ ಮಾಡಲು ಆದೇಶಿಸಿದ. ಅಕ್ರೂರ ವಸುದೇವನ ಆತ್ಮೀಯ. ಕೃಷ್ಣನ ಬಗ್ಗೆ ದೇವರೆಂಬ ವಿಚಾರ ತಿಳಿದು, ಅಂದಿನಿಂದ ಕಣ್ಣಾರೆ ಕಾಣುವ ಹೆಬ್ಬಯಕೆ ಹೊಂದಿದ್ದನಾದರೂ, ಕಂಸನಿಗೆ ನಿಷ್ಠ ಮಂತ್ರಿಯೂ ಆಗಿದ್ದ.
ಕಂಸನ ಆದೇಶದಂತೆ ಹೊರಟು ಬಂದ ಅಕ್ರೂರನಿಗೆ ನಂದ ಗೋಕುಲದ ಪುಣ್ಯ ಮಣ್ಣಿನ ಕಣ ಕಣವೂ ಕೃಷ್ಣನ ಪಾದ ಸ್ಪರ್ಶ ಕಾರಣದಿಂದ ಪಾವನಗೊಂಡಿರುವುದು ಕಂಡಿತು. ಮಣ್ಣ ಧೂಳಿನಲ್ಲಿ ಹೊರಳಾಡಿ ಜಳಕಗೈದು ಧನ್ಯನಾದನು ಅಕ್ರೂರ. ಯಮುನೆಯ ಜಲ ಮಂಜುಳ ನಿನಾದದಲ್ಲಿ ಹರಿ ನಾಮ ಸಂಕೀರ್ತನೆಗೈಯುತ್ತಿರುವುದನ್ನು ಅರಿತು, ಮುಳುಗೆದ್ದು ಪಾವನನಾದನು. ಬೀಸುವ ಗಾಳಿಯೂ ಕೃಷ್ಣನ ಮೈ ಬಳಸಿ ಸುಳಿದು ಬೀಸುವಾಗ ಹೊತ್ತು ತಂದ ತನುಗಂಧವನ್ನು ಅಗ್ರಾಣಿಸಿ ಆಸ್ವಾದಿಸಿ ತನ್ನ ತನುಮನಕ್ಕಂಟಿದ ಪಾಪದ ಲೇಪವನ್ನು ಶುಷ್ಕಗೊಳಿಸಿ ಶುದ್ಧಾಂತಕರಣಿಯಾದ. ಗೋಪನ ಮನೆ ಮುಂದಣ, ಹಟ್ಟಿಯ ಹಿಂದಣ ರಾಶಿ ಗೋವಿನ ಗಂಜಳದಲ್ಲೂ ಕೃಷ್ಣನ ಕೈ ಸ್ಪರ್ಶದ ಪ್ರಸಾದ ಗೋಚರಿಸಿ ಅದನ್ನೇ ಸ್ಪರ್ಶಿಸಿ ತಿಲಕವಿಟ್ಟುಕೊಂಡನು. ಹೀಗೆ ಭಾವುಕ ಭಕ್ತಿಮಾರ್ಗ ಕ್ರಮಿಸಿ ಬಂದ ಅಕ್ರೂರನಿಗೆ ದೇವದರ್ಶನವಾಗದೇ ಉಳಿದೀತೇ? ಕೃಷ್ಣನ ಮುಖಾರವಿಂದ ಅವಲೋಕನದಲ್ಲೇ ದೇವತ್ವ ಅರಿತ ಅಕ್ರೂರ ಓಡಿ ಬಂದು ತನು ಬಾಗಿಸಿ ಪಾದಕ್ಕೆರಗಲು ಮುಂದಾದನು. ಆಗ ಬಾಚಿದ ತೋಳುಗಳಿಂದ ಹಿಡಿದೆತ್ತಿ ಬರಸೆಳೆದು ಬಿಗಿದಪ್ಪಿದನು ಕೃಷ್ಣ. ಪ್ರೀತಿಯ ಆಲಿಂಗನವೇ ಸುಖಕರ. ದೇವ -ಭಕ್ತರ ಭಾವಾಲಿಂಗನವಿದು. ಪರಮ ಸುಖ. ಕೃತಾರ್ಥನಾದೆ ದೇವ. ತಪಸ್ಸು ಮಾಡಿದ ಋಷಿಗಳಿಗೂ ಅಲಬ್ಧವಾದ ನಿನ್ನ ದಿವ್ಯ ಮೂರುತಿ ನನ್ನನ್ನು ಅಪ್ಪಿ ಹಿಡಿದಿದೆ. ಭವ ಭಯ ಮುಕ್ತನಾದೆ ದೇವಾ… ಸಾರ್ಥಕವಾಯಿತು ನನ್ನ ಹುಟ್ಟು. ಇನ್ನು ನನಗೇನೇನೂ ಬೇಡ. ತೃಪ್ತನಾದೆ – ಸಂತೃಪ್ತನಾದೆ. ಹೀಗೆ ಯುಕ್ತಿಯ ಉಕ್ತಿಯನ್ನಾಡಿ ಶಕ್ತಿಯ ಪ್ರಯುಕ್ತಿ ಪ್ರಯೋಗ ಬಯಸಿ ಕಂಸನಿಂದ ಕಳುಹಲ್ಪಟ್ಟ ಅಕ್ರೂರ ಭಕ್ತಿಯಿಂದ ಮುಕ್ತಿಯ ಸುಖ ಅನುಭವಿಸುತ್ತಿದ್ದಾನೆ.
ಕೃಷ್ಣ ಅಕ್ರೂರನನ್ನು ಮುಖದ ಮುಂಭಾಗಕ್ಕೆ ನಿಲ್ಲಿಸಿ ಹಸನ್ಮುಖ ವದನದಿಂದ ನೋಡಿದಾಗ, ಸುಜ್ಞಾನದ ಬೆಳಕು ಸೂಸಿತೋ ಎಂಬಂತೆ ಎಚ್ಚೆತ್ತ ಅಕ್ರೂರ ತಾನು ಬಂದ ವಿಚಾರ ಬಿನ್ನವಿಸಿದ. ಕೃಷ್ಣನಿಗೆ ನಾರದರ ಮಾತಿನ ಸ್ಮರಣೆಯೂ ಆಗಿ ಮಾವನ ಬಿಲ್ಲ ಹಬ್ಬಕ್ಕೆ ಬರಲು ಒಪ್ಪಿದ. ಹೊರಡಲು ಸಿದ್ಧನಾದ. ಅಪ್ಪ – ಅಮ್ಮ, ಬಂಧು ಮಿತ್ರ, ಗೋಪಿಕೆಯರಿಗೆಲ್ಲಾ ತಿಳಿಸಿ ಹೊರಡುವುದು ಎಂದು ತೀರ್ಮಾನಿಸಿದ.
ಮುಂದುವರಿಯುವುದು..





















