ಭಾಗ 64
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೬೪ : ಮಹಾಭಾರತ
ಪರಮ ಶಿಷ್ಯ ಮಹತ್ಸಾಧನೆಗೈದು ಗುರುದಕ್ಷಿಣೆ ಸಮರ್ಪಿಸಲು ಬಂದಿರುವ ಆ ಹೊತ್ತು ಗುರು ದ್ರೋಣಾಚಾರ್ಯರು ಮಲಗಿ ನಿದ್ರಿಸುತ್ತಿದ್ದರು. ಗುರುಗಳನ್ನು ಅಪಮಾನಿಸಿದ ದ್ರುಪದ, ಪ್ರತಿಯಾಗಿ ಗುರುಗಳು ನುಡಿದ ಶಪಥ ವಾಕ್ಯ ಅರ್ಜುನನಿಗೆ ನೆನಪಾಯಿತು. ತಾನ ಬಂಧಿಸಿ ತಂದಿರುವ ದ್ರುಪದನನ್ನು ಬಗ್ಗಿಸಿ ಗುರು ದ್ರೋಣರ ಮಂಚದ ಕಾಲಿಗೆ ಬಿಗಿದು ಕಟ್ಟಿದ. ಹೊತ್ತು ಕಳೆದು ಎಚ್ಚರವಾದಾಗ ದ್ರೋಣ ಶಿಷ್ಯರು ಸುತ್ತುವರಿದು ನಮಸ್ಕರಿಸುತ್ತಾ ನಿಂತಿದ್ದಾರೆ. ಅರ್ಜುನನೂ ವಂದಿಸಿ ನಿಂತಿದ್ದಾನೆ. ಎದ್ದೇಳುವಾಗ ದ್ರೋಣರ ಎಡಗಾಲು ಮಂಚದ ಕಾಲಿಗೆ ಕಟ್ಟಲ್ಪಟ್ಟ ದ್ರುಪದನ ಬೆನ್ನಿಗೆ ತಾಗಿ ಒದೆಯಲ್ಪಟ್ಟಿತು. ತಕ್ಷಣ ಈ ಕಾರ್ಯದ ಕತೃ ಅರ್ಜುನನೇ ಎಂದರಿತು ಬರಸಳೆದು ಬಿಗಿದಪ್ಪಿ ತನ್ನ ಪ್ರಿಯ ಶಿಷ್ಯನನ್ನು ಮುದ್ದಾಡಿದರು. ಶ್ರೇಯಸ್ಸಾಗಲಿ ಎಂದು ಹರಸಿದರು. ಶಿಷ್ಯರನ್ನುದ್ದೇಶಿಸಿ “ನಿಮ್ಮ ಗುರುದಕ್ಷಿಣೆ ಅರ್ಪಿತವಾಗಿದೆ. ನೀವೆಲ್ಲರೂ ಋಣ ಮುಕ್ತರಾಗಿದ್ದೀರಿ ನಿಮಗೆಲ್ಲರಿಗೂ ಸನ್ಮಂಗಲವಾಗಲಿ” ಎಂದು ಹರಸಿ ಸಂತೋಷದಿಂದ ಘೋಷಿಸಿದರು ಗುರುಗಳು.
ದ್ರುಪದನತ್ತ ತಿರುಗಿ, ಅಯ್ಯಾ ಈ ಬಡ ಬ್ರಾಹ್ಮಣನ ಗುರುತು ಸಿಗುತ್ತಿದೆಯೇ? ಉದರ ಪೋಷಣೆಗೆ ಸಹಾಯ ಅಪೇಕ್ಷಿಸಿ ಬಂದರೆ ನಿಂದಿಸಿ ಅಪಮಾನಿಸಿದೆ. ನನ್ನ ಜೀವನದ ಬಡತನ ನಮ್ಮ ಮೈತ್ರಿಯ ಸಿರಿತನದೆದುರು ಮಂಕಾಗಿ ಹೋಯಿತಲ್ಲಾ!. ನೀನು ಬಾಲಿಶನಾಗಿ “ಅರ್ಧ ರಾಜ್ಯ ಕೊಡುತ್ತೇನೆ ಮಿತ್ರಾ” ಎಂದಿರಬಹುದು. ನಾನೇನು ನಿನ್ನಲ್ಲಿ ರಾಜ್ಯದ ಪಾಲು ಕೇಳಲು ಬಂದಿರಲಿಲ್ಲ. ನನಗದೂ ಕೊಟ್ಟರೂ ಬೇಡವಾಗಿತ್ತು. ಮಗನಿಗೆ ಹಾಲು ಬೇಕು ಎಂದು ಅದರ ವ್ಯವಸ್ಥೆ ಬಯಸಿ ಬಂದಿದ್ದೆ. ಇಗೋ ಇಂದು ಅಧಿಕಾರಯುತವಾಗಿ ನಿನ್ನ ಪೂರ್ಣ ರಾಜ್ಯ ಶಿಷ್ಯರ ಮುಖೇನ ನನ್ನ ಸ್ವಾಧೀನವಾಗಿದೆ. ಇಂದು ನಾನು ನಿನಗೆ ಅರ್ಧ ರಾಜ್ಯ ದಾನ ನೀಡುವೆ. ಗಂಗಾ ತೀರದ ಆಚೆ ದಕ್ಷಿಣಕ್ಕಿರುವ ಪಾಂಚಾಲದ ಭಾಗ ನಿನಗೆ ಕೊಡುತ್ತಿದ್ದೇನೆ. ಉತ್ತರ ಪಾಂಚಾಲ ನನಗಿರಲಿ. ಎಂದು ಮಿತ್ರನಿಗೆ ಔದಾರ್ಯದ ಭಿಕ್ಷೆ ನೀಡಿದರು ಗುರು ದ್ರೋಣಾಚಾರ್ಯ. ಹಳೆಯ ಮಿತೃತ್ವ ನೆನಪಿಸಿ ಒಂದು ದಿನ ಆಶ್ರಮದಲ್ಲಿ ಇರಿಸಿ, ಉಪಚರಿಸಿ, ಮೈತ್ರಿಯ ಉಸಿರು ಉಳಿಸಿ ದ್ರುಪದನನ್ನು ಕಳುಹಿಸಿ ಕೊಟ್ಟರು. ಹೊರಟು ನಿಂತ ದ್ರುಪದ ಅರ್ಜುನನ ವಿಕ್ರಮವನ್ನು ಹೊಗಳಿ ಅಭಿನಂದನೆ ಸಲ್ಲಿಸಿದ. ಇಂತಹ ಅದ್ವಿತೀಯ ಶಿಷ್ಯನನ್ನು ತಯಾರು ಮಾಡಿದ ಗುರು ದ್ರೋಣನ ಗುರುತ್ವ ವನ್ನೂ ಕೊಂಡಾಡಿ ಹೊಗಳಿದ.
ಬಾಹ್ಯ ವರ್ತನೆಯಲ್ಲಿ ದ್ರೋಣ ದ್ರುಪದರು ಮಿತ್ರರಾಗಿ ಗೋಚರಿಸಿದರೂ, ದ್ರುಪದನ ಅಂತರಂಗ ಜ್ವಾಲಾಮುಖಿಯಾಗಿತ್ತು. ಅಪಮಾನಿಸಿ ತನ್ನ ನೋವು ಭುಂಜಿಸಿದ ದ್ರೋಣನ ಮೇಲೆ ಪ್ರತಿಕಾರ ತೀರಿಸುವ ಸರದಿ ಈಗ ದ್ರುಪದನದ್ದಾಗಿ ಹೋಗಿದೆ. ಇನ್ನು ದ್ರೋಣ ಬದುಕಿರಬಾರದು. ನೇರ ಯುದ್ದದಲ್ಲಿ ದ್ರೋಣನನ್ನು ವಧಿಸಬಲ್ಲ ಯೋಗ್ಯತೆ ಇದ್ದರೆ ಅದು ಅರ್ಜುನನಿಗೆ ಮಾತ್ರ. ಆತ ದ್ರೋಣನ ಪ್ರಿಯ ಶಿಷ್ಯ. ಹಾಗಿದ್ದರೆ ಪರ್ಯಾಯ ಶಕ್ತಿಯೊಂದು ಬೇಕು ಎಂದು ತರ್ಕಿಸುತ್ತಾ ಮಾಕಂದಿ ನಗರಕ್ಕೆ ಹೋಗಲಾಗದೇ ದಕ್ಷಿಣ ಪಾಂಚಾಲದ ಕಾಂಪಿಲ್ಯ ನಗರವನ್ನೇ ರಾಜಧಾನಿ ಮಾಡಿಕೊಂಡ ದ್ರುಪದ. ದ್ರೋಣನ ವಧೆಗಾಗಿ ಕಾಮೇಷ್ಟಿ ಯಾಗ ಮಾಡುವ ತೀರ್ಮಾನಕ್ಕೆ ಬಂದು ದೀಕ್ಷಿತ ಋತ್ವಿಜರನ್ನೆಲ್ಲಾ ಬೇಡಿದರೂ, ಬ್ರಾಹ್ಮಣ ವಧೆಯ ಸಂಕಲ್ಪದ ಯಾಗಕ್ಕೆ ಯಾರೂ ಸಮ್ಮತಿಸಲಿಲ್ಲ. ಕೊನೆಗೆ ಯಾಜ – ಉಪಯಾಜ ಎಂಬ ಸಹೋದರ ತಪಸ್ವಿಗಳನ್ನು ಚಾತುರ್ಯದಿಂದ ಪ್ರಲೋಭನೆಗೊಳಪಡಿಸಿ ಒಪ್ಪಿಸಿದ ದ್ರುಪದ.
ನಿಗದಿಯಾದ ಪುತ್ರಕಾಮೇಷ್ಟಿ ಯಾಗ ಆರಂಭವಾಯಿತು. ದ್ರುಪದ ಯಜಮಾನನಾಗಿ ಯಾಜ ಉಪಯಾಜರು ಯಾಗ ಆರಂಭಿಸಿದರು. ಯಜ್ಞ ಸಮಾಪ್ತಿಯ ಹೊತ್ತಿಗೆ ದ್ರುಪದನ ಪತ್ನಿಯನ್ನು ಕರೆದು ಎತ್ತಿ ಹಿಡಿದ ಹವಿಸ್ಸು ಅರ್ಪಿಸಲು ಸಿದ್ಧರಾಗಿ ಬಯಸಿದ ಸಂತಾನ ಭಾಗ್ಯ ಪಡೆಯಿರಿ ಎಂದು ಆಶೀರ್ವದಿಸಿ ಸ್ವೀಕರಿಸಲು ಯಾಜ್ಞಿಗಳಾದ ಯಾಜ ಉಪಯಾಜರು ಹೇಳಿದರು. ಅರೆಕ್ಷಣ ಸೈರಿಸಿ, ಮಲಿನ ಕೈ – ಬಾಯಿ ತೊಳೆದು ಶುಚಿಗೊಳಿಸಿ ಬರುವೆನೆಂದು ದ್ರುಪದ ಪತ್ನಿ ಯಾಗಶಾಲೆಯಿಂದ ಹೊರ ಹೋದಳು. ಹವಿಸ್ಸು ಎತ್ತಿಯಾಗಿದ್ದ ಕಾರಣ ತಡೆದು ನಿಲ್ಲಲಾಗದೆ, “ನೀನು ಸ್ವೀಕರಿಸು, ಸಮರ್ಪಿಸು ಮಂತ್ರಿಸಿದ ಹವ್ಯ ವ್ಯರ್ಥವಾಗದು. ನೋಡೋಣ ಮಂತ್ರ ಬಲ” ಎಂದು ಹೇಳುತ್ತಾ ಸ್ವಾಹಾ ಎಂದು ಯಜ್ಞದಲ್ಲಿ ಹವ್ಯ ಅರ್ಪಿಸಿ ಹೋಮಿಸಿದರು. ಅಗ್ನಿಯು ಬುಗ್ಗೆಂದು ಉರಿದು ಆಳೆತ್ತರಕ್ಕೆ ಬೆಳೆಯಿತು.
ಯಾಗ ಮಧ್ಯದಿಂದ ಎದ್ದ ಜ್ವಾಲೆ ಮನುಷ್ಯ ರೂಪಧಾರಣೆಗೈದು ಕಿರೀಟ, ಕುಂಡಲ, ಕವಚ, ಖಡ್ಗ, ಧನುರ್ಬಾಣ, ಬತ್ತಳಿಕೆ ಸಹಿತ, ವಸನಲಾಂಕೃತನಾಗಿ ಬಾಲಕ ರೂಪ ತಳೆದು ಸರ್ವಾಲಂಕೃತ ಯೋಧ ರಾಜಕುಮಾರನಾಗಿ ಹುಟ್ಟಿತು. ಜೊತೆಗೇ ಸ್ಪುರದ್ರೂಪಿ ಸುರಸ್ತ್ರೀ ಸೌಂದರ್ಯ ಶೋಭಿತೆ, ಷೋಡಷಿ ಬಾಲಿಕೆಯೂ ಹುಟ್ಟಿಬಂದಳು. ಹೀಗೆ ಯಾಗಾಗ್ನಿ ಮಧ್ಯದಿಂದ ಅಗ್ನಿ ಸಂಭವಿತ ಕುಮಾರ, ಯಾಜ್ಞಸೇನಿ ಕುಮಾರಿಯೂ ಆವಿರ್ಭವಿಸಿದರು. “ಈ ಬಾಲಕನು ಯಾಗ ಕಾಮೇಷ್ಟಿಯಂತೆ ದ್ರೋಣಾಚಾರ್ಯರ ವಧೆಯನ್ನೂ, ಈ ಬಾಲಿಕೆಯು ದುಷ್ಟ ಕ್ಷತ್ರಿಯರ ನಾಶಕ್ಕೂ ಕಾರಣಳಾಗುತ್ತಾಳೆ” ಎಂಬ ಅಶರೀರವಾಣಿಯಾಯಿತು. ಇದನ್ನು ಕೇಳಿದ ದ್ರುಪದನಿಗೆ ಅತಿ ಸಂತೋಷವಾಯಿತು. ಮಹಾದಾನಂದ ತುಂದಿಲ ದ್ರುಪದನ ಮಹಾಕಾಂಕ್ಷೆ ‘ದ್ರೋಣ ವಧೆಗೆ ಪುತ್ರನ ಪ್ರಾರ್ಪ್ತಿಯಾಯಿತು., ತಾನು ಸ್ವ ಅನುಭವ ಪಡೆದು ಮೆಚ್ಚಿದ ಶ್ರೇಷ್ಠ ಧನುರ್ಧರ ಅರ್ಜುನನಿಗೆ ತನ್ನ ಮಗಳನ್ನು ಮದುವೆ ಮಾಡಿಸಿ ಸಂಬಂಧ ಬೆಳೆಸಬೇಕೆಂಬ ಆಸೆ- ಮಹತ್ವಾಕಾಂಕ್ಷೆಯೂ ದ್ರುಪದನ ಮನದಲ್ಲಿ ಮೂಡಿತು. ಯಾಗ ಸಮಾಪ್ತಿಗೊಳಿಸಿ ಪೂರ್ಣಾಹುತಿಯಾದ ಬಳಿಕ ಹೇರಳ ದ್ರವ್ಯ ದಕ್ಷಿಣೆಯಾಗಿ ಯಾಜ ಉಪಯಾಜರಿಗೂ, ಸಹಾಯಕ ಕರ್ಮಾಂಗ ವರ್ಗ ಬ್ರಾಹ್ಮಣರಿಗೂ ನೀಡಿ ಸತ್ಕರಿಸಿ ಕಳುಹಿಸಿದನು.
ದ್ರುಪದನ ಕಾಮೇಷ್ಟಿ ಯಾಗ, ಪುತ್ರನ ಜನನದ ಸಮಾಚಾರ ತಿಳಿದ ದ್ರೋಣ ದುಃಖಿಸುವ ಬದಲು ಸಂಭ್ರಮಿಸಿದ. ಕಾರಣ ಮನುಷ್ಯರಾಗಿ ಹುಟ್ಟಿದವರಿಂದ ದ್ರೋಣ ವಧೆ ಅಸಂಭವ ಎಂಬ ಸತ್ಯ ಅನಾವರಣವಾದ ಕಾರಣ ಅದು ಪ್ರತಿಷ್ಟೆಯ ವಿಚಾರವಾಯಿತು. ಮಾತ್ರವಲ್ಲ ಹುಟ್ಟಿದ ಯಾರೇ ಆಗಲಿ ಮರಣ ವ್ಯಾಪ್ತಿಗೆ ಸೇರಲೇಬೇಕಲ್ಲವೇ? ಅಯೋನಿಜ ದಿವ್ಯ ಯಾಗ ಸಂಭವನಿಂದ ಮರಣವಲ್ಲವೇ! ಅದಕ್ಕೂ ಕಾಲ ಕೂಡಿ ಬರಬೇಕಲ್ಲವೇ? ಬರಲಿ. ಈಗ ಚಿಂತಿಸುವುದು ವ್ಯರ್ಥ ಎಂದರಿತು ನಿರುಮ್ಮಳ ಚಿತ್ತನಾದ ಗುರು ದ್ರೋಣಾಚಾರ್ಯ.
ಹುಟ್ಟಿದ ಮಕ್ಕಳಿಗೆ ಜಾತಕರ್ಮಾದಿ ವಿಧಿ ಪೂರೈಸಿ ಮಗನಿಗೆ ದೃಷ್ಟದ್ಯುಮ್ನ ಎಂದೂ ದ್ರುಪದ ಪುತ್ರಿ ದ್ರುಪದಜೆಗೆ ಆಕೆಯ ಶರೀರ ವರ್ಣದಂತೆ ಕಪ್ಪಾಗಿದ್ದ ಮಗಳಿಗೆ ಕೃಷ್ಣೆ ಎಂದೂ ನಾಮಕರಣ ಮಾಡಿದರು. ಈಗ ಆಚಾರ್ಯದ್ವಯರಾದ ಹಸ್ತಿನೆಯ ಆಧಾರ ಸ್ತಂಭ ಇಚ್ಚಾ ಮರಣಿ ಭೀಷ್ಮಚಾರ್ಯರ ವಧೆಗೆ ಶಿಖಂಡಿಯೂ, ಚಂದ್ರವಂಶದ ವರ್ತಮಾನ ಕಾಲದ ಗುರು ಶರಾದಪಿ -ಶಾಪಾದಪಿ ಗುರು ದ್ರೋಣರ ವಧೆಗೆ ದೃಷ್ಟದ್ಯುಮ್ನನೂ ದ್ರುಪದ ನ ಅರಮನೆಯಲ್ಲಿ ಬೆಳೆಯುವಂತಾಯಿತು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್