24.5 C
Udupi
Tuesday, August 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 602

ಭರತೇಶ್ ಶೆಟ್ಟಿ ,ಎಕ್ಕಾರು

ನಿಧಾನ ನಿಧಾನವಾಗಿ ಓಲೆಯನ್ನು ಕಟ್ಟಿರುವ ಉತ್ತರೀಯವನ್ನು ಸಡಿಲಿಸಿ ಮೆತ್ತನೆ ಮೆಲ್ಲನೆ‌ ನಾಜೂಕಿನಿಂದ ಕಿಂಚಿತ್ ಸದ್ದು, ಅಲುಗಾಟ ಯಾವುದೂ ಆಗದಂತೆ ಅಲ್ಲಿಂದಲ್ಲಿಗೆ ಸಡಿಲಿಸಿ ಎಳೆದಳು. ಓಲೆಯ ಕರಡಿಗೆ ಚಂದ್ರಹಾಸನ ಸೊಂಟದಿಂದ ವಿಷಯೆಯ ಕೈ ಸೇರಿದೆ. ಬಿಗಿ ಹಿಡಿದಿದ್ದ ಉಸಿರನ್ನು ತಿರುಗಿ ನಿಧಾನಕ್ಕೆ ನಿಶ್ವಾಸ – ಉಚ್ವಾಸದ ಮೂಲಕ ಮತ್ತೆ ಒಂದಾವರ್ತಿ ಪೂರೈಸಿ ಮತ್ತೆ ಮೆಲ್ಲ ಮೆಲ್ಲನೆ ಎದ್ದು ನಿಂತು, ಅಷ್ಟೇ ಜಾಗರೂಕತೆಯಿಂದ ಸಪ್ಪಳವಾಗದಂತೆ ನಾಲ್ಕಾರು ಹೆಜ್ಜೆ ದೂರ ಬಂದು ಒಮ್ಮೆ ಸಾವರಿಸಿ ಕೊಂಡಳು. ಕುತೂಹಲ, ಕೌತುಕ, ಕಾತರ ಹೆಚ್ಚುತ್ತಿದೆ. ಈ ವರೆಗೆ ಎಲ್ಲಾದರು ನಿದ್ರಿಸಿದವ ಎದ್ದರೆ, ಯಾರಾದರು ನೋಡಿದರೆ ಎಂಬ ಭಯದಿಂದ, ಬಿಗಿ ಹಿಡಿದಿದ್ದ ಉಸಿರಾಟದಿಂದ ಬೆವತು ಹೋಗಿರುವ ವಿಷಯೆ ಮೊದಲಾಗಿ ಬೆವರು ಒರೆಸಿಕೊಂಡು ಮುಂದೆ ಸಾಗಿ ಮತ್ತೊಂದು ಮರದ ಮರೆಯಲ್ಲಿ ನಿಂತಳು. ಓಲೆ, ಅದರ ಮೇಲಿನ ಮುದ್ರೆಗಳೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಳು. “ಅರೆ ಇದರಲ್ಲಿ ನಮ್ಮ ಕುಂತಳದೇಶದ ಮುದ್ರೆಯಿದೆ. ಹಾಗಿದ್ದರೆ ಇದು ನಮ್ಮ ದೇಶದ ಓಲೆಯೇ? ಈತನ ಕೈಯಲ್ಲಿ ಹೇಗೆ? ಈ ಸುರ ಸುಂದರಾಂಗನನ್ನು ನಮ್ಮ ದೇಶದಲ್ಲಿ ನೋಡಿದ ನೆನಪೇ ಇಲ್ಲ! ಏನೇ ಇರಲಿ ಓಲೆ ನನ್ನ ಕೈ ಸೇರಿದೆ, ಬಿಚ್ಚಿ ಓದಿ ನೋಡುತ್ತೇನೆ.” ಎಂದು ಮುದ್ರೆ ಹಾಳಾಗದಂತೆ ಜೋಪಾನವಾಗಿ ಕೊಳವೆ ಕರಡಿಗೆಯ ಮುಚ್ಚಳ ತೆರೆದು ಓಲೆಯನ್ನು ಕೈಗೆತ್ತಿಕೊಂಡಳು. ಓಲೆಯ ಸುರುಳಿ ಬಿಡಿಸಿ ಬಿಚ್ಚಿ ನೋಡಿದರೆ “ಕುಂತಳದ ಮುದ್ರೆ, ನನ್ನಪ್ಪನ ಋಜು ಇದೆ.” ಏನು ವಿಷಯ ಓದಿ ನೋಡುತ್ತೇನೆ ಎಂದು ವಿಷಯೆ ತಡೆಯಲಾಗದ ಅವಸರದಲ್ಲಿ ಓದತೊಡಗಿದಳು. “ಕುಂತಳ ದೇಶದ ಮಂತ್ರಿಕುಮಾರ ಮದನನಿಗೆ” ಎಂಬ ಒಕ್ಕಣೆಯಿದೆ. ಅಂದರೆ ಈ ಓಲೆ ನನ್ನ ಅಣ್ಣನಿಗೆ – ಅಪ್ಪ ಕಳುಹಿಸಿರುವುದು. ನನಗೆ ಬೇಕಿರುವುದು ಓಲೆ ತಂದಿರುವಾತ ಯಾರು ಎಂಬ ವಿಚಾರ. ಏನಾದರು ಇದೆಯಾ ನೋಡೋಣ ಎಂದು ಕಣ್ಣಾಡಿಸುತ್ತಾ ಓದ ತೊಡಗಿದಳು. ಒಂದೇ ಉಸಿರಿನಲ್ಲಿ ಓದಿ ಮುಗಿಸಿ, “ಅಯ್ಯೋ ದೇವರೇ” ಎಂದು ಹೌಹಾರಿದಳು. “ಛೇ! ಎಂತಹ ಅನಾಹುತ ಆಗಿ ಹೋಗುತ್ತಿತ್ತು. ಮೊದಲೇ ನನ್ನ ಅಣ್ಣ ಅವಸರದ ಮನುಷ್ಯ. ಹಿಂದೆ ಮುಂದೆ ಆಲೋಚಿಸುವ ವ್ಯವಧಾನದವನೇ ಅಲ್ಲ. ನನ್ನ ಅಪ್ಪನಿಗೆ ಆತುರದಲ್ಲಿ ಬರೆಯುವಾಗ ಕೈತಪ್ಪಿನಿಂದಾಗಿರುವ ಪ್ರಮಾದವೇ ಇರಬೇಕು. ಗಡಿಬಿಡಿಯಲ್ಲಿ ನಾನೇನಾದರು ತಪ್ಪಾಗಿ ಓದಿದೆನೇ! ಎಂದು ಓಲೆಯನ್ನು ಮತ್ತೊಮ್ಮೆ ಸಾವಧಾನದಿಂದ ಓದಲಾರಂಭಿಸಿದಳು
ನಾನು ಓಲೆ ಕಳುಹಿಸಿರುವ ಈತನ ಹೆಸರು ಚಂದ್ರಹಾಸನೆಂದು. ನಮ್ಮ ಸಾಮಂತರಾಜ್ಯ ಚಂದನಾವತಿಯ ಯುವರಾಜ. ಈತನನ್ನು ನಾನೇ ನಿನ್ನ ಬಳಿ ಕಳುಹಿಸಿರುವುದು. ಈ ಚಂದ್ರಹಾಸನ ಭವಿಷ್ಯತ್ತು ಉಜ್ವಲವಾಗಿದೆ. ರಾಜ ಲಕ್ಷಣವೂ,ರಾಜಯೋಗವೂ ಈತನಿಗಿದೆ. ಮುಂದೆ ಈತನೇ ನಮ್ಮ ದೇಶದ ರಾಜನಾಗುತ್ತಾನೆ ಎಂಬ ಭವಿಷ್ಯವನ್ನು ನಾನು ಈಗಾಗಲೆ ಬಲ್ಲವರಿಂದ ತಿಳಿದುಕೊಂಡಿದ್ದೇನೆ. ಆದುದರಿಂದ ಈತನನ್ನು ಆದರದಿಂದ ಗೌರವಿಸು. ನಮ್ಮ ಶ್ರೇಯಸ್ಸಿಗೋಸ್ಕರ ಯೋಚಿಸಿ ಈ ಓಲೆ ಬರೆದಿದ್ದೇನೆ. ಬಂದಿರುವಾತನನ್ನು ಸತ್ಕರಿಸಿ, ಹಿಂದೆ ಮುಂದೆ ಆಲೋಚಿಸದೆ ವಿಷವನ್ನಿತ್ತು ಮಹತ್ತರವಾದ, ನಮಗೆ ಅತ್ಯಗತ್ಯವಾದ ಕಾರ್ಯ ಮುಗಿಸಿ ಬಿಡು. ಈ ಕೆಲಸವನ್ನು ಜಾಣ್ಮೆ ಹಾಗು ಜಾಗ್ರತೆಯಿಂದ ಯಾವುದೇ ತೊಂದರೆಯಾಗದಂತೆ ನೀನೇ ನಿಭಾಯಿಸಬೇಕು. ನಮ್ಮ ಮುಂದಿನ ಬದುಕಿಗೆ ದಾರಿಯನ್ನು ಸುಗಮಗೊಳಿಸಿ ಬಿಡು. ನಾನು ಮರಳಿ ಬರುವುದಕ್ಕೆ ಇನ್ನೂ ಕೆಲವು ದಿನಗಳಾಗುತ್ತದೆ

‘ಅಯ್ಯೋ! ಎಂತಹ ಅಚಾತುರ್ಯವಾಗಿ ಹೋಗಿ ಬಿಡುತ್ತಿತ್ತು. ಭವಿಷ್ಯದಲ್ಲಿ ರಾಜನಾಗುವವನಿಗೆ ವಿಷ ನೀಡಲು ಹೇಳಿದ್ದಾರೆಯೇ ನನ್ನ ಅಪ್ಪ! ಅವರಿಗೆ ಪ್ರಾಯವಾಗುತ್ತಾ ಬಂದಿದೆ, ಕಣ್ಣಿನ ದೃಷ್ಟಿಯೂ ಮಂದವಾಗಿದೆ. ಕೈಗಳೂ ಬರೆಯುವಾಗ ನಡುಗುತ್ತವೆ. ಹಾಗಾಗಿ ಕೈ ತಪ್ಪಿನಿಂದ ಹೀಗೆ ಬರೆದಿರಬೇಕು. ಇಲ್ಲಿಂದ ರಾಜಕಾರ್ಯದ ನಿಮಿತ್ತ ದೇಶ ಸಂಚಾರಕ್ಕೆ ಹೊರಡುವ ಸಮಯ ಮಲ್ಲಿಗೆ ಹಾಗು ಮಾವಿನಮರಕ್ಕೆ ವಿವಾಹ ಶಾಸ್ತ್ರ ಮಾಡಿಸಲು ಅವರಲ್ಲಿ ಅನುಮತಿ ಮತ್ತು ಉಪಸ್ಥಿತಿಯನ್ನು ಕೇಳಿದ್ದೆ. ಆಗ ನನ್ನ ಅಪ್ಪನಿಗೆ ಪ್ರಾಯಕ್ಕೆ ಮಗಳಿದ್ದಾಳೆ, ಅವಳಿಗೂ ಮದುವೆ ಮಾಡಿಸಬೇಕು ಎಂಬ ಯೋಚನೆ ಮನದಲ್ಲಿ ಮೂಡಿತ್ತು. ಆಗ ಅವರು ತಾನು ಮಲೆನಾಡಿನತ್ತ ಹೋಗುತ್ತಿದ್ದೇನೆ. ಉತ್ತಮ ವರ ಸಿಕ್ಕಿದರೆ ನಿನ್ನ ಕಲ್ಯಾಣದ ವ್ಯವಸ್ಥೆ ಮಾಡಿಸುತ್ತೇನೆ ಎಂದು ನನ್ನಲ್ಲಿ ಹೇಳಿ ಹೋಗಿದ್ದಾರೆ. ಅಂದರೆ ಓಲೆಯನ್ನು ತಂದಿರುವ ಈತನೇ ಯಾಕೆ ನನ್ನ ಅಪ್ಪ ಆರಿಸಿದ ವರ ಆಗಿರಬಾರದು? ಮುಂದೆ ರಾಜನಾಗುವವನಿಗೆ “ವಿಷಯೆಯನ್ನಿತ್ತು” ಎಂದು ಬರೆಯಬೇಕಾದಲ್ಲಿ ಅಕ್ಷರ ತಪ್ಪಿನಿಂದ “ವಿಷವನ್ನಿತ್ತು” ಎಂದಾಗಿದೆಯೇ? ಎಂಬ ಸಂದೇಹ ಮೂಡಿತು. ಯೋಚಿಸುತ್ತಾ ಅರೆಕ್ಷಣ ನಿಂತಳು.

ಮತ್ತೆ ನಿಧಾನವಾಗಿ ಚಂದ್ರಹಾಸ ಮಲಗಿರುವತ್ತ ಬಂದು ಮಾರು ದೂರದಲ್ಲಿ ನಿಂತು ಮತ್ತೊಮ್ಮೆ ಅಡಿಯಿಂದ ಮುಡಿಯವರೆಗೆ ನೋಡಿದಳು. ಮೊದಲೇ ಚಂದ್ರಹಾಸನನನ್ನು ನೋಡಿದಾಕ್ಷಣವೇ ಮನ ಸೋತಿದ್ದ ವಿಷಯೆಯ ಮನಸ್ಸು ಅನುರಾಗದ ಅಲೆಯಲ್ಲಿ ತೇಲಾಡುತ್ತಾ ಅನುರಕ್ತಗೊಂಡಿದೆ. ಈಗ ಮನಸ್ಸೂ ಅವಳಿಗೆ ಬೇಕಿದ್ದ ದಾರಿಯಲ್ಲೇ ತರ್ಕಿಸತೊಡಗಿತು. ಯಾವ ಕಾರಣಕ್ಕೂ ಈ ಮನ್ಮಥನಿಗೆ ವಿಷವೀಯಲು ನನ್ನಪ್ಪ ಹೇಳಿರಲು ಸಾಧ್ಯವೇ ಇಲ್ಲ. ದೇವರ ಇಚ್ಚೆಯಿಂದಲೇ ನಾನು ಉದ್ಯಾನವನದತ್ತ ಬರುವಂತಾಯಿತು. ಇಲ್ಲದೇ ಹೋಗಿದ್ದರೆ ಈ ಓಲೆ ನನ್ನ ಅಣ್ಣನ ಕೈ ಸೇರಿದ್ದರೆ ಅನಾಹುತವೇ ಆಗಿ ಬಿಡುತ್ತಿತ್ತು. ಆತುರಗಾರನಿಗೆ ಬುದ್ಧಿ ಮಟ್ಟ ಎಂಬಂತೆ ಅಣ್ಣ ಯಾಕೆ ಏನು ಎಂದು ವಿಚಾರಿಸದೆ ವಿಷವಿಕ್ಕಿ ಕೊಂದು ಬಿಡುತ್ತಿದ್ದನೋ ಏನೋ! ವಿಳಂಬ ಮಾಡುವುದು ಬೇಡ ಏನಾದರೊಂದು ಪರಿಹಾರ ಹುಡುಕಲೇ ಬೇಕು’ ಎಂದು ಮತ್ತೆ ಯೋಚಿಸತೊಡಗಿದಳು.

ಚಡಪಡಿಸುತ್ತಾ ತಲೆ ಕೆರೆದು ಯೋಚಿಸುತ್ತಾ ಕೈಯಿಂದ ಮುಖವನ್ನೊಮ್ಮೆ ಒರೆಸುತ್ತಾ ಗಲ್ಲದ ಮೇಲಿಟ್ಟಳು. ಕೈ ಮುಷ್ಟಿಗಟ್ಟಿ ಬಿಡಿಸಿ ನೋಡಿದರೆ ಅಂಗೈ ಮತ್ತು ಬೆರಳುಗಳ ಮಧ್ಯೆ ಕಪ್ಪು ಕಲೆಯಾಗಿದೆ. ಏನಿದು ಎಂದು ನೋಡಿದರೆ ಕಣ್ಣ ಸಂದಿಗೆ, ಹುಬ್ಬಿಗೆ ಹಚ್ಚಿದ್ದ ಕಾಡಿಗೆ ಮುಖ ಒರೆಸುವ ಸಮಯ ಕೈಗೆ ಮೆತ್ತಿಕೊಂಡಿದೆ. ತಕ್ಷಣ ಉಪಾಯವೊಂದು ಹೊಳೆಯಿತು. ಕಿರುಬೆರಳ ಉಗುರಿನಿಂದ ಕಣ್ಣ ಸಂದಿಗೆ ಹಚ್ಚಿದ್ದ ಕಾಡಿಗೆಯನ್ನು ಕೆರೆದು ತೆಗೆದು ಒಟ್ಟು ಸೇರಿಸಿ ಚಿಕ್ಕ ಮುದ್ದೆ ಮಾಡಿದಳು. ಅಲ್ಲೆ ಪಕ್ಕದ ಗಿಡದ ಕಡ್ಡಿಯೊಂದನ್ನು ಸೀಳಿ ಲೇಖನಿಯಂತೆ ಮಾಡಿ ಕೊಂಡಳು. ಬೆವರು ಮಿಶ್ರಣವಾಗಿ ಶಾಯಿಯಂತಾಗಿದ್ದ ಕಾಡಿಗೆಯನ್ನೇ ಬಳಸಿ ವಿಷವನ್ನಿತ್ತು ಎಂದು ಬರೆದುದನ್ನು ತುಸು ಒರೆಸಿ ಬಹಳ ಜಾಗರೂಕತೆಯಿಂದ ವಿಷಯೆಯನ್ನಿತ್ತು ಎಂದು ತಿದ್ದಿ ಸರಿಪಡಿಸಿ ಬರೆದಳು. ಗಾಳಿಗೆ ತೆರೆದಿಟ್ಟು ಒಣಗಿಸಿದಳು. ಮತ್ತೆ ಮತ್ತೆ ತಾನು ತಿದ್ದಿ ಬರೆದುದನ್ನು ನೋಡಿದಳು. ತಿದ್ದಿ ಬರೆದುದು ಚೂರೂ ಸಂಶಯ ಬಾರದಷ್ಟು ಸ್ಪಷ್ಟವಾಗಿದೆ. ಓದುವಾಗಲೂ, ಪರಿಶೀಲಿಸಿ ನೋಡಿದರೂ ವ್ಯತ್ಯಾಸವಿಲ್ಲ. ಇನ್ನು ಇದನ್ನು ಮೊದಲಿದ್ದ ಹಾಗೆ ಆತನ ಸೊಂಟಕ್ಕೆ ಬಿಗಿಯಬೇಕೆಂದು ಓಲೆಯನ್ನು ಸುರುಳಿಯಾಗಿ ಮಡಚಿ, ಕೊಳವೆ ಕರಡಿಗೆಯೊಳಗಿಟ್ಟು ಮುಚ್ಚಳ ಹಾಕಿದಳು. ಮತ್ತದೇ ಕಳ್ಳ ಬೆಕ್ಕಿನ ಹೆಜ್ಜೆ, ನಯ ನಾಜೂಕಿನ ಕೆಲಸ. ತಾನು ಜಾರಿಸಿ ಎಳೆದಿದ್ದ ಉತ್ತರೀಯದ ಗಂಟಿನ ಮಧ್ಯೆ ತೂರಿಸಿ, ಗಂಟನ್ನು ಬಿಗಿಗೊಳಿಸಿ ಕಟ್ಟಿದಳು. ಮತ್ತೊಮ್ಮೆ ಮಗದೊಮ್ಮೆ ಚಂದ್ರಹಾಸನನ್ನು ಕಣ್ತುಂಬಾ ನೋಡಿದಳು. ಬಿಟ್ಟು ಹೋಗಲು ಮನಸ್ಸಿಲ್ಲ. ಹೋಗದೆ ವಿಧಿಯಿಲ್ಲ. ಅಲ್ಲಿಂದ ನಿಧಾನವಾಗಿ ನಾಲ್ಕು ಹೆಜ್ಜೆ ಇಟ್ಟು ಮನೆಯತ್ತ ಓಡಿದಳು. ಮನಸ್ಸು ಕೇಳಲಿಲ್ಲ, ತಿರುಗಿ ಓಡಿಬಂದು ಮತ್ತೆ ಮತ್ತೆ ಮಲಗಿದ್ದ ಚೆಲುವ ಚೆನ್ನಿಗರಾಯ ಚಂದ್ರಹಾಸನನ್ನು ನೋಡುತ್ತಾ ನಿಂತು ಮೈ ಮರೆತಿದ್ದಾಳೆ.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page