ಭಾಗ – 596
ಭರತೇಶ್ ಶೆಟ್ಟಿ, ಎಕ್ಕಾರು

ರಾಜ ಕುಳಿಂದಕನು ಆಸ್ಥಾನ ಪುರೋಹಿತರಲ್ಲಿ ಚರ್ಚಿಸಿ ಮಗುವಿನ ಜಾತಕರ್ಮ ವಿಮರ್ಷೆಗೆ ದಿನ ನಿಗದಿ ಪಡಿಸಿದನು. ಜ್ಯೋತಿಷ್ಯ ಶಾಸ್ತ್ರ ಪಾಂಡಿತ್ಯ ಪ್ರವೀಣರಾದ ಬ್ರಾಹ್ಮಣೋತ್ತಮರನ್ನೇ ಆಮಂತ್ರಿಸಿದನು.
ಬಂದಂತಹ ಬ್ರಾಹ್ಮಣೋತ್ತಮರು ಮಗುವಿನ ಲಕ್ಷಣಗಳನ್ನೇ ಆಧಾರವಾಗಿ ಮುಂದಣ ಭವಿಷ್ಯದ ವಿಮರ್ಷೆಯಲ್ಲಿ ನಿರತರಾದರು “ರಾಜನೇ! ನಿಮ್ಮ ಕುಮಾರನ ಶರೀರದ ಅಂಗಾಂಗಗಳು ತೀರಾ ಅಪರೂಪವಾದ ರಾಜ ಲಕ್ಷಣಗಳನ್ನೇ ಹೊಂದಿದೆ. ಈ ಬಾಲಕ ಸಕಲ ಶಾಸ್ತ್ರ ಪಾರಂಗತನಾಗಿ, ಸದ್ಧರ್ಮ ಶೀಲನೂ, ದೈವ ಭಕ್ತನೂ, ಪ್ರಜಾರಂಜಕನೂ ಆಗಿ ಮೆರೆಯುತ್ತಾನೆ. ಕೀರ್ತಿವಂತ, ಶ್ರೇಯೋವಂತ ಮಹಾರಾಜನಾಗಿ ಸತ್ಪ್ರಜಾ ಪರಿಪಾಲನೆ ಮಾಡುವ ಸರ್ವ ಸಲ್ಲಕ್ಷಣಗಳೂ ಈತನಲ್ಲಿವೆ. ಈ ಮಗುವಿಗೆ ಸುಸ್ಥಿರವಾದ ಒಂದು ಅಮೂಲ್ಯ ಆಸ್ತಿಯಿದೆ. ಅದೇ ಭಗವದ್ಕೃಪೆ. ಏನೇ ಆಪತ್ತು ಈತನಿಗೊದಗಿದರೂ ಅದು ನಿದ್ರೆಯಲ್ಲಿ ಕಂಡ ಕನಸು ಎಚ್ಚರವಾದಾಗ ಮಾಯವಾಗುವಂತೆ ಪರಿಹಾರವಾಗಿ ಬಿಡುತ್ತದೆ. ಈತನೋರ್ವನ ಬದುಕು ಮಾತ್ರ ಬೆಳಗುವುದಲ್ಲ ಸಮಸ್ತ ಪರಿವಾರ, ಪ್ರಜಾಕೋಟಿ ಜೊತೆಗೆ ಸಾಮ್ರಾಜ್ಯಕ್ಕೂ ಸುಭಿಕ್ಷೆ, ಸಂರಕ್ಷಣೆ ಒದಗಿಸಬಲ್ಲ ಸರ್ವ ಯೋಗ್ಯತೆಗಳೂ ಈತನಲ್ಲಿ ಎದ್ದು ಕಾಣಿಸುತ್ತಿದೆ. ನಿಮ್ಮ ಬದುಕಿನ ಪುಣ್ಯ ವಿಶೇಷ ಫಲವಾಗಿ ನಿಮಗೀ ಮಗು ದೊರೆತಿದ್ದಾನೆ. ಈತನ ವಿದ್ಯಾಭ್ಯಾಸದ ವ್ಯವಸ್ಥೆ ಶೀಘ್ರವಾಗಿ ಮಾಡಿಸಿ. ಎಲ್ಲರಿಗೂ ಉತ್ತರೋತ್ತರ ಸನ್ಮಂಗಲವಾಗಲಿ” ಎಂದು ಹರಸಿದರು.
ರಾಜ ಕುಳಿಂದಕ ಹಾಗು ರಾಣಿ ಮೇಧಾವಿನಿಯ ಸಂತೋಷಕ್ಕೆ ಪಾರವೇ ಇಲ್ಲ. ತಾನು ಹೆತ್ತ ಮಗುವಲ್ಲದಿದ್ದರೂ ತಾಯ್ತನದ ಪರಿಪೂರ್ಣ ಆನಂದವನ್ನು ಲಾಲನೆ ಪಾಲನೆಯಲ್ಲಿ ಮಗು ಚಂದ್ರಹಾಸ ಕಲ್ಪಿಸಿದ್ದಾನೆ. ಕುಳಿಂದಕನಿಗಂತೂ ದೇವರೇ ಪ್ರತ್ಯಕ್ಷವಾಗಿ ಕಾಣಿಸಿ ಬಯಸಿದ ವರ ಅನುಗ್ರಹಿಸಿದುದಕ್ಕೆ ಸರಿ ಮಿಗಿಲಾದ ಹರ್ಷೋತ್ಕರ್ಷೆ ಆಗುತ್ತಿದೆ. ಅಂತೂ ಶ್ರೀಹರಿಯ ಕರುಣಾ ದೃಷ್ಟಿಯಿಂದ ಇಂತಹ ಪರಮ ಸೌಭಾಗ್ಯ ನಮ್ಮದಾಗಿದೆ ಎಂದು ನಿತ್ಯ ಭಗವಂತನ ಆರಾಧನೆಯಲ್ಲೂ ತೊಡಗುವ ಸದ್ಬುದ್ಧಿ ವೃದ್ಧಿಸಿದೆ.
ಚಂದ್ರಹಾಸನ ವಿದ್ಯಾರಂಭವಾಗಿದೆ. ಸಹಪಾಠಿಗಳೊಡನೆ ವಿನಯಶೀಲನೂ, ಆತ್ಮೀಯನೂ ಆಗಿ ಎಲ್ಲರಿಗೂ ಪ್ರೀತನಾಗಿದ್ದಾನೆ. ದಿನಗಳೆದಂತೆ ಶುಕ್ಲ ಪಕ್ಷದ ಚಂದ್ರಮನಂತೆ ವೃದ್ಧಿಸುತ್ತಾ ಕಂಗೊಳಿಸತೊಡಗಿದ್ದಾನೆ. ಎಳವೆಯಲ್ಲೇ ಅತ್ಯಾಕರ್ಷಕ ಚೆಲುವನ್ನು ಜನ್ಮಜಾತವಾಗಿ ಪಡೆದಿದ್ದು, ಈಗ ಬೆಳೆಯುತ್ತಾ ಚೆಲುವಿನ ಜೊತೆ ಗಾಂಭಿರ್ಯ, ಮನಮೋಹಕ ರೂಪ ಲಾವಣ್ಯ, ವಿದ್ಯಾ ಪ್ರಾಪ್ತಿಯಿಂದ ಮತ್ತಷ್ಟು ತೇಜಸ್ಸು, ಸುಗುಣಸಂಪನ್ನನಾಗಿ ಗುರುಗಳಿಂದ ಪರಿಚಾರಕವರೆಗೆ ಸರ್ವರಿಗೂ ಚಂದ್ರಹಾಸನೆಂದರೆ ಪಂಚ ಪ್ರಾಣ ಎಂಬಷ್ಟು ಪ್ರೀತಿ ಪಾತ್ರನಾಗಿದ್ದಾನೆ. ಶಸ್ತ್ರ, ಶಾಸ್ತ್ರ, ಅಸ್ತ್ರ ವಿದ್ಯೆಗಳನ್ನೂ, ಜೊತೆಗೆ ನ್ಯಾಯ ದಂಡ ನೀತಿಯನ್ನೂ ಏಕಪಾಠಿಯಾಗಿ ಕಲಿತು ಪರಿಣತನಾಗಿದ್ದಾನೆ. ಈಗ ಚಂದ್ರಹಾಸ ಹದಿನಾರು ವರುಷ ಪ್ರಾಯದ ಚಿಗುರು ಮೀಸೆಯ ತರುಣ. ಅಬಾಲವೃದ್ದಾದಿಗಳವರೆಗೆ ಯಾರೇ ಆಗಿರಲಿ ನೋಡಿದವರಿಗೆ ನೋಡುತ್ತಲೇ ಇರಬೇಕು ಎಂಬಷ್ಟರ ಆಕರ್ಷಣೆ ಮೈಗೂಡಿಸಿ ಕೊಂಡಿದ್ದಾನೆ. ಸ್ವರೂಪಕ್ಕೆ ತಕ್ಕ ಸೌಜನ್ಯ ಎಲ್ಲವೂ ಸಮತೂಕದಲ್ಲಿದ್ದು ಸುಜ್ಞಾನಿಯೂ ವಿವೇಕಿಯೂ ಆಗಿ ಚಂದನಾವತಿಯಲ್ಲಿ ಬೆಳೆಯುತ್ತಿದ್ದಾನೆ.
ಕುಮಾರ ಚಂದ್ರಹಾಸನ ಇಷ್ಟಕ್ಕೆ ಎಲ್ಲರೂ ಒಪ್ಪಿ ನಿತ್ಯ ಭಜನೆ, ಸಂಕೀರ್ತನೆ, ಭಗವಂತನ ನಾಮಸ್ಮರಣೆ, ಸಾಲಿಗ್ರಾಮ ಪೂಜೆ ಹೀಗೆ ಎಲ್ಲಿ ನೋಡಿದರೂ ಆರಾಧನೆಗಳೇ, ಅಗ್ನಿಹೋತ್ರಗಳು, ದಾನ ಧರ್ಮಗಳು, ಸಮೃದ್ಧಿ ಸಂತೋಷ ತುಂಬಿ ಚಂದನಾವತಿ ಸ್ವರ್ಗದ ಅಮರಾವತಿಯಂತಾಗುತ್ತಿದೆ. ಕಾಡ ಮಧ್ಯದ ಸಣ್ಣ ಪುರವಾಗಿದ್ದ ಚಂದನಾವತಿಯಲ್ಲಿ ಪ್ರಜೆಗಳು ಜೀವನಾಧಾರವಾಗಿ ಬೇಟೆ ಹಾಗು ಇತರ ಕಾಡು ಉತ್ಪನ್ನಗಳನ್ನೇ ಅವಲಂಬಿಸಿ ಬದುಕುತ್ತಿದ್ದರು. ಈಗ ಪ್ರಾಣಿಗಳ ಬೇಟೆಯನ್ನು ಕಡಿಮೆ ಮಾಡುತ್ತಾ, ಸಂಪೂರ್ಣವಾಗಿ ಸಾಧು ಪ್ರಾಣಿಗಳ ಹತ್ಯೆಯನ್ನು ತೊರೆದು ಅಹಿಂಸೆಯೇ ಪರಮಧರ್ಮ ಎಂಬಂತೆ ಧರ್ಮಾತ್ಮರಾಗಿದ್ದಾರೆ.
ಹೀಗೆ ಚಂದನಾವತಿಯ ಪ್ರಜಾ ಜನರ ವೃತ್ತಿ, ಪ್ರವೃತ್ತಿಗಳೇ ಬದಲಾದವು. ಜೀವನವೆಂಬುವುದು ಪುಣ್ಯ ಸಂಪಾದನೆಯ ವ್ರತವಾಗಿ ಬದಲಾಗಿದೆ. ಯಾರು ಯಾರಿಗೂ ಕೇಡು ಬಯಸುತ್ತಿಲ್ಲ. ಪರಸ್ಪರ ಸಾಮರಸ್ಯ, ಸಹಬಾಳ್ವೆ, ಹೊಂದಾಣಿಕೆಯ ಜೀವನ ಸಾಗಿಸತೊಡಗಿದ್ದಾರೆ. ರಾಜಾ ಕುಳಿಂದಕನಿಗಂತೂ ತನ್ನ ರಾಜ್ಯದಲ್ಲಾಗುತ್ತಿರುವ ಬದಲಾವಣೆಗಳನ್ನು, ಜನರ ಸಂಸ್ಕಾರ, ಸದ್ಗುಣ ವಿಶೇಷಗಳನ್ನು ಕಂಡಾಗ ಕನಸೋ ನನಸೋ ತಿಳಿಯಲಾಗದಷ್ಟು ದಿಗ್ಭ್ರಮೆ, ಸಂತೋಷವಾಗುತ್ತಿದೆ. “ಯಥಾ ರಾಜಾ, ತಥಾ ಪ್ರಜಾ” ಎಂಬ ಶಾಸ್ತ್ರ ವಚನದಂತೆ, ಜನರ ಮನಸ್ಸನ್ನು ಗೆದ್ದು ಸನ್ಮಾರ್ಗ ತೋರಬಲ್ಲ ಓರ್ವ ಶ್ರೇಷ್ಟ ನಾಯಕ ಇದ್ದರೆ, ಇಡೀ ರಾಜ್ಯವೇ ಸಮೃದ್ಧವಾಗುತ್ತದೆ. ಅದೇ ಸಮಯ ಒಂದು ವೇಳೆ ದುರುಳ ದುಷ್ಟನಾದ ಓರ್ವ ನಾಯಕತ್ವ ವಹಿಸಿಕೊಂಡಿದ್ದರೆ, ಅಲ್ಲಿ ದುಷ್ಟಕೂಟವೇ ಬೆಳೆದು ಅಶಾಂತಿ, ದರೋಡೆ, ಸುಲಿಗೆ, ಅತ್ಯಾಚಾರಗಳಿಂದ ಜನಜೀವನ ದುಸ್ತರವಾಗಿ ಬಿಡುತ್ತದೆ ಎಂಬ ವ್ಯತ್ಯಾಸ ಸಾಬೀತಾಗುತ್ತಿದೆ. ಕುಂತಳ ದೇಶದ ದುಷ್ಟಬುದ್ಧಿಯ ಮೇಲ್ವಿಚಾರಣೆಯ ಆಡಳಿತಕ್ಕೂ ಇಲ್ಲಿಗೂ ಅಜಗಜಾಂತರ ಅಂತರ ಗೋಚರಿಸುತ್ತಿದೆ. ಜನರಿಗೆ ತಮ್ಮ ಬದುಕಿನ ಪೂರ್ವಾಪರ ತರ್ಕಿಸುವಾಗ ಈಗಿನ ನೆಮ್ಮದಿ, ಮೊದಲಿದ್ದ ಬವಣೆ ಸ್ಪಷ್ಟವಾಗಿ ಅನುಭವವಾಗುತ್ತಿದೆ.
ನಾರದರು ಚಂದ್ರಹಾಸನ ಚರಿತ್ರೆಯನ್ನು ಶ್ರೀಕೃಷ್ಣ, ಅರ್ಜುನ ಹಾಗು ಸಮಸ್ತ ಪಾಂಡವ ಸೇನೆಗೆ ಸವಿಸ್ತಾರವಾಗಿ ವಿವರಿಸಿ ಹೇಳುತ್ತಿದ್ದಾರೆ. ಪ್ರತಿಕೂಲ ಹವಾಮಾನ, ಕೊರೆಯುವ ಚಳಿಯ ಮಧ್ಯೆಯೂ, ಕಾಣೆಯಾದ ತಮ್ಮ ಅಶ್ವಮೇಧದ ಕುದುರೆಗಳ ಕುರಿತಾದ ವದಯಥೆಯನ್ನೂ ಮರೆತು ತಲ್ಲೀನರಾಗಿ ಚಂದ್ರಹಾಸನ ಬದುಕಿನ ಏರಿಳಿತಗಳ ಕಷ್ಟ ಕಾರ್ಪಣ್ಯ, ಸುಖ ಸಮೃದ್ಧಿ ಮಿಳಿತ ಕಥೆಯನ್ನು ತನ್ಮಯತೆಯಿಂದ ಕೇಳುತ್ತಿದ್ದಾರೆ. ಬ್ರಹ್ಮ ಮಾನಸ ಪುತ್ರ ನಾರದರು ಕಥೆಯನ್ನು ಮುಂದುವರಿಸಿ ಹೇಳ ತೊಡಗಿದರು.
ಚಂದ್ರಹಾಸನ ದೂರಾಲೋಚನೆ, ಜನರ ಮನ ಪರಿವರ್ತನಾಶೀಲ ಗುಣ, ಸಮೃದ್ಧಿಕಾರಕ ಯೋಜನೆಗಳು, ಪರಿಶ್ರಮದ ಪಾಠ, ಜನರ ನಿಷ್ಠೆಯ ಅನುಸರಣೆ ಇದೆಲ್ಲವನ್ನೂ ಕಂಡು ಮಗ ಚಂದ್ರಹಾಸನನ್ನು ಕುಳಿಂದಕ ರಾಜಕಾರಣ ಕಾರ್ಯಗಳಿಗೂ ತೊಡಗಿಸಿಕೊಳ್ಳಲು ಆರಂಭಿಸಿದ. ದಿನಗಳೆದಂತೆ ಭಕ್ತ ಚಂದ್ರಹಾಸನ ಹರಿಭಕ್ತಿ ಮತ್ತಷ್ಟು ಆಳಕ್ಕಿಳಿಯುತ್ತಾ ರಾಜ್ಯದ ಮಣ್ಣ ಕಣಕಣದಲ್ಲೂ, ಜನರ ರಕ್ತನಾಡಿಗಳ ದಮಣಿ ದಮಣಿಗಳಲ್ಲೂ, ಚಂದನಾವತಿಯಲ್ಲಿ ಬೀಸುವ ಗಾಳಿ, ಹರಿಯುವ ನೀರು, ಮರಗಳ ಎಲೆ ಹಣ್ಣುಗಳು, ಮಿಕ ಖಗಗಳ ಇಂಚರ, ಪ್ರಾಣಿಗಳ ಕೂಗು ಹೀಗೆ ಸರ್ವ ವ್ಯಾಪಕವಾಗಿ ನಾರಾಯಣ ಸ್ಮರಣೆ ತುಂಬಿ ತುಳುಕಾಡುತ್ತಿದೆಯೋ ಎಂಬಂತೆ ಕಾಣಿಸತೊಡಗಿದೆ.
ಹೀಗಿರಲು ಚಂದ್ರಹಾಸ ತನ್ನ ತಂದೆ ರಾಜ ಕುಳಿಂದಕನ ಬಳಿ ಬಂದು ತನ್ನ ಮಹಾದಾಸೆಯೊಂದನ್ನು ಹೇಳಲು ಅನುಮತಿ ಕೇಳಿದನು.
ಮುಂದುವರಿಯುವುದು…






















































