ಭಾಗ – 595
ಭರತೇಶ ಶೆಟ್ಟಿ, ಎಕ್ಕಾರು

ಭಯದಲ್ಲೂ ಅಭಯ ಪ್ರದಾಯಕನಾದ ಭಗವಂತನ ನಾಮಸ್ಮರಣೆ ತನಗರಿವಿಲ್ಲದೇ ಉಚ್ಚರಿಸಲ್ಪಡುತ್ತಿದೆ. ಚಂದ್ರಹಾಸ ಕಾಡ ಮಧ್ಯದಲ್ಲಿ ಒಬ್ಬನೇ ದಿಕ್ಕು ದೆಸೆ ಅರಿವಾಗದೆ ಅಲೆದಾಡುತ್ತಿದ್ದಾನೆ.
ಚಂದ್ರಹಾಸನಿರುವ ಈ ಕಾಡು ಚಂದನಾವತಿ ರಾಜ್ಯಕ್ಕೆ ಸೇರಿದ್ದು. ಮಂತ್ರಿ ದುಷ್ಟಬುದ್ಧಿಯಿರುವ ಕುಂತಳದೇಶಕ್ಕೆ ಸಾಮಂತ ರಾಜ್ಯ ಚಂದನಾವತಿ. ಕಾಲ ಕಾಲಕ್ಕೆ ತಪ್ಪದೆ ಕುಂತಳಕ್ಕೆ ಕಪ್ಪ ತೆರಬೇಕಾದ ಅಧೀನ ರಾಜ್ಯವಿದು. ಈ ರಾಜ್ಯವನ್ನು ಪ್ರಸಕ್ತ ಕಾಲದಲ್ಲಿ ಆಳ್ವಿಕೆ ಮಾಡುತ್ತಿರುವವನು ಕುಳಿಂದಕ ಎಂಬವನು. ಸಾಮಂತ ಅರಸ ಕುಳಿಂದಕ ನಿಷ್ಠಾವಂತ. ಮಂತ್ರಿ ದುಷ್ಟಬುದ್ಧಿಯ ಆಪ್ತವಲಯದ ವ್ಯಕ್ತಿ. ಆತನ ನಿಷ್ಠೆ ದುಷ್ಟಬುದ್ಧಿಗೆ ಮೆಚ್ಚುಗೆಯಾಗಿ ತನ್ನ ಪ್ರಭಾವದಿಂದಲೇ ಈ ಪ್ರದೇಶದ ಸಾಮಂತಗಿರಿಯನ್ನು ಕುಳಿಂದಕನಿಗೆ ಒದಗಿಸಿದ್ದ. ಕುಳಿಂದಕನಿಗೆ ಮದುವೆಯಾಗಿ ಕೆಲ ವರುಷಗಳೇ ಕಳೆದು ಹೋಗಿದ್ದರೂ ಮಕ್ಕಳಾಗಿರಲಿಲ್ಲ. ಸಂತಾನ ಭಾಗ್ಯ ಇಲ್ಲದೆ ಅಂತರಂಗದಲ್ಲಿ ಕೊರಗುತ್ತಿದ್ದ ಅರಸ ಇಂದು ಬೇಸರ ಕಳೆಯಲೋ, ವಾಯು ವಿಹಾರಕ್ಕೋ, ಬೇಟೆಯಾಡಲೋ ಏನೋ ಒಂದು ನೆಪದಿಂದ ಇಳಿ ಸಂಜೆಯ ಹೊತ್ತು ಅರಮನೆಯಿಂದ ಕುದುರೆಯೇರಿ ಹೊರಟು ತಿರುಗಾಡುತ್ತಾ ಕಾಡಿನತ್ತ ಬಂದನು. ಕಾಡ ದಾರಿಯಲ್ಲಿ ಸಾಗುವಾಗ ಮಗುವೊಂದರ ಸ್ವರ ಕೇಳಿದಂತಾಯಿತು. ಕುತೂಹಲಿಗನಾಗಿ ಸ್ವರ ಬಂದತ್ತ ಸಾಗಿದಾಗ ಅಳುತ್ತಿರುವುದು ಕೇಳಿಸಿತು. ಹೊತ್ತು ಮುಳುಗುತ್ತಿದೆ, ಕತ್ತಲೆ ಆವರಿಸಿದೆ, ಮಗುವಿನ ಅಳಲನ್ನು ಅನುಸರಿಸಿ ಕುಳಿಂದಕ ಮುಂದೆ ಮುಂದೆ ಸಾಗಿ ನೋಡಿದರೆ…. ಚಿಕ್ಕ ಬಾಲಕನೋರ್ವ ಅಳುತ್ತಾ ಕುಳಿತಿದ್ದಾನೆ. ಕಾಲನ್ನು ಒತ್ತಿ ಹಿಡಿದಿದ್ದಾನೆ. ನೋಡಿದ ಕೂಡಲೆ ಕುದುರೆಯಿಂದಿಳಿದು ಓಡಿದ ಕುಳಿಂದಕ ಮಗುವನ್ನು ಮೈದಡವಿ “ಏನಾಯ್ತು ಕಂದಾ? ಯಾಕೆ ಅಳುತ್ತಿರುವೆ?” ಎಂದು ಎತ್ತಿ ಕೊಳ್ಳಲು ಹೋದರೆ, ಮೊದಲೇ ಹೆದರಿದ್ದ ಚಂದ್ರಹಾಸ ಮತ್ತಷ್ಟು ಭಯಭೀತನಾಗಿ ಹಿಂದೆ ಹಿಂದೆ ಸರಿದನು. ಹೇಗೋ ಮಗುವನ್ನು ಸಂತೈಸಿ ಕುಳಿಂದಕ ಸಮಾಧಾನಗೊಳಿಸಿದನು. ಬಾಲಕನ ಪಾದದಲ್ಲಾದ ಗಾಯದಿಂದ ರಕ್ತ ಜಿನುಗುತ್ತಿದೆ. ನೋಡಿ “ಅಯ್ಯೋ! ಇದೇನಾಯ್ತು?” ಎಂದು ಓಡಿ ಕುದುರೆಯ ಬೆನ್ನು ಕವಚದಲ್ಲಿದ್ದ ಔಷಧಿಗಳನ್ನು ತಂದು, ಗಾಯವನ್ನು ತನ್ನ ಕೈಯಾರೆ ಶುಚಿಗೊಳಿಸಿ, ಔಷಧಿ ಹಾಕಿ ವಸ್ತ್ರದಿಂದ ಬಿಗಿಯಾಗಿ ಕಟ್ಟಿ ರಕ್ತ ಒಸರದಂತೆ ಮಾಡಿದನು. ಕುಡಿಯಲು ನೀರು ಕೊಟ್ಟು, ಪ್ರೀತಿಯಿಂದ ಬೆವರಿದ ಮುಖವನ್ನೊರಸಿ ಸೇವಕನಂತೆ ರಾಜನೇ ಬಾಲಕನ ಸೇವೆ ಮಾಡಿದ. ಚಂದ್ರಹಾಸನ ಚೆಲುವು, ವರ್ಚಸ್ಸು, ತೇಜಸ್ಸು ಕ್ಷಣ ಕ್ಷಣಕ್ಕೂ ಕುಳಿಂದಕನನ್ನು ಸೆಳೆಯುತ್ತಿದೆ. ಏನು ಯೋಚಿಸಲೂ ಹೊಳೆಯುತ್ತಿಲ್ಲ. ನನಗೆ ಮಕ್ಕಳಿಲ್ಲ ಎಂದು ಕೊರಗುತ್ತಿದ್ದೇನೆ. ದಯಾಳುವಾದ ದೇವರು ಪರೋಕ್ಷವಾಗಿ ನನ್ನ ದುಃಖ ಉಪಶಮನಗೊಳಿಸಲೆಂದೇ ಈ ಮಗುವನ್ನು ನನಗೊದಗಿಸಿ ಅನುಗ್ರಹ ಮಾಡಿದ್ದಾನೆ. ತಡ ಮಾಡದೆ ಮಗುವಿನೊಂದಿಗೆ ಅರಮನೆಗೆ ಹೋಗಬೇಕು ಎಂದು ಕಂದ ಚಂದ್ರಹಾಸನನ್ನು ಜೊತೆಯಲ್ಲೇ ಕುದುರೆಯೇರಿಸಿ ಅರಮನೆಯತ್ತ ಹೊರಟನು.
ಕುಳಿಂದಕನ ಪತ್ನಿಯ ಹೆಸರು ಮೇಧಾವಿನಿ ಸುಗುಣೆ, ಸುಶೀಲೆ, ದೈವಭಕ್ತೆ. ಮಕ್ಕಳಾಗದ ಕೊರಗಿನಿಂದ ಆಕೆಯೂ ಸದಾ ದೇವರ ಧ್ಯಾನ, ಪ್ರಾರ್ಥನೆಯಲ್ಲೇ ನಿರತಳಾಗಿರುತ್ತಿದ್ದಳು. ಅರಸ ಕುಳಿಂದಕ ಮಗುವಿನೊಂದಿಗೆ ಬಂದು ರಾಣಿಯನ್ನು ಸಂತೋಷದ ದನಿಯಲ್ಲಿ ಕರೆದು “ಇದೋ ಇಲ್ಲಿ ಬಂದು ನೋಡು, ಮಕ್ಕಳಿಲ್ಲದ ನಮಗೆ ದೇವರು ದಂತದ ಗೊಂಬೆಯಂತಹ ಮಗುವನ್ನು ಅನುಗ್ರಹಿಸಿದ್ದಾರೆ” ಎಂದನು. ಇದನ್ನು ಕೇಳುತ್ತಿದ್ದಂತೆ ಓಡಿ ಬಂದ ಮೇಧಾವಿನಿ ಮಂತ್ರಮುಗ್ಧಳಾದಂತೆ ಚಂದ್ರಹಾಸನನ್ನು ಕಣ್ಣವೆಯಿಕ್ಕದೆ ನೋಡತೊಡಗಿದ್ದಾಳೆ. ಮಂತ್ರಮುಗ್ಧಳಾಗಿದ್ದವಳು ಓಡಿ ಬಂದು ಬಳಿ ಕುಳಿತುಬಿಟ್ಟಳು. ನೋಡುತ್ತಾ ಅಮಿತಾನಂದ ನಗು, ಆನಂದಬಾಷ್ಪ ಜಲ ಸುರಿಸುತ್ತಾ ಮಗುವನ್ನು ತಬ್ಬಿ ಮುದ್ದಾಡಿದಳು. ತನ್ನ ಪತಿಯತ್ತ ತಲೆಯೆತ್ತಿ ನೋಡಿದಳು. ಆ ನೋಟದಲ್ಲಿ ಸ್ವರ ಹೊರ ಬರದಿದ್ದರೂ ಎಲ್ಲಿ? ಏನು? ಹೇಗೆ ಈ ಮಗು ಸಿಕ್ಕಿದ್ದು ಎಂಬ ಪ್ರಶ್ನೆಗಳ ಸರಮಾಲೆಯೇ ಇತ್ತು. ಕುಳಿಂದಕ ಪೂರ್ಣ ವೃತ್ತಾಂತವನ್ನು ತನ್ನರಸಿಗೆ ವಿವರಿಸಿ ಹೇಳಿದ. ದೇವರೇ ನಮ್ಮ ದುಃಖ ಅರಿತು ನಮಗಿತ್ತ ಮಹಾ ಪ್ರಸಾದವೆಂದು ಹೇಳಿ ಅಡಿಗಡಿಗೂ ದೇವರಿಗೆ ವಂದಿಸಿದರು.
ರಾಣಿ ಮೇಧಾವಿನಿ ಚಂದ್ರಹಾಸನನ್ನು ಮುದ್ದಿಸುತ್ತಾ ನಾನು ನಿನ್ನ ಅಮ್ಮ. ಇವರು ನಿನ್ನ ಅಪ್ಪ ಎಂದು ಕುಳಿಂದಕನನ್ನು ತೋರಿಸಿ ಹೇಳಿ ಬಿಗಿದಪ್ಪಿದಳು. “ಅಯ್ಯೋ ಮಗು ಬೆವತು ಹೋಗಿದೆ. ಎಷ್ಟು ಹಸಿವಾಗಿದೆಯೋ ಏನೋ? ಇದೇನು ಕಾಲಿಗೇನಾಗಿದೆ?” ಹೀಗೆ ಹೇಳುತ್ತಲೇ ಸೇವಕಿಯರನ್ನು ಕೂಗಿ ಕರೆದು ಮಗುವಿನೊಂದಿಗೆ ಅಂತಃಪುರಕ್ಕೆ ಧಾವಿಸಿದಳು. ಚಂದ್ರಹಾಸನಿಗೆ ಅಭ್ಯಂಗ ಸ್ನಾನ, ಗಾಯಕ್ಕೆ ಶುಶ್ರೂಸೆ, ಹೊಟ್ಟೆ ತುಂಬಾ ಊಟ ಮಾಡಿಸಿ ಆತನನ್ನು ಅರೆಕ್ಷಣವೂ ಬಿಡದೆ ಜೊತೆಯಲ್ಲೇ ಮುದ್ದಿಸುತ್ತಿದ್ದಾಳೆ.
ಹೀಗೆಯೇ ಒಂದೆರಡು ದಿನಗಳು ಕಳೆದ ಬಳಿಕ ರಾಣಿ ಮೇಧಾವಿನಿ ನಮ್ಮ ಮಗನ ಜಾತ ಕರ್ಮಾದಿಗಳ ಬಗ್ಗೆ ತಿಳಿಯುವುದು ಬೇಡವೇ? ಆತನಿಗೇನಾದರು ಪರಿಹಾರ ಪೂಜೆಗಳು, ದಾನ ಧರ್ಮಾದಿಗಳನ್ನು ಮಾಡಿಸುವುದು ಬೇಡವೇ? ಎಂದು ಪತಿಯಲ್ಲಿ ಕೇಳಿದಳು. ಹೌದಲ್ಲಾ! ಎಂದು ಒಪ್ಪಿಗೆ ಸೂಚಿಸಿದ ರಾಜ ಕುಳಿಂದಕ “ನಾಳೆಯೇ ಇದಕ್ಕೆ ವ್ಯವಸ್ಥೆ ಮಾಡಿಸುತ್ತೇನೆ. ಆಸ್ಥಾನ ಪುರೋಹಿತರಲ್ಲಿ ಚರ್ಚಿಸಿ ಉತ್ತಮ ದಿನ ನೋಡಿ ನಿರ್ಧರಿಸುವೆ. ಪಾಂಡಿತ್ಯ ಪ್ರವೀಣರಾದ ಬ್ರಾಹ್ಮಣೋತ್ತಮರನ್ನು ಕರೆಸಿ ಜಾತಕರ್ಮಾದಿಗಳನ್ನು ಪೂರೈಸೋಣ.” ಎಂದನು.
ತನ್ನವರಿಲ್ಲದೆ ಅನಾಥನಾಗಿದ್ದ ಚಂದ್ರಹಾಸ, ದಾಸಿ ಧಾತ್ರಿಯ ಕೈಗೂಸಾಗಿ ಬೆಳೆದು, ಆಕೆಯೂ ಮಡಿದ ಮೇಲೆ ಮತ್ತೆ ನಿರ್ಗತಿಕನೇ ಆದ. ಮತ್ತೆ ವಠಾರದ ಜನರ ಲಾಲನೆ ಪಾಲನೆಯಲ್ಲಿ ದಿನಗಳೆಯುತ್ತಾ ಕುಂತಳದೇಶಕ್ಕೆ ಬ್ರಾಹ್ಮಣ ಸಮಾರಾಧನೆಗೆ ಬಂದವನು ದುಷ್ಟಬುದ್ಧಿಯ ವಕ್ರದೃಷ್ಟಿಗೆ ಸಿಲುಕಿ ಕಟುಕರಿಂದ ಕಾಡು ಸೇರಿದನು. ಏನೇ ಆದರೂ ಕಾಯುವ ದೇವರು ಕೈ ಬಿಡಲಾರ. ಈಗ ಅರಮನೆಯಲ್ಲಿ ಸಕಲ ಸೌಕರ್ಯದಿಂದ ಆರಾಮದಿಂದ ಇದ್ದಾನೆ. ಅಡಿಗಡಿಗೆ ಪರಿಸ್ಥಿತಿ ಅತಂತ್ರವಾಗುತ್ತಾ ಹೋದರೂ, ಸರ್ವ ಸ್ವತಂತ್ರ ಭಗವಂತನ ಕೈಯಲ್ಲಿ ಸೂತ್ರವಿದೆ, ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ.
ಮುಂದೆ ಜಾತಕರ್ಮಾದಿಗಳ ವಿಶ್ಲೇಷಣೆಗೆ ತಯಾರಿ ನಡೆಯುತ್ತಿದೆ.
ಮುಂದುವರಿಯುವುದು..


















































