ಭಾಗ – 590
ಭರತೇಶ್ ಶೆಟ್ಟಿ , ಎಕ್ಕಾರು

ಕಾಡ ದಾರಿಯಲ್ಲಿ ಮುದಿ ದಾಸಿ ಮಹಾರಾಜನ ಎಳೆ ಮಗುವಿನ ಪ್ರಾಣ ರಕ್ಷಣೆ ಮಾಡುವ ಪಣ ತೊಟ್ಟು ತನ್ನ ಶರೀರಕ್ಕೆ ದಣಿವಾಗಿ ನಿತ್ರಾಣವಾದರೂ ಧೃಡವಾದ ಮನಸಂಕಲ್ಪದ ಸೆಳೆತದಿಂದಾಗಿ ತನ್ನಿಂದ ತಾನೆ ಹೆಜ್ಜೆಗಳು ಒಂದರ ನಂತರ ಒಂದು ವೇಗದೊಂದಿಗೆ ಸ್ಪರ್ಧೆಯಲ್ಲಿ ಮುನ್ನಡೆಸುತ್ತಿವೆ. ಚುಚ್ಚಿದ ಮುಳ್ಳು, ಎಡವಿದ ಕಲ್ಲುಗಳು ನೋವನ್ನಿತ್ತರೂ ನಿಂತು ನೋಡುವಷ್ಟು ವ್ಯವಧಾನವಿಲ್ಲ. ಕಾಡ ದಾರಿ, ಕ್ರೂರ ಮೃಗಗಳ ವಾಸಸ್ಥಾನ. ಅಪ್ಪಿ ತಪ್ಪಿ ಮಗುವೇನಾದರು ಅತ್ತರೆ? ಮನುಷ್ಯನ ಶರೀರದ, ರಕ್ತದ ವಾಸನೆ ಅವುಗಳ ಮೂಗಿಗೆ ಬಡಿದರೆ ಆಪತ್ತು ಕಟ್ಟಿಟ್ಟ ಬುತ್ತಿ. ತಾನು ಕೇಳಿ ತಿಳಿದಿರುವ ಎಲ್ಲಾ ದೇವರ ನಾಮ ಸ್ಮರಣೆ ಮಾಡುತ್ತಾ ಓಡುವಂತೆ ನಡೆಯುತ್ತಿದ್ದಾಳೆ. ಬ್ರಹ್ಮ ದೇವರೇ, ವಿಷ್ಣು ದೇವರೇ, ಈಶ್ವರ ದೇವರೇ ಕಾಪಾಡಿ…. ದುರ್ಗಾ ಮಾತೆ, ಶಾರದಾ ಮಾತೆ, ಲಕ್ಷ್ಮಿ ದೇವಿ ಕಾಪಾಡಮ್ಮಾ… ಕಾಳಿ ಮಾತೆ… ಗಣಪತಿ ದೇವಾ.. ಷಣ್ಮುಗಾ… ಹೀಗೆ ಮನಸ್ಸಿಗೆ ತೋಚಿದ ದೇವ ದೇವಿಯರ ಹೆಸರನ್ನು ಮನದಲ್ಲಿ ಧ್ಯಾನಿಸುತ್ತಾ ಶರೀರದ ದಣಿವು, ನೋವಿನ ವೇದನೆ ಯಾವುದೂ ತಿಳಿಯದಷ್ಟು ಮಗ್ನಳಾಗಿ ಸಾಗುತ್ತಾ ಬೆಳಗಾಗುವ ಹೊತ್ತಿಗೆ ಕಾಡು ದಾಟಿ ಯಾವುದೋ ನಾಡನ್ನು ಸೇರಿದಳು. ಜನ ಎದ್ದಿಲ್ಲ. ಹಕ್ಕಿಗಳು ಚಿಲಿ ಪಿಲಿಗುಟ್ಟುತ್ತಿವೆ. ನಾಯಿಗಳ ಬೊಗಳುವಿಕೆ ಕೇಳಿಸುತ್ತಿದೆ. ಹೊರ ಬಂದವಳೇ ಒಂದು ಮರದಡಿ ತುಸು ಕುಳಿತು ವಿಶ್ರಾಂತಳಾಗಿ ದಣಿವಾರಿಸಿಕೊಂಡಳು. ಯಾರೂ ಇಲ್ಲದವರಿಗೆ ದೇವರಿದ್ದಾರೆ ಎಂಬ ರೂಢಿಯ ಮಾತೊಂದಿದೆ. ಹಾಗೆ ಈ ಮುದಿ ದಾಸಿಗೂ, ಎಳೆ ಶಿಶುವಿಗೂ ದೇವರೇ ರಕ್ಷಣೆ ಕೊಟ್ಟು ಕಾಪಾಡಿದರೋ ಏನೋ! ಸೂರ್ಯ ಮೂಡಣದಿ ಮೇಲೇರುತ್ತಿದ್ದಂತೆ ದನಗಳ ಅಂಬಾ ದನಿ, ಬಾವಿ ರಾಟೆಗಳ ಸದ್ದು, ಮನೆಯ ಮಾಡಿನ ಮೇಲೆ ಆಗಸದತ್ತ ಮುಖ ಮಾಡಿ ಮೇಲೇರುವ ಹೊಗೆ ಇದನ್ನೆಲ್ಲ ಕಂಡು ಕೇಳುವಾಗ ಧಾತ್ರಿಯ ಮನಸ್ಸಿಗೆ ತುಸು ಧೈರ್ಯವಾಯಿತು. ಮತ್ತೊಂದಷ್ಟು ಹೊತ್ತಾದಾಗ ಜನರ ಓಡಾಟವೂ ಕಾಣತೊಡಗಿತು. ತಮ್ಮ ತಮ್ಮ ಕೆಲಸ ಮಾಡುತ್ತಾ ಜನ ಸಂಚರಿಸುತ್ತಿದ್ದಾರೆ. ಮಗುವನ್ನೆತ್ತಿಕೊಂಡು ದಾಸಿ ಧಾತ್ರಿ ಭಿಕ್ಷುಕಿಯಂತೆ ತಿನ್ನುವುದಕ್ಕೇನಾದರೂ ಸಿಕ್ಕೀತೆ ಎಂದು ಮನೆ ಮನೆಗೆ ಅಲೆಯ ತೊಡಗಿದಳು. ಯಾರೋ ಪುಣ್ಯಾತ್ಮರು ಮಗುವಿಗೆ ಬಿಸಿ ಹಾಲು, ಧಾತ್ರಿಗೆ ಉಪಹಾರವನ್ನೂ ನೀಡಿ ಪುಣ್ಯ ಕಟ್ಟಿ ಕೊಂಡರು.
ಅಲ್ಲಿಂದ ಮತ್ತೆ ಮಗುವನ್ನೆತ್ತಿಕೊಂಡು ನಡೆಯುತ್ತಾ ಮುಂದೆ ಸಾಗಿದಳು. ಸುಡು ಬಿಸಿಲು ತಾಳಲಾರದೆ ದಣಿದಾಗ ಎಲ್ಲಾದರೂ ತುಸು ವಿಶ್ರಾಂತಿ ಮತ್ತೆ ಪ್ರಯಾಣ. ಮನೆಗಳು ಸಿಕ್ಕಾಗ ಭಿಕ್ಷಾನ್ನ ಬೇಡಿ ತಿನ್ನುವುದು. ಮಗುವಿಗಾಗಿ ತುಸು ಹಾಲು ಬೇಡಿ ಕುಡಿಸುವುದು. ಹೀಗೆಯೇ ಕೆಲ ದಿನಗಳ ಸಂಚಾರದ ಬಳಿಕ ನಗರ ಪ್ರದೇಶದಂತಹ ಒಂದು ಪಟ್ಟಣ ಸೇರಿದಳು. ಅಲ್ಲಿ ಸುತ್ತಾಡುತ್ತಿರುವಾಗ ಜನರು ಮಾತನಾಡುತ್ತಿರುವುದನ್ನು ಕೇಳಿ ತಾನು ಈಗ ಬಂದಿರುವುದು ಕುಂತಳ ದೇಶಕ್ಕೆ. ನಮ್ಮ ಕೇರಳ ದೇಶದ ಗಡಿ ದಾಟಿ ಹೊರ ಬಂದಿದ್ದೇನೆ ಎಂಬ ಸಂಗತಿ ತಿಳಿಯಿತು. ಮನಸ್ಸು ಸ್ವಲ್ಪ ನಿರಾಳವಾಯಿತು. ಯಾಕೆಂದರೆ ಕೇರಳದ ಮಂತ್ರಿ, ಈವಾಗಿನ ಮಹಾರಾಜ ಇತ್ತ ಬರುವ ಸಾಧ್ಯತೆ ಕಡಿಮೆ, ಬಂದರೂ ಯಾವುದಾದರೂ ಕಾರ್ಯ ಕಾರಣದಿಂದ ಒಮ್ಮೆಯೋ ಮತ್ತೊಮ್ಮೆಯೋ ಬರಬಹುದು. ಹಾಗಾಗಿ ಹೆಚ್ಚಿನ ತೊಂದರೆ ಇರದು ಎಂಬ ಯೋಚನೆ ಆಕೆಯದ್ದು. ಆದರೂ ನಗರದಲ್ಲಿ ಹೆಚ್ಚು ಹೊತ್ತು ನಿಲ್ಲುವುದು ಬೇಡ. ಯಾರಾದರು ಗುರುತು ಹಿಡಿದರೆ, ಅಥವಾ ಮಾತನಾಡಿ ವಿವರ ಕೇಳಿದರೆ ಕಷ್ಟವಾದೀತು ಎಂದು ನಗರದ ಹೊರ ಭಾಗದತ್ತ ಕಂಡ ದಾರಿ ಹಿಡಿದು ಮುನ್ನಡೆದಳು.
ಕೆಲ ದಿನಗಳ ಕಾಲ ಭಿಕ್ಷೆ ಬೇಡಿಯೇ ಮಗುವಿನ ಜೊತೆ ಅಲ್ಲಿ ಇಲ್ಲಿ ಕುಳಿತು ದಿನಗಳೆದಳು. ಸುಂದರವಾದ ಮಗುವಿನ ಮುಖ ನೋಡಿ ಸಂಭ್ರಮಿಸುತ್ತಿದ್ದಳು. ಆದರೂ ರಾಜಕುಮಾರನಾಗಿ ಜನಿಸಿದರೂ ಈ ರೀತಿಯ ಕಾರ್ಪಣ್ಯದ ಬದುಕು ಆತನದ್ದು ಆಗಿ ಹೋದ ದುರ್ದೆಸೆಗೆ ಮರುಗುತ್ತಿದ್ದಳು. ಮಗುವಿನ ಮುಖ ಚಂದ್ರನಂತೆ ಶೋಭಾಯಮಾನವಾಗಿತ್ತು. ಸದಾ ನಗುಮುಖದಿಂದ ಅಜ್ಜಿಯ ಜೊತೆ ಕೈಕಾಲು ಕುಣಿಸುತ್ತಾ ಆಡುತ್ತಿದ್ದ ಮಗುವಿಗೊಂದು ಹೆಸರು ಇಡಬೇಕಲ್ಲಾ ಎಂದು ಯೋಚಿಸಿ ಮಗುವನ್ನೇ ನೋಡುತ್ತಿದ್ದ ಅಜ್ಜಿಗೆ ಮಗುವಿನ ಮುಖ, ತಿಳಿ ನಗು ನೋಡಿ ಚಂದ್ರಹಾಸ ಎಂದು ನಾಮಕರಣ ಮಾಡಿದಳು. ಎಲ್ಲೋ ಬೀದಿ ಬದಿ ಯಾವುದೋ ಮರದಡಿ ಕುಳಿತು ಕಿವಿಯಲ್ಲಿ ಚಂದ್ರಹಾಸ ಚಂದ್ರಹಾಸ ಚಂದ್ರಹಾಸ ಎಂದು ಉಸುರಿ ಶಾಸ್ತ್ರ ಪೂರೈಸಿದಳು. ಮಗುವಿನ ನಾಮಕರಣ ಅರಮನೆಯಲ್ಲಾದರೆ ಸಂಭ್ರಮದ ಸಮಾರಂಭ ಆಗಿರುತ್ತಿತ್ತು. ಏನು ದೇವರ ಲೀಲೆಯೋ ಈ ರೀತಿ ಅನಾಥರಂತೆ ಯಾರೂ ಇಲ್ಲದೆ, ಯಾರಿಗೂ ತಿಳಿಯದೆ ನನ್ನಷ್ಟಕ್ಕೆ ನಾನೇ ಪೂರೈಸಿ ಬಿಡುವಷ್ಟು ದರಿದ್ರ ಸ್ಥಿತಿ ನಮ್ಮ ರಾಜರ ಮಗನಿಗೆ ಪ್ರಾಪ್ತವಾಯಿತೇ ಎಂದು ಕಣ್ಣೀರ್ಗರೆದಳು. ಅಲ್ಲೇ ನೆಲೆ ನಿಂತು ಅವರಿವರ ಬಳಿ ಆಹಾರ ಕೇಳಿ ಬದುಕತೊಡಗಿದಳು. ದಿನಗಳುರುಳುತ್ತಿದ್ದಂತೆ ಆ ಪರಿಸರದ ಜನರ ಪರಿಚಯವಾಯಿತು. ಎಲ್ಲರೂ ಬಂದು ಮಗುವನ್ನು ಮುದ್ದಿಸ ತೊಡಗಿದರು. ತಾವಾಗಿಯೇ ಬಂದು ಏನಾದರು ಹಾಲು ಆಹಾರ, ವಸ್ತ್ರ ನೀಡಿ ಸಹಕರಿಸಿ ಸಲಹತೊಡಗಿದರು. ಅಜ್ಜಿಗೂ ಒಂದು ಗುಡಿಸಲು ಮಾಡಿ ಕೊಟ್ಟರು. ಹೇಗೋ ದೇವರ ದಯದಿಂದ ಮಗು ಬೆಳೆಯ ತೊಡಗಿದ. ಮಣ್ಣ ನೆಲದಲ್ಲೇ ಕವುಚಿ ಬಿದ್ದು ತೆವಳುತ್ತಾ ಕುಳಿತು, ನಾಲ್ಕು ಕಾಲಲ್ಲಿ ಅತ್ತಿತ್ತ ಹರಿದಾಡುತ್ತಾ, ಎದ್ದು ನಿಂತು ಅಂಬೆಗಾಲಿಡುವ ಮಗುವಾದ ಚಂದ್ರಹಾಸ. ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಮಾಸಗಳುರುಳಿ, ವರ್ಷವೇ ಕಳೆದು ಹೋಗಿದೆ. ಚಂದ್ರಹಾಸ ಈಗ ವಠಾರದೆಲ್ಲೆಡೆ ಓಡಾಡುತ್ತಾ ಮನೆ ಮನೆಗೆ ಹೋಗುತ್ತಾ ಆಡುತ್ತಿದ್ದಾನೆ. ಅಜ್ಜಿ ಧಾತ್ರಿಗೆ ಅವನ ಬೆಂಬತ್ತಿ ಹೋಗುವುದೇ ಕೆಲಸ. ಯಾರ ಮನೆಗೆ ಹೋದರೂ ಮುದ್ದು ಮಾಡುವವರೇ ಹೊರತು ಯಾರೂ ಏನೂ ತೊಂದರೆ ಮಾಡುತ್ತಿರಲಿಲ್ಲ. ಆ ನೆರೆಹೊರೆಯ ಮಕ್ಕಳ ಜೊತೆ ಆಡುತ್ತಾ ಸುಂದರ ವದನ ಚಂದ್ರಹಾಸ ಎಲ್ಲರ ಅಚ್ಚುಮೆಚ್ಚಿನ ಬಾಲಕನಾಗಿದ್ದಾನೆ. ಈ ವರೆಗೆ ಎಲ್ಲವೂ ಸುಲಲಿತವಾಗಿ ಸಾಗಿದೆ. ಏನೋ ದುರ್ದೈವವೋ ಅಲ್ಲ ಕಾಲದ ಮಹಾತ್ಮೆಯೋ ಅಜ್ಜಿ ಅಸೌಖ್ಯಕ್ಕೊಳಗಾದಳು. ಮಲಗಿ ಚಾಪೆ ಹಿಡಿದವಳು ಒಂದು ದಿನ ಅಸು ನೀಗಿದಳು. ಚಂದ್ರಹಾಸ ಈಗ ಮತ್ತೆ ಅನಾಥ. ಇದ್ದ ಓರ್ವಳು ಅಜ್ಜಿಯೂ ದೇವರ ಪಾದ ಸೇರಿ ಬಿಟ್ಟಳು. ಹೆತ್ತ ತಂದೆ ತಾಯಿಯ ಮುಖವನ್ನೇ ನೋಡಿದ ನೆನಪಿಲ್ಲ.


















































