ಭಾಗ – 58
ಭರತೇಶ್ ಶೆಟ್ಟಿ , ಎಕ್ಕಾರ್

ಹೀಗಿರಲು ಕೌರವ ಪಾಂಡವ ರಾಜಕುಮಾರರು ಗುರು ದ್ರೋಣಾಚಾರ್ಯರ ಗರಡಿಯಲ್ಲಿ ಪಳಗುತ್ತಿದ್ದರು. ಒಂದು ದಿನ ರಾತ್ರಿ ಭೋಜನದ ಸಮಯ ದೀಪವು ಆರಿ ಹೋಯಿತು. ಎಲ್ಲರೂ ದೀಪ ಬೆಳಗಿಸುವುದಕ್ಕಾಗಿ ಕಾಯುವವರಾದರೆ, ಅರ್ಜುನ ಮಾತ್ರ ಕತ್ತಲೆಯಲ್ಲೂ ಸ್ಮರಣ ಶಕ್ತಿಯಿಂದ ಬೆಳಕಿನಲ್ಲಿ ಉಂಡಂತೆಯೇ ಸ್ಪಷ್ಟವಾಗಿ ಊಟ ಮಾಡುವ ಪ್ರಯತ್ನ ಮಾಡಿ ಊಟ ಪೂರೈಸಿಯೇ ಬಿಟ್ಟ. ಆಗಲೇ ಆತನ ಮನಸ್ಸಿಗೆ ಒಂದು ಯೋಚನೆ ಹೊಕ್ಕಿತು. ಏನಂದರೆ ಬೆಳಕಿದ್ದು ಮಾಡಬಹುದಾದ ಕೆಲಸವನ್ನು ಕತ್ತಲೆಯಲ್ಲೂ ಮಾಡಬಹುದಲ್ಲಾ? ಇದೇ ಯೋಚನೆ, ಯೋಜನೆಯಾಗಿ ಕತ್ತಲೆಯಲ್ಲೂ ಶರ ಪ್ರಯೋಗದ ಅಭ್ಯಾಸ ಸ್ವ ಪ್ರೇರಣೆಯಿಂದ ಮಾಡತೊಡಗಿದ. ಒಮ್ಮೆ ಮಧ್ಯರಾತ್ರಿ ಧನುಷ್ಟೇಂಕಾರ ಕೇಳಿ ಎಚ್ಚೆತ್ತ ದ್ರೋಣರು ಬಂದು ನೋಡಿದರೆ, ಅರ್ಜುನ ಹಗಲಿನಂತೆ ರಾತ್ರಿಯೂ ಬಾಣ ಪ್ರಯೋಗ ಮುಖೇನ ಗುರಿ ಭೇದಿಸುತ್ತಿದ್ದಾನೆ. ಮೆಚ್ಚಿದ ಗುರುವರ್ಯ ಅರ್ಜುನ ನೀನು ಶ್ರೇಷ್ಟ ಧನುರ್ಧಾರಿಯಾಗಬಲ್ಲೆ. ಅಂತಹ ನಿಷ್ಠೆ ನಿನ್ನಲ್ಲಿದೆ ಎಂದು ಮೆಚ್ಚಿ ಆಲಿಂಗಿಸಿದರು.
ಕೆಲ ಸಮಯ ಕಳೆದು ರಾಜ ಪುತ್ರರು ಬೇಟೆಗೆ ಹೊರಟರು. ಕಾಡಿನ ದಾರಿ, ಮಾರ್ಗದರ್ಶನಕ್ಕಾಗಿ ಪಳಗಿದ ಅನುಚರರೂ, ಬೇಟೆ ನಾಯಿಗಳೂ ಜೊತೆಯಾಗಿದ್ದವು. ಇದ್ದಕ್ಕಿದ್ದಂತೆ ಅರ್ಜುನನ ಮುಂದಿನಿಂದ ಸಾಗುತ್ತಿದ್ದ ಬೇಟೆ ನಾಯಿಯ ಬಾಯಿ ಮುಚ್ಚಲ್ಪಟ್ಟಿತು. ನೋಡಿದರೆ ಹೊಲಿಗೆಯಂತೆ ಬಾಣಗಳು ನಾಯಿಯ ಬಾಯಿಗೆ ಹೊಕ್ಕಿವೆ. ಯಾರೀ ಚತುರ ಬಿಲ್ಗಾರ ಎಂದು ಬಾಣ ಬಂದಿರಬಹುದಾದ ದಿಕ್ಕಿನತ್ತ ಓಡಿದ ಅರ್ಜುನ, ಅಭ್ಯಾಸ ನಿರತ ಏಕಲವ್ಯನನ್ನು ಸಂಧಿಸಿದ. ತನ್ನ ಅಭ್ಯಾಸದ ಏಕಾಗ್ರತೆಗೆ ತೊಂದರೆ ನೀಡಿದ ನಾಯಿಯ ಬೊಗಳುವಿಕೆಯ ಶಬ್ದವನ್ನೇ ಗುರಿಯಾಗಿಸಿ, ನಿಖರವಾಗಿ ಬಾಣ ಪ್ರಯೋಗ ಮುಖೇನ ಈ ಚಮತ್ಕೃತಿ ಪ್ರದರ್ಶಿಸಿದ್ದ. ಪರಸ್ಪರ ಪರಿಚಯ ವಿನಿಮಯ ಮಾಡಿಕೊಂಡು, ಬಿಲ್ಗಾರಿಕೆಯ ಪ್ರಾವಿಣ್ಯತೆಯನ್ನು, ಶಬ್ದವೇಧಿ ಪ್ರಯೋಗದ ನೈಪುಣ್ಯತೆಯನ್ನು ಬೋಧಿಸಿದ ನಿನ್ನ ಗುರುಗಳು ಯಾರೆಂದು ಅರ್ಜುನ ಕೇಳಿದಾಗ “ಗುರು ದ್ರೋಣಾಚಾರ್ಯರು” ಎಂಬ ಉತ್ತರ ಏಕಲವ್ಯನಿಂದ ಬಂತು.
ಶುಭವಾಗಲಿ ಎಂದು ಹರಸಿ ಮೆಚ್ಚಿದ ಅರ್ಜುನ, ಬೇಟೆ ಮುಗಿದು ಮರಳಿ ಆಶ್ರಮ ಸೇರಿ ಗುರು ದ್ರೋಣರನ್ನು ಕಂಡು ಶಬ್ದವೇಧಿ ಪ್ರಯೋಗದ ಕುರಿತಾಗಿ ಹೇಳಿ ಏಕಲವ್ಯನ ಶರ ಪಾಂಡಿತ್ಯದ ಬಗ್ಗೆ ಹೊಗಳಿ, ಆತನೂ ನಿಮ್ಮ ಶಿಷ್ಯನಂತೆ ಎಂದನು. ರಾತ್ರಿಯಿಡೀ ಯೋಚಿಸಿದ ದ್ರೋಣರಿಗೆ ನಿದ್ದೆ ಬರಲಿಲ್ಲ. ನಸುಕಿಗೆ ಬೇಗ ಎದ್ದು ಆತನೆಲ್ಲಿರುವ ಎಂದು ಕೇಳಿ,ಅರ್ಜುನನ ಜೊತೆ ಏಕಲವ್ಯನಿರುವಲ್ಲಿಗೆ ಬಂದರು. ಮಣ್ಣಿನ ಮೂರ್ತಿಯಲ್ಲಿ ಗುರು ದ್ರೋಣರನ್ನು ಆರಾಧಿಸುತ್ತಾ ಏಕಲವ್ಯ ಅಭ್ಯಾಸ ನಿರತನಾಗಿದ್ದ. ಗುರುಗಳನ್ನು ಕಂಡು ಆದರದಿಂದ ಸತ್ಕರಿಸಿದ. ಅಯ್ಯಾ ಕುಮಾರ ನಿನ್ನ ಶರ ಪ್ರಯೋಗ ಕೌಶಲ ಅದ್ಬುತವಾಗಿದೆ. ಈ ಔನ್ನತ್ಯ ನನ್ನಿಂದ ಕಲಿತೆ ಎಂದು ಹೇಳಿರುವೆಯಂತೆ. ಯಾವಾಗ? ಎಲ್ಲಿ ನನ್ನಿಂದ ಕಲಿತೆ? ಎಂದಾಗ ಗುರುಗಳೇ ಪ್ರಾಥಮಿಕ ಶಿಕ್ಷಣ ನಿಮ್ಮಿಂದ ಪ್ರತ್ಯಕ್ಷ ಕಲಿತಿರುವೆ. ನಿನ್ನ ಕುಲಕಸುಬಿಗೆ ಇಷ್ಟು ಧಾರಾಳ ಸಾಕು ಎಂದು ನನ್ನನ್ನು ಹರಸಿ ಕಳುಹಿಸಿರುವಿರಿ. ಮರಳಿ ಬಂದ ನಾನು ನಿಮ್ಮನ್ನು ಈ ಮೂರ್ತಿಯಲ್ಲಿ ಕಾಣುತ್ತಾ, ಪೂಜಿಸಿ ಕಲಿಯತೊಡಗಿದ್ದೇನೆ. ನಿಮ್ಮ ಅನುಗ್ರಹದಿಂದಲೇ ನನಗೆ ವಿದ್ಯೆ ಸಿದ್ಧಿಸುತ್ತಿದೆ ಗುರುಗಳೇ ಎಂದನು.
ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅರ್ಜುನ ಹೋ! ವಿಶ್ವಾಸ ಬಲದಿಂದ ಇಂತಹ ಮಹಾನ್ ಸಾಧನೆ ಮಾಡಬಹುದು ಎಂಬ ಸತ್ಯ ಅರಿತುಕೊಂಡು, ಏಕಲವ್ಯನ ಬಗ್ಗೆ ಅತೀವ ಗೌರವ ಭಾವ ತಳೆದನು. ಗುರು ದ್ರೋಣರೂ ಕೆಲಕ್ಷಣ ಮೂಕವಿಸ್ಮಿತರಾಗಿ ಯೋಚನಾ ನಿರತರಾದರು. ಸರಿ ನೀನು ನನ್ನ ಶಿಷ್ಯ, ನನ್ನನ್ನೇ ಗುರುವೆಂದು ಸ್ವೀಕರಿಸಿರುವೆ. ಹಾಗಿರುವಾಗ ಶಿಕ್ಷಣ ಪ್ರಾಪ್ತಿಯ ಫಲಶ್ರುತಿಗೆ ಗುರುದಕ್ಷಿಣೆ ನೀಡಬೇಕಾದದ್ದು ನಿನ್ನ ಧರ್ಮ ಎಂದರು. ಏಕಲವ್ಯ ಅತಿ ಸಂತೋಷ ತಳೆದು ಗುರುಗಳೇ, ಅಪ್ಪಣೆಯಾದರೆ ತಮ್ಮ ಅಪೇಕ್ಷೆ ಈಗಲೆ ಪೂರೈಸುವೆ ಎಂದು ವಿನೀತನಾಗಿ ಬೇಡಿದ. ಶಿಷ್ಯಾ ನನಗೆ ಗುರು ದಕ್ಷಿಣೆಯಾಗಿ ನಿನ್ನ ಬಲದ ಕೈಯ ಹೆಬ್ಬೆರಳನ್ನು ಕಡಿದು ಮೂರ್ತ ಸ್ವರೂಪದಲ್ಲಿ ನಿಂತ ಮೂರ್ತಿಗೆ ಅರ್ಪಿಸು ಎಂದರು. ಅರ್ಜುನ ಆಘಾತಕ್ಕೊಳಗಾಗಿ ಗುರುಗಳೇ ಎಂದು ಕೈ ಎದುರು ಚಾಚಿದ. ಏಕಲವ್ಯ ಮಾತ್ರ ಹಿಂದೆ ಮುಂದೆ ಅರೆಕ್ಷಣವೂ ಯೋಚಿಸದೇ ಗುರು ತೃಪ್ತಿಗಾಗಿ ಸೊಂಟದ ಕಿರುಗತ್ತಿಯನ್ನೆತ್ತಿ ಬೀಸಿದ. ರಕ್ತ ಚಿಮ್ಮುತ್ತಾ ಕತ್ತರಿಸಲ್ಪಟ್ಟ ಹೆಬ್ಬೆರಳು ಗುರು ಮೂರ್ತಿಯ ಪಾದ ಪದ್ಮಗಳಿಗೆ ಸಮರ್ಪಿತವಾಯಿತು. ದ್ರೋಣಾಚಾರ್ಯರ ಮನಸ್ಸೂ ಸಂಕಟ, ನೋವು ಅನುಭವಿಸಿದರೂ, ಶಿಷ್ಯನ ನಿಷ್ಠೆಗೆ ಮೆಚ್ಚಿ ” ಶಿಷ್ಯಾ ನಿನ್ನ ಕೀರ್ತಿ ಅಜರಾಮರವಾಗಿ ಉಳಿಯಲಿ. ನಿನಗೆ ಸನ್ಮಂಗಳವಾಗಲಿ ” ಎಂದು ಹರಸಿ ಬಿಗಿದಪ್ಪಿದರು. ಕಣ್ಣಾಲಿಗಳು ಬಿಗಿದು ಅಶ್ರುಧಾರೆಯ ಬಿಂದುಗಳು ಸೇಸೆಯಂತೆ ಏಕಲವ್ಯನ ಶಿರದ ಮೇಲೆ ಉದುರಿದವು. ಶಿಷ್ಯ ಅರ್ಜುನನೊಂದಿಗೆ ಹೊರಟು ಆಶ್ರಮ ಸೇರಿದರು.
ಅರ್ಜುನನ ಮನಸ್ಸು ಗೊಂದಲದ ಗೂಡಾಯಿತು. ಗುರುಗಳ ನಡೆ ಅರ್ಥವಾಗದೆ ಪರೋಕ್ಷ ಕೋಪಭಾವವನ್ನೂ ಮೂಡಿಸುತ್ತಿತ್ತು. ತಡೆದುಕೊಳ್ಳಲಾಗದೆ, ಕೇಳಿಯೇ ಬಿಟ್ಟ.. “ಗುರುಗಳೇ ಏಕಲವ್ಯನ ಜೊತೆ ನಿಮ್ಮ ವ್ಯವಹಾರ ಧರ್ಮಯುತವೇ? ಒಬ್ಬ ಸಮರ್ಥ ಶಿಷ್ಯನಿಗೆ ತಾವು ಉಪದೇಶವೇಕೆ ಮಾಡದೇ ಉಳಿದಿರಿ? ನಿಮ್ಮನ್ನು ಗುರುವಾಗಿ ಪೂಜಿಸುವ ಆತನಿಗೆನಿಗೆ ಈ ಘೋರ ಶಿಕ್ಷೆ? ಅನ್ಯಾಯವಾಗದೇ ನಿಮ್ಮ ವ್ಯವಹಾರ?” ಎಂದು ತನ್ನ ಮನದ ದುಗುಡ ಹೊರಹಾಕಿದ.
ದ್ರೋಣಾಚಾರ್ಯರು ಶಾಂತಚಿತ್ತರಾಗಿ ಅರ್ಜುನ ಸಂವೇದನಾಶೀಲ ಗುಣವನ್ನು ಮೆಚ್ಚಿದರು. ಮಗೂ ಸಕಾರಣವಿಲ್ಲದೆ, ವಿವೇಚಿಸದೆ ನಾನು ವ್ಯವಹರಿಸಲಿಲ್ಲ.
ಹಸ್ತಿನಾವತಿಯ ಅನ್ನದ ಋಣ ನನ್ನ ಮೇಲಿದೆ. ನಾನು ಗುರುವಾಗಿ ಬೋಧಿಸಬೇಕಾಗಿರುವುದು ಹಸ್ತಿನಾವತಿಯ ವೀರರಿಗೆ. ಏಕಲವ್ಯ ಮಗಧ ರಾಜ್ಯದವ. ಜರಾಸಂಧ ಕುರು ವಂಶದ ವೈರಿ ಇದ್ದಾನೆ. ಪ್ರಬಲನೂ ಸಮರ್ಥನೂ ಆಗಿದ್ದಾನೆ. ಈ ಕಾಡನ್ನು ದಾಟಿದರೆ ಮಗಧ ರಾಜ್ಯ. ಪರಿವಾರದೊಂದಿಗೆ ಏಕಲವ್ಯನ ತಂದೆ ಹಿರಣ್ಯಧನುಷ ಪರಿವಾರ ಸಮೇತ ಮಗಧ ರಾಷ್ಟ್ರದ ಅಧೀನ ವನ ನಿವಾಸಿಯಾಗಿದ್ದಾನೆ ಹಸ್ತಿನೆಯ ವೈರವಿರುವ ರಾಷ್ಟ್ರದ ವೀರನಿಗೆ ಶಸ್ತ್ರಾಭ್ಯಾಸ, ಯುದ್ದ ಕೌಶಲ ಬೋಧಿಸಿದರೆ ಮುಂದಣ ಭವಿಷ್ಯದಲ್ಲಿ ನಮ್ಮ ಎದುರಾಳಿ ಸೈನ್ಯದ ಭಾಗವಾಗುವ ಸೈನಿಕನಾಗುತ್ತಾನೆ. ಆಪತ್ಕಾಲದಲ್ಲಿ ಕಾಡ ಕಿರಾತರೂ ರಾಜಾಜ್ಞೆಯಂತೆ ಯುದ್ದದಲ್ಲಿ ಭಾಗವಹಿಸಬಹುದು. ನನ್ನಿಂದ ಬೋಧಿಸಲ್ಪಟ್ಟ ವಿದ್ಯೆ ಹಸ್ತಿನೆಗೆ ತಿರುಮಂತ್ರವಾದೀತು. ಹಾಗಾಗಿ ಆತನಿಗೆ ಪೂರ್ಣ ಧನುರ್ವೇದ ಉಪದೇಶ ಮಾಡಲಿಲ್ಲ. ಇಲ್ಲಿ ಧರ್ಮ ಸೂಕ್ಷ್ಮವಾದ ವರ್ಣಾಶ್ರಮವೂ ತಡೆಯಾಗಿದೆ.
ಇಷ್ಟಕ್ಕೇ ನಾನು ಹೆಬ್ಬೆರಳ ಛೇದನ ಮಾಡಿಸಲಿಲ್ಲ. ನನ್ನನ್ನು ಗುರುವಾಗಿ ಸ್ವೀಕರಿಸಿದ ಶಿಷ್ಯನ ಶ್ರೇಯೋಭಿಲಾಷೆ ಬಯಸುವುದು ಗುರುವಾಗಿ ಆಧ್ಯ ಕರ್ತವ್ಯ. ಈತ ಕಲಿಯುತ್ತಿರುವ ವಿದ್ಯೆಯ ಕೌಶಲ್ಯದಿಂದ ವೀರನಿದ್ದೇನೆ ಎಂಬ ಸ್ವಾಭಿಮಾನ ಈತನ ಬಗ್ಗೆ ಮೂಡಿಸುತ್ತದೆ. ಅಲ್ಪ ವಿದ್ಯಾ ಮಹಾಗರ್ವಿ ಎಂಬಂತೆ ಪೂರ್ಣ ಪರಿಣತ ಕ್ಷತ್ರಿಯನೊಂದಿಗೆ ಆಪತ್ಕಾಲದಲ್ಲಿ ಸಂಘರ್ಷಕ್ಕೆ ತೊಡಗಿದರೆ ಅಪೂರ್ಣ ವಿದ್ಯೆ ದೌರ್ಬಲ್ಯವಾಗಿ ಆತನಿಗೆ ಮಾರಕವೂ ಅಕಾಲ ಮರಣಕಾರಣವೂ ಆಗಬಹುದು. ಹಾಗಾಗಿ ಆತನ ರಕ್ಷಣೆಯ ದೃಷ್ಟಿಯಿಂದ ಬೇಟೆಯಾಡಲು ನಾಲ್ಕು ಬೆರಳ ಸಂದಿಯ ಬಾಣ ಪ್ರಯೋಗ ಸಾಕು. ಕಾಡಾಕಾಡಿಯಾಗಿ ಯುದ್ದ ಮಾಡಲು ಈಗಿನ ಸ್ಥಿತಿ ಅಸಹಾಯಕತೆ ಸೃಷ್ಟಿಸುತ್ತದೆ. ಹಾಗಾಗಿ ಬೇಟೆಗೆ ಬರಬಹುದಾದ ರಾಜರೊಡನೆ ಏಕಲವ್ಯ ಯುದ್ದ ಮಾಡಲು ಮುಂದಾಗಲಾರ. ಮಾತ್ರವಲ್ಲ ಅಂಗವೈಕಲ್ಯ ಆತನನ್ನು ಮಗಧ ದೇಶದ ಸೈನ್ಯದಿಂದಲೂ ಹೊರಗುಳಿಸಿ ಸುದೀರ್ಘ ಬದುಕಿಗೆ ಕಾರಣವಾಗುತ್ತದೆ. ಈ ತೆರನಾಗಿ ಜವಾಬ್ದಾರಿಯುತ ನಿಲುಮೆಗೆ ಬಂದ ನಾನು ಕ್ರೂರತೆ ಅನಿಸಿದರೂ ಹಾಗೇ ವ್ಯವಹರಿಸಬೇಕಾಯಿತು. ಈ ಮಾತು ಕೇಳಿದ ಅರ್ಜುನ ಸಕಾಲದಲ್ಲಿ ನಿರ್ಣಯ ಕೈಗೊಳ್ಳುವಾಗ ಪರ್ಯಾಪ್ತ ಜ್ಞಾನಬುದ್ಧಿ ವಿನಿಯೋಗಿಸಬೇಕೆಂದು ಅರ್ಥೈಸಿಕೊಂಡು ಗುರು ಭಕ್ತಿಯಿಂದ ಪಾದಕ್ಕೆರಗಿ ವಂದಿಸಿದ. ತನ್ನ ಮನದ ಗೊಂದಲ ತಿಳಿಗೊಳಿಸಿದ.
ಈ ಮಧ್ಯೆ ಸೂತ (ಸಾರಥಿ) ಅಧಿರಥ ಪುತ್ರ ಕರ್ಣನೂ ದ್ರೋಣಾಚಾರ್ಯರ ಬಳಿ ವಿದ್ಯಾರ್ಜನೆಗೆ ಬಂದು ಸೇರಿದ. ಸಮರ್ಥ ಸಾರಥಿಯಾಗಬೇಕಾದ ಕೌಶಲ್ಯಗಳನ್ನು ಬೋಧಿಸಿದಾಗ ಏಕಪಾಠಿಯಾಗಿ ಮನನ ಮಾಡುತ್ತಾ ಕಲಿತುಕೊಳ್ಳುತ್ತಿದ್ದ. ರಥ ರಕ್ಷಣೆ, ರಥಗಮನ, ರಥಿಕ ರಕ್ಷಣೆ, ಅಶ್ವ ನಿಯಂತ್ರಣಾದಿ ಸೂಕ್ಷ್ಮಗಳನ್ನು ಸೂಕ್ಷ್ಮಮತಿಯಾಗಿ ಕಲಿತು ಕೊಂಡನು. ಸ್ವ ರಕ್ಷಣೆಗೆ ಬೇಕಾದ ಯುದ್ದ ಕೌಶಲವನ್ನೂ ಕರಗತಗೊಳಿಸಿದ ಗುರು ದ್ರೋಣರು ಆತನನ್ನು ಬೀಳ್ಗೊಡಲು ಸಿದ್ದತೆ ಮಾಡಿದರು. ಗುರುಗಳೇ ನನಗೂ ಧನುರ್ವೇದ ಕಲಿಯಬೇಕೆಂಬ ಅಪೇಕ್ಷೆಯಿದೆ ಎಂಬ ಮಹತ್ವಕಾಂಕ್ಷೆ ಮುಂದಿಟ್ಟನು. ಆಯಾ ವರ್ಣದವರು ಅವರವರ ಕುಲಕಸುಬನ್ನು ಕಲಿಯಬೇಕಾದ ಕಾಲ. ಒಂದೊಮ್ಮೆಗೆ ಯುದ್ದವಾದರೂ ಕೃಷಿಕರು, ಗೋಪಾಲಕರು, ವೈಶ್ಯರು, ಬ್ರಾಹ್ಮಣರು, ಶೂದ್ರರು ತಮ್ಮ ಕಸುಬು ನಿರತರಾಗಿ ಯುದ್ದದಲ್ಲಿ ಭಾಗವಹಿಸುವಿಕೆಯಿಂದ ಅನಿವಾರ್ಯ ಸಂದರ್ಭ ಹೊರತು ಮುಕ್ತರಾಗಿದ್ದರು.
ಹಸ್ತಿನೆಯ ಅಧ್ಯಾಪನಾ ನಿಯಮದಂತೆ ಯುದ್ದವಿದ್ಯೆ ಕ್ಷತ್ರಿಯರಿಗೆ ಮಾತ್ರ ಬೋಧಿಸಬೇಕಾದ ನಿಯಮಕ್ಕೊಳಪಟ್ಟು ದ್ರೋಣರು ಆತನ ಆಸೆ ಪೂರೈಸಲಾಗದೆ, ಸಂತೈಸಿ ಕಳುಹಿಸಿ ಕೊಟ್ಟರು. ಕಲಿಯುವ ಉತ್ಕಟ ಹಂಬಲ ಹೊಂದಿದ್ದ ಕರ್ಣ ಹೇಗಾದರೂ ಕಲಿಯಲೇ ಬೇಕೆಂದು ನಿರ್ಣಯಿಸಿ ಹೊರಟನು.
ಹೀಗಿರಲು ವಿದ್ಯಾರ್ಥಿಯ ಪ್ರೌಢಿಮೆಗೆ ತಕ್ಕಂತೆ ಭೀಮ, ದುರ್ಯೋಧನ, ದುಶ್ಯಾಸನಾದಿಗಳು ಗದಾಯುದ್ದ, ಮಲ್ಲಯುದ್ದ, ವಿಕರ್ಣ, ಗುರುಪುತ್ರ ಅಶ್ವತ್ಥಾಮಾದಿಗಳು ಧನುರ್ವಿದ್ಯೆ, ನಕುಲ ಸಹದೇವರು ಕತ್ತಿವರಸೆ, ಖಡ್ಗ ವಿದ್ಯೆ, ಧರ್ಮರಾಯ ಈಟಿ, ರಥಯುದ್ದದಲ್ಲೂ ಪ್ರಾವಿಣ್ಯತೆ ತೋರಿದರೆ ಅರ್ಜುನ ಮಾತ್ರ ವಿಶಿಷ್ಟನಾಗಿ ಬಹುಮುಖ ಪ್ರತಿಭೆಯಾಗಿ ಎಲ್ಲಾ ವಿದ್ಯೆಗಳಲ್ಲೂ ಸಮರ್ಥನಾಗಿ ಬುದ್ಧಿ ಬಲ, ಕೌಶಲ, ಏಕಾಗ್ರತೆ, ಉತ್ಸಾಹ ತುಂಬಿದ ಸದಾ ಅಭ್ಯಾಸನಿರತ ಶಿಷ್ಯನಾಗಿ ಶ್ರೇಷ್ಠ ವಿದ್ಯಾರ್ಥಿಯಾಗಿ ಬೆಳೆಯುತ್ತಾ, ದ್ರೋಣರ ಮೆಚ್ಚಿನ ಶಿಷ್ಯನಾಗಿ ರೂಪುಗೊಂಡಿದ್ದ.
ಮುಂದುವರಿಯುವುದು…



















