27.5 C
Udupi
Thursday, June 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 549

ಭರತೇಶ ಶೆಟ್ಟಿ,ಎಕ್ಕಾರು

ಸೈರಿಸಿಕೊಂಡು ಕೋಪಗೊಳ್ಳದೆ ಬಬ್ರುವಾಹನ ಎದುರು ರಥದಲ್ಲಿರುವ ಅರ್ಜುನನ್ನು ಉದ್ದೇಶಿಸಿ “ಅಪ್ಪಾ… ಕ್ಷತ್ರಿಯೋಚಿತವಾಗಿ ನಮ್ಮ ಪುರದೊಳಗೆ ಬಂದಂತಹ ಕುದುರೆಯನ್ನು ಕಟ್ಟಿಸಿದ್ದೆ. ಯಾರದ್ದೋ ಕುದುರೆಯಾಗಿದ್ದರೆ ಖಂಡಿತಾ ಬಿಟ್ಟು ಕೊಡುವ, ಕಪ್ಪ ಸಮರ್ಪಿಸುವ ಪ್ರಮೇಯ ಇರುತ್ತಿರಲಿಲ್ಲ. ಆದರೆ ಕಟ್ಟಿಸಿದ ಬಳಿಕ ಕುದುರೆ ನಿಮ್ಮದೆಂದು ತಿಳಿಯಿತು. ನನ್ನ ತಂದೆಯಾಗಿರುವ ನೀವು ಕುದುರೆಯ ಬೆಂಗಾವಲಿಗನಾಗಿ ಬಂದಿರುವಾಗ ಯುದ್ಧದ ಮಾತು ಬರುತ್ತದೆಯೆ? ಹಾಗಾಗಿ ತಿಳಿಯದೆ ಮಾಡಿದ ತಪ್ಪನ್ನು ಅರಿತು ಕಟ್ಟಿದ ಯಾಗಾಶ್ವವನ್ನು ಬಿಟ್ಟು ತಂದು ಒಪ್ಪಿಸುತ್ತಿದ್ದೇನೆ” ಎಂದು ವಿನಯಪೂರ್ವಕವಾಗಿ ನುಡಿದನು.

ಅರ್ಜುನನ ಮನಸ್ಸಲ್ಲಿ ತನ್ನ ಮಗನಾದರೆ ಒಮ್ಮೆಗೆ ಪರಶಿವ ಪರಮೇಶ್ವರನು ಎದುರಾಗಿ ಬಂದರೂ ಸೆಟೆದು ನಿಂತು ಪ್ರಾಣ ಇರುವವರೆಗೆ ಕಾದಾಡುವ ಪೌರುಷ ತೋರುತ್ತಿದ್ದ ಎಂದೆಣಿಸಿತು. ಇಷ್ಟು ಮಂದಿಯ ಮುಂದೆ ಈ ರೀತಿ ಶರಣಾಗಿ ಅಪಮಾನಕರ ಕಾರ್ಯ ಎಸಗುತ್ತಿರಲಿಲ್ಲ. ಇಂತಹ ದುರ್ಬಲನನ್ನು ನನ್ನ ಮಗನೆಂದು ಒಪ್ಪಿದರೆ ನನಗೂ ಅವ ಮರ್ಯಾದೆ ಎಂದು ತರ್ಕಿಸತೊಡಗಿದನು. ಬಬ್ರುವಾಹನನ ಕರೆದು “ಏನಂದೆ? ನಾನು ನಿನ್ನ ಅಪ್ಪನೆ? ನೀನು ಕ್ಷಾತ್ರ ಕುಲವಂತನಾಗಿದ್ದರೆ ರಣ ಮರ್ಯಾದೆ ಏನೆಂದು ನಿನಗೆ ತಿಳಿದಿರುತ್ತಿತ್ತು. ಈ ರೀತಿ ಕಾಲಬುಡದಲ್ಲಿ ಕುಳಿತು ಶರಣಾಗುವ ಹೇಡಿತನ ತೋರುತ್ತಿರಲಿಲ್ಲ. ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿ ಹುಟ್ಟುತ್ತದೆ ಹೊರತು ನಿನ್ನಂತಹ ನಾಯಿ ನರಿ ಹುಟ್ಟಲಾರದು. ನನಗೆ ಮಗನಿದ್ದ. ಆತ ವೀರ ಅಭಿಮನ್ಯು. ಶತ್ರುಗಳು ಕನಸಲ್ಲೂ ಹೆದರಿ ಹೌಹಾರುವಂತೆ ಸಾಹಸ ಮೆರೆದು ಕೀರ್ತಿವಂತನಾಗಿದ್ದಾನೆ. ಆತನ ಕಾಯ ಅಳಿದರೂ ಇಂದಿಗೂ ಅಜರಾಮರನಾಗಿ ಉಳಿದಿದ್ದಾನೆ. ಅವನೆಲ್ಲಿ? ನೀನೆಲ್ಲಿ? ಯುದ್ದ ಮಾಡಲಾಗದೆ ಭಯಭೀತನಾಗಿ ಕಥೆಕಟ್ಟಿ ಮಾತನಾಡುತ್ತಾ ಬಂದವರನ್ನು ಅಪ್ಪಾ ಎಂದು ಕರೆಯಲು ನಾಚಿಕೆಯಾಗದೆ ನಿನಗೆ? ಸಂಸ್ಕಾರ ಹೀನ, ಕುಲಶೀಲವಿಲ್ಲದ ನೀನು ನನಗೆ ಮಗನಾಗಲು ಸಾಧ್ಯವಿಲ್ಲ. ಹೇಗಾದರೂ ಮಾಡಿ ಬದುಕುವ ದಾರಿ ಹುಡುಕಲು ಕಂಡ ಕಂಡವರನ್ನು ಅಪ್ಪಾ ಎಂದು ಸಂಭೋದಿಸುವ ನಿನ್ನ ಜನ್ಮಕ್ಕೆ ಏನೆನ್ನಬೇಕೊ ನನಗೆ ತಿಳಿಯದು. ಅಭಿಮಾನ ಶೂನ್ಯನೂ, ರಣಹೇಡಿಯೂ ಆಗಿರುವ ನೀನು ನನಗೆ ಮಗನಾಗಲು ಸಾಧ್ಯವೆ ಇಲ್ಲ” ಎಂದು ತುಚ್ಛೀಕರಿಸಿ ಎಡಗಾಲಿನಿಂದ ಬಬ್ರುವಾಹನ ತಂದ ಕಪ್ಪವನ್ನು ಒದ್ದು ಝಾಡಿಸಿ ಉರುಳಿಸಿದನು.

ಅರ್ಜುನನ ಈ ರೀತಿಯ ನಡೆ ಮಣಿಪುರದ ಜನರ ಆಕ್ರೋಷಕ್ಕೆ ಕಾರಣವಾದರೆ, ಪಾಂಡವ ಪಕ್ಷೀಯರಿಗೆ ಬೇಸರವನ್ನು ಉಂಟು ಮಾಡಿತು. ಯಾಕೆ ಅರ್ಜುನ ಈ ರೀತಿ ವ್ಯವಹರಿಸುತ್ತಿದ್ದಾನೆ? ಮಗನು ಹೌದೋ ಅಲ್ಲವೋ ಬೇರೆ ವಿಚಾರ! ಶರಣಾಗತನಾಗಿ ಕಟ್ಟಿದ ಕುದುರೆ ಬಿಟ್ಟು ಕೊಟ್ಟು, ಕಪ್ಪ ಕಾಣಿಕೆ ಸಮರ್ಪಿಸಿದ ಮೇಲೆ ಮುಂದಣ ರಾಜ್ಯಕ್ಕೆ ಮುಂದುವರಿಯುವುದು ಬಿಟ್ಟು, ವ್ಯರ್ಥ ಕಾಲಹರಣಕ್ಕೆ ತೊಡಗುತ್ತಿರುವುದು ಇಷ್ಟವಾಗಲಿಲ್ಲ.

ಇತ್ತ ಬಬ್ರುವಾಹನನ ಸ್ವಾಭಿಮಾನ ಕೆರಳಿ ಕೆಂಡಾಮಂಡಲವಾಗಿದೆ. ಕಪ್ಪವನ್ನೊದ್ದು ಹಾರಿಸುವಲ್ಲಿ ಅರ್ಜುನ ತೋರಿದ ದರ್ಪ, ನನ್ನನ್ನು ಕುಲಶೀಲಹೀನ ಎಂದು ಕರೆದುದರ ಅರ್ಥ- ನನ್ನ ತಾಯಿಗೆ ಅಪಮಾನ ಮಾಡಿದಂತೆ. ಯುದ್ದ ಮಾಡಲಾಗದ ಹೇಡಿಯೇ ನಾನು? ನನ್ನನ್ನು ಏಕಾಂತದಲ್ಲಿ ಕರೆದು ಸತ್ಯಾಸತ್ಯತೆಯನ್ನು ವಿಚಾರಿಸಿ ತಿಳಿದುಕೊಳ್ಳಬಹುದಾಗಿತ್ತು. ಆ ಸಮಯ ನನ್ನ ತಂದೆಯಾಗಿ ಗದರಿಸಿದ್ದರೂ ಸುಮ್ಮನುಳಿದು ಕೇಳಿಸಿಕೊಳ್ಳುತ್ತಿದ್ದೆ. ಆದರೆ ವಿವೇಕಶೂನ್ಯನಾಗಿ ಸಾರ್ವಜನಿಕರೆದುರು ಈ ರೀತಿ ಬಹಿರಂಗವಾಗಿ ಅವಮಾನಿಸಿದುದು ಕ್ಷಾತ್ರ ಕುಲ ಸಂಜಾತನಾದ ನನಗೆ ನನ್ನ ಸಾವಿಗಿಂತಲೂ ಹೇಯವಾದುದಾಗಿದೆ. ಈ ರೀತಿಯ ಕುಕೃತ್ಯವೆಸಗಿದ ಈತ ನನ್ನ ತಂದೆ ಹೌದಾಗಿದ್ದರೂ ದಾಕ್ಷಿಣ್ಯ ತೋರಲಾದೀತೆ? ಮಣಿಪುರದ ಮಂತ್ರಿ, ಮಾಂಡಲಿಕ, ಸಾಮಂತ ರಾಜರೆದುರು ಈ ರೀತಿ ಮಾನವಧೆಗೊಳಗಾಗಿ ಸುಮ್ಮನುಳಿದೆ ಎಂದಾದರೆ ನಮ್ಮ ರಾಜ್ಯದ ಗೌರವ ಏನಾದೀತು? ರಾಷ್ಟ್ರ ರಕ್ಷಣೆಯ ಹೊಣೆಯುಳ್ಳ ನನಗೆ ಈ ಮಣ್ಣಿನ ಋಣವಿದೆ. ಧಿಕ್ಕರಿಸಿದವನನ್ನು ಕೆಕ್ಕರಿಸಿ ಮುಗ್ಗರಿಸಿ ಬೀಳಿಸದೆ ಉಳಿದೆನಾದರೆ ನಾಳಿನ ಭವಿಷ್ಯಕ್ಕೆ ನಾನು ಉತ್ತರ ನೀಡಲಾಗದೀತೆ? ಹೇ ಅರ್ಜುನಾ! ನೀನು ಮಹಾಪರಾಧ ಮಾಡಿದೆ, ಈ ಬಬ್ರುವಾಹನನ ಸ್ವಾಭಿಮಾನವನ್ನು ತುಳಿದು ನಿಲ್ಲುವ ಅಹಂಕಾರ ತೋರಿಸಿ ಅಪರಾಧಿಯಾಗಿರುವೆ. ಶಿಕ್ಷಾರ್ಹನಾಗಿರುವ ನಿನ್ನನ್ನು ದಂಡಿಸದೆ ಬಿಡಲಾರೆ. ಎಂದು ಬಿಸಿಯುಸಿರು ಎಳೆಯುತ್ತಾ ಪಣ ತೊಟ್ಟನು. ಒಂದೆಡೆ ದುಃಖ, ತಂದೆ ಎಂಬ ಮಮಕಾರ, ಅವಮಾನದ ಬೇಗುದಿ, ಹೀಗಾಯಿತಲ್ಲಾ ಎಂಬ ನಿರಾಸೆ, ಪರಿಣಾಮವಾಗಿ ಉತ್ಪತ್ತಿಯಾದ ಕ್ರೋಧ, ಪ್ರತಿಕಾರ ತೀರಿಸ ಬೇಕೆಂಬ ಸೇಡು ಎಲ್ಲವೂ ಸಮ್ಮಿಳಿತವಾಗಿ ಬುಸುಗುಡುವ ಮಹಾಶೇಷನಂತಾದನು ಬಬ್ರುವಾಹನ. ಇಷ್ಟೆಲ್ಲಾ ಭಾವೋದ್ವೇಗಕ್ಕೆ ತುತ್ತಾಗಿದ್ದಾನೆ. ಆದರೂ ದುಡುಕುವ ಮುನ್ನ ತನ್ನನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯ ನೆನಪಾಯಿತು. ತಂದೆ ಅರ್ಜುನ ಬಂದಿರುವ ವಿಚಾರ ತಿಳಿದು ಎಂದೂ ಕಂಡಿರದ ಸಂತಸ ತಾಯಿಯ ಮೊಗದಲ್ಲಿ ಕಂಡಿದ್ದ. ಆ ಉಲ್ಲಾಸ, ಚೈತನ್ಯ, ಕಾತರ, ಸಂತೋಷಗಳನ್ನು ಉಳಿಸಬೇಕಲ್ಲಾ! ಮಗನಾಗಿ ತಾಯಿಯ ಅಭೀಷ್ಟಗಳನ್ನು ಈಡೇರಿಸುವುದು ಧರ್ಮವಲ್ಲವೆ? ಹೀಗಿರಲು ಹೇಗೆ ಯುದ್ಧ ಸಾರಲಿ? ಎಂದು ದ್ವಂದ್ವಕ್ಕೆ ಸಿಲುಕಿದನು ಬಬ್ರುವಾಹನ ಅಸಹಾಯಕನಾಗಿ ಅರ್ಜುನನಿಗೆ ಬೆನ್ನುಹಾಕಿ ಒಂದೆರಡು ಹೆಜ್ಜೆ ಸಾಗಿ ಅಲ್ಲಿಯೆ ಕುಳಿತು ಕಣ್ಣೀರಧಾರೆ ಹರಿಸಿದನು.

ಹೀಗೆ ಮರುಗುತ್ತಿದ್ದ ಬಬ್ರುವಾಹನನ್ನು ಸಂತೈಸಲು ಅನಿರೀಕ್ಷಿತವಾಗಿ ಸ್ತ್ರೀಯೊಬ್ಬಳು ರಣಾಂಗಣಕ್ಕೆ ಬಂದಳು. ಬಂದವಳು ಬೇರ್ಯಾರು ಅಲ್ಲ ಅವಳು ಉಲೂಪಿ. ಈ ಬಬ್ರುವಾಹನನಿಗೆ ಸಂಬಂಧದಲ್ಲಿ ಮಲತಾಯಿ. “ಮಗನೇ! ದುಃಖಿಸಬೇಡ. ಇದು ಕಣ್ಣೀರ್ಗರೆವ ಸಮಯವಲ್ಲ. ನೀನು ಅಸಮರ್ಥನೂ ಅಲ್ಲ. ನಿನಗಾಗಿರುವ ವೇದನೆಗೆ ತಕ್ಕ ಉತ್ತರ ನೀಡಬಲ್ಲ ಸಾಮರ್ಥ್ಯವೂ ನಿನಗಿದೆ. ನಿನ್ನ ಶಕ್ತಿಯ ಭವ್ಯ ಪ್ರದರ್ಶನವಾಗಲಿ. ನೀನೇನು ಎಂಬುದರ ದಿವ್ಯ ಸತ್ಯದರ್ಶನವಾಗಲಿ.” ಎಂದು ಪ್ರೋತ್ಸಾಹಿಸಿ ಪ್ರೇರಣೆ ನೀಡಿದಳು. ಬಬ್ರುವಾಹನನಿಗೆ ಸಹಾಯಕಳಾಗಿ ಒದಗಿ ಸಮಾಧಾನ ಹೇಳುವಲ್ಲಿ ಹಿನ್ನೆಲೆ ಕಾರಣವೂ ಇದೆ, ಉಲೂಪಿಯ ಸ್ವಾರ್ಥ ಸಾಧನೆಯ ಉದ್ದೇಶವೂ ಇದೆ.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page