25.1 C
Udupi
Wednesday, June 10, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 548

ಭರತೇಶ ಶೆಟ್ಟಿ, ಎಕ್ಕಾರು

ರಣರಂಗಕ್ಕೆ ಮಣಿಪುರದ ಸೇನೆ ಬಂದೀತು ಎಂದು ಯೋಚಿಸಿದ್ದ ಪಾಂಡವ ಪಕ್ಷದ ಕಲ್ಪನೆ ವ್ಯತಿರಿಕ್ತವಾಗಿದೆ. ಯಜ್ಞಾಶ್ವ ಗೌರವ ಪೂರ್ವಕವಾಗಿ ಮುಂಚೂಣಿಯಲ್ಲಿದೆ. ಹಿಂದಿನಿಂದ ಬಹುಸಂಖ್ಯೆಯ ಬಂಡಿಗಳು, ಪರಿಚಾರಕರು, ಹಿಂದಿನಿಂದ ಧ್ವಜವುಳ್ಳ ರಥದಲ್ಲಿ ನೋಡಿದರೆ ನೋಡುತ್ತಲೆ ಇರಬೇಕೆನ್ನುವಷ್ಟು ವರ್ಚಸ್ಸುಳ್ಳ ತೇಜಸ್ವೀ ಯುವಕ. ಆತನ ರಥದ ಜೊತೆ ಬಂದ ಬಂಡಿಗಳು ರಥಗಳು ರಣಾಂಗಣ ಪ್ರವೇಶಿಸಿ ವಿಸ್ತಾರವಾಗಿ ಹರಡಿ ನಿಂತುಕೊಂಡಿದೆ. ಹಿಂದಿದ್ದ ಗಂಭೀರತೆ, ಪೋಷಾಕುಗಳಿಂದ ರಾಜನೆಂದು ನೋಟ ಮಾತ್ರದಿಂದ ಊಹಿಸಬಹುದಾದ ರಥಿಕನ ರಥ ಮಧ್ಯದಲ್ಲಿ ಬಂದು ಸ್ಥಿತಗೊಂಡಿತು. ಎಲ್ಲರಿಗೂ ಆಶ್ಚರ್ಯ, ಯುದ್ಧ ಮಾಡದೆ ಶರಣಾಗತರಾದರೆ? ಅರಿಯದೆ ಕುದುರೆ ಕಟ್ಟಿದ ಪ್ರಮಾದಕ್ಕೆ ಶರಣಾಗತಿಯೆ? ಮಣಿಪುರದರಸು ಬಬ್ರುವಾಹನ ಮಹಾ ವಿಕ್ರಮಿ ಎಂದು ಕೇಳಿ ತಿಳಿದ ವಿಚಾರ ಅಸತ್ಯವೆ? ಎಂಬಂತೆ ಸಾಲು ಸಾಲು ಪ್ರಶ್ನೆಗಳು ಉತ್ಪನ್ನವಾದರೂ, ಸಹನೆಯಿಂದ ಕಾಯತೊಡಗಿತು ಪಾಂಡವ ಸೇನೆ. ಆದರೂ ಕೆಲವರಿಗೆ ಈ ವರ್ತನೆ ಅಪಹಾಸ್ಯವಾಗಿ ಕಂಡು ಪರಿಹಾಸ್ಯ ಮಾಡತೊಡಗಿದರು. “ಅರೇ ! ಇದೆಂತಹ ಹುಚ್ಚಾಟ? ಕುದುರೆ ಕಟ್ಟಿದ್ದೇಕೆ? ಈಗ ಬಿಟ್ಟದೇಕೆ?” ಎಂಬ ಪ್ರಶ್ನೆಗಳು ತೂರಿ ಬಂದವು. “ಗಂಡಾಗಿ ಕುದುರೆಯೇನೋ ಕಟ್ಟಿದರು. ಗಂಡಸುತನದ ಗಡುಸಾದ ಕಾಠಿಣ್ಯತೆ ಕರಗಿ ಹೆಣ್ಣಾಯಿತೇ.. ಹೆದರಿ ಈ ರೀತಿಯ ವ್ಯವಹಾರವೆ?” ಎಂಬ ಜಿಜ್ಞಾಸೆಯೂ ಆಶ್ಚರ್ಯ ರೂಪದಲ್ಲಿ ಹೊರಬಂತು.

ತನ್ನವರ ಈ ರೀತಿಯ ಕುಹಕ – ಕುಚೋದ್ಯದ ನುಡಿಗಳು ಅರ್ಜುನನಿಗೆ ಸಹ್ಯವಾಗಲಿಲ್ಲ. ಮನಸ್ಸು ಅಸಮಧಾನಗೊಂಡಿತು. ತನ್ನ ಮಗನು ಈತ ಹೌದಾಗಿದ್ದರೆ ಹೀಗೆ ಮಾಡಿಯಾನೆ? ಎಂಬ ಸಂದೇಹವೂ ಮೂಡಿತು. ಛೇ! ಈತನ ಈ ಹೇಡಿತನದ ಸ್ವಭಾವ ನನ್ನ ಸ್ವಾಭಿಮಾನವನ್ನು ಪ್ರಶ್ನಿಸುವಂತೆ ಮಾಡುತ್ತಿದೆಯಲ್ಲವೆ ಎಂಬ ಕೊರಗೂ ಮನ ಮಾಡಿತು. ಇಲ್ಲ ಇಲ್ಲ ಖಂಡಿತವಾಗಿಯೂ ಈತ ನನ್ನ ಮಗನಾಗಿದ್ದರೆ ಈ ರೀತಿ ಮುಂದಾಗುತ್ತಿರಲಿಲ್ಲ.. ಎಂಬ ತರ್ಕವೂ ಮೂಡಿತು. ಅಂತೂ ಅರ್ಜುನ ಪೂರ್ಣ ಪ್ರಮಾಣದಲ್ಲಿ ಗೊಂದಲಕ್ಕೊಳಗಾಗಿದ್ದಾನೆ.

ಬಬ್ರುವಾಹನ ದೂರದಲ್ಲಿ ಬರುವಾಗ ಕತ್ತು ಏರಿಸಿ ಎತ್ತರಿಸುತ್ತಾ, ತನ್ನ ಜನುಮದಾತ ಮಹಾತ್ಮ, ತನ್ನ ಪಾಲಿನ ದೇವರು ಪಿತಾಶ್ರೀ ಎಂಬಂತೆ ವಿಧ ವಿಧ ಭಾವ ತಳೆಯುತ್ತಾ ಬರುತ್ತಿದ್ದಾನೆ. ಗರ್ಭಗುಡಿಯೊಳಗಿನ ದೇವರ ದರುಶನಕ್ಕೆ ಕಾತರಿಸುವಂತೆ ನೋಡಿದಷ್ಟೂ ಮನದಣಿಯದೆ ರಾಜ ಗಾಂಭೀರ್ಯದ ತನ್ನ ತಂದೆಯನ್ನು ನೋಡುತ್ತಾ ಬಂದು ಬಳಿ ಸೇರಿದನು. ಸಾಗರದೋಪಾದಿಯಲ್ಲಿ ಪಾಂಡವ ಸೇನೆ ಇದ್ದರೂ ಬಬ್ರುವಾಹನನಿಗೆ ಅರ್ಜುನನೊಬ್ಬನನ್ನುಳಿದು ಬೇರೇನೂ ಕಾಣಿಸುತ್ತಿಲ್ಲ. ಆ ತೆರನಾದ ವಿಧೇಯತೆ, ತನ್ಮಯತೆ ಮನ ಮಾಡಿದೆ. ಬಳಿ ಬಂದವನು ರಥದಿಂದಿಳಿದು ಕುದುರೆಯನ್ನು ತಂದು ಪಾರ್ಥನ ರಥದೆದುರು ನಿಂತನು. ಕಪ್ಪಕಾಣಿಕೆಗಳ ಬಂಡಿಗಳನ್ನೂ ಸರತಿಯ ಸಾಲಿನಲ್ಲಿ ಸಮರ್ಪಣೆಗೆ ಸಿದ್ಧಗೊಳಿಸಿ ನಿಲ್ಲಿಸಿದನು. ಅರ್ಜುನನನ್ನು ನೋಡಿ ಸಾಷ್ಟಾಂಗ ನಮಸ್ಕಾರ ಮಾಡಿದನು. “ಒಂದು ಸುತ್ತು ತಿರುಗಿ ಬಂಡಿ ಬಂಡಿಗಳಲ್ಲಿ ತುಂಬಿ ತಂದ ಕಪ್ಪವನ್ನೂ, ಯಾಗಾಶ್ವವನ್ನೂ ನೋಡಿ ” ನೀವಿದನ್ನು ಸ್ವೀಕರಿಸಬೇಕು. ಇದೋ ಯಾಗಾಶ್ವ. ಅದೋ ಕಪ್ಪ ಕಾಣಿಕೆಗಳು. ಇವುಗಳನ್ನೆಲ್ಲ ಒಪ್ಪಿ ಪರಿಗ್ರಹಿಸಿ ಅಶ್ವಮೇಧ ಯಾಗ ಮುಂದುವರಿಯಲಿ. ನಮ್ಮ ಪರಿಪೂರ್ಣ ಪ್ರಮಾಣದ ಸಹಕಾರವಿದೆ” ಎಂದು ಹೇಳುತ್ತಾ ಘೋಷಿದನು.

ಅರ್ಜುನನಿಗೆ ಬಬ್ರುವಾಹನನ ನಡೆ ವರ್ತನೆ ಕಿಂಚಿತ್ತೂ ಹಿಡಿಸಲಿಲ್ಲ. ತನ್ನ ಮಗನತ್ತ ತಿರುಗಿಯೂ ನೋಡದೆ “ಯಾರೀತ ಷಂಡ? ಇಂತಹ ರಣ ಹೇಡಿ ಮಣಿಪುರದ ಅರಸನೆ? ಕೈಲಾಗದ ಈತ ಕುದುರೆ ಕಟ್ಟಿದ್ದು ಯಾಕಂತೆ? ಕಟ್ಟಿದ್ದು ಹೌದಾದರೆ ಕಾದಾಡಲಾಗದೆ ಬಿಟ್ಟದ್ದೇಕೆ? ಇಂತಹ ಓರ್ವ ಕ್ಷಾತ್ರ ಕುಲ ಸಂಜಾತ ಇರಲು ಸಾಧ್ಯವೆ? ಕ್ಷಾತ್ರಕುಲದವನಲ್ಲ ಅಥವಾ ಪ್ರಾಣ ಭಯ ಈತನನ್ನು ಆವರಿಸಿರಬೇಕು. ಇಲ್ಲದಿದ್ದರೆ ಈ ರೀತಿ ಅಂಜುತ್ತಾ ಶರಣಾಗುತ್ತಿರಲಿಲ್ಲ” ಎಂದು ಚುಚ್ಚು ಮಾತುಗಳಿಂದ ಕಾಡಿದನು.

ಬಬ್ರುವಾಹನನಿಗೆ ಅರ್ಜುನನ ಮಾತುಗಳನ್ನು ಕೇಳಿ ಸಹಿಸಿಕೊಳ್ಳಲಾಗಲಿಲ್ಲ.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page