25.7 C
Udupi
Wednesday, June 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 541

ಭರತೇಶ ಶೆಟ್ಟಿ, ಎಕ್ಕಾರು

ಪ್ರಮೀಳೆಗೀಗ ದ್ವಂದ್ವ ಭಾವ. ಅಂತರಂಗದಲ್ಲಿ ಹರ್ಷೋಲ್ಲಾಸ. ಕಾರಣ ತನ್ನ ತಾಯಿ ಶಶಿಪ್ರಭಾದೇವಿಯವರು ನಿನ್ನ ಪತಿಯಾಗುವವನು ಅರ್ಜುನ, ಅಶ್ವಮೇಧ ಯಾಗದ ಬೆಂಗಾವಲಿಗನಾಗಿ ಬರುತ್ತಾನೆ ಎಂದು ಕಾಳಿಕಾಮಾತೆಯ ಅಭಯವಾಗಿದೆ. ಆ ತನಕ ನೀನು ಕಾಯುತ್ತಿರಬೇಕು. ಎಂದು ಹೇಳಿರುವ ಮಾತು ಸದಾ ಸ್ಮರಣೆಯಲ್ಲಿತ್ತು. ಅಂತಹ ಸುಮಧುರ ಕ್ಷಣದ ನಿರೀಕ್ಷೆಯಲ್ಲಿದ್ದವಳು. ಇಂದು ಅರಸುತ್ತಿದ್ದ ಬಳ್ಳಿ ಕಾಲಿಗೆ ಸುತ್ತಿಕೊಂಡಂತೆ ಹಸ್ತಿನೆಯ ಚಂದ್ರವಂಶೀಯರ ಸೇನೆ ಬಂದಿದೆ. ಅರ್ಜುನನು ಸೇನಾನಾಯಕ. ಕನಸು ಕಾಣುತ್ತಾ ಕಾತರಿಸುತ್ತಿದ್ದ ನನ್ನ ನಲ್ಲ ಬಂದಿರುವನಾದರೂ ಯುದ್ಧ ಮಾಡಲು ಬಂದಿದ್ದಾನಲ್ಲ. ಆದರೂ ಪ್ರಮೀಳೆ ಸ್ನಾನಾದಿ ಶೌಚಕ್ರಿಯೆಗಳನ್ನು ಪೂರೈಸಿ, ಸುಗಂಧಾದಿ ದ್ರವ್ಯಗಳನ್ನು ಪೂಸಿಕೊಂಡಳು. ಹೋಗುತ್ತಿರುವುದು ಯುದ್ದಕ್ಕಾದರೂ ಕೇಶಾಲಂಕಾರ, ವದನಶೃಂಗಾರಾದಿಗಳನ್ನು ಮಾಡಿಕೊಂಡು ಮದನನೂ ಕೆರಳುವಷ್ಟು ಮೋಹನಾಂಗಿಯಾದಳು. ರಾಣಿ ಈ ತೆರನಾಗಿ ಸನ್ನದ್ಧಳಾಗುವುದನ್ನು ಕಂಡ ಸೇನೆಯೂ ಸಮರವನ್ನು ಮರೆತು ಸಮಾರಂಭಕ್ಕೆ ತೆರಳುವಂತೆ ನಾನಾ ಆಭರಣಗಳನ್ನು, ದುಕೂಲಗಳನ್ನು, ಭೂಷಣಾಳಿಗಳನ್ನು ಧರಿಸಿಕೊಂಡು ಸುಗಂಧದ್ರವ್ಯಗಳನ್ನು ಲೇಪಿಸಿಕೊಂಡು ಸನ್ನದ್ಧವಾಗಿದೆ. ಹೆಣ್ಣಿನ ನೈಜ ಸೌಂದರ್ಯವಿರುವುದು ಚೆನ್ನಾಗಿ ಅಲಂಕರಿಸಿ ಮುಚ್ಚಿಡುವುದರಲ್ಲಿ, ಬಿಚ್ಚಿಡುವುದರಲ್ಲಲ್ಲ ಎಂಬ ಪ್ರಾಜ್ಞರ ವಾಕ್ಯದಂತೆ ಇಷ್ಟೆಲ್ಲಾ ಸರ್ವಾಂಗ ಅಲಂಕಾರಗೊಂಡರೂ ರಣಕವಚ, ಶಿರಸ್ತ್ರಾಣಗಳನ್ನು ಮೇಲುಡುಗೆಯಾಗಿ ಧಾರಣೆ ಮಾಡಿಕೊಂಡು ಅಪರಿಮಿತವಾದ ಸ್ತ್ರೀಸೈನ್ಯ ಹೊರಟು ನಿಂತಿದೆ. ಈಗಲೂ ಸ್ತ್ರೀರಾಜ್ಯದ ಇವರ್ಯಾರಿಗೂ ಬೇಕಾಗಿರುವುದು ಯುದ್ಧವಲ್ಲ. ಯುದ್ಧಕ್ಕಾಗಿ ಬಂದಿರುವ ಪುರುಷರು ಮಾತ್ರ. ಹಾಗಾಗಿ ಸೌಂದರ್ಯವೆಂಬ ಸಹಜ ಸಾಮರ್ಥ್ಯವನ್ನು ನಾನಾಲಂಕಾರಗಳೆಂಬ ಸಾಧನ ಸಂಪತ್ತಿನಿಂದ ಸಮೃದ್ಧಗೊಳಿಸಿ, ಬಿನ್ನಾಣವೆಂಬ ಕೌಶಲ್ಯ ಮೈಗೂಡಿಸಿ, ಹಾವಭಾವದಿ ಮೋಹಕಾಭಿನಯಗಳೆಂಬ ಆಯುಧಗಳನ್ನು ಧರಿಸಿ, ಇವುಗಳಿಗೆಲ್ಲ ಒಪ್ಪುವ ಶೃಂಗಾರದ ತೇರನ್ನೇರಿ, ಆ ಗಂಡು ಕುಲಕೋಟಿಯನ್ನು ತುಡುಕಿ, ಮಣಿಸಿ, ಬಂಧಿಸಿ ಬಿಡಬಹುದೆಂಬ ಮಹದಾಸೆಯನ್ನು ಹೊತ್ತುಕೊಂಡು ಹೆಣ್ಣುಪಡೆ ಹಗಲುಗನಸಿನಲ್ಲಿ ವಿಹರಿಸುತ್ತಿದೆಯೋ ಎಂಬಂತೆ ಕಾಣುತ್ತಿದೆ. ಆದರೂ ಆಯುಧ ಝಳಪಿಸುತ್ತಿರುವ ಪುರುಷರ ಮುಂದೆ ನಿರಾಯುಧರಾಗಿ ಹೋಗುವುದು ತಕ್ಕುದಲ್ಲ ಎಂದು ಪ್ರಮೀಳೆ ತಾನೂ ವಿವಿಧಾಯುಧಗಳನ್ನು ರಥದಲ್ಲಿ ತುಂಬಿಕೊಂಡು ಸೇನೆಗೂ ಹಾಗೆಯೆ ಮಾಡಲು ಆದೇಶ ನೀಡಿದಳು. ಪ್ರಮೀಳೆಯ ಬೃಹತ್ ಸೇನೆ ಹೊರಟಿದೆ.

ಸ್ರೀರಾಜ್ಯದ ಹೊರವಲಯದಲ್ಲಿರುವ ಬಯಲು ಪ್ರದೇಶದಲ್ಲಿ ಪಾಂಡವರ ಸೈನ್ಯ ಬೀಡು ಬಿಟ್ಟಿದೆ. ಪ್ರಮೀಳೆಯ ಸೇನೆ ಎದುರಾಗಿ ಬಂದು ನಿಂತಿತು.

ಪ್ರಮೀಳೆ ಸಮರಕ್ಕೆ ಬಂದವಳೋ? ಸರಸಕ್ಕೆ ಬಂದವಳೋ! ಆಕೆಯ ಮನಸ್ಸು ಹುಚ್ಚುಕುದುರೆಯಾಗಿದೆ. ಮಹಾರಾಣಿಯಾಗಿ ದೂತಿಯನ್ನು ಕಳುಹಿಸಬೇಕಾಗಿದ್ದ ಘನಸ್ಥಿಕೆಯನ್ನೂ ಮರೆತು, ತಾನು ರಥದಿಂದಿಳಿದು ರಣಭೂಮಿಯ ಮಧ್ಯದಲ್ಲಿ ಬಂದು ನಿಂತು ಅರ್ಜುನನ್ನು ಬರುವಂತೆ ಕರೆದಳು. ನಿರಾಯುಧಳಾಗಿ ನಿಂತು ಆಮಂತ್ರಿಸುತ್ತಿರುವ ರಾಣಿಯನ್ನು ಕಂಡು ಈಕೆ ಮೈತ್ರಿಗಾಗಿ ಅಥವಾ ಶರಣಾಗತಿಗಾಗಿ ಈ ರೀತಿ ವ್ಯವಹರಿಸುತ್ತಿರಬಹುದು ಎಂದು ಭಾವಿಸಿ ಅರ್ಜುನನೂ ರಥದಿಂದಿಳಿದು ಆಕೆಯ ಸನಿಹಕ್ಕೆ ಬಂದನು.

ಅರ್ಜುನನನ್ನು ನೋಡುತ್ತಿರುವ ಪ್ರಮೀಳೆ ತೆರೆದ ಕಣ್ಣನ್ನು ಮುಚ್ಚುತ್ತಿಲ್ಲ. ಒಮ್ಮೆ ನಾಚಿ ನೆಲ ನೋಟಕಳಾಗುತ್ತಾಳೆ. ಮತ್ತೆ ತುಸು ತಲೆಯೆತ್ತಿ ಓರೆ ಕಣ್ಣಿನ ಮೋಹಕ ದೃಷ್ಟಿಯಲ್ಲಿ ಅರ್ಜುನನ ಸೌಷ್ಟವ ಸೌಂದರ್ಯ ಸವಿಯುತ್ತಾಳೆ. ಕಾಲ ಹೆಬ್ಬೆರಳು ನೆಲ ಗೀರುತ್ತಿದೆ. ಸೊಂಟ ಬಳುಕುತ್ತಿದೆ. ಮೈಯಲ್ಲೆಲ್ಲಾ ಏನೋ ಸಂಚಲನ… ವ್ಯಕ್ತ ಪಡಿಸಲಾಗದ ಭಾವಲಹರಿಗಳು ಸಮುದ್ರದಲೆಗಳಂತೆ ಅಪ್ಪಳಿಸುತ್ತಿವೆ. ಕರಗಳೆರಡರ ಹಿಡಿತ ಬಿಗಿಗೊಳ್ಳುತ್ತದೆ ಮತ್ತೆ ಸಡಿಲಗೊಂಡು ಹಿಸುಕಿಕೊಳ್ಳುತ್ತಿವೆ. ರೋಮರೋಮಗಳೂ ರೋಮಾಂಚನಗೊಂಡು ಮೈ ನವಿರೇಳುತ್ತಿವೆ. ಏನೋ ಪುಳಕ, ಅದೇನೋ ಆಕರ್ಷಣೆ, ಸೆಳೆತ, ಅನಿಯಂತ್ರಿತ ಭಾವಗಳು. ಪ್ರಮೀಳೆ ವಾಸ್ತವದಲ್ಲಿ ಇಲ್ಲ! ತಾನು ಯುದ್ಧಕ್ಕಾಗಿ ಬಂದಿದ್ದೇನೆ, ಒಂದು ದೇಶದ ರಾಣಿ, ಜವಾಬ್ದಾರಿಯ ಹೊಣೆಗಾರಿಕೆಯಿದೆ ಇದ್ಯಾವುದೂ ಆಕೆಯ ವಿವೇಕದಲ್ಲಿರದೆ ಮರೆಯಾಗಿದೆ. ಮೈಮನಗಳಲ್ಲಿ ಅರ್ಜುನನು ತುಂಬಿ ತುಳುಕಾಡುತ್ತಿದ್ದಾನೆ. ಉಸಿರು ಬಿಸಿಯೇರಿದೆ, ಕಾಮತೃಷೆ ಉತ್ಕರ್ಷೆಗೇರಿದೆ. ಆಹಾ! ಅರ್ಜುನನ ಮುಖ, ಕಂಗಳು, ಕೆಂದುಟಿಗಳು, ಬಲಯುತ ಬಾಹುಗಳು, ವಿಶಾಲ ಎದೆ, ನೀಳಕಾಯ, ಗಾಂಭೀರ್ಯದ ನಿಲುಮೆ… ಈತ ಬರಿದೆ ಪುರುಷನಲ್ಲ ಪುರುಷ ಸಿಂಹ. ಭ್ರಮಾಲೋಕದಲ್ಲಿ ಮೈಮರೆತಿದ್ದಾಳೆ.

ಇದೇನು ವಿಶೇಷವಲ್ಲ, ದೇವಲೋಕದ ಊರ್ವಶಿಗೆ ಪುಣ್ಯಪುರುಷರ ಕೊರತೆಯಿದೆಯೆ? ಅಷ್ಟಿದ್ದರೂ ಅರ್ಜುನನನ್ನು ನೋಡಿ ರೂಪ ಲಾವಣ್ಯ, ತೇಜಸ್ಸು, ಓಜಸ್ಸು, ಗಾಂಭಿರ್ಯಕ್ಕೆ ಮನಸೋತು ಕಾಮಭಿಕ್ಷೆ ಬೇಡಿರುವಾಗ ಈ ಪ್ರಮೀಳೆ ಮನಸೋತಿರುವುದೇನೂ ಅತಿಶಯವಲ್ಲ. ಆದರೆ ಜಿತೇಂದ್ರಿಯನಾದ ಅರ್ಜುನ ದೇವಕನ್ಯೆ ಸುರಸುಂದರಿ ಊರ್ವಶಿಯ ರೂಪಸಾಗರಕ್ಕೇ ಮನಸೋಲದೆ ಸ್ಥಿತಪ್ರಜ್ಞನಾಗಿ ಉಳಿದವನಲ್ಲವೆ? ಇಂದು ಪ್ರಮೀಳೆ ಪ್ರಣಯದ ಹುಚ್ಚಿಯಾಗಿ ನಕ್ಕರೂ, ಬಿನ್ನಾಣ ಬೀರಿದರೂ, ವೈಯಾರ ಬೆಡಗು ತೋರಿದರೂ ಸುಸ್ಥಿರ ಚಿತ್ತದ ಅರ್ಜುನ ಮರುಳಾದಾನೆ? ಹುಬ್ಬುಗಂಟಿಕ್ಕಿಕೊಂಡು, ತೀಕ್ಷ್ಣ ದೃಷ್ಟಿ ಬೀರುತ್ತಾ ನಿಂತನು.

ಪ್ರಮೀಳೆ ಸ್ತ್ರೀ ಸಹಜವಾದ ಕನಿಷ್ಠ ಮುಲಾಜು, ದಾಕ್ಷಿಣ್ಯ, ಲಜ್ಜೆ, ನಾಚಿಕೆ ಯಾವುದನ್ನೂ ಹೊಂದದೆ “ಅಯ್ಯಾ ಪಾರ್ಥಾ! ನಿನ್ನೊಡನೆ ಸಂಗರ ನನಗೆ ಬೇಕಾಗಿಲ್ಲ ನಿನ್ನ ಸಂಗವನ್ನು ಬಯಸಿರುವೆ. ನಿನ್ನ ಕುದುರೆಯನ್ನು ಬಿಟ್ಟು ಕೊಡುವೆ. ಆದರೆ ನೀನು ಮಾತ್ರ ನನ್ನನ್ನು ವರಿಸಿ ನಿನ್ನ ಸತಿಯಾಗಿಸಬೇಕು” ಎಂದು ಹೇಳಿ ಬಿಟ್ಟಳು. ಅರ್ಜುನನು “ಕುದುರೆಯನ್ನು ವ್ಯವಹಾರ ರೂಪದಲ್ಲಿ ಪಡೆಯಲು ಬಂದವನಲ್ಲ ನಾನು. ಅದು ಅಶ್ವಮೇಧ ಯಾಗದ ಕುದುರೆ. ಅದರ ಹಣೆಯಲ್ಲಿ ಲಿಖಿತವಿದೆ. ಅದರಂತೆ ಮುಂದುವರಿದರೆ ನಿನಗೆ ಮಾನ್ಯತೆ” ಎಂದು ಕಟುವಾಗಿ ಉತ್ತರಿಸಿದನು.

ಅರ್ಜುನನ ಮಾತು ಕೇಳಿಯೂ ಪ್ರಮೀಳೆ, “ಅಯ್ಯಾ ವೀರಾಗ್ರಣಿಯೇ, ಅದೇನು ಬೇಕಾದರೂ ಇರಲಿ. ನನಗೆ ಅನಗತ್ಯ ವಿಚಾರವದು. ನಮ್ಮಿಬ್ಬರ ವಿಚಾರದಲ್ಲಿ ಶರಯುದ್ಧ ಬೇಡ, ಶರೀರಯುದ್ದಕ್ಕೆ ನಾನು ಸಿದ್ಧಳಾಗಿದ್ದೇನೆ. ಸಮರದ ವಿಚಾರ ಮರೆತು ಸರಸದ ಬಗ್ಗೆ ಯೋಚಿಸು. ಒಲಿದು ಬಂದ ಹೆಣ್ಣನ್ನು ಧಿಕ್ಕರಿಸಬಾರದು ಎಂಬ ಶಾಸ್ತ್ರವಿದೆ. ನಾನು ನನ್ನ ಅಪೇಕ್ಷೆಯನ್ನು ನಿನ್ನಲ್ಲಿ ವ್ಯಕ್ತ ಪಡಿಸುತ್ತಿದ್ದೇನೆ, ಮನ್ನಿಸಬೇಕು” ಎಂದಳು.
ಅರ್ಜುನಾ “ಹೇ ಹೆಣ್ಣೇ! ನೀನು ಕೇಳಿದೆ ಎಂದ ಮಾತ್ರಕ್ಕೆ ಅದು ನನಗೆ ನಿನ್ನಿಂದ ಆಜ್ಞೆಯಾಗದು, ನಾನು ಸ್ವತಂತ್ರನಾಗಿರುವೆ. ಧರ್ಮಾಧರ್ಮದ ವಿವೇಕ ನನಗಿದೆ. ನೀನು ಕೇಳಿದೆ ಎಂದ ಮಾತ್ರಕ್ಕೆ ಅದನ್ನು ಪೂರೈಸಿಕೊಡಬೇಕೋ ಬಿಡಬೇಕೋ ಎಂಬುವುದನ್ನು ನಿರ್ಧರಿಸಬೇಕಾದವನು ನಾನು ಮತ್ತು ನನ್ನ ಇಚ್ಚೆಗೆ ಬಿಟ್ಟ ವಿಚಾರ. ರಣಾಂಗಣದಲ್ಲಿ ಬಂದು ನಿಂತು ಆಚರಿಸಬೇಕಾದುದು ಕ್ಷಾತ್ರಧರ್ಮ. ಅವಿವೇಕಿಯಾಗಿ ವ್ಯವಹರಿಸುವುದು ನಿನಗೆ ಭೂಷಣವಲ್ಲ” ಎಂದು ಎಚ್ಚರಿಸಿದನು.

“ಅರ್ಜುನಾ! ನಿನಗಾಗಿ ಸರ್ವತ್ಯಾಗಕ್ಕೂ ಸಿದ್ಧಳಾಗಿ ನಿಂತ ನನ್ನನ್ನು ಅಬಲೆ ಎಂದು ಭಾವಿಸದಿರು. ನನ್ನ ಅಪೇಕ್ಷೆ ಈಡೇರಿಸದೆ ಹೋದೆಯಾದರೆ ಯಾಗದ ತುರಗವನ್ನು ಯುದ್ಧ ಮಾಡಿ ಪಡೆಯಬೇಕಾದೀತು” ಎಂದು ಸವಾಲೆಸೆದಳು. “ಕುದುರೆಯ ಬೆಂಗಾವಲಿಗನಾಗಿ ಬಂದಿರುವುದು ಅದಕ್ಕಾಗಿ. ಯಾರಾದರು ಸಮರ್ಥರು ಕಟ್ಟಿ ಕಾದಾಟಕ್ಕೆ ನಿಂತರೆ, ಗೆದ್ದು ಕಪ್ಪ ಸಹಿತ ಕುದುರೆಯನ್ನು ಬಿಡಿಸಿಕೊಂಡು ಹೋಗುವುದಕ್ಕಾಗಿ ಬಂದಿದ್ದೇನೆ, ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ.” ಎಂದು ಅರ್ಜುನನೂ ಮಾರ್ನುಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page