26.9 C
Udupi
Sunday, May 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 358

ಭರತೇಶ ಶೆಟ್ಟಿ, ಎಕ್ಕಾರು

ದೇಹ ಶಕ್ತಿಯಿಂದ ಮೊಸಳೆಯೊಡನೆ ಹೋರಾಡಲಾಗದ ಯಾತ್ರಿಕ ಹೇಗೋ ಬುದ್ಧಿಬಲದಿಂದ ಮೊಸಳೆಯ ಬಾಯಿಂದ ತಪ್ಪಿಸಿಕೊಂಡು ಸರೋವರದಿಂದ ಮೇಲೆ ಬಂದನು. ಮೊಸಳೆ ಕಚ್ಚಿದ ನೋವು ಬಾಧಿಸುತ್ತಿತ್ತು. “ಈ ಸರೋವರದ ಜಲ ಸತ್ಪುರುಷರಿಗೆ ಸ್ನಾನಕ್ಕೆ ಯೋಗ್ಯವಾದುದಲ್ಲ. ಮಾನವರಿಗೆ ಸುರಕ್ಷೆಯೂ ಇಲ್ಲ. ನೀರನ್ನು ಬಳಸಿ ಬಾಯಾರಿಕೆ, ಶೌಚವನ್ನು ಬಯಸಿ ಬರುವ ಯಾರೇ ಆಗಲಿ, ಪ್ರಾಣಿಯೇ ಆಗಲಿ ಇಲ್ಲಿರುವ ಮೊಸಳೆಗಳಿಗೆ ಬಲಿಯಾಗುವುದು ಖಂಡಿತಾ. ಹಾಗಾಗಿ ಈ ಸರೋವರದ ಜಲ ಸ್ಪರ್ಶಿಸಿದೊಡನೆ ಹುಲಿಯಾಗಿ ಹೋಗಲಿ” ಎಂದು ಶಪಿಸಿ ಹೊರಟು ಹೋದನು. ದುಡುಕಿ ನೀಡಿದ ಶಾಪ ನೀರು ಬಳಸಲು ಬಂದವರಿಗೋ? ಅಲ್ಲ ನೀರಲ್ಲಿರುವ ಮೊಸಳೆಗಳ ಮೇಲೆ ಪ್ರತಿಕಾರವೋ! ಆ ಯಾತ್ರಿಕನಿಗೆ ಗೊತ್ತು, ಅಂತೂ ಸರೋವರ ಶಾಪಗ್ರಸ್ಥವಾಯಿತು.

ಪಾಂಡವರ ಯಾಗಾಶ್ವ ಅದೇ ದಾರಿಯಾಗಿ ಬಂದು ಸರೋವರ ಕಂಡು ನೀರು ಕುಡಿಯಲೆಂದು ಇಳಿದು ಮೂತಿಯಿಂದ ಸ್ಪರ್ಶ ಮಾಡಿದ್ದಷ್ಟೆ…! ಹುಲಿಯಾಗಿ ರೂಪಾಂತರ ಹೊಂದಿತು. ತಿರುಗಿ ಪಾರ್ಥನಿದ್ದಲ್ಲಿಗೆ ಓಡಿ ಬಂದಿತು. ಒಮ್ಮೆಗೆ ಸೈನ್ಯ ಹುಲಿ ಬಂದಿತೆಂದು ಹೆದರಿ ಸ್ವ ರಕ್ಷಣೆಗಾಗಿ ಅದರ ಮೇಲೆ ದಾಳಿ ಮಾಡಲು ಮುಂದಾದರೂ ಅದರ ಮೈಮೇಲಿದ್ದ ಪೋಷಾಕು, ಭೂಷಣಗಳು ಯಾಗಾಶ್ವದ ಮೈಮೇಲಿದ್ದ ವಸನಾಭರಣಗಳಾಗಿದ್ದ ಕಾರಣ ಗೊಂದಲಕ್ಕೊಳಗಾದರು. ಅರ್ಜುನನಿಗೆ ಮತ್ತೆ ಪರೀಕ್ಷೆ ಎದುರಾಯಿತು. ಇದೇನಿದು ಒಮ್ಮೆ ಹೆಣ್ಣು ಕುದುರೆಯಾಗಿ ಬದಲಾಯಿತು. ಈಗ ಹುಲಿಯಾಗಿದೆ. ಯಾಕೆ ಹೀಗಾಗುತ್ತಿದೆ ದೇವಾ? ನೀನೇ ದಾರಿ ತೋರಬೇಕು. ಹೇ ಆಪತ್ಬಾಂಧವಾ, ಲೋಕಪಾಲಕ ನೀನೇ ಪಾಲಿಸಬೇಕು. ಹೀಗೆ ತದೇಕಚಿತ್ತದಿಂದ ಕೃಷ್ಣನನ್ನು ಸ್ಮರಿಸಿ ಪ್ರಾರ್ಥಿಸತೊಡಗಿದನು. ಹಾಗೆ ಧ್ಯಾನಸ್ಥ ಸ್ಥಿತಿಯಲ್ಲಿ ರಥವಿಳಿದು ಹುಲಿಯ ಬಳಿ ಬಂದು ತಲೆ ನೇವರಿಸಿ, ಮೈಸವರಿದನು. ವಿಸ್ಮಯ ಎಂಬಂತೆ ಹುಲಿ ಮತ್ತೆ ಕುದುರೆಯಾಗಿ ಬದಲಾಯಿತು. ಅರ್ಜುನ ಮತ್ತೆ ಶ್ರೀಕೃಷ್ಣನನ್ನು ಸ್ಮರಿಸಿ ಧನ್ಯತೆಯಿಂದ ಕರಜೋಡಿಸಿ ಕೃತಜ್ಞತೆ ಸಲ್ಲಿಸಿದನು. “ಹೇ ಲೀಲಾ ಮಾನುಷನೇ, ಇದೇನು ಪದೇ ಪದೇ ಪರೀಕ್ಷೆ ಎದುರಾಗುತ್ತಿದೆ. ಸದಾ ನಿನ್ನ ಸ್ಮರಣೆಯಲ್ಲಿ ಇದ್ದು ಮುಂದುವರಿಯುತ್ತಿದ್ದೇನೆ. ಪರೋಕ್ಷನಾಗಿ ನೀನೇ ಸಲಹಬೇಕು” ಎಂದು ಮನಸಾರೆ ಬೇಡಿಕೊಂಡನು.
ಮತ್ತೆ ಯಾಗಾಶ್ವದ ಸಂಚಾರ ಆರಂಭವಾಯಿತು. ಸುದೀರ್ಘವಾದರೂ ಕ್ಷೇಮವಾಗಿ ದಟ್ಟಕಾನನಗಳನ್ನು ದಾಟಿ ಒಂದು ಬಯಲು ಪ್ರದೇಶದತ್ತ ಕುದುರೆ ಬಂದಿಳಿದು ಮುಂದೊತ್ತಿ ಸಾಗತೊಡಗಿತು. ಸಾಗುತ್ತಾ ಒಂದು ಪಟ್ಟಣದ ಸಮೀಪಕ್ಕೆ ಬಂದಿತು.

ಆ ಪುರವನ್ನು ನೋಡಿದರೆ ಬಹಳ ನಯನ ಮನೋಹರವಾಗಿ ಸಮೃದ್ಧವಾಗಿದೆ. ಆ ಪ್ರದೇಶದ ಕುರಿತಾಗಿ ಅರ್ಜುನನಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಜೊತೆಗಿದ್ದ ಹಿರಿಯನೂ, ಅನುಭವಿಯೂ ಆದ ಮಾಹಿಷ್ಮತಿಯ ಅರಸ ನೀಲಧ್ವಜನನ್ನು ಕರೆದು “ರಾಜನೇ, ಇದು ಯಾವ ರಾಜ್ಯ? ಏನು ಇಲ್ಲಿಯ ವಿಶೇಷ? ಇಲ್ಲಿಯ ರಾಜ ಯಾರು? ಆತನಿಗೆ ವಿಶೇಷ ಸಾಮರ್ಥ್ಯವೇನಾದರು ಇದೆಯೇ?” ಎಂದು ಪ್ರಶ್ನಿಸಿದನು.

ನೀಲಧ್ವಜನೂ ಬಹಳಷ್ಟು ತರ್ಕಿಸಿ “ಹೇ ಪಾರ್ಥಾ! ಈ ಪ್ರದೇಶಕ್ಕೆ ನಾನೂ ಮೊದಲ ಬಾರಿಗೆ ಬಂದವನಿದ್ದೇನೆ. ಪ್ರತ್ಯಕ್ಷವಾಗಿ ಈ ಪ್ರದೇಶದಲ್ಲಿ ನಾನು ಸುತ್ತಾಡದವನಾದರೂ, ಇಂತಹ ಒಂದು ರಾಜ್ಯದ ಬಗ್ಗೆ ಕೇಳಿ ತಿಳಿದವನಿದ್ದೇನೆ. ಇಲ್ಲೊಂದು ಸ್ತ್ರೀ ರಾಜ್ಯವಿದೆಯಂತೆ. ಇಲ್ಲಿ ಹೆಣ್ಣು ಎಂಬ ಒಂದು ಜಾತಿ ಬಿಟ್ಟರೆ ಪುರುಷ ಲಿಂಗಿಗಳಿಗೆ ಬದುಕಲು ಅವಕಾಶವಿಲ್ಲ. ಒಂದು ವೇಳೆ ಯಾರಾದರು ಪುರುಷರು ಅರಿಯದೆ ಈ ಪುರ ಪ್ರವೇಶ ಮಾಡಿದರೆ ಇಲ್ಲಿನ ಸ್ತ್ರೀಯರು ಬಂಧಿಸಿ ಕರೆದೊಯ್ದು, ಮನಬಂದಂತೆ ತಮ್ಮ ಆಸೆಗಳನ್ನು ತೀರಿಸಿಕೊಂಡು ಕೊನೆಗೆ ಕೊಂದು ತಿಂದು ಬಿಡುತ್ತಾರಂತೆ. ಇಲ್ಲಿನ ಸ್ತ್ರೀಯರು ಸಾಮಾನ್ಯರಲ್ಲ, ವಿಷಕನ್ಯೆಯರಂತೆ ಅವರನ್ನು ಮುಟ್ಟಿದ ಪುರುಷ ಕೆಲ ಸಮಯ ಕಳೆದಂತೆ ವಿಷವೇರಿ ಸಾಯುತ್ತಾರಂತೆ. ಹಾಗಾಗಿ ಪಾರ್ಥಾ, ನನ್ನದೊಂದು ಕೋರಿಕೆ, ಈ ರಾಜ್ಯ ಅಂತಹ ಸ್ತ್ರೀಯರ ಪಾರುಪತ್ಯದ ರಾಜ್ಯ ಹೌದೇ ಅಲ್ಲವೇ? ಎಂಬ ವಿಚಾರವನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನಿಜವೇ ಆದರೆ, ನಮ್ಮವರು, ನಮ್ಮ ಸೈನಿಕರು ಇಲ್ಲಿನ ಸ್ತ್ರೀಯರಿಗೆ ಮರುಳಾಗದೆ ಜಾಗೃತೆ ಮಾಡಿಕೊಳ್ಳಬೇಕು” ಎಂದು ಎಚ್ಚರಿಕೆಯ ಸಂದೇಶ ನೀಡಿದನು.

ನೋಡ ನೋಡುತ್ತಿದ್ದಂತೆಯೆ ಯಾಗಾಶ್ವದ ಕುದುರೆ ಪುರದ ದ್ವಾರ ದಾಟಿ ಪ್ರವೇಶ ಮಾಡಿ ಬಿಟ್ಟಿತು. ಅದೇ ಸಮಯ ಆ ಪುರದ ಮೋಹಕ ಸುಂದರಿಯರ ಬಳಗವೊಂದು ಅತ್ತ ಬಂದಿತು. ಪುರದ ದ್ವಾರದೊಳಗೆ ಸರ್ವಾಲಂಕೃತ ದಿವ್ಯ ತುರಗವನ್ನು, ಅನತಿ ದೂರದಲ್ಲಿ ಬಹುಸಂಖ್ಯೆಯ ಪುರುಷ ಸೇನೆಯನ್ನು ಕಂಡು ಅತಿ ಉಲ್ಲಾಸ, ಉತ್ಸಾಹಗೊಂಡರು. ಕಾಮೋದ್ರೇಕಕ್ಕೊಳಗಾಗಿ ಈ ಪುರುಷರನ್ನು ಸೆಳೆದು ತರಬೇಕು ಎಂದು ತೀರ್ಮಾನಿಸಿ ಮುಂದೆ ಮುಂದೆ ಬರತೊಡಗಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page