27.9 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 513

ಭರತೇಶ ಶೆಟ್ಟಿ, ಎಕ್ಕಾರು

ಅರ್ಜುನನು ಯಾಗಾಶ್ವದ ಬೆಂಗಾವಲಿಗೆ ಹೋಗಲು ನೇಮಕನಾದಾಗ ಆತನಿಗೆ ಜೊತೆಗಾರರಾಗಿ ಹೋಗಲು ಬಲಿಷ್ಠ ಸೇನಾಪಡೆಯ ನಿಯೋಜನೆಯೂ ಆಯಿತು. ಕರ್ಣನ ಮಗ ವೃಷಕೇತು, ಯಾದವರಾದ ಅನಿರುದ್ಧ, ಸಾಂಬ, ಅನುಸಾಲ್ವ, ಯವನಾಶ್ವನ ಮಗ ಸುವೇಗ, ಪಾಂಡವರ ಸೈನ್ಯ, ಯಾದವರ ಸೈನ್ಯ ಮತ್ತು ಯವನಾಶ್ವ ಮತ್ತು ಅನುಸಾಲ್ವನ ಸೇನೆ ಹೀಗೆ ನಾಲ್ಕು ಸೈನ್ಯಗಳೂ ಸೇರಿ ಬೃಹತ್ ಸೇನಾಬಲ ಯೋಜನೆಯಾಯಿತು. ಈ ನಾಲ್ಕು ಸೇನೆಗಳಿಗೆ ಒಬ್ಬ ನಿರ್ದೇಶನ ನೀಡಲು ನಾಯಕನಾಗಿ ಶ್ರೀಕೃಷ್ಣನ ಸುಪುತ್ರ ಪ್ರದ್ಯುಮ್ನ ನಿಯತಗೊಂಡನು. ಬೇಕು ಬೇಕಾದ ಆಯುಧಗಳು, ಅಸ್ತ್ರಗಳು ಬಂಡಿ ಬಂಡಿಗಳಲ್ಲಿ ಹೇರಲ್ಪಟ್ಟವು. ಅರ್ಜುನನಿಗಾಗಿ ಹರಿತವಾದ ಹಲವು ವಿಧದ ಅಲಗುಗಳುಳ್ಳ ಬಾಣಗಳು ಪ್ರತ್ಯೇಕವಾಗಿ ನೂರಾರು ಬಂಡಿಗಳಲ್ಲಿ ತುಂಬಿಸಿ ಸಿದ್ಧವಾದವು. ಯುದ್ಧ ಭೂಷಣದಲ್ಲಿ ಸರ್ವಾಲಂಕಾರ ವಿಭೂಷಿತನಾಗಿ ರಕ್ಷಾಕವಚಗಳನ್ನು, ಶಿರಸ್ತ್ರಾಣಾದಿಗಳನ್ನು, ಎಡ ಬಲ ಭುಜಗಳೆರಡಕ್ಕೂ ತುಂಬಿದ ಬತ್ತಳಿಕೆಗಳನ್ನು ಬಿಗಿದು ಕಟ್ಟಿಸಿಕೊಂಡು ಸವ್ಯಸಾಚಿ- ಧನುರ್ಧರ ಧನಂಜಯನು ಸಿದ್ಧನಾದನು. ಕ್ರಮದಂತೆ ಗುರು ಹಿರಿಯರಿಗೆ, ಅಣ್ಣ ಧರ್ಮರಾಯ ಮತ್ತು ಭೀಮನಿಗೆ, ಪರಮಾತ್ಮ ಶ್ರೀಕೃಷ್ಣನಿಗೆ ವಂದಿಸಿ ಅಶ್ವಮೇಧಯಾಗದ ಚೈತ್ರಯಾತ್ರೆಗೆ ಹೊರಡಲು ಸನ್ನದ್ಧನಾದನು. ಕುದುರೆಯನ್ನು ತಿರುಗಾಟಕ್ಕೆ ಬಿಡಲು ಅಪ್ಪಣೆ ಕೇಳಿದನು.

ದಿವ್ಯಾಶ್ವ ಸರ್ವಾಂಗಗಳಿಗೂ ಕನಕಾಭರಣ ಭೂಷಿತವಾಗಿ ಕಂಗೊಳಿಸುತ್ತಾ ಇತ್ತು. ಅಶ್ವ ರಕ್ಷಣಾ ಭಟರು ಅದನ್ನು ಕರೆತಂದು ಯಜ್ಞ ಕುಂಡಕ್ಕೆ ಪ್ರದಕ್ಷಿಣೆ ಮಾಡಿಸಿದರು. ಬಂಧನ ಮುಕ್ತಗೊಳಿಸಿದ ಕುದುರೆ ವಿಪ್ರಸ್ತೋಮದ ಮಂತ್ರಘೋಷವಾಗುತ್ತಿದ್ದಂತೆ ಸುದೀರ್ಘ ಒಂದು ವರ್ಷಕಾಲ ದೇಶ ದೇಶ ತಿರುಗಲು ಹೊರಟಿತು. ಕುದುರೆಯ ರಕ್ಷಣಾ ಭಟರು ಅದಕ್ಕೆ ಬೇಕಾಗುವ ಆಹಾರ, ಹಿಂಡಿ ಇತ್ಯಾದಿ ಆಹಾರಗಳನ್ನೂ ತುಂಬಿಕೊಂಡು ಹೊರಟರು.

ಹೀಗೆ ಪೂಜಿಸಿ ಬಿಟ್ಟ ಯಾಗಾಶ್ವ ಹೊರಡುವಾಗ ಶಂಖ, ಅನಕ, ಗೋಮುಖ, ಪಟಹ, ವೀಣೆ, ವೇಣು, ಮೃದಂಗ, ಕಹಳೆಯಾದಿ ಮಂಗಳ ವಾದ್ಯ ವಿಶೇಷಗಳು ಮೊಳಗಿಸಲ್ಪಡುತ್ತಿವೆ. ದಶದಿಕ್ಕುಗಳಲ್ಲೂ ನಿನಾದ ರಿಂಗಣಿಸತೊಡಗಿದೆ. ಪಾಂಡವರ ಅಶ್ವಮೇಧದ ಕುದುರೆ ತೆಂಕು ಮುಖವಾಗಿ ಮುಂದುವರಿಯಿತು. ಸಮುದ್ರದ ಘರ್ಜನೆಯಂತೆ ಉತ್ಸಾಹಪೂರ್ವಕವಾಗಿ ಸೈನ್ಯಗಳು ಸಿಂಹನಾದ ಮಾಡುತ್ತಾ ಹೊರಟಿತು. ಸೇನೆಯಲ್ಲಿ ಅರ್ಜುನಾದಿ ವೀರಪುರುಷರು ಹಿಂಬಾಲಿಸಿ ಹೊರಟರು.

ಯಜ್ಞಾಶ್ವ ಇನ್ನು ಮುಕ್ತವಾಗಿ ತಿರುಗಾಡಲು ಸ್ವೇಚ್ಛೆಯನ್ನು ಪಡೆದಿದೆ. ರಕ್ಷಕರು ಅದು ಹೋದ ಕಡೆ ಹೋದ ಕಡೆ ಹಿಂಬಾಲಿಸಿ ಅನುಸರಿಸಬೇಕು. ಅದಕ್ಕೆ ಬೇಕಾದುದನ್ನು ಇಚ್ಚೆಯಿಂದ ಮೇಯಬಹುದು. ಅದು ಆ ರಾಜ್ಯದ ರಾಜನ ಉದ್ಯಾನವನವಾದರು ಸರಿ, ಕೃಷಿಕರು ಬೆಳೆದ ಬೆಳೆಯಾದರು ಸರಿ. ಯಾರೂ ಆಕ್ಷೇಪಿಸುವಂತಿಲ್ಲ. ಒಂದು ವೇಳೆ ಆಕ್ಷೇಪಿಸಿ ಕಟ್ಟಿ ಹಾಕುವುದು ಹೌದಾದರೆ ಬೆಂಗಾವಲಿಗೆ ಬಂದ ಸೇನೆಯೊಡನೆ ಯುದ್ದಕ್ಕೆ ಸಜ್ಜಾಗಿರಬೇಕು. ಇಲ್ಲ ಯಾಗಕ್ಕೆ ಕಪ್ಪ ಕಾಣಿಕೆ ನೀಡಿ ಧರ್ಮಕಾರ್ಯಕ್ಕೆ ಶರಣಾಗತರಾಗಬೇಕು. ಇದು ಅಶ್ವಮೇಧ ಯಾಗದ ನಿಯಮ.

ಹೀಗೆ ಮುಕ್ತ ಸಂಚಾರಕ್ಕೆ ಹೊರಟ ಕುದುರೆ ಮುಂದೆ ಮುಂದೆ ಸಾಗುತ್ತಾ ಹಸ್ತಿನಾವತಿಯ ಗಡಿಯನ್ನು ದಾಟಿ ಉತ್ತರದ ಮಾಹಿಷ್ಮತಿ ನಗರವನ್ನು ಪ್ರವೇಶಿಸಿತು. ಮಾಹಿಷ್ಮತಿಯನ್ನು ವರ್ತಮಾನ ಕಾಲದಲ್ಲಿ ನೀಲಧ್ವಜನೆಂಬ ಅಜೇಯನೂ ಪ್ರಬಲನೂ ಧರ್ಮಾತ್ಮನೂ ಆದ ರಾಜ ಆಳ್ವಿಕೆ ಮಾಡುತ್ತಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page