ಭಾಗ – 512
ಭರತೇಶ ಶೆಟ್ಟಿ,ಎಕ್ಕಾರು

“ಪ್ರಭಾವತೀ! ನನ್ನ ಪರಿಸ್ಥಿತಿ ಹೇಗಿದೆ? ರಾಜಧರ್ಮ ಪಾಲನೆ – ಎಷ್ಟು ನಿಷ್ಠೆ ಹಾಗು ನಿಷ್ಠುರದ ಕಾರ್ಯ? ಎಂದು ನೀನು ತಿಳಿಯದವಳಲ್ಲ. ನನ್ನ ಪತ್ನಿ ಆಗಿರುವ ನಿನ್ನ ಜೊತೆ ವಿಲಾಸಿಯಾಗಿ ಸುಖ ಅನುಭವಿಸುತ್ತಾ ಕಳೆಯಬಹುದಾದ ಕಾಲ ಇದಲ್ಲ. ನನ್ನ ತಂದೆ ಚಂಪಕಾವತಿಯ ಮಹಾರಾಜ ಹಂಸಧ್ವಜ ಪ್ರಭುಗಳು ಈಗಾಗಲೆ ರಣಭೂಮಿಗೆ ತೆರಳಿಯಾಗಿದೆ. ಇನ್ನುಳಿದಿರುವ ಸೇನೆ, ರಥ, ಆಯುಧಾದಿಗಳನ್ನು ಕೂಡಿಕೊಂಡು ಶೀಘ್ರವಾಗಿ ಬರುವಂತೆ ನನಗೆ ಆಜ್ಞೆ ಮಾಡಿದ್ದಾರೆ. ಅವರಿಂದ ಪಿತನಾಗಿ ಪಿತನಾಜ್ಞೆ, ರಾಜನಾಗಿ ರಾಜಾಜ್ಞೆ ಇದು ಎರಡನ್ನೂ ಯಾವ ಕಾರಣಕ್ಕೂ ಮೀರುವ ಅಧಿಕಾರ ನನಗಿಲ್ಲ. ಆಜ್ಞೆ ಪಾಲಿಸಿ ಹಾಗೆಯೆ ವ್ಯವಹರಿಸಬೇಕಾದುದು ಧರ್ಮ ಎಂಬ ಪ್ರಜ್ಞೆಯೂ ನನಗಿದೆ. ಚಂಪಕಾವತಿಯ ಸೇನಾಪತಿಯಾಗಿ ಸಕಾಲದಲ್ಲಿ ಉಪಸ್ಥಿತನಾಗದಿದ್ದರೆ ಕಾರ್ಯಭಾಗ ಕೆಟ್ಟು ಹೋದೀತು.
ಹಾಗೆಂದು ನೀನು ನನ್ನ ಅರ್ಧಾಂಗಿ ಮಾತ್ರವಲ್ಲ ಧರ್ಮಪತ್ನಿಯೂ ಹೌದು. ನನ್ನ ಜವಾಬ್ದಾರಿ ಹಾಗು ಧರ್ಮಪಾಲನೆಯಲ್ಲಿ ಸಹಕರಿಸಬೇಕಾದ ಸಮ ಅರ್ಧ ಹೊಣೆಗಾರಿಕೆ ನಿನಗಿದೆ ಎಂಬುವುದು ಸತ್ಯ. ಅದನ್ನರಿತು ಉಪದ್ರವಿಸದೆ ನನ್ನ ದಾರಿಯನ್ನು ಸುಗಮಗೊಳಿಸಿ ಸಂತೋಷದಿಂದ ಬೀಳ್ಗೊಡಬೇಕು” ಎಂದು ಸುಧನ್ವ ವಿನಂತಿ ಮಾಡಿದನು.
“ಸ್ವಾಮೀ! ಈಗಾಗಲೇ ನಾನು ನನ್ನ ಉದ್ದೇಶ ಮತ್ತು ಅಗತ್ಯದ ಬಗ್ಗೆ ಸವಿವರವಾಗಿ ನಿಮಗೆ ತಿಳಿಸಿದ್ದೇನೆ. ಕೇವಲ ದೇಹಸುಖಕ್ಕಾಗಿ ಅಥವಾ ಕಾಮಾತುರಳಾಗಿ ನಿಮ್ಮನ್ನು ಕಾಡಿಸುತ್ತಿಲ್ಲ. ಅಂತಹ ವಿಕೃತೆಯೂ ನಾನಲ್ಲ. ಜೀವನ್ಮರಣ ಸಂಶಯಿತವಾಗಿರುವ ಸಮರೋದ್ಯೋಗಕ್ಕೆ ಮುಖಮಾಡಿರುವ ವೀರ ಪತಿಯಲ್ಲಿ ಕಾಮಭಿಕ್ಷೆ ಬೇಡಬಾರದು ಎಂಬ ಸಂಸ್ಕೃತಿಯ ವಿವೇಕ ನನಗಿದೆ. ಆದರೆ ಯುದ್ದದಲ್ಲಿ ಭಾಗಿಯಾಗುವವನಿಗೆ ಸೋಲು ಮತ್ತು ಗೆಲುವು ಎರಡರಲ್ಲಿ ಯಾವುದೂ ಪ್ರಾಪ್ತವಾಗಬಹುದು. ಸೋಲು ಬಂದೊದಗಿದರೆ ಕ್ಷತ್ರಿಯನಾದವ ಸಹಿಸಲಾರ, ಆ ಕ್ಷಣ ಅದಕ್ಕಿಂತ ಸಾವು ಶ್ರೇಷ್ಠವಾಗಿ ಕಾಣಿಸುತ್ತದೆ. ಕಾರಣ ಕ್ಷತ್ರಿಯ ವೀರನಿಗೆ ಪ್ರಾಣಕ್ಕಿಂತ ಮಾನ ಅಮೂಲ್ಯವಾಗಿರುತ್ತದೆ. ಸೋಲಿನಿಂದ ಅಪಮಾನವಾದರೆ ಸಾಯುವವರೆಗೂ ಹೋರಾಡಿ ವೀರಸ್ವರ್ಗ ಪಡೆಯುವುದನ್ನು ಬಯಸುವುದು ಕ್ಷಾತ್ರಧರ್ಮವಲ್ಲವೆ? ಈಗ ನಮಗೆ ಎದುರಾಗಿರುವ ಇದಿರಾಳಿಗಳು ಯಾರು? ಪರಮಾತ್ಮ ಶ್ರೀಕೃಷ್ಣ ಮತ್ತು ಅಮಿತ ವಿಕ್ರಮಿ ಅರ್ಜುನ. ಇವರಿಬ್ಬರು ಎಂದೂ ಪರಾಭವ ಕಂಡದ್ದಿಲ್ಲ. ಹಾಗಾಗಿ ನಾನೀಗ ಓರ್ವ ಕ್ಷಾತ್ರಯಾನಿಯಾಗಿ ಮುಂದಾಲೋಚನೆ ಮಾಡಬೇಕಾಗಿ ಬಂತು. ಕಾಲದ ಕೈಗೊಂಬೆಯಾಗಿ ನಿಮಗೆ ಅಂತಹ ವಿಪರೀತ ಸ್ಥಿತಿ ಒದಗಿದರೆ ವೀರಮರಣದಿಂದ ಸ್ವರ್ಗ ದಕ್ಕಿದರೂ, ಮೋಕ್ಷ ಸಾಧನವಾಗದು. ಸದ್ಗತಿ ಕರುಣಿಸಲು ನಮಗೆ ಸಂತಾನವಿಲ್ಲ. ನಿಮ್ಮ ಮೋಕ್ಷ ಮಾರ್ಗ ನಿರಾತಂಕವಾಗುವಂತೆ ಮಾಡಲು ಋತುದಾನ ಪಡೆಯುವುದು ಧರ್ಮಪತ್ನಿಯಾಗಿ ನನಗೆ ಅವಶ್ಯ – ಅತ್ಯಾವಶ್ಯ ಧರ್ಮ ಆಗಿಬಿಟ್ಟಿದೆ. ಯಾಕೆಂದರೆ ನಾಳೆ ಆ ಬಗ್ಗೆ ಯೋಚಿಸೋಣ ಎನ್ನೋಣವೆ? ಆ ಭಾಗ್ಯ ನಾಳೆಯ ದಿನ ಇಲ್ಲದೆ ಹೋದರೆ! ಆಗ ಚಿಂತಿಸಿ ಏನಾದರು ಫಲವಾಗಲಿದೆಯೆ? ಧರ್ಮ ಮೀರಿ ಹೆಜ್ಜೆ ಇಡುವವಳು ನಾನಲ್ಲ, ಹಾಗೆಂದು ನಿಮ್ಮಿಂದ ಅಧರ್ಮ ಮಾಡಿಸುವವಳೂ ನಾನಲ್ಲ. ಧರ್ಮ ಪಾಲನೆ ಮತ್ತು ಮೋಕ್ಷಸಾಧನೆಯ ಏಕೈಕ ಲಕ್ಷ್ಯದಿಂದ ನಿಮ್ಮಲ್ಲಿ ಬೇಡುತ್ತಿರುವ ಸಂತಾನ ಹೇತುವಾದ ಋತುದಾನ ಮಾಡದೆ ಎನ್ನ ಪತಿದೇವರಾದ ನಿಮ್ಮನ್ನು ಹೋಗಗೊಡಲಾರೆ” ಎಂದು ಬರಸೆಳೆದು ಬಿಗಿದಪ್ಪಿ ಹಿಡಿದಳು.
ಸುಧನ್ವನಿಗೀಗ ಒಳ್ಳೆಯ ಧರ್ಮಸಂಕಟ ಎದುರಾಗಿದೆ. ತನ್ನ ಹೆಂಡತಿ ಹೇಳುತ್ತಿರುವುದು ನ್ಯಾಯ ಸಮ್ಮತವಾಗಿದೆ. ಒಂದೆಡೆ ಪಿತೃ ವಾಕ್ಯ ಪರಿಪಾಲನೆ ಯ ಹೊಣೆಗಾರಿಕೆ, ಅದರೆಡೆಯಲ್ಲಿ ತಾನು ಬಯಸಿ ತಪಸ್ಸಿನಂದದಿ ಭಕ್ತಿ ಮತ್ತು ಮನಸ್ಸು ಎರಡನ್ನೂ ಸ್ಥಿತಗೊಳಿಸಿ ಕಾತರಿಸುತ್ತಿರುವ ಶ್ರೀಹರಿಯ ದರ್ಶನ ಭಾಗ್ಯ, ಮತ್ತೊಂದೆಡೆ ಪತ್ನಿ ಬೇಡುತ್ತಿರುವ ಗರ್ಭಧಾನ. ಈ ಮೂರರಲ್ಲಿ ಯಾವುದನ್ನೂ ತಿರಸ್ಕರಿಸುವಂತಿಲ್ಲ. ಅತ್ಯಗತ್ಯವೂ ಆಗಿರುವ ಈ ಮೂರು ಕಾಯಕಗಳನ್ನೂ ಪೂರೈಸಲು ಅವಕಾಶವಿಲ್ಲದೆ ಹೋಗಿರುವುದು ಸಂಕಟಕ್ಕೆ ಕಾರಣವಾಗಿದೆ. ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರ ಹೇಗೆ? ಬಲ್ಲವರಲ್ಲಿ ಕೇಳಿ ತಿಳಿಯೋಣವೆ? ಈ ಅಪರಾತ್ರಿಯ ಹೊತ್ತು ಮಂತ್ರಿಗಳ ಜೊತೆ ಸಮಾಲೋಚನೆಗೆ ಯುಕ್ತ ಸಮಯವಲ್ಲ. ಸರಿ ನಾಳೆ ವಿವೇಚಿಸಿ ಮುಂದಾಗೋಣವೆ? ಅಂತಹ ಅವಧಿ ತನ್ನ ನಿಯಂತ್ರಣದಲ್ಲಿಲ್ಲ – ಸಮರದಲ್ಲಿ ಗೆದ್ದರೆ ಗೆಲುವು, ಸೋತರೆ ಸಾವು ನಿಶ್ಚಿತ. ಹಾಗಿರುವಾಗ ಸೂಕ್ತ ದಾರಿಯನ್ನು ತಾನು ತಿಳಿದಿರುವ ಸ್ವಂತ ಜ್ಞಾನದಿಂದ ಹುಡುಕಿಕೊಳ್ಳಬೇಕು. “ಹೇ ಪರಮಾತ್ಮಾ! ನೀನು ಜಗತ್ತನ್ನು ಪಾಲಿಸುವ ಜಗನ್ನಾಥ, ನೀನೇ ಬುದ್ಧಿಗೆ ಪ್ರೇರಕನಾಗಿ ಬರಬೇಕು. ನಿನ್ನನ್ನು ಜೀವನದ ಪ್ರತಿ ಹೆಜ್ಜೆ, ಪ್ರತಿ ಉಸಿರಿನಲ್ಲೂ ಸರ್ವಸ್ವವಾಗಿ ಆರಾಧಿಸುತ್ತಾ ಬಂದಿರುವ ನನಗೆ ಜ್ಞಾನಜ್ಯೋತಿಯಾಗಿ ಒಲಿದು ಬಾ ದೇವರೇ… ” ಎಂದು ಮನಸಾರೆ ಸ್ತುತಿಸಿ ಕರ ಜೋಡಿಸಿದನು. ಆಗ ಸುಧನ್ವನಿಗೆ ಒಂದು ವಿಚಾರ ಸ್ಮರಣೆಗೆ ಬಂತು…
ಪಿತೃಶ್ರಾದ್ಧವನ್ನು ಉಲ್ಲಂಘಿಸಿ ಅನ್ಯ ಯಾವ ಕಾರ್ಯವನ್ನೂ ಮಾಡಬಾರದು ಎಂಬುವುದು ಶಾಸ್ತ್ರ. ವಿಧಿವತ್ತಾಗಿ, ಭಕ್ತಿ ಪುರಸ್ಸರವಾಗಿ ಶ್ರಾದ್ಧವನ್ನು ಪೂರೈಸಿ ಸುತನಾದವ ಶೇಷಾನ್ನವನ್ನು ಉಣ್ಣಬೇಕಾದುದು ಧರ್ಮ.
ಪರಮ ವೈಷ್ಣವರಾದವರಿಗೆ ಏಕಾದಶಿ ಪವಿತ್ರ ವ್ರತ ಆಚರಿಸುವ ದಿನ. ಭಗವಂತನ ದಿವ್ಯ ಸ್ಮರಣೆ ಮಾಡುತ್ತಾ, ನಿತ್ಯ ವಾಸದ ಜೀವನ ಕ್ರಮವನ್ನು ತ್ಯಜಿಸಿ ಏಕಾದಶಿಯ ದಿನ ಭಗವಂತನ ಜೊತೆ ವಾಸಿಸುವ ಉಪ ಜೀವನ ಕ್ರಮ ಉಪವಾಸ. ಅಂದರೆ ಸಂಸಾರ, ಪತ್ನಿ, ರಾಜಕೀಯ ಯಾವುದಕ್ಕೂ ಮನ ಮಾಡದೆ ಅಂತಹ ಜೀವನದಿಂದ ವಿಮುಖನಾಗಿದ್ದು, ಆ ದಿನ ಅನ್ನಪಾನಾದಿ ಆಹಾರಗಳನ್ನು ಸ್ವೀಕರಿಸದೆ ನಿರಾಹಾರಿಯಾಗಿದ್ದು ಕೇವಲ ಭಗವದ್ಧ್ಯಾನ, ಸತ್ಕರ್ಮ, ದಾನ ಧರ್ಮಾದಿಗಳನ್ನು ಮಾಡುತ್ತಾ ಕಾಲ ಕಳೆಯುವ ವಿಭಿನ್ನ ವಾಸ ಕ್ರಮ ಉಪವಾಸ.
ಪತ್ನಿ ಋತುಸ್ನಾತೆಯಾಗಿ ಹದಿನಾರನೇ ದಿನ ಫಲವತಿಯಾಗಿರುವ ಸಮಯ ಪತಿಸಂಗವನ್ನು ಆಕೆ ಬಯಸಿದರೆ, ಪತಿಯಾದವ ಪತ್ನಿಯ ಆಸೆ ಪೂರೈಸ ಬೇಕಾದುದು ಪತೀಧರ್ಮ. ಋತುದಾನ ಮುಖೇನ ಗರ್ಭದೀಕ್ಷೆ ಕೈಗೊಂಡು ಸುಸಂತಾನವನ್ನು ಬಯಸಿ ಆತ ಮುಂದುವರಿಯಬೇಕು ಎಂಬುವುದೇ ವಿಹಿತ ಶಾಸ್ತ್ರ.
ಪಿತೃಶ್ರಾದ್ಧ, ಏಕಾದಶಿ, ಗರ್ಭದಾನ ಈ ಮೂರು ಆಚರಿಸಬೇಕಾದ ವಿಹಿತ ಧರ್ಮಗಳು. ಆದರೆ ಈ ಮೂರೂ ಒಂದೇ ದಿನ ಬಂದೊದಗಿ ಬಿಟ್ಟರೆ ಆಗ ನಿರ್ವಾಹ ಕ್ರಮ ಹೇಗೆ? ಅಂತಹ ಸಂಧಿಗ್ಧತೆಗೆ ಪರಿಹಾರ ಯಾವ ರೀತಿ? ಶಾಸ್ತ್ರೋಚಿತವಾಗಿ ಈ ಮೂರನ್ನೂ ಪಾಲಿಸಲು ಅವಕಾಶ ನೀಡಿದೆ. ಹೇಗೆಂದರೆ ಪಿತೃಶ್ರಾದ್ದದ ಎಲ್ಲಾ ಕ್ರಮಗಳನ್ನು ನೆರವೇರಿಸಿ ಪಿತೃತರ್ಪಣವಿತ್ತು ಸಂತರ್ಪಣೆ ನಡೆಸಬೇಕು. ಕೊನೆಗೆ ಶೇಷಾನ್ನವನ್ನು ಉಣ್ಣಬೇಕಾದ ಸಮಯ ಏಕಾದಶಿ ವೃತ ಪಾಲನೆ ಮಾಡಲಿರುವುದರಿಂದ ಶೇಷಾನ್ನವನ್ನು ಬಾಯಿಯಲ್ಲಿ ಉಣ್ಣುವ ಬದಲು ಮೂಗಿನಿಂದ ಆಘ್ರಾಣಿಸಿ ಪರಿಮಳವನ್ನು ಸೇವಿಸಬೇಕು. ಹಾಗೆ ಮಾಡುವುದರಿಂದ ಶೇಷಾನ್ನ ಸ್ವೀಕರಿಸಬೇಕಾದ ಪಿತೃಶ್ರಾದ್ಧದ ನಿಯಮಕ್ಕೂ, ನಿರಾಹಾರಿಯಾಗಿದ್ದು ಉಪವಾಸ ಮಾಡಬೇಕಾದ ಏಕಾದಶಿ ವ್ರತಕ್ಕೂ ತೊಡಕಾಗದು. ಇನ್ನು ವ್ರತ ನಿಷ್ಠನಾಗಿರುವ ಸಮಯ ಪತ್ನಿಯ ಜೊತೆ ವಾಸ ನಿಷಿದ್ಧ. ಹಾಗಿದ್ದರೆ ಋತುಸ್ನಾತೆಯಾದ ಮಡದಿಗೆ ಗರ್ಭದಾನ ಮಾಡಬೇಕಲ್ಲವೆ? ಅದಕ್ಕೆ ಶಾಸ್ತ್ರೋಚಿತ ಮಾರ್ಗ ಏನೆಂದರೆ, ಮಧ್ಯರಾತ್ರಿ ಕಳೆದ ಬಳಿಕ ಪತ್ನಿಯನ್ನು ಕೂಡಿ ಒಂದಾಗಿ ಗರ್ಭದಾನ ಮಾಡಿದರೆ ನಿರ್ದೋಷವಾಗಿ ಮೂರೂ ಕಾರ್ಯ ಕ್ರಮಸಹಿತವಾಗಿ, ಧರ್ಮಸಮ್ಮತವಾಗಿ ನೆರವೇರುತ್ತದೆ.
ಈಗ ನನಗೆ ಪಿತೃ ಶ್ರಾದ್ಧದಂತೆ ಪಿತೃವಾಕ್ಯ ಪರಿಪಾಲನೆ, ಏಕಾದಶಿ ವ್ರತಕ್ಕೂ ಅಧಿಕ ಶೃದ್ಧೆಯ ಶ್ರೀಹರಿದರ್ಶನ, ಮತ್ತು ಪತ್ನಿ ಬಯಸಿ ಬೇಡಿರುವ ಸಂತಾನಕ್ಕಾಗಿ ಋತುದಾನ ಈ ಮೂರನ್ನೂ ಏಕಕಾಲದಲ್ಲಿ ಪಾಲಿಸಲು ಧರ್ಮಸಹಿತವಾದ ದಾರಿ ಕಾಣಿಸುತ್ತಿದೆ. ಇಂದಿನ ರಾತ್ರಿ ಯುದ್ಧವಾಗದು. ಏನಿದ್ದರೂ ಸೇನಾಸಹಿತರಾಗಿ ಮಹಾರಾಜರೂ ರಾತ್ರಿಯ ಸಮಯ ಮಲಗಿ ವಿಶ್ರಾಂತರಾಗಿರ ಬೇಕು. ಯುದ್ಧಕ್ಕೆ ನನ್ನ ಅಗತ್ಯವೇನಿದ್ದರೂ ಅರುಣೋದಯದ ಬಳಿಕ. ಹಾಗಾಗಿ ಇಂದಿನ ಮಧ್ಯರಾತ್ರಿ ಕಳೆದು ಪತ್ನಿ ಪ್ರಭಾವತಿಯನ್ನು ಕೂಡಿ ಆಕೆ ಬಯಸಿರುವ, ನನಗೂ ಮೋಕ್ಷದಾಯಕವಾದ ಗರ್ಭದಾನವಿತ್ತು, ಅರುಣೋದಯಕ್ಕೂ ಮೊದಲು ಸೇನಾ ಬಿಡಾರ ಸೇರಿಕೊಳ್ಳುತ್ತೇನೆ. ಆಗ ತನಗೆದುರಾಗಿರುವ ಮೂರು ಕರ್ತವ್ಯಗಳನ್ನೂ ಪಾಲಿಸಿದಂತಾಗುತ್ತದೆ.
ಹೀಗೆಂದು ತರ್ಕಿಸಿ ಸುದೀರ್ಘ ಉಸಿರೆಳೆದು ಬಿಟ್ಟ ಸುಧನ್ವ “ಹೇ ಪ್ರಭಾವತಿ! ನಿನ್ನ ಕೋರಿಕೆ ನಿಸ್ವಾರ್ಥವೂ, ನಿಷ್ಕಾಮ ಕರ್ಮವೂ ಆಗಿದೆ. ಮಾತ್ರವಲ್ಲ ಆಚರಿಸ ಬೇಕಾದ ಯುಕ್ತ ಧರ್ಮವೂ ಆಗಿದೆ. ಹಾಗಾಗಿ ಇಂದಿನ ರಾತ್ರಿ ನಿನ್ನ ಜೊತೆಗಿದ್ದು ನೀನು ಬೇಡುತ್ತಿರುವ ದಾನ ನೀಡುತ್ತೇನೆ. ಅದಾದ ಕೂಡಲೆ, ಪಿತನ ಆದೇಶದಂತೆ ಹೋಗಿ ಸೇನೆಯ ಜೊತೆ ಸೇರುತ್ತೇನೆ. ನನ್ನ ಮಹದಾಸೆಯಾದ ನನ್ನ ಆರಾಧ್ಯ ಶ್ರೀಕೃಷ್ಣನ ದರುಶನ ಭಾಗ್ಯಕ್ಕಾಗಿ ಸಂಗ್ರಾಮ ಎಂಬ ಮಹಾಪೂಜೆಯನ್ನು ಶ್ರದ್ಧಾ ಭಕ್ತಿಯನ್ನು ಶಕ್ತಿಯಾಗಿಸಿ ವಿರಚಿಸುತ್ತೇನೆ. ಈಗ ಎದ್ದೇಳು ಬಾ” ಎಂದು ಹೇಳಿ ಪತ್ನಿ ಪ್ರಭಾವತಿಯನ್ನು ಎತ್ತಿ ಬಿಗಿದಪ್ಪಿ ಅಂತಃಪುರ ಸೇರಿದನು.
ಹಂಸಧ್ವಜ ಸೇನೆಯನ್ನೆಲ್ಲಾ ಸಜ್ಜುಗೊಳಿಸಿ, ರಣತಂತ್ರ ಚರ್ಚಿಸಲು ಸೇನಾಧ್ಯಕ್ಷ ಸುಧನ್ವ ಎಲ್ಲಿ ಎಂದು ಹುಡುಕಿದರೂ ಕಾಣಿಸುತ್ತಿಲ್ಲ. ಆತ ಎಲ್ಲಿ ಹೋದ ಹುಡುಕಿ ಕರೆತನ್ನಿ ಎಂಬಂತೆ ರಾಜಾಜ್ಞೆಯಾಯಿತು.
ಮುಂದುವರಿಯುವುದು…



















