ಭಾಗ – 44
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೪೪ ಮಹಾಭಾರತ
ಹೀಗೆ ಹುಟ್ಟಿದ ಮಕ್ಕಳು ಬೆಳೆದು ಬಾಲಕರಿಂದ ಯುವಕರಾದರು. ಹಸ್ತಿನಾವತಿಯ ಸಿಂಹಾಸನ ಬಹುವರ್ಷಗಳಿಂದ ಬರಿದಾಗಿಯೇ ಇತ್ತು. ಭೀಷ್ಮನ ಸಮರ್ಥ ನಿರ್ವಹಣೆಯಿಂದಾಗಿ ಅರಾಜಕತೆ ತಲೆದೋರಿರಲಿಲ್ಲ. ಈಗ ಮೂವರೂ ಯುವಕರಾಗಿ ಯೋಗ್ಯ ಶಿಕ್ಷಣ ಪಡೆದಿದ್ದಾರೆ. ಆಸ್ಥಾನದಲ್ಲಿ ಅಭಿಷಿಕ್ತ ರಾಜ ಬೇಕೆಂದೂ, ಅದಕ್ಕೆ ಸಕಾಲ ಕೂಡಿ ಬಂದಿದೆಯೆಂದೂ ಪ್ರಾಜ್ಞರ ಅಭಿಪ್ರಾಯವಾಯಿತು. ಮೂವರಲ್ಲಿ ಯಾರಾಗಬಹುದೆಂಬ ಆಯ್ಕೆ ತುಸು ಜಟಿಲವಾಗಿಯೇ ಇತ್ತು. ಕಾರಣ ಧರ್ಮಿಷ್ಟನಾದರೂ ವಿದುರ ದಾಸೀಪುತ್ರ. ಹಿರಿಯವ ಧೃತರಾಷ್ಟ್ರ ಹುಟ್ಟು ಕುರುಡ. ಅಂಗವಿಕಲ ಪಟ್ಟಾಧಿಕಾರಕ್ಕೆ ಅನರ್ಹ. ಹಾಗಾಗಿ ರೋಗಗ್ರಸ್ತನಾದರೂ ಮಧ್ಯಮ ಅರ್ಹತೆ ಹೊಂದಿದ್ದ ಪಾಂಡುವಿಗೆ ಹಸ್ತಿನಾವತಿಯ ಪಟ್ಟಾಭಿಷೇಕವಾಯಿತು.
ಹಿರಿಯ ರಾಜಕುಮಾರ ಧೃತರಾಷ್ಟ್ರನಿಗೆ ಮದುವೆಯನ್ನು ಮಾಡಬೇಕೆಂಬ ನಿರ್ಧಾರಕ್ಕೆ ಬಂದ ಸತ್ಯವತಿ, ಭೀಷ್ಮರಲ್ಲಿ ಯೋಗ್ಯ ಕನ್ಯೆ ಓರ್ವಳನ್ನು ಧೃತರಾಷ್ಟ್ರನಿಗೆ ವಿವಾಹ ಮಾಡಿಸುವ ಬಗ್ಗೆ ಚರ್ಚಿಸಿದಳು. ಗಾಂಧಾರ ದೇಶದ ರಾಜಕುಮಾರಿಯ ಬಗ್ಗೆ ಸುದ್ದಿ ತಿಳಿದಿದ್ದಳು ಸತ್ಯವತಿ. ಭೀಷ್ಮನಿಗೆ ಜವಾಬ್ದಾರಿ ವಹಿಸಿ ವಿವಾಹ ಪ್ರಸ್ತಾಪ ಹೊತ್ತು ಗಾಂಧಾರಕ್ಕೆ ಹೋಗುವಂತೆ ಆದೇಶ ನೀಡಿದಳು. ಗಾಂಧಾರ ಸಣ್ಣ ದೇಶ. ಸುಬಲರಾಜ ಅಲ್ಲಿಯ ಅರಸ. ಭೀಷ್ಮರು ಚತುರಂಗ ಸೇನಾಸಹಿತ ಗಾಂಧಾರಕ್ಕೆ ಹೊರಟರು. ಗುಪ್ತಚರರಿಂದ ಹಸ್ತಿನಾವತಿಯ ಸೈನ್ಯ ಗಾಂಧಾರದತ್ತ ಗಮಿಸುವ ವಿಚಾರ ತಿಳಿದ ಸುಬಲರಾಜ ಭಯಭೀತನಾದ. ಹಸ್ತಿನಾವತಿಯ ಸೈನ್ಯವನ್ನು ಎದುರಿಸುವಷ್ಟು ಪ್ರಾಬಲ್ಯವಿರಲಿಲ್ಲ. ಭೀಷ್ಮ ಸೈನ್ಯವನ್ನು ಗಾಂಧಾರ ಅರಮನೆಯ ಹೊರವಲಯದಲ್ಲಿ ತಂಗುವಂತೆ ಆಜ್ಞಾಪಿಸಿದ. ಉಡುಗೊರೆಗಳ ಸಮೇತ ವಿವಾಹ ಪ್ರಸ್ತಾಪಕ್ಕಾಗಿ ಸುಬಲರಾಜನ ಅರಮನೆ ಪ್ರವೇಶಿಸಿ ತನ್ನ ಆಗಮನದ ಕಾರ್ಯ ಸಂಗತಿ ಅರುಹಿದ. ಹಸ್ತಿನಾವತಿಯ ಯುವರಾಜನಿಗೆ ಕನ್ಯಾರ್ಥಿಯಾಗಿ ಬಂದಿರುವೆ ಎಂಬ ವಿಚಾರ ತಿಳಿಸಿದಾಗ ಸುಬಲರಾಜ ಗ್ರಹಿಸಿದ್ದು ‘ಪಾಂಡು’ವಿನ ಜೊತೆ ತನ್ನ ಪುತ್ರಿಯ ವೈವಾಹಿಕ ಪ್ರಸ್ತಾಪವೆಂದು. ಆದರೆ ಧೃತರಾಷ್ಟ್ರನಿಗೆಂದು ತಿಳಿದು ಕುರುಡನಿಗೆ ತನ್ನ ಪುತ್ರಿಯನ್ನು ಧಾರೆಯೆರೆಯಲು ಹಿಂದೇಟು ಹಾಕಿದ. ಆಗ ಭೀಷ್ಮರು ಯುದ್ದಕ್ಕೆ ಸಿದ್ದನಾಗಬೇಕಾದೀತು ಎಂಬ ಎಚ್ಚರಿಕೆ ನೀಡಿದರು. ದೇಶ , ಪ್ರಜೆಗಳ ರಕ್ಷಣೆಗಾಗಿ ಮನಸ್ಸಿಲ್ಲದಿದ್ದರೂ ಸುಬಲರಾಜ ಒಪ್ಪಿದ. ಸಂಪ್ರದಾಯದಂತೆ ಕನ್ಯಾಶುಲ್ಕವಾಗಿ ಹಸ್ತಿನೆಯ ಒಂದು ಪ್ರಾಂತ್ಯವನ್ನು ತೆತ್ತು ಧೃತರಾಷ್ಟ್ರನಿಗೆ ಗಾಂಧಾರಿಯನ್ನು ವಿವಾಹ ಮಾಡಿಸಿದರು. ಪತಿವೃತೆಯಾದ ಗಾಂಧಾರಿ ತನ್ನ ಪತಿ ಕುರುಡನೆಂದು ತಿಳಿದು, ಆತ ನೋಡಲಾಗದ ಬಾಹ್ಯ ಪ್ರಪಂಚದ ಸೌಂದರ್ಯ ತನಗೂ ಬೇಡವೆಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಾನೂ ಕತ್ತಲೆಯ ಬದುಕನ್ನೇ ಆಯ್ದುಕೊಂಡು ಆದರ್ಶ ಮೆರೆದಳು. ಗಾಂಧಾರಿಯ ಅಣ್ಣ ಶಕುನಿ. ತನ್ನ ಬುದ್ಧಿಶಕ್ತಿಗಾಗಿ ಪ್ರಸಿದ್ಧನಾಗಿದ್ದ. ತಂಗಿಯ ವಿವಾಹ ನಂತರ ಆಕೆಗೆ ಸಹಾಯಕನಾಗಿ, ಧೃತರಾಷ್ಟ್ರನಿಗೆ ಆಪ್ತನಾಗಿ ಹಸ್ತಿನಾವತಿಯಲ್ಲೇ ಉಳಿದ. ತಂಗಿಯ ವಿವಾಹ ಕುರುಡನ ಜೊತೆ ಮಾಡಿಸಿದ ಭೀಷ್ಮನ ಹಾಗು ಹಸ್ತಿನಾವತಿಯ ಮೇಲೆ ತನ್ನ ಸಿಟ್ಟನ್ನು ಅಂತರಂಗದಲ್ಲೇ ಹೊತ್ತು ತಂದಿದ್ದ.
ಇತ್ತ ವಿದುರನಿಗೂ ಸವರ್ಣೀಯಳಾದ ‘ಪಾರಸವಿ’ ಎಂಬ ಸುಶೀಲೆ ಕನ್ಯೆಯ ಜೊತೆ ವಿವಾಹವಾಯಿತು. ಪಾಂಡುವಿಗಾಗಿ ಸಮರ್ಥ ರಾಜಕುಮಾರಿಯ ಹುಡುಕಾಟ ಜಾರಿಯಲ್ಲಿತ್ತು.
ಇತ್ತ ಕುಂತಿಭೋಜನೆಂಬ ರಾಜ ತನಗೆ ಮಕ್ಕಳಿಲ್ಲದ ಕಾರಣ ತನ್ನ ಭಾವ ಶೂರಸೇನ ಎಂಬಾತನ ಮಗಳು ಪೃಥೆ ಎಂಬವಳನ್ನು ದತ್ತು ಪಡೆದು ‘ಕುಂತಿ’ ಎಂದು ಹೆಸರನ್ನಿಟ್ಟು ಸಾಕುತ್ತಿದ್ದನು. ಅವಳು ಬಾಲಕಿಯಾಗಿದ್ದಾಗ ಅರಮನೆಗೆ ಆಗಮಿಸಿದ ಮಹರ್ಷಿ ದೂರ್ವಾಸರನ್ನು ರಾಜನ ಅನುಪಸ್ಥಿತಿಯಲ್ಲಿ ಸತ್ಕರಿಸಿ ಸೇವೆ ಮಾಡಿದಳು. ಸಂತುಷ್ಟರಾದ ದೂರ್ವಾಸರು ಸೇವೆಗೆ ಪ್ರತಿಯಾಗಿ ದೇವತಾ ಆಹ್ವಾನ ಬೀಜ ಮಂತ್ರ ಉಪದೇಶಿಸಿದರು. “ಮಗಳೇ ಈ ಮಂತ್ರವನ್ನು ಯಾವ ದೇವತೆಯನ್ನು ಸಂಕಲ್ಪ ಮಾಡಿ ಆಹ್ವಾನಿಸುತ್ತಿಯೋ, ಆ ದೇವತೆಯ ಅನುಗ್ರಹದಿಂದ ಸತ್ಸಂತಾನವನ್ನು ಪಡೆಯಬಹುದು. ಹೀಗೆ ಈ ಮಂತ್ರವನ್ನು ಐದು ಬಾರಿ ದೇವತಾ ಸಂಕಲ್ಪಕ್ಕಾಗಿ ಬಳಸಿ ಸಂತಾನ ಪಡೆಯಬಹುದು ಎಂದು ಹೇಳಿ ಹರಸಿ ಹೋದರು.
ಸ್ತ್ರೀ ಸಹಜ ಗುಣ ಚಾಂಚಲ್ಯ. ಕುಂತಿಯ ಮನದಲ್ಲೂ ಈ ಮಂತ್ರದ ಕುರಿತು ಮೂಡಿದ ಕೌತುಕದ ಪರೀಕ್ಷೆಗಾಗಿ ಕಣ್ಣಿಗೆ ಕಾಣುವ ದೇವರು ಸೂರ್ಯನನ್ನು ಸಂಕಲ್ಪ ಮಾಡಿ ಪಠಿಸಿ ಆಹ್ವಾನಿಸಿದಳು. ಪರಿಣಾಮ ಮೈದೋರಿದ ಸೂರ್ಯನಿಂದ ಸದ್ಯೋಜಾತ ಮಗುವೊಂದು ಅನುಗ್ರಹ ರೂಪದಲ್ಲಿ ಕರುಣಿಸಲ್ಪಟ್ಟಿತು. ಮಗು ಜನ್ಮಕಾಲದಲ್ಲೇ ಕವಚ – ಕರ್ಣಕುಂಡಲ ಸಹಿತ ಹುಟ್ಟಿತ್ತು. ಸೂರ್ಯದೇವ ಅನುಗ್ರಹಿಸಿ ಯಥಾಸ್ಥಾನ ಸೇರಿದ. ಕುಂತಿ ಮಗುವನ್ನು ಅಪ್ಪಿ ಬಹುವಾಗಿ ಮುದ್ದಿಸುತ್ತಿರುವಾಗ ಜಾಗೃತವಾದದ್ದು ಆಕೆಯ ಬುದ್ಧಿ. ತನಗಿನ್ನೂ ಮದುವೆಯೇ ಆಗಲಿಲ್ಲ, ಆದರೆ ಮಗುವಾಗಿದೆ. ಲೋಕಾಪವಾದಕ್ಕೆ ಗುರಿಯಾಗುವೆ ಎಂದು ಮಗುವನ್ನು ನೋಡುತ್ತಾ ಆತಂಕಕ್ಕೆ ಒಳಗಾದಳು. ಹೆಣ್ಣಲ್ಲವೇ ಮೇಲಾಗಿ ತಾಯಿಗೆ ಮಗುವಿನ ಮೇಲೆ ಅತಿ ವ್ಯಾಮೋಹವಲ್ಲವೇ. ಏನು ಮಾಡುವುದೆಂದೇ ದಿಕ್ಕು ತೋಚದಾಯಿತು. ಎದುರಿನಲ್ಲಿ ಮಂಜುಳಗಾನಗೈಯುತ್ತಾ ಹರಿಯುತ್ತಿರುವ ಗಂಗಾ ನದಿಯನ್ನು ನೋಡಿ, ಗಂಗಾದೇವಿಯನ್ನು ಸಂಸ್ತುತಿಸಿದಳು. ಬುಟ್ಟಿಯಲ್ಲಿ ಹೂ ತುಂಬಿಸಿ, ತನ್ನ ಶಲ್ಯದಲ್ಲಿ (ಶಾಲು) ಮಗುವನ್ನು ಸುತ್ತಿ ನದಿಯಲ್ಲಿ ತೇಲಿ ಬಿಟ್ಟಳು. ಅಲೆಗಳ ಮೇಲೆ ತೇಲುತ್ತಾ ಸಾಗುವ ಮಗುವನ್ನು ನೋಡುತ್ತಾ “ಗಂಗಾದೇವಿಯೇ ಅರಿಯದೆ ಮಾಡಿದ ಅಪರಾಧಕ್ಕೆ ಮಗುವಿಗೆ ಶಿಕ್ಷೆಯಾಗಬಾರದು. ಮಗುವನ್ನು ರಕ್ಷಿಸುವ ಬಹುಭಾರ ನಿನ್ನದು” ಎಂದು ಬೇಡುತ್ತಿದ್ದಂತೆ.. ಮಗು ನದಿಯ ರಭಸಕ್ಕೆ ಸಾಗುತ್ತಾ ಕಣ್ಮರೆಯಾಯಿತು.
ಮುಂದುವರಿಯುವುದು….