30.8 C
Udupi
Monday, February 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 442

ಭರತೇಶ ಶೆಟ್ಟಿ, ಎಕ್ಕಾರ್

ತನಗಾಗುತ್ತಿರುವ ಕೋಪೋದ್ರೇಕಗಳನ್ನು ತಡೆದುಕೊಂಡಿದ್ದ ದುರ್ಯೋಧನನಿಗೆ ಭೀಮಸೇನನ ಮಾತುಗಳು ಕರ್ಣ ಕಠೋರವಾದವು. ಹೃದಯವನ್ನು ಹಿಂಡಿ ಹಿಚುಕಿದಂತಾಯಿತು. ಸಹನೆಯ ಎಲ್ಲಾ ಕಟ್ಟೆಗಳು ಒಡೆಯಲ್ಪಟ್ಟವು. ಈ ಅಸಹನೆಯ ಪರಿಣಾಮವಾಗಿ ಜಲಸ್ಥಂಭನ ಮಂತ್ರವೂ ವಿಸ್ಮರಣೆಯಾಗಿ ಉಸಿರುಗಟ್ಟಿತು. ತಣ್ಣೀರ ಸರೋವರದೊಳಗಿದ್ದರೂ ಕೌರವನ ಮೈ ಬೆವರಿಳಿಸತೊಡಗಿತು. ಮತ್ತೊಂದೆಡೆ ರೋಷ ಆವೇಶ, ಕೋಪದ ತಾಪ ಕುದಿಯುತ್ತಾ ಶರೀರದ ನರನಾಡಿಗಳಲ್ಲೂ ಹರಿದಾಡಿತು. ವಿಗ್ರಹದಂತೆ ನಿಂತು, ಮಂತ್ರಾನುಷ್ಠಾನದಿಂದ ಶಾರೀರಿಕ ಕ್ರಿಯೆಗಳನ್ನು ಪ್ರತಿಬಂಧಿಸಿ ನಿಂತಿದ್ದ ದುರ್ಯೋಧನ ಮೈ ಕೊಡವಿದನು. ಹೆಗಲ ಮೇಲಿರಿಸಿದ್ದ ಉಕ್ಕಿನ ಗದೆಯನ್ನು ನೀರೊಳಗಿನಿಂದಲೆ ಬೀಸುತ್ತಾ ಮೇಲೇರಿ ಬಂದನು. ಕೋಪ ಯಾವ ಮಟ್ಟಕ್ಕೆ ಆತನ ಮನದಾಳದಿಂದ ಭುಗಿಲೆದ್ದಿದೆ ಎಂದರೆ ಕೋಪಾಗ್ನಿ ಕಣ್ಣುಗಳಿಂದ ಹೊರಸೂಸುತ್ತಿದೆ. ಬುಸುಗುಡುತ್ತಾ ದ್ವೈಪಾಯನ ಸರೋವರದ ನೀರಿಗಪ್ಪಳಿಸುತ್ತಾ ಮದಗಜ ಮೇಲೆದ್ದು ಬಂದಂತೆ ತಟಕ್ಕೆ ಬಂದು ನಿಂತನು.

ಧರ್ಮರಾಯ ಕೌರವನನ್ನು ಕಂಡು “ಹೇ ದುರ್ಯೋಧನಾ! ಉಚಿತವಾದುದನ್ನು ಮಾಡಿರುವೆ. ನೀನು ನೀರಿನಿಂದ ಮೇಲೆ ಬಂದು ನಿಂತ ಕಾರಣ ಚಂದ್ರವಂಶಕ್ಕೆ ತಗುಲಬಹುದಾಗಿದ್ದ ಕಳಂಕ ಇನ್ನಿಲ್ಲವಾಗಿದೆ.” ಎಂದನು.

ಆದರೆ ದುರ್ಯೋಧನ ಕ್ರೋಧೋನ್ಮತ್ತನಾಗಿ ಹೂಂಕರಿಸುತ್ತಾ “ಎಲಾ ಪಾಂಡವರೇ, ನಿಮ್ಮಲ್ಲಿ ನನ್ನ ಜೊತೆ ಯುದ್ದ ಮಾಡುವವರು ಯಾರು? ಧರ್ಮರಾಯ ನೀನೋ? ಭೀಮಾ ನೀನೋ? ಅರ್ಜುನ, ನಕುಲ, ಸಹದೇವ ನೀವ್ಯಾರಾದರೂ ಸಿದ್ದರಿದ್ದೀರೋ? ಅಲ್ಲಾ ಆ ಕೃಷ್ಣನೋ? ಯಾರಾದರು ಸರಿ, ಒಬ್ಬೊಬ್ಬರಾಗಿ ಬರುವಿರಾ? ಅಲ್ಲಾ ಎಲ್ಲರೂ ಏಕಕಾಲದಲ್ಲಿ ಆಕ್ರಮಿಸುವಿರಾ? ನಾನು ಯಾವ ವಿಧಾನಕ್ಕೂ ಸಿದ್ಧನಾಗಿರುವೆ. ಯಾರ ಬಗ್ಗೆ ಭಯವಾಗಲಿ, ಅಂಜಿಕೆಯಾಗಲಿ ನನಗಿಲ್ಲ. ನನ್ನ ಶರೀರಕ್ಕೆ ಅವಚಿದ್ದ ಕವಚ ಕಿತ್ತು ಹೋಗಿದೆ, ಗಾಯಗಳಾಗಿ ಒಡೆದು ರಕ್ತ ಕಾರುತ್ತಿವೆಯಾದರೂ ನನಗದು ನಗಣ್ಯ. ನಿಮ್ಮೆಲ್ಲರ ಅಂತ್ಯ ಕಾಣದೆ ವಿರಮಿಸಲಾರೆ. ಈ ದುರ್ಯೋಧನ ಬದುಕಿರುವವರೆಗೆ ಹಸ್ತಿನಾವತಿಯ ಸಾಮ್ರಾಜ್ಯ ನನ್ನದ್ದಾಗಿರುತ್ತದೆ. ಆ ತನಕ ಅದು ನಿಮಗೆ ಯಾವ ಕಾರಣಕ್ಕೂ ಸಿಗಲು ನಾನು ಬಿಡಲಾರೆ” ಎಂದು ಅಬ್ಬರಿಸಿದನು.

ಆಗ ಧರ್ಮರಾಯ ಮುಂದೆ ಬಂದು “ದುರ್ಯೋಧನಾ! ನಾವು ಬದುಕಿನಲ್ಲಿ ಅಗತ್ಯ ಬಿದ್ದಾಗ ಸರ್ವಸ್ವವನ್ನೂ, ಸರ್ವ ಸಂಪದವನ್ನೂ ತ್ಯಜಿಸಿ ಮುಂದುವರಿದಿದ್ದೇವೆ. ಹಾಗೆಂದು ಯಾವ ಕಾಲಕ್ಕೂ ಧರ್ಮ ತೊರೆದಿಲ್ಲ. ಈಗಲೂ ಧರ್ಮ ಮಾರ್ಗದಲ್ಲಿ ಕ್ರಮಿಸುತ್ತೇವೆ. ನಾವೈವರು ಪಾಂಡು ಪುತ್ರರಲ್ಲಿ ನಿನಗೆ ಯಾರಾಗಬಹುದು ಎಂದು ಅನಿಸುತ್ತದೆಯೋ ಅವರನ್ನು ಆರಿಸಿಕೋ. ಯುದ್ದದಲ್ಲಿ ನಿನ್ನಿಂದಾದರೆ ಗೆದ್ದು ನಿನ್ನದ್ದಾದ ಸಾಮ್ರಾಜ್ಯ ಎಂದು ಏನು ಹೇಳುತ್ತಿರುವೆಯೊ ಅದನ್ನು ಉಳಿಸಿ ಕೊಳ್ಳುವವನಾಗು” ಎಂದನು.

ಧರ್ಮರಾಯ ಹೀಗೆನ್ನುತ್ತಿದ್ದಂತೆ ಪಾಂಡವರು ಗೊಂದಲಕ್ಕೊಳಗಾದರು. ದುರ್ಯೋಧನ ಗದಾ ಯುದ್ಧ ಪ್ರವೀಣ. ಆ ವಿಭಾಗದಲ್ಲಿ ಆತನ ಜೊತೆ ಕಾದಾಡಬಲ್ಲ ಸಮರ್ಥನಿದ್ದರೆ ಅದು ಭೀಮಸೇನ ಮಾತ್ರ. ಈಗ ಧರ್ಮಜ ಇತ್ತಿರುವ ಮುಕ್ತ ಆಯ್ಕೆಯನುಸಾರ ಭೀಮನನ್ನುಳಿದು ಅನ್ಯ ಯಾರನ್ನು ಕೌರವ ಯುದ್ಧಕ್ಕೆ ಆರಿಸಿ, ಗದಾಯುದ್ಧವೇನಾದರು ಆದರೆ ಪಾಂಡವರಾದ ನಾವು ಸೋಲ ಬೇಕಾದೀತು. ಅಣ್ಣ ಯಾಕಾದರೂ ಈ ರೀತಿ ಅವಿವೇಕಿಯಂತೆ ವರ್ತಿಸಿದ ಎಂದು ಗಾಬರಿಗೊಳಗಾಗುತ್ತಿದ್ದಾರೆ.

ಆದರೆ ಕೌರವ ಮಾತ್ರ “ಸಕಲ ಪ್ರಕಾರದ ಯುದ್ಧಗಳೂ ಆಗಿಯಾಗಿದೆ. ರಥಯುದ್ಧ, ಕತ್ತಿ ಕಾಳಗ, ಇನ್ನಿತರ ಆಯುಧ ಯುದ್ಧಗಳೆಲ್ಲವೂ ನಡೆದು ಹೋಗಿವೆ. ನನ್ನ ನೆಚ್ಚಿನ ಆಯುಧ ಗದೆ, ಈಗ ಗದಾಯುದ್ಧವೆ ನೆರವೇರಲಿ. ನಿಮ್ಮಲ್ಲಿ ಭೀಮಸೇನ ಒಬ್ಬನನ್ನುಳಿದು ಅನ್ಯರಾರು ನನಗೆ ಸಮಬಲರಲ್ಲ. ಮೇಲಾಗಿ ನೇರ ವೈಷಮ್ಯ, ಶಪಥಗಳು ಇರುವುದು ನಮ್ಮೀರ್ವರಿಗೆ. ಇಂದಿನ ಯುದ್ಧದಲ್ಲಿ ಯಾರು ಯಾರ ವಚನ ಪಾಲಿಸುತ್ತಾರೆ ಎಂಬ ಸತ್ಯವೂ ಅನಾವರಣಗೊಳ್ಳಲಿ. ನಿಜ ಸಾಮರ್ಥ್ಯವಿದ್ದರೆ ಭೀಮ ನನ್ನೊಡನೆ ಹೋರಾಡಿ ಗೆದ್ದು ತೋರಿಸು” ಎಂದನು. ಅದಕ್ಕೂ ಮೊದಲು ಒಂದು ಎಚ್ಚರಿಕೆಯನ್ನೂ ನೀಡಿದನು. ಭೀಮಸೇನ ಇಲ್ಲಿಯ ತನಕ ನೀನು ಪ್ರಾಬಲ್ಯ ಮೆರೆದಿರಬಹುದು. ಆದರೆ ಇನ್ನು ನಿನ್ನ ಪೌರುಷ ನನ್ನೆದುರು ಸಾಗದು. ಬಾಹುಬಲ – ಮನೋಬಲ ಇದ್ದರೆ ಬಾ ಹೋರಾಡು” ಎಂದು ಯುದ್ಧ ಆಹ್ವಾನವಿತ್ತನು.

ಭೀಮ ದುರ್ಯೋಧನರು ತಮ್ಮ ತಮ್ಮ ಉಡುಗೆ ತೊಡುಗೆಗಳನ್ನು ಬಿಗಿದು ಕಟ್ಟಿ ಸಿದ್ಧರಾಗುತ್ತಿದ್ದಾರೆ.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page