31.6 C
Udupi
Sunday, April 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 478

ಭರತೇಶ ಶೆಟ್ಟಿ, ಎಕ್ಕಾರು

ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿದ್ದು ಕೊಂಡು ಧರ್ಮರಾಯನಿಗೆ ಉಪದೇಶ ಮುಂದುವರಿಸಿದರು. “ವತ್ಸಾ! ಮನುಷ್ಯನಿಗೆ ಶೀಲ ಅತಿ ಪ್ರಾಮುಖ್ಯವಾದುದು. ಅದರಲ್ಲೂ ರಾಜನಾದವನು ಯಾವ ಕಾರಣಕ್ಕೂ ಶೀಲವಂತಿಕೆಯ ಜೊತೆ ರಾಜಿ ಮಾಡಬಾರದು. ಶೀಲವಂತನಾಗಿ ವ್ಯವಹರಿಸಿದಾಗ ಧರ್ಮ, ಸತ್ಯ, ನಡತೆ, ಸಂಪತ್ತು, ಬಲ ಎಲ್ಲವೂ ಪ್ರಾಪ್ತವಾಗುತ್ತದೆ. ಹಿಂದೆ ಪ್ರಹ್ಲಾದನು ತನ್ನ ಶೀಲದಿಂದ ಸಂಪನ್ನವಾದ ದಿವ್ಯಬಲದಿಂದ ಮೂರು ಲೋಕಗಳನ್ನು ಗೆದ್ದುಕೊಂಡಿದ್ದನು. ತ್ರೈಲೋಕಗಳನ್ನು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಬಂದು ಅವನ ಶೀಲವನ್ನು ದಾನ ರೂಪದಲ್ಲಿ ಬೇಡಿದನು. ನೀಡಲು ಒಪ್ಪಿದ ಪ್ರಹ್ಲಾದನ ದೇಹದಿಂದ ಒಂದು ತೇಜೋಮೂರ್ತಿಯು ಹೊರಟು ಇಂದ್ರನನ್ನು ಸೇರಿಕೊಂಡಿತಂತೆ. ಆಗ ಅದೇನೆಂದು ಪ್ತಹ್ಲಾದ ವಿವೇಚಿಸಿದಾಗ ಅದು ” ನಾನು ನಿನ್ನ ಶೀಲ, ನನ್ನನ್ನು ನೀನು ದಾನ ಮಾಡಿರುವುದರಿಂದಾಗಿ, ಬೇಡಿ ಪಡೆದ ಇಂದ್ರನಲ್ಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿತಂತೆ. ಇಷ್ಟಾಗುತ್ತಲೆ ಶೀಲವನ್ನು ಅನುಸರಿಸಿ ಕ್ರಮವಾಗಿ ಸತ್ಯವೂ, ಧರ್ಮವೂ, ನಡತೆಯೂ, ಬಲವೂ ಒಂದೊಂದಾಗಿ ರೂಪುವಡೆದು ಇಂದ್ರನನ್ನು ಸೇರಿಕೊಂಡವಂತೆ. ಪ್ರಹ್ಲಾದನು ಶೀಲದ ಬಲಹೀನನಾಗಿ ನಿಸ್ತೇಜನಾದನು.

“ಮಗೂ ಧರ್ಮಜಾ! ಶೀಲವಂತನಾಗಬೇಕಾದರೆ ಯಾರಿಗೂ ಕೇಡನ್ನು ಮಾಡಬಾರದು. ಮನಸ್ಸಿನಿಂದಾಗಲಿ, ಮಾತಿನಿಂದಾಗಲಿ, ಕಾರ್ಯದಿಂದಾಗಲಿ ಇತರರಿಗೆ ಸರ್ವತಾ ಹಾನಿ, ನೋವು, ಕೇಡು ಉಂಟಾಗದಂತೆ ಜಾಗರೂಕರಾಗಿರಬೇಕು. ಒಂದು ವೇಳೆ ಕ್ಷಣಿಕ ನೋವು ನಮ್ಮ ಕಾರ್ಯದಿಂದ ಉಂಟಾಗುವುದಾದರೂ ನಮ್ಮ ಉದ್ದೇಶ ಪರಿಣಾಮದಲ್ಲಿ ಒಳಿತನ್ನು ಉತ್ಪಾದಿಸುವಂತಿರಬೇಕು. ಗುರು ತನ್ನ ಶಿಷ್ಯನಿಗೆ ವಿದ್ಯಾಭ್ಯಾಸ ಮಾಡಿಸುವಾಗ ಶಿಕ್ಷಿಸಿ ನೋಯಿಸುವನಾದರೂ ಉದ್ದೇಶ ಮುಂದೆ ಜ್ಞಾನಿಯಾಗಿ ಸಜ್ಜನನಾಗಿ ಬೆಳೆಯಲಿ ಎಂದು ಆಗಿರುವ ಕಾರಣ ಅದು ಸಾಧುವೆಂದು ಪರಿಗಣಿತವಾಗುತ್ತದೆ. ಅನ್ಯರಿಗೆ ಹಿತವಲ್ಲದ ಅಥವಾ ನಾವು ನಮ್ಮ ಕೃತ್ಯಕ್ಕಾಗಿ ಮರುಗಬೇಕಾದ ಅಥವಾ ನಾಚಬೇಕಾದ ಯಾವ ಕೆಲಸವನ್ನು ಮಾಡಿದರೂ ಅದು ಶೀಲವನ್ನು ಹರಣ ಮಾಡುತ್ತದೆ ಇಂತಹ ಯಾವುದೇ ಕೆಲಸವನ್ನು ಮಾಡದೆ ಬದುಕುವುದು ಸಾಹಸ ಸದೃಶವಾದರೂ ಸಾಧಕನಾಗಿ ಬದುಕುವುದು ಶೀಲವಂತನಿಗೆ ಭೂಷಣ.

ಇನ್ನೂ ಸೂಕ್ಷ್ಮ ವಿಚಾರಗಳಿವೆ, ಶೀಲವಂತರಲ್ಲದವರು ಶ್ರೀಮಂತರಾಗಿದ್ದರೂ ಅದನ್ನವರು ಅನುಭವಿಸುವ ಯೋಗ್ಯತೆಯಿಂದ ಬಹುಶೀಘ್ರ ವಂಚಿತರಾಗಿ ಸಿರಿವಂತಿಕೆ ಕನ್ನಡಿಯೊಳಗಿನ ಗಂಟಾಗಿ ತೋರಿಕೆಗೆ ಮಾತ್ರ ಅವರದ್ದಾಗಿ ಅನುಭವಕ್ಕೆ ಬಾರದೆ ವೇದನೆ ಪಡುವಂತಾಗುತ್ತದೆ. ಬಡವನಾಗಿದ್ದರೂ, ಸೌಕರ್ಯದಿಂದ ವಂಚಿತನಾಗಿದ್ದರೂ ಶೀಲವಂತನಾದ ಬಡವ ಅಂತ್ಯಕಾಲದವರೆಗೂ ಏರಿಳಿತ ಕಂಡರೂ ಜಯಶೀಲನಾಗಿ ಬದುಕಬಲ್ಲನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page