ಭಾಗ – 435
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೩೬ ಮಹಾಭಾರತ
ಈಗ ಶಕುನಿಯ ಸ್ಥಿತಿ ಬಹಳ ಸಂಕಷ್ಟಕ್ಕೊಳಗಾಗಿದೆ. ಸದಾ ತಂತ್ರಗಾರಿಕೆಯಿಂದ ಜಯ ಸಾಧಿಸುತ್ತಿದ್ದ ಗಾಂಧಾರಾಧಿಪನಿಗೆ ಈಗ ಹೋರಾಡಿ ಗೆಲ್ಲಬೇಕಾದ ಸಂಧಿಗ್ದತೆ ಎದುರಾಗಿದೆ. ಶಕುನಿ ಪರಾಕ್ರಮಿ ಹೌದಾದರೂ ಪಾಂಡವರೆದುರು ತನ್ನ ಆಟ ಸಾಗದು ಎಂದು ತಿಳಿದಿದ್ದಾನೆ. ಅದೂ ವ್ಯೂಹವಾಗಿ ನಕುಲ, ಸಹದೇವ, ಅರ್ಜುನ, ಉಪಪಾಂಡವರಾದ ದ್ರೌಪದಿ ಪುತ್ರರು ಬಂದು ಸೇರಿದ್ದಾರೆ! ಅಂದರೆ ಇವರಿಗೆ ನನ್ನನ್ನು ಕೇವಲ ಗೆಲ್ಲುವುದೊ, ಕೊಲ್ಲುವುದೊ ಉದ್ದೇಶವಾಗಿಲ್ಲ. ನನ್ನಿಂದ ಇವರಿಗಾದ ಅನ್ಯಾಯಗಳಿಗೆ ಶಿಕ್ಷೆ ನೀಡುವ ಉದ್ದೇಶ ಇದೆ. ಹೀಗೆಂದು ಸೂಕ್ಷ್ಮಗ್ರಾಹಿಯಾದ ಶಕುನಿ ವಿವೇಚಿಸಿಕೊಂಡನು. ಒಂದೆಡೆ ಇವರೆಲ್ಲ ಶಕುನಿಯ ಜೊತೆ ಹೋರಾಡುತ್ತಾ ಆತನನ್ನು ಗಾಯಗೊಳಿಸುತ್ತಿದ್ದರೆ, ಆತನ ಎದುರಲ್ಲಿಯೆ ಆತನ ಸಹೋದರರ ಜೊತೆ ಸಮರ ನಿರತರಾಗಿ ಗಾಂಧಾರದ ರಾಜಕುಮಾರರನ್ನು ವಧಿಸುತ್ತಿದ್ದಾರೆ. ಶಕುನಿಯ ರಕ್ಷಣೆಗಾಗಿ ಬರುತ್ತಿರುವ ಗಾಂಧಾರ ದೇಶದ ರಥಿಕರೂ, ಸೇನೆ ಯಾರೆ ಬರಲಿ ಅವರೆಲ್ಲ ದೀಪ ಜ್ವಾಲೆಯಿಂದ ಆಕರ್ಷಿತವಾದ ಪತಂಗಗಳಂತೆ ಕ್ಷಣ ಮಾತ್ರದಲ್ಲಿ ನಿರ್ನಾಮವಾಗುತ್ತಿದ್ದಾರೆ. ಶಕುನಿಗೆ ಕುರು ಸೇನೆ, ಕುರು ವೀರರು ಮರಣವನ್ನಪ್ಪಿದಾಗ ಆಗುತ್ತಿದ್ದ ವೇದನೆಗಿಂತಲೂ ತನ್ನವರ ಸಾವು ಹೆಚ್ಚಿನ ನೋವು ನೀಡುತ್ತಿದೆ. ಶಕುನಿಯ ಮಕ್ಕಳು ಸೋದರರು, ಬಂಧುಗಳು, ಮಿತ್ರರು ಹೀಗೆ ಪ್ರತಿಯೊಬ್ಬ ಆತನ ಸಂಬಂಧಿಯೂ ಕಣ್ಣೆದುರಲ್ಲಿ ವಧಿಸಲ್ಪಟ್ಟರು. ಸಹದೇವ ತನ್ನ ಶಪಥ ಪೂರೈಸಿದ ಸಂತೃಪ್ತಿ ಅನುಭವಿಸುತ್ತಿದ್ದಾನೆ. “ಕಪಟ ದ್ಯೂತದ ತಂತ್ರಗಾರ, ಕುತಂತ್ರಿ ಕಪಟಿ ಶಕುನಿ ಮಾಮನ ವಂಶವನ್ನು ನಿರ್ವಂಶ ಮಾಡಿ, ನಂತರ ಆತನ ವಧೆಯಾಗುವಂತೆ ಮಾಡುವೆ. ಆತ ಸತ್ತಾಗ ಪಿತೃತರ್ಪಣವಿತ್ತು ಸದ್ಗತಿ ಒದಗಿಸುವ ಯಾವ ಬಂಧುವನ್ನೂ ಜೀವಸಹಿತ ಉಳಿಸಲಾರೆ.” ಮಾನನಿಧಿ ದ್ರೌಪದಿಯ ಮಾನಭಂಗ ಯತ್ನ ಮಾಡಲು ಪೂರಕವಾದ ದ್ಯೂತದ ನೇತಾರ ಶಕುನಿಯ ವಿರುದ್ಧ ಸಹದೇವ ಅಂದು ನೊಂದು ನುಡಿದ ಪ್ರತಿಜ್ಞಾವಾಕ್ಯ ಈ ಕ್ಷಣ ಪೂರ್ಣವಾಗುತ್ತಿದೆ.
ಒಂದೆಡೆ ಮನಸ್ಸಿಗಾಗುತ್ತಿರುವ ವೇದನೆ, ಮತ್ತೊಂದೆಡೆ ತನು ಭೀಕರವಾಗಿ ಗಾಯಗೊಂಡು ಆಗುತ್ತಿರುವ ನೋವು. ಈ ಎಲ್ಲದರ ಮಧ್ಯೆ ಭಯಗೊಂಡು ಸಾವು ಕಾಣಿಸುತ್ತಿದೆ. ನಾಜೂಕಿನ ಪ್ರಹಾರಗಳು ಪ್ರಾಣ ಹರಣವಾಗದಂತೆ, ಗಾಯವಾಗುವಂತೆ ಶಕುನಿಯ ದೇಹಾದ್ಯಂತ ಹಂಚಿ ಹರಡಿದೆ.
ಶಕುನಿ ತಾನುಗೈದ ಕರ್ಮಗಳನ್ನು ಸ್ಮರಿಸುತ್ತಿದ್ದಾನೆ. ತಂಗಿ ಗಾಂಧಾರಿಯ ಮುಗ್ಧ ಮನಸಿನ ಮಕ್ಕಳ ಮನಸ್ಸಿನಲ್ಲಿ ತಾನು ಬಿತ್ತಿದ್ದ ದಾಯಾದ್ಯ ಸಂಘರ್ಷದ ವಿಷ ಬೀಜ, ಕುತಂತ್ರದ ಹೂರಣದಲ್ಲಿ ಭವಿಷ್ಯದಲ್ಲಿ ಶತ್ರುವಾಗಬಲ್ಲ ಎಂದು ಭೀಮನಿಗೆ ವಿಷ ಸೇವನೆ ಮಾಡಿಸಿ, ಘಟಸರ್ಪಗಳಿರುವ ಪ್ರಮಾಣಕೋಟಿ ಸರೋವರಕ್ಕೆ ಎಸೆದ ಪ್ರಕರಣ, ರಾಜತಾಂತ್ರಿಕ ತಂತ್ರ ವಿನಿಯೋಗಿಸಿ ಸಮಗ್ರ ಹಸ್ತಿನೆಗೆ ಯುವರಾಜನಾಗಿದ್ದ ಧರ್ಮಜ ಸಹಿತ ಪಾಂಡವರನ್ನು ವಿಭಾಜಿಸಿ ಹಸ್ತಿನೆಯಿಂದ ವಾರಣಾವತದ ಅರಗಿನಾಲಯಕ್ಕೆ ಕಳುಹಿಸಿ ಸುಟ್ಟು ಹಾಕುವ ಯೋಜನೆ ಮಾಡಿದ್ದು, ಆದರೂ ಉಳಿದು ಬೆಳೆದು ರಾಜಸೂಯಾಧ್ವರ ಕಲಾಶಾಭಿಷಿಕ್ತ ಚಕ್ರವರ್ತಿ ಯುಧಿಷ್ಠಿರ ಮತ್ತವನ ಸೋದರರ ಯಶಸ್ಸನ್ನು ಸಾಧಿಸಿದ್ದು, ಸಹಿಸಲಾಗದೆ ಕಪಟ ದ್ಯೂತದ ಮುಖೇನ ವನವಾಸ ಅಜ್ಞಾತವಾಸಕ್ಕೆ ಅಟ್ಟಿದ್ದು… ಹೀಗೆ ತನ್ನಿಂದಾದ ಪಾತಕಗಳು ಒಮ್ಮೆಗೆ ನೆನಪಾಗಿ ಹೋದವು. ಕೃತಕರ್ಮಫಲಗಳು ಆತನಿಗೆ ಪ್ರಾಪ್ತವಾಗುತ್ತಿವೆ. ತನ್ನವರೆಲ್ಲರ ರೋದನಾಮಯ ಸಾವು ಕಾಣುತ್ತಾ, ಹಿಂಸೆಗೊಳಪಟ್ಟು ಸಾಯಬೇಕಾದ ಸನ್ನಿವೇಶದಲ್ಲಿ ಅರಿವಾಗುತ್ತಿದೆಯಾದರೂ ಕಾಲ ಮಿಂಚಿ ಹೋಗಿಯಾಗಿದೆ. ಶಕುನಿಯ ದೇಹ ಛಿದ್ರಗೊಂಡು ಎಲ್ಲೆಡೆ ಸೀಳಲ್ಪಟ್ಟಿದೆ. ಧಾರಾಕಾರವಾಗಿ ರಕ್ತ ಸುರಿಯುತ್ತಿದೆ. ಇನ್ನೇನು ನಿತ್ರಾಣನಾಗಿ ಬೀಳುತ್ತೇನೆ, ಆಯುಧ ಕೈ ಜಾರುತ್ತದೆ ಎಂಬ ಸ್ಥಿತಿಯಲ್ಲಿ ನಕುಲ ಸಹದೇವರೀರ್ವರು ಸೇರಿ ಪ್ರಾಣ ಗೀರು ಗಾಯಗಳಾಗುವ ಪ್ರಹಾರಗೈಯುತ್ತಾ ಪೀಡಿಸಿ ಕುಸಿಯತೊಡಗಿದ ಶಕುನಿಯ ಶಿರಚ್ಛೇದನಗೈದು ತನ್ನ ಶಪಥ ಪೂರ್ಣಗೊಳಿಸಿದನು.
ಯುಗ ಪುರುಷನಾದ “ದ್ವಾಪರ” ಕಾಲಚಕ್ರದ ಪರಿವರ್ತನೆಗೆ ಪೂರಕವಾಗಲೆಂದು ತನ್ನ ಆಂಶಿಕ ಅವತಾರಿಯಾಗಿ ಶಕುನಿಯ ರೂಪದಲ್ಲಿ ಅವತರಿಸಿದ್ದನು. ತನ್ನ ಕಾರಣಜನ್ಮದ ಕಾರ್ಯ ದ್ವಾಪರ ಯುಗಾಂತ್ಯಕ್ಕೆ ಇದ್ದ ತಡೆಗಳನ್ನು ನಿವಾರಿಸಿ ತಾನೂ ಅಂತ್ಯ ಕಂಡುಕೊಂಡಿದ್ದಾನೆ. *ಬಾಹ್ಯ ಪ್ರಪಂಚದ ದೃಷ್ಟಿಗೆ ದುಷ್ಟನಾಗಿ ಕಂಡರೂ, ಶಕುನಿ ಜನ್ಮ ತಳೆದಿರುವುದು ದ್ವಾಪರ ಪುರುಷನ ಅಂಶದಿಂದ. ಜನಿಸಿದ ಕಾರಣ ಯುಗ ಪರಿವರ್ತನೆಯ ಅವಧಿ ಬಂದರೂ ಕಾಲಚಕ್ರದ ಚಲನೆಗೆ ಬಾಧಕರಾಗಿದ್ದ ಅತಿಬಲರ ನಾಶವಾಗಬೇಕಿತ್ತು. ಅಂತಹ ಮಹತ್ಕಾರ್ಯಕ್ಕೆ ವೇದಿಕೆ ಕಲ್ಪಿಸಿ, ಕಾರ್ಯ ಸಾಧಿಸಿ ಕಲಿ ಪುರುಷನ ಪ್ರಭಾವದ ಕಲಿಯುಗದ ಆರಂಭಕ್ಕೆ ಹಾದಿ ಸುಗಮಗೊಳಿಸಿ ವಿರಮಿಸಿದ್ದಾನೆ.
ಇನ್ನೀಗ ಉಳಿದಿರುವುದು ಕೌರವ ಪಕ್ಷದ ನಾಯಕ ದುರ್ಯೋಧನ, ಮತ್ತು ಆತನ ಪ್ರಧಾನ ಸಂಗಡಿಗರಾದ ಅಶ್ವತ್ಥಾಮ, ಕೃತವರ್ಮ ಮತ್ತು ಕೃಪಾಚಾರ್ಯರು. ಹನ್ನೊಂದು ಅಕ್ಷೋಹಿಣಿ ಸೇನೆಯೂ ನಾಶಗೊಂಡು ಕೆಲವೇ ಕೆಲವು ಯೋಧರು ಉಳಿದಿದ್ದಾರೆ.
ಮುಂದುವರಿಯುವುದು…



















