30.7 C
Udupi
Tuesday, February 10, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 433

ಭರತೇಶ ಶೆಟ್ಟಿ, ಎಕ್ಕಾರ್

ಶಲ್ಯನದು ಬಹಳ ವಿಶೇಷ ವ್ಯಕ್ತಿತ್ವ ಎಂದು ಹೇಳಬಹುದು. ಯಾಕೆಂದರೆ ಹುಟ್ಟಿದ ನಂತರ ಸಾಧನೆ ಮಾಡಬಹುದು. ಈ ಮಾರ್ಗದಲ್ಲಿ ಸಾಧನೆ ಮಾಡಿದವರು ಅಸಂಖ್ಯಾತರಿದ್ದಾರೆ. ಆದರೆ ಹುಟ್ಟಿನ ವಿಚಾರದಲ್ಲಿ ಮತ್ತು ಸಾವಿನ ವಿಚಾರದಲ್ಲಿ ನಿರ್ಧಾರ ಮಾಡಬಲ್ಲ ಸಮರ್ಥರು ಯಾರೂ ಇಲ್ಲ. ಹುಟ್ಟು ಅನಿರೀಕ್ಷಿತ, ಸಾವು ನಿರೀಕ್ಷಿತವಾದರೂ ನಿಗೂಢ. ಈ ಎರಡು ವಿಚಾರದಲ್ಲಿ ಯೋಜನೆ ರೂಪಿಸಿದವರಿದ್ದರೆ ದೇವರು ಮಾತ್ರ. ಹೀಗಿರುವಾಗ ಶಲ್ಯ ತನ್ನ ಸಾವನ್ನು ತಾನೇ ನಿರ್ಧರಿಸಿದ ಮಹಾನುಭಾವ. ಸಾವು ಎಂಬುವುದು ಇದ್ದೇ ಇದೆ. ಅದೂ ರಣ ಕ್ಷೇತ್ರ ಪ್ರವೇಶಿಸಿದ ಮೇಲೆ ಒಂದೋ ಎದುರಾಳಿಗಳನ್ನು ಕೊಲ್ಲುತ್ತಿರಬೇಕು. ಇಲ್ಲ ವೈರಿಗಳಿಗೆ ಬಲಿಯಾಗಬೇಕು. ಶಲ್ಯ ಮಾತ್ರ ತನ್ನ ಮರಣ ಇಂತಹವರಿಂದ ಆದರೆ ತನಗೆ ಶ್ರೇಯಸ್ಕರ ಎಂದು ನಿರ್ಧರಿಸಿ ಧರ್ಮರಾಜನ ಕೈಯಿಂದ ತನ್ನ ಸಾವನ್ನು ನಿಮಂತ್ರಿಸಿ ಸ್ವೀಕರಿಸಿದ ಸಾಧಕ. ಯಮಧರ್ಮನ ಅಂಶ ಸಂಭೂತ, ಧರ್ಮ ಮೂರ್ತಿ ಯುಧಿಷ್ಠಿರನ ಕೈಯಿಂದ ಪ್ರಾಪ್ತವಾದದ್ದು ಮುಕ್ತಿಯೆಂದು ತಿಳಿದು ವ್ಯವಹರಿಸಿದ ಶಲ್ಯ ಈ ವಿಚಾರದಲ್ಲಿ ಪ್ರಾಜ್ಞ ಎಂದು ಪರಿಗಣಿಸಲ್ಪಡುತ್ತಾನೆ.

ಅದೇ ರೀತಿ ಧರ್ಮರಾಯನೂ ಕೃಷ್ಣನ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸುವಲ್ಲಿ ತನ್ನಿಂದಾಗುವ ಪುರುಷ ಪ್ರಯತ್ನ ಮಾಡಿದ್ದನು. “ಹೇ ಧರ್ಮಜಾ! ಭೀಷ್ಮ -ದ್ರೋಣರೆಂಬ ಮಹಾಸಾಗರಗಳನ್ನೂ, ಕರ್ಣನೆಂಬ ಪಾತಾಳದಂತಿರುವ ಆಗಾಧವಾದ ಮಡುವನ್ನೂ ದಾಟಿ ಬಂದಿರುವ ನೀವು ಈಗ ಎಚ್ಚರ ತಪ್ಪಬಾರದು. ಕೇವಲ ಗೋಷ್ಪಾದದಷ್ಟ್ಟಿರುವ ಶಲ್ಯರೂಪದ ನೀರಿನಲ್ಲಿ ಪರಿವಾರ ಸಮೇತನಾಗಿ ಮುಳುಗಿ ಹೋಗಬೇಡ. ನಿನ್ನಲ್ಲಿ ಯಾವ ತಪೋ ಬಲವಿದೆಯೊ, ಯಾವ ಕ್ಷಾತ್ರ ಬಲವಿದೆಯೊ ಅದೆಲ್ಲವನ್ನೂ ಒಗ್ಗೂಡಿಸಿ ಮಹಾರಥನಾದ ಶಲ್ಯನನ್ನು ಸಂಹರಿಸು” ಎಂಬ ಸೂಚ್ಯ ಮಾರ್ಗದರ್ಶನ ಧರ್ಮಜನನ್ನು ಶಲ್ಯ ವಧೆಯ ಕಾರ್ಯದಲ್ಲಿ ತೊಡಗಿಸಿತ್ತು. ಈಗ ಆ ಕಾರ್ಯ ಪೂರ್ಣವೂ ಆಗಿಯಾಗಿದೆ.

ಶಲ್ಯನ ವಧೆಯಾದ ಬಳಿಕ ಕುರು ಸೇನೆ ಭಯಭೀತವಾಗಿದೆ. ಆದರೆ ಈ ಮಧ್ಯೆ ಒಂದೆಡೆ ಮಹಾವೀರ ಚೇಕಿತಾನನಿಗೂ ದುರ್ಯೋಧನನಿಗೂ ರಣಭಯಂಕರ ಯುದ್ದ ನಡೆದು ಚೇಕಿತಾನ ಕೌರವನಿಂದ ವಧಿಸಲ್ಪಟ್ಟಿದ್ದಾನೆ. ಮತ್ತೊಂದೆಡೆ ಧರ್ಮರಾಯ ಹೋರಾಡುತ್ತಾ ಚಂದ್ರಸೇನ – ದ್ರುಮಸೇನರ ಸಂಹಾರ ಗೈದಿದ್ದಾನೆ. ಅಶ್ವತ್ಥಾಮನು ಪಾಂಡವ ಪಕ್ಷದ ವೀರನಾದ ಸುರಥನನ್ನು ಸೋಲಿಸಿ ಕೊಂದು ಕಳೆದಿದ್ದಾನೆ.

ಹೀಗೆ ಇತ್ತಂಡಗಳ ವೀರಾಧಿವೀರರು ಪರಸ್ಪರ ಹೋರಾಡಿ ಸಾಯುತ್ತಿದ್ದಾರೆ.
ಈ ಸಮಯ ಭೀಮಾರ್ಜುನರ ಸಾಹಸ, ನಕುಲ, ಸಹದೇವ, ಸಾತ್ಯಕಿ, ದೃಷ್ಟದ್ಯುಮ್ನ, ಶಿಖಂಡಿ, ದ್ರೌಪದಿಯ ಐವರು ಪುತ್ರರ ಸಂಘಟಿತ ಪ್ರಹಾರಗಳನ್ನು ತಾಳಲಾರದೆ ಕೌರವ ಪಕ್ಷದ ಸೇನೆ ಕಂಡತ್ತ ಓಡಿ ಪಲಾಯನಗೈಯಲು ಆರಂಭವಾಯಿತು. ಶಕುನಿ, ದುರ್ಯೋಧನರಿಗೆ ಏನು ಮಾಡುವುದೆಂದು ತೋಚಲಿಲ್ಲ. ತನ್ನ ಸೇನೆಯ ವೀರರನ್ನು ಉದ್ದೇಶಿಸಿ ದುರ್ಯೋಧನ ಧೈರ್ಯ ತುಂಬಲು ಕೂಗಿ ಹೇಳತೊಡಗಿದ “ವೀರರೇ! ನೀವೆಲ್ಲಾ ಕ್ಷತ್ರಿಯರು ಎಂಬುವುದನ್ನು ಮರೆಯಬೇಡಿ. ಒಂದೊಮ್ಮೆಗೆ ಸೋಲು ನಮಗೆ ಒದಗಿದರೂ ಹೋರಾಡುತ್ತಾ ಸಾಯುವುದು ಶ್ರೇಯಸ್ಕರ. ಪಲಾಯನಗೈದು ಈ ಭೂಮಿ, ಪರ್ವತಗಳಲ್ಲಿ ಅಡಗಿದರೂ ನಿಮ್ಮನ್ನು ಪಾಂಡವರು ಹುಡುಕಿ ಸಂಹರಿಸದೆ ಬಿಡಬಹುದಾದ ಅಜ್ಞಾತ ಸ್ಥಳಗಳೇ ಇಲ್ಲ. ಹಾಗಿರುವಾಗ ನೀವು ಹೇಡಿಗಳಾಗಿ ಓಡಿ ಹೋದರೂ ಪ್ರಯೋಜನವೇನಿದೆ? ಈ ಸಮಯ ಪಾಂಡವರ ಸೇನೆಯೂ ನಮ್ಮ ಹಾಗೆಯೆ ಬಸವಳಿದಿದೆ. ಕೃಷ್ಣಾರ್ಜುನ, ಭೀಮಾದಿಗಳೂ ಗಾಯಗೊಂಡು ಪರದಾಡುತ್ತಿದ್ದಾರೆ. ಈ ಸ್ಥಿತಿಯಲ್ಲಿ ನಾವು ನಿಂತು ಹೋರಾಡಿದರೆ ಅತ್ಯಲ್ಪ ಕಾಲದಲ್ಲಿಯೇ ನಮಗೆ ಜಯ ಪ್ರಾಪ್ತವಾಗಲಿದೆ.ಅದಕ್ಕಾಗಿ ನಾವು ಶ್ರಮಿಸಬೇಕು ಹೊರತು ಹೆದರಿ ಓಡಿಹೋಗುವುದು ಪರಿಹಾರವಲ್ಲ” ಎಂದನು.

ಕೌರವ ಸೈನಿಕರು ದುರ್ಯೋಧನನ ಮಾತು ಕೇಳಿ ರಣೋತ್ಸಾಹ ಪಡೆದು ತಿರುಗಿ ಬಂದು ಸಮರ ನಿರತರಾದರು. ದುರ್ಯೋಧನ ತನ್ನ ಸೇನೆಯನ್ನು ವ್ಯೂಹವಾಗಿ ರಚಿಸಿ ಪಾಂಡವರನ್ನು ಎದುರಿಸತೊಡಗಿದನು.

ಯುದ್ದ ಸಾಗುತ್ತಿದೆ, ನಕುಲ ಸಹದೇವರು ಪರಮಹೃಷ್ಟರಾಗಿ ಶಕುನಿಯನ್ನು ಮತ್ತು ಅವನ ಗಾಂಧಾರದ ಸೇನೆಯನ್ನು ಎದುರಿಸಿದ್ದಾರೆ. ಮತ್ತೊಂದೆಡೆ ಭೀಮಸೇನ ಹದಿನೆಂಟನೆಯ ದಿನ ಅತ್ಯುಗ್ರನಾಗಿ ರಣಕಣದಲ್ಲಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page