30.1 C
Udupi
Thursday, March 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 470

ಭರತೇಶ್ ಶೆಟ್ಟಿ,ಎಕ್ಕಾರು

ಸಂಚಿಕೆ ೪೭೦ ಮಹಾಭಾರತ

ಕೃಷ್ಣನು ಧರ್ಮರಾಯನಲ್ಲಿ ಮೊದಲಾಗಿ ಕರ್ಣನಿಗೆ ತರ್ಪಣವೀಯಲು ಹೇಳಿದ್ದು ಅರ್ಜುನ ಸಹಿತ ಭೀಮನಿಗೂ ವಿಚಿತ್ರವೆನಿಸಿತು. ನಕುಲನು ತಿರುಗಿ ಸಹದೇವನ ಮುಖ ನೋಡತೊಡಗಿದನು. ಗೊಂದಲಮಯ ಸ್ಥಿತಿಯ ವಾಸ್ತವ ಅರಿತ ಶ್ರೀಕೃಷ್ಣನು “ಮೃತ ಕರ್ಣನು ನಿಮಗೆಲ್ಲರಿಗೂ ಅಣ್ಣ. ಮಾತೆ ಕುಂತಿದೇವಿಯ ಜೇಷ್ಠ ಪುತ್ರ.” ಎಂದು ಹೇಳಿ, ಕಾರಣ ಜನ್ಮಿಯಾಗಿ ಜನಿಸಿದ ಕರ್ಣನ ಹಿನ್ನೆಲೆ ವಿವರಿಸಿ ಹೇಳಲಾರಂಭಿಸಿದನು. ಕುಂತಿ ಕನ್ಯೆಯಾಗಿರುವಾಗ ವಿವಾಹ ಸಂಸ್ಕಾರ ಪೂರ್ವದಲ್ಲಿ ಜನಿಸಿದ ಕಾನೀನ ಪುತ್ರ ಈ ಕರ್ಣ. ಹುಟ್ಟಿ ಬೆಳೆದು ಜೀವನಾಂತ್ಯ ಕಾಣುವಲ್ಲಿನ ಹಿನ್ನೆಲೆ, ಈಗ ಸ್ವರ್ಗವೇರಿರುವ ಸೂರ್ಯ ಪುತ್ರನ ಪೂರ್ಣ ವೃತ್ತಾಂತ ವಿವರಿಸಿ ಹೇಳಿದನು. ಪಾಂಡು ಪುತ್ರರಿಗೆ ತಮ್ಮ ಅಣ್ಣ ಕರ್ಣ ಎಂದು ತಿಳಿದಿದ್ದರೆ ಯುದ್ಧವನ್ನೇ ಮಾಡುತ್ತಿರಲಿಲ್ಲ ಎಂಬಷ್ಟು ಮಹತ್ತರವಾದ ಪಶ್ಚಾತ್ತಾಪವೂ, ಅರಿಯದೆ ಹೋರಾಡಿದ್ದಕ್ಕೂ, ಕೊನೆಗೆ ಆತನನ್ನು ಸಂಹರಿಸಿದ್ದಕ್ಕೂ ಕಡು ದುಃಖವಾಯಿತು. ಮಾತೆ ಕುಂತಿ ಪ್ರತಿಯೊಂದು ವಿಚಾರ ಗೊತ್ತಿದ್ದೂ ಮೌನಕ್ಕೆ ಶರಣಾಗಿ ನಿಂತವಳು ತುಟಿ ಬಿಚ್ಚಲಿಲ್ಲ. ಕೃಷ್ಣನಿಂದ ಸತ್ಯವರಿತ ಯುಧಿಷ್ಠಿರ ಭ್ರಾತೃ ಭಾವದಿಂದ ಅಣ್ಣನಿಗೆ ತರ್ಪಣವಿತ್ತನು. ಸದ್ಗತಿಗಾಗಿ ಪ್ರಾರ್ಥಿಸಿದನು. ನಂತರ ಕೌರವರೆಲ್ಲರಿಗೂ, ಮೃತ ವೀರರೆಲ್ಲರಿಗೂ ತರ್ಪಣವೀಯುವ ಪ್ರಕ್ರಿಯೆ ಸಾಗಿತು. ಪ್ರಜಾಪರಿವಾರವೂ ವಿಧಿವತ್ತಾಗಿ ಅವರವರ ಬಂಧುಗಳ ಹೆಸರೇಳುತ್ತಾ ತರ್ಪಣವಿತ್ತರು.

ಅರಿಯದೆ ಅಣ್ಣನನ್ನು ವಧಿಸಿದ ಪಾಪಪ್ರಜ್ಞೆ ಪಾಂಡವರಲ್ಲಿ ಇನ್ನೂ ಇದ್ದಂತಿತ್ತು. ಶ್ರೀ ಕೃಷ್ಣ ಬಹಳಷ್ಟು ವಿಚಾರಗಳನ್ನು ವಿವರಿಸಿ ಸಂತೈಸಿದನು. ಧರ್ಮರಾಯನ ಮನಸ್ಸು ತಿರು ತಿರುಗಿ ಅದೇ ವಿಚಾರವನ್ನು ಮಂಥನ ಮಾಡುತ್ತಿತ್ತು. ಮಾತೆ ಕುಂತಿಯದ್ದು ಕಠೋರ ಮನಸ್ಸೋ ಎಂಬಷ್ಟರ ಮಟ್ಟಿಗೂ ತರ್ಕಿಸಲ್ಪಟ್ಟಿತು. ಕರ್ಣ ಸಹೋದರನಾದರೂ ನಮ್ಮಿಂದ ಹಗೆಯೆಂದು ಪರಿಗಣಿತನಾಗಿ ವಧಿಸಲ್ಪಡುವಂತಾಯಿತು. ಹೀಗಾಗಲು ಕಾರಣ ಮಾತೆ ಕುಂತಿ ತೋರಿದ ಗೌಪ್ಯತೆಯ ತೀವ್ರತೆ ಪ್ರಧಾನ ಎಂಬಂತೆ ವಿವೇಚಿಸಿದನು. ಇಂತಹ ದುರಂತಕ್ಕೆ ಮುಂದೆ ಕಾರಣವಾಗಬಾರದೆಂದು ತರ್ಕಿಸಿದ ಧರ್ಮರಾಯ “ಇನ್ನು ಮುಂದೆ ಸ್ತ್ರೀಯರು ಗೌಪ್ಯತೆಯನ್ನು ಕಾಪಾಡಲಾಗದೆ ಹೋಗಲಿ” ಎಂದು ಸಮಸ್ತ ಸ್ತ್ರೀಯರಿಗೆ ಶಾಪ ಕೊಟ್ಟನು.

ನಂತರ ಸುದೀರ್ಘವಾಗಿ ಶ್ರೀಕೃಷ್ಣನಿಂದ ಪಾಂಡವರಿಗೆ ನೀತಿ ಬೋಧೆಯ ಸುಧಾಸೇಚನವಾಯಿತು. ಹೀಗೆ ಕೃಷ್ಣನ ದಿವ್ಯೋಪದೇಶದಿಂದ ಕೌಂತೇಯರು ತಮ್ಮಿಂದಾದ ಕಾರ್ಯಗಳು ಧರ್ಮ ಸಮ್ಮತವಾಗಿದ್ದು ಕಾಲಚಕ್ರದ ಚಲನೆಗಾಗಿ ನಿಯತಿಯ ನಿಯಮದ ಪಾಲನೆಯಷ್ಟೆ ಎಂಬ ಸತ್ಯ ತಿಳಿದು ಒಮ್ಮೆಗೆ ನಿರಾಳರಾದರು.

ಹದಿನೆಂಟು ಅಕ್ಷೋಹಿಣಿ ಸೇನೆಯ ಕ್ರೋಢೀಕರಣವಾಗುವಲ್ಲಿ ಭೂಜಾತ ವೀರರು ಏಕತ್ರರಾಗಿ ಹದಿನೆಂಟು ದಿನ ಒಂದು ಕರಾಳ ರಾತ್ರಿ ಸಹಿತವಾಗಿ ಸಾಗಿದ ಧರ್ಮಯುದ್ಧ ರೂಪದ ಧರ್ಮ ಯಜ್ಞಕ್ಕೆ ಆಹುತಿಯಾಗಿದ್ದರು. ಧರ್ಮಸಂಸ್ಥಾಪನಾಚಾರ್ಯ ಸಂಭವಿಸಿ ಧರೆಗೆ ಬಂದ ಉದ್ದೇಶ ಭೂಭಾರಹರಣದ ಕಾರ್ಯ ಈಗ ಬಹ್ವಂಶ ಪೂರೈಸಲ್ಪಟ್ಟಿದೆ. ದ್ವಾಪರ ಪುರುಷನಿಗೆ ನಿವೃತ್ತಿಯನ್ನು ಒದಗಿಸಿ ಕಲಿಪುರುಷನ ಯುಗ ಅಧಿಪತ್ಯಕ್ಕೆ ಅವಕಾಶ ಒದಗಿಸುವ ಸಿದ್ಧತೆಯಾಗಿದೆ. ಕಾಲಗರ್ಭದೊಳಗೆ ಏನೇನು ಅಡಗಿದೆಯೋ, ಲೀಲಾಮಾನುಷನ ಸಂಕಲ್ಪವೇನಿತ್ತೋ ಅದನ್ಯಾರೂ ಅರಿಯುವುದಾಗಲಿ, ತಡೆಯುವುದಾಗಲಿ ಸಾಧ್ಯವಾದೀತೆ? ಭೂದೇವಿ ಹಗುರಳಾಗಿ ಶ್ರೀಮನ್ನಾರಾಯಣನಿಗೆ ಕೃತಜ್ಞಳಾಗಿದ್ದಾಳೆ. ಕಲ್ಪಾಂತ್ಯಕ್ಕೆ ಶೂನ್ಯವನ್ನು ಕಂಡ ತ್ರೈಮೂರ್ತಿಗಳಲ್ಲೋರ್ವನಾದ ಶ್ರೀಹರಿಗೆ ಈ ನಾಶವೇನೂ ಮಹತ್ ಎಣಿಸದು. ಶೂನ್ಯಾವಸ್ಥೆಯಿಂದ ಸೃಷ್ಟಿಯ ಕಾರ್ಯ ಪುನರಪಿ ಚಾಲಿತವಾಗಿ ಪಾಲಿತವಾಗಿ ಲಯಗೊಳ್ಳುವುದು ಕಾಲಚಕ್ರದ ಚಲನೆಯ ಕ್ರಮ. ಇದರ ನಿಯಾಮಕ ಮತ್ತು ಪಾಲಕ ಶ್ರೀಮನ್ನಾರಾಯಣ. ಈಗ ಗೋಪಾಲಕನೂ – ಭೂಪಾಲಕನೂ ಆಗಿದ್ದು ಏನೂ ಮಾಡದೆ, ಎಲ್ಲವನ್ನೂ ಮಾಡಿಸಿ ಮುಗುಳ್ನಗುತ್ತಾ ನಿಂತಿದ್ದಾನೆ.

ಯುದ್ದದಲ್ಲಿ ಸೋತು ಸತ್ತವರು ಪುಣ್ಯಪ್ರದ ಕುರುಕ್ಷೇತ್ರದ ಬಲವೂ, ವೀರಮರಣದ ಪ್ರಾಪ್ತಿಯೂ ಆಗಿ ಸ್ವರ್ಗವೇರಿ ಗೆದ್ದಿದ್ದಾರೆ. ಯುದ್ದದಲ್ಲಿ ಗೆದ್ದವರು ಬದುಕಿ ಉಳಿದೂ ತಮ್ಮವರಾದ ಬಂಧುಗಳ ಹತ್ಯೆಯ ದುಃಖದಿಂದ ಬಸವಳಿದು ಸೋತಿದ್ದಾರೆ. ಅಂತೂ ಮಹಾಭಾರತ ಯುದ್ಧ ಸಂಪನ್ನವಾಗಿದೆ. ಕೃತಕೃತ್ಯನಾದ ಯೋಗೇಶ್ವರನಾದ ಶ್ರೀಕೃಷ್ಣ ದುಃಖಿತರೆಲ್ಲರ ಮನಸ್ಸನ್ನೂ ತಿಳಿಗೊಳಿಸಿ ಅಭಯ ಕರುಣಿಸಿದ್ದಾನೆ. ಎಲ್ಲಿ ಧರ್ಮವಿದೆಯೊ ಅಲ್ಲಿ ಭಗವಂತನ ಸಹಯೋಗವಿರುತ್ತದೆ. ಅಲ್ಲಿ ಜಯವೂ ಸ್ಥಿತವಾಗುತ್ತದೆ. ಧರ್ಮವನ್ನು ರಕ್ಷಿಸಿದವರನ್ನು ಧರ್ಮವೇ ರಕ್ಷಿಸುತ್ತದೆ ಎಂಬ ಶಾಸ್ತ್ರೋಕ್ತಿ ಮತ್ತೊಮ್ಮೆ ಇಲ್ಲಿ ಸಾಬೀತಾಗಿದೆ.

ಹದಿನೆಂಟು ದಿನಗಳ ಅಲ್ಪಾವಧಿಯಲ್ಲಿ ಶರಧಿಯೋಪಾಧಿಯ ಕ್ಷಾತ್ರ ಕುಲ ಕ್ಷಯವಾಗಿ ಹೋಗಿದೆ. ಆ ಬಳಿಕ ಗಂಗಾತೀರದಲ್ಲಿ ಇದ್ದು ಒಂದು ಮಾಸ ಕಾಲ ಶ್ರೀಕೃಷ್ಣನಿಂದ ಧೃತರಾಷ್ಟ್ರ ಸಹಿತರಾಗಿ ಗಾಂಧಾರಿ, ಕುಂತಿ, ದ್ರೌಪದಿ, ಕೌಂತೇಯರು ಬಹಳಷ್ಟು ಧರ್ಮಜಿಜ್ಞಾಸೆ ನಿರತರಾಗಿದ್ದು ಕಾಲಕಳೆದರು. ಧರ್ಮರಾಯನಂತೂ ದುಗುಡದೊಳಗಿಂದ ಹೊರಬಂದು ಮತ್ತೆ ಒಳಹೊಕ್ಕು ವಿಚಲಿತ ಮನಸ್ಕನಾಗುತ್ತಾ “ಕೃಷ್ಣಾ! ನಾವು ಹುಟ್ಟಿದ್ದೂ ವನ ಮಧ್ಯದಲ್ಲಿ, ಬಾಲ್ಯ ಮತ್ತು ಯೌವನದಲ್ಲೂ ವನಸಿರಿಯೆ ನಮಗೆ ಸ್ವರ್ಗ ಸದೃಶ ಕ್ಷೇತ್ರವಾಗಿ ಆಶ್ರಯ ನೀಡಿತ್ತು. ಈಗಲೂ ಎಲ್ಲವನ್ನು ನ್ಯಾಸಗೊಳಿಸಿ ಮತ್ತೆ ವನವಾಸಿಯಾಗುವ ಇಚ್ಚೆ ನನ್ನ ಮನದಲ್ಲಿ ಸಮುದ್ರದ ತರಂಗಗಳಂತೆ ನಿರಂತರ ಪ್ರೇರಣೆಯಾಗಿ ಅಂತರಂಗದಲ್ಲಿ ಅಪ್ಪಳಿಸುತ್ತಿದೆ. ಈ ಧರ್ಮ ಸಂಕಟಕ್ಕೆ ನೀನು ಪರಿಹಾರ ಸೂಚಿಸಬೇಕು” ಎಂದು ಬೇಡಿದನು.

ಧರ್ಮರಾಯ ನಿನಗೆ ಧರ್ಮ ಏನು?, ಧರ್ಮ ಪಾಲನೆ, ಧರ್ಮ ಸಂರಕ್ಷಣೆ ಹೇಗೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿದೆಯೇ? ಆದರೂ ಗೊಂದಲದಿಂದ ನಿನಗೆ ವಿಸ್ಮರಣೆಯಾಗಿದ್ದರೆ ಮತ್ತೊಮ್ಮೆ ಹೇಳುತ್ತೇನೆ” ಎಂದು ಆರಂಭಿಸಿದನು…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page