ಭಾಗ – 467
ಭರತೇಶ್ ಶೆಟ್ಟಿ, ಎಕ್ಕಾರ್

ವಿದುರ ತನ್ನ ಅಣ್ಣನೂ ಮಹಾರಾಜನೂ ಆದ ಧೃತರಾಷ್ಟ್ರನಿಗೆ ಕಥೆ ಹೇಳಲು ಆರಂಭಿಸಿದನು. “ಅಣ್ಣಾ! ಹಿಂದೆ ಓರ್ವನು ಯಾವುದೋ ಒಂದು ಘೋರ ಕಾನನದಲ್ಲಿ ಸಂಚರಿಸುತ್ತಿರುವಾಗ ದುಷ್ಟ ಮೃಗಗಳನ್ನು ಕಂಡು ಹೆದರಿ ಓಡಿದನಂತೆ. ಓಡುತ್ತಿದ್ದಾಗ ಘೋರಾಕೃತಿಯ ರಾಕ್ಷಸಿಯೋರ್ವಳು ಎದುರಾದಳಂತೆ. ಆ ರಾಕ್ಷಸಿ ಅವನನ್ನು ಬಾಚಿ ಎತ್ತಿ ಕೊಳ್ಳಲು ಕೈ ಚಾಚಿದಳಂತೆ. ಅಲ್ಲಿಂದ ನುಸುಳಿದ ಆ ವ್ಯಕ್ತಿ ಓಡುತ್ತಾ ಒಂದು ಹಾಳು ಬಾವಿಗೆ ಜಾರಿದನಂತೆ. ಹಾಗೆ ಜಾರಿ ಬೀಳುವಾಗ ಆ ಬಾವಿಯ ಬದಿಯಲ್ಲಿ ಬೆಳೆದು ನಿಂತಿದ್ದ ಮರದ ಗೆಲ್ಲನ್ನು ಹಿಡಿದು ನೇತಾಡಿದನಂತೆ. ಬಾವಿಯ ತಳ ನೋಡಿದರೆ ಕ್ರೂರ ವಿಷ ಸರ್ಪಗಳು ಬುಸುಗುಟ್ಟುತ್ತಿದ್ದವಂತೆ. ಮೇಲೆ ನೋಡಿದರೆ ಬಾವಿಯ ದಂಡೆಯಲ್ಲಿ ಮದ್ದಾನೆಯೊಂದು ಘೀಳಿಡುತ್ತಾ ಘೀಂಕರಿಸುತ್ತಿತ್ತಂತೆ. ಇಂತಹ ವಿಷಮ ಸ್ಥಿತಿಯಲ್ಲಿ ತಾನು ಹಿಡಿದು ನೇತಾಡುತ್ತಿರುವ ಮರದ ಗೆಲ್ಲನ್ನು ನೋಡಿದರೆ, ಆ ಗೆಲ್ಲಿನಲ್ಲಿಯೇ ಒಂದು ಜೇನುಗೂಡಿದ್ದು ನೊಣಗಳು ಮೇಲೇಳುತ್ತಿದ್ದವಂತೆ. ಆ ಜೇನುಗೂಡಿನಿಂದ ಹನಿ ಹನಿಯಾಗಿ ಜೇನು ತೊಟ್ಟಿಕ್ಕುತ್ತಿದ್ದು ಆ ಜೇನುಹನಿಗಳನ್ನು ನೆಕ್ಕುವ ಆಸೆಯಾಗಿ ನಾಲಗೆ ಚಾಚಿದನಂತೆ. ಅದೇ ಸಮಯ ಟೊಳ್ಳಾಗಿದ್ದ ಆ ಮರದ ಬುಡವನ್ನು ಹೆಗ್ಗಣ ಇಲಿಗಳು ಕೊರೆಯುತ್ತಾ ಇದ್ದವಂತೆ. ಮರ ಎಷ್ಟು ಹೊತ್ತಿಗೆ ಮಗುಚಿ ಬೀಳುವುದೋ ಎಂದು ಹೇಳುವುದಕ್ಕೆ ಬಾರದ ಸ್ಥಿತಿಯಲ್ಲಿತ್ತಂತೆ. ಆದರೂ ಆ ವ್ಯಕ್ತಿಗೆ ಬದುಕುವ ಮತ್ತು ಬದುಕಿರುವಾಗ ಜೇನನ್ನು ನೆಕ್ಕುವ ಅಭಿಲಾಷೆ ಬಲವಾಯಿತು ಹೊರತು, ತನಗೆ ಒದಗಿರುವ ಆಪತ್ತಿನ ಬಗ್ಗೆ ವಿವೇಚಿಸುವ ವಿವೇಕ ಜಾಗೃತವಾಗಲಿಲ್ಲವಂತೆ. ಅತಿ ಆಸೆ ಅವನಲ್ಲಿ ಹೆಚ್ಚಿ ಹೋಗಿ ಏನಾದರೂ ಆಗಲಿ, ತಾನು ಸವಿಯಾದ ಜೇನನ್ನು ಸವಿಯುತ್ತಲೆ ಇರುತ್ತೇನೆ ಎಂಬ ಭಾವ ಸ್ಥಿರವಾಗಿತ್ತಂತೆ. ಆಪತ್ತನ್ನು ಕಂಡೂ ಕುರುಡಾಗಿದ್ದು, ಲೋಭವಶನಾದ ಪರಿಣಾಮ ಆತ ನಾಶಹೊಂದಿದನಂತೆ.”
“ಅಣ್ಣಾ! ಈ ಕಥೆಯಲ್ಲಿ ಆ ವ್ಯಕ್ತಿ ನಮ್ಮಂತಹ ಜೀವನು. ಕಾಡು ಸಂಸಾರವು, ಮೃಗಗಳು ರೋಗಗಳು, ಬೆನ್ನಟ್ಟಿ ಬಂದ ಘೋರಾಕಾರದ ರಾಕ್ಷಸಿಯೆ ಮುಪ್ಪು, ಬಾವಿಯೆ ದೇಹ, ಬಾವಿಯೊಳಗಿನ ವಿಷ ಸರ್ಪಗಳೇ ಯಮ, ಆಧಾರವಾಗಿದ್ದ ಮರದ ಕೊಂಬೆ ಜೀವನದ ಆಸೆ, ಆನೆ ಸಮಯ, ಕೊರೆದು ಸವೆಸುತ್ತಿದ್ದ ಇಲಿ ಹೆಗ್ಗಣಗಳು ರಾತ್ರಿ ಹಗಲುಗಳು, ಜೇನು ನೊಣಗಳ ಗೂಡು ಕಾಮಗಳು, ಒಸರುತ್ತಿದ್ದ ಜೇನು ತುಪ್ಪ ಭೋಗ ಲಾಲಸೆಗಳು. ಇವೆಲ್ಲಾ ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿರುವ ಅವಿಭಾಜ್ಯ ಭಾಗಗಳು. ಅತಿಯಾದ ಆಸೆ, ಕಾಮ, ಭೋಗಾಪೇಕ್ಷೆ ವಿವೇಕವನ್ನು ಮಂಕುಗೊಳಿಸಿ ತನ್ನೊಳಗೆ ಉತ್ಪನ್ನವಾದ ಕಾಮವನ್ನು ಚಟವಾಗಿಸುತ್ತದೆ. ಜೀವನದಲ್ಲಿ ಸಾಧಿಸಬೇಕಾದುದರಿಂದ ವಿಮುಖಗೊಳಿಸಿ ಕೊನೆಗೆ ದುರಂತಮಯ ಅಂತ್ಯಕ್ಕೆ ಕಾರಣವಾಗಿಸುತ್ತದೆ. ಈ ಕಥೆಯ ಸಾರಾಂಶ ಅತಿ ಆಸೆಯೆ ಮಾನವ ಜೀವನದ ಕಡು ದುಃಖಗಳಿಗೆ ಮೂಲ ಕಾರಣ ಎಂಬುದಾಗಿ. ನಮ್ಮ ದುಃಖಗಳಿಗೆ ನಾವೇ ಕಾರಣರು ಹೊರತು ಅನ್ಯರು ಕಾರಣಲಾಗಲಾರರು. ತಾನು ತನ್ನ ಮನಸ್ಸನ್ನು ಧೃಡಗೊಳಿಸಿ, ಆಪತ್ತನ್ನೀಯಬಲ್ಲ ಆಸೆಯನ್ನು ತೊರೆದು ಸಾಧನಾ ಪಥ ಹಿಡಿದರೆ ಶತ ಸಿದ್ಧವಾದ ಜೀವನದ ಅಂತ್ಯವೂ ಸುಗಮವಾಗಿರುತ್ತದೆ.
ಇಷ್ಟನ್ನು ತಿಳಿದ ಮೇಲೆ ನೀನೂ ಈಗ ನಿನ್ನ ದುಃಖಕ್ಕೆ ಕಾರಣವಾದ ಮೋಹವನ್ನು ತೊರೆಯಬೇಕು. ಅದಕ್ಕಾಗಿ ಮೊದಲು ದುರ್ಬಲವಾದ ನಿನ್ನ ಮನಸ್ಸನ್ನು ಧೃಡ ಮತ್ತು ಗಟ್ಟಿಗೊಳಿಸಬೇಕು. ಆಪತ್ತನ್ನು ಹೊತ್ತು ತರುತ್ತಿರುವ ನಿನ್ನ ಚಿಂತನೆಗಳನ್ನು ಬಿಟ್ಟರೆ ನಿನಗಾವರಿಸಿರುವ ಚಿಂತೆಯೂ ದೂರವಾಗಲಿದೆ. ಸತ್ಕರ್ಮ ನಿರತನಾಗು. ಧರ್ಮ ಬುದ್ಧಿಯಿಂದ ವಿವೇಚನೆ ಮಾಡಿ ನೋಡು. ಸುಜನರಾದ ಪಾಂಡವರು ನಿನಗೆ ಮೂರನೆಯವರಲ್ಲ. ನಿನ್ನ ಸ್ವಂತ ತಮ್ಮನ ಮಕ್ಕಳು ನಿನಗೂ ಮಕ್ಕಳೇ ಆಗಿದ್ದಾರೆ. ಸದಾ ಧರ್ಮಪಾಲಕರಾಗಿ ಬದುಕಿದ ಅವರು ಇನ್ನೂ ಧರ್ಮಿಷ್ಟರಾಗಿಯೆ ಇರಬಲ್ಲರು ಎಂಬ ವಿಶ್ವಾಸ ನಿನಗೆ ಮೂಡಲಿ. ಮೇಲಾಗಿ ನೀನು ಜವಾಬ್ದಾರಿಯುತ ಮಹಾರಾಜ. ನಿನ್ನ ಸ್ವಂತ ಸ್ವಾರ್ಥಕ್ಕಿಂತ ಸಾಮ್ರಾಜ್ಯದ ಪ್ರಜೆಗಳ ಸುಖ ನಿನಗೆ ಕರ್ತವ್ಯವಲ್ಲವೆ? ಅದನ್ನು ಸಾಧಿಸುವ ಬಗೆ ಹೇಗೆಂದು ತರ್ಕಿಸಿ ನೋಡು. ಈ ರೀತಿ ನೀನು ವಿವೇಕಿಯಾಗಿ ವ್ಯವಹರಿಸಿದೆ ಎಂದಾದರೆ ನಿನಗೊದಗಿರುವ ಸಂಕಟ ಮಾಯವಾಗಲಿದೆ” ಎಂದು ವಿವರಿಸಿ ಸಂತೈಸಿದನು. ನಂತರ ಚೈತನ್ಯ ಹೊಂದಿದ ಅಣ್ಣನನ್ನು ಸಮಾಧಾನಿಸಿ, ಮಂತ್ರಿಯಾಗಿ ಸನ್ಮಾರ್ಗದರ್ಶನ ಮಾಡತೊಡಗಿದನು. “ಅಣ್ಣಾ! ನೀನು ಮೊದಲಾಗಿ ಧರ್ಮಯುದ್ಧ ಗೆದ್ದ ಧರ್ಮಾತ್ಮರಾದ ಪಾಂಡುಪುತ್ರರನ್ನು ಅರಮನೆಗೆ ಕರೆಸಿಕೋ. ಆನಂತರ ಈಗಾಗಲೆ ಸಾಗಿರುವ ಯುದ್ಧದಲ್ಲಿ ವೀರಮರಣವನ್ನಪ್ಪಿದವರಿಗೆಲ್ಲ ಅಪರಕ್ರಿಯೆ ನಡೆಸುವ ವ್ಯವಸ್ಥೆ ಮಾಡಿಸು. ಮೃತ ಶರೀರಗಳಿಗೆಲ್ಲ ವಿಧಿಪೂರ್ವಕ ಅಗ್ನಿ ಸ್ಪರ್ಶ, ಅಂತ್ಯ ಸಂಸ್ಕಾರ, ಉತ್ತರ ಕ್ರಿಯೆಗಳನ್ನು ನಡೆಸು. ಸತ್ತವರೆಲ್ಲರೂ ಪುಣ್ಯಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡುತ್ತಾ ವೀರ ಮರಣ ಪಡೆದವರು. ಅವರಿಗೆಲ್ಲ ಸದ್ಗತಿಯಾಗುತ್ತಿದ್ದಂತೆ ವೀರಸ್ವರ್ಗವನ್ನು ಏರುತ್ತಾರೆ ಎಂಬುವುದು ನಿಸ್ಸಂಶಯ. ಅಷ್ಟಾಗುತ್ತಲೆ ಅವರೆಲ್ಲರೂ ಪಿತೃಲೋಕವನ್ನೇರಿ ನಮ್ಮನ್ನೆಲ್ಲ ಅನುಗ್ರಹಿಸುತ್ತಾರೆ. ನಿನ್ನ ಮನದ ದುಗುಡವೂ ನಿವಾರಿಸಲ್ಪಟ್ಟು ಮನಶಾಂತಿ ಮೂಡುತ್ತದೆ. ಹೀಗೆ ಸಮಗ್ರ ವಿಚಾರಗಳನ್ನು ತಿಳಿಸಿ ನಿಕೃಷ್ಟ ಸ್ಥಿತಿಯಲ್ಲಿದ್ದ ಅಣ್ಣ ಧೃತರಾಷ್ಟ್ರನನ್ನು ಎಚ್ಚರಿಸಿ ವಿವೇಕ ಜಾಗೃತಗೊಳಿಸಿ, ಉಚಿತಾನುಚಿತಗಳ ವಿಮರ್ಷೆ ಮಂಡಿಸಿದನು.
ಧೃತರಾಷ್ಟ್ರನ ಮನಸ್ಸಿಗೆ ಏಕೋ ಹೌದೆಂಬ ಭಾವ ಮೂಡಿ ” ವಿದುರಾ! ನೀನು ಹೇಳುತ್ತಿರುವ ಮಾತಿನ ಒಂದೊಂದು ವಾಕ್ಯವೂ ಸತ್ಯವೇ ಆಗಿದೆ. ನಾನು ಬುದ್ದಿಯನ್ನು ಕಳಕೊಂಡಿದ್ದೆನು, ಪುತ್ರ ವ್ಯಾಮೋಹದ ಬಲೆಯಲ್ಲಿ ಸಿಲುಕಿದ್ದೆನು. ಈಗ ಆಗಿರುವ ನಷ್ಟಕ್ಕಿಂತಲೂ ನಾನು ಮೋಹ ಬಂಧನಕ್ಕೊಳಗಾಗಿದ್ದುದೇ ಅಪಾಯಕಾರಿಯಾಗಿತ್ತು. ಈಗ ನನ್ನ ಶಾರೀರಿಕ ಕಣ್ಣು ಕಾಣಿಸದಿದ್ದರೂ ಅಂತರಂಗದ ಕಣ್ಣು ಕಾಣಿಸುತ್ತಿದೆ. ಬಾ ತಮ್ಮಾ! ಮೊದಲಾಗಿ ನಾವು ಯುದ್ಧರಂಗದತ್ತ ಹೋಗಬೇಕು. ಪಾಂಡವರನ್ನು ಸ್ವಾಗತಿಸಬೇಕು. ಗತಿಸಿದ ವೀರರೆಲ್ಲರಿಗೂ ಮಾಡಬೇಕಾದುದನ್ನು ಮಾಡಿಸಬೇಕು. ನೀನು ಜೊತೆಗಿದ್ದು ನನಗೆ ಸೂಕ್ತ ಮಂತ್ರಾಲೋಚನೆ ನೀಡುತ್ತಿರು” ಎಂದು ವಿನಂತಿಸಿದನು. ಹೀಗೆ ನುಡಿದ ಧೃತರಾಷ್ಟ್ರ ಗಾಂಧಾರಿ, ಕುಂತಿ ಮತ್ತು ತನ್ನ ಸೊಸೆಯಂದಿರನ್ನೆಲ್ಲ ರಥವೇರಿಸಿ ವಿದುರನೊಂದಿಗೆ ಕುರುಕ್ಷೇತ್ರದತ್ತ ಹೊರಟನು.
ಈ ಭಾಗದಲ್ಲಿ ವಿದುರನ ಮುಖೇನ ಕೃತ ಅಭಯ ಪ್ರಧಾನದ ಪ್ರಕ್ರಿಯೆಗೆ ವಿಶೇಷವಾದ ವ್ಯಾಖ್ಯಾನವಿದೆ. ನಮ್ಮ ಜೀವನದಲ್ಲೂ ನಾವು ಯಾರಾದರು ದುಃಖಿತರು, ಸಂಕಷ್ಟಕ್ಕೀಡಾದವರು ಸಿಕ್ಕಾಗ ಅವರಿಗೆ ಅಭಯವನ್ನು ನೀಡಿ, ಸೂಕ್ತ ಮಾರ್ಗದರ್ಶನ ಮಾಡಿ, ಅವರಿಗೆ ಒದಗಿರುವ ಆಪತ್ತನ್ನು ಮೀರಿ ನಿಂತು ಮೆಟ್ಟಿ ಗೆಲ್ಲುವ ಸತ್ಪಥ ತೋರುವ ಕಾರ್ಯ ಮಾಡಬೇಕು. ಆಗ ಅದು ಒಂದು ಮಹಾಫಲ ನೀಡಬಲ್ಲ ಧರ್ಮ ಯಜ್ಞ, ನಿಷ್ಠೆಯ ವೃತೋಪವಾಸಗಳನ್ನು ಮಾಡಿದುದಕ್ಕಿಂತಲೂ ಅಧಿಕವಾದ ಪುಣ್ಯವನ್ನು ದಯಪಾಲಿಸುತ್ತದೆ ಎಂಬುವುದು ಶಾಸ್ತ್ರ ಖಚಿತ ವಿಚಾರವಾಗಿದೆ
ಮುಂದುವರಿಯುವುದು…






















































