ಭಾಗ – 466
ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೬೬ ಮಹಾಭಾರತ
“ಕೃಷ್ಣಾ! ಗುರುಪುತ್ರನ ಹಣೆಯಲ್ಲಿದ್ದ ಶಿರೋರತ್ನವಿದು. ಆತನಿಂದ ಕಿತ್ತು ತಂದಿದ್ದೇನೆ” ಎಂದನು ಭೀಮ. ಆಗ ಶ್ರೀಕೃಷ್ಣ ಪಾಂಡವರಿಗೆ ಅಶ್ವತ್ಥಾಮನ ಜನ್ಮ ವೃತ್ತಾಂತವನ್ನು ವಿವರಿಸತೊಡಗಿದನು “ದ್ರೋಣಾಚಾರ್ಯರಿಗೆ ಕೃಪಾಚಾರ್ಯರ ತಂಗಿ ಕೃಪಿಯ ಜೊತೆ ವಿವಾಹವಾಗಿ ಬಹುವರ್ಷವಾದರು ಸಂತಾನಭಾಗ್ಯ ಒದಗಿರಲಿಲ್ಲ. ಪರಿಣಾಮವಾಗಿ ಮಹಾದೇವ ಶಿವನನ್ನು ಮೊರೆಹೋಗಿ ತಪಸ್ಸನ್ನಾಚರಿಸತೊಡಗಿದರು. ಶಿವನ ಅನುಗ್ರಹದಿಂದ ರುದ್ರಾಂಶ ಸಂಭೂತನಾಗಿ ಜನಿಸಿದವನು ಈ ಅಶ್ವತ್ಥಾಮ. ಶಿರೋರತ್ನಧಾರಿಯಾಗಿದ್ದ ಈತ ಅವಧ್ಯನಾಗಿದ್ದಾನೆ. ಈಗಲೂ ಆತ ಚಿರಂಜೀವಿಯೇ ಆಗಿರಲಿದ್ದಾನೆ. ಕೃತ ಪಾತಕಗಳಿಗೆ ಶಿಕ್ಷೆ ಅನುಭವಿಸುತ್ತಾ, ಶಿರೋರತ್ನ ಛೇದಿಸಿದ ಗಾಯದಿಂದ ರಕ್ತವಿಳಿಸುತ್ತಾ, ಕಾಡಾಡಿಯಾಗಿದ್ದು ಒಂಟಿ ಜೀವನ ಜೀವಿಸಬೇಕಾದ ದುಸ್ಥಿತಿ ಆತನಿಗೊದಗಿದೆ. ಆದರೂ ರುದ್ರದೇವನ ಅನುಗ್ರಹ ಬಲ, ದ್ರೋಣಾಚಾರ್ಯರ ತಪೋಬಲದಿಂದಾಗಿ ಚಿರಂಜೀವಿತ್ವ ಪಡೆದ ಆತ ಇನ್ನೂ ಚಿರವಾಗಿ ಬದುಕುಳಿಯಲಿದ್ದಾನೆ” ಎಂದು ವಿವರಿಸಿದನು.
ಭೀಮನು ಆ ರತ್ನವನ್ನು ಅಗ್ನಿ ಸಂಭವೆಯೂ, ಸಾಮ್ರಾಜ್ಞಿಯೂ ಆದ ದ್ರೌಪದಿಗೆ ಇತ್ತನು. ಮಹಾರಾಣಿ ದ್ರುಪದಜೆ ಸ್ವೀಕರಿಸಿ ಆ ರತ್ನವನ್ನು ಚಕ್ರವರ್ತಿ ಧರ್ಮರಾಯನಿಗಿತ್ತಳು. ವ್ಯಾಸರು ಮತ್ತು ನಾರದರು ಕೃಷ್ಣ ಸಹಿತರಾಗಿ ಪಾಂಡವರನ್ನು ಹರಸಿ ಶ್ರೇಯಸ್ಸಾಗಲಿ ಎಂದು ಆಶೀರ್ವದಿಸಿದರು.
ಇತ್ತ ಧೃತರಾಷ್ಟ್ರನು ಏಕಾಂಗಿಯಾಗಿ ಹಸ್ತಿನಾವತಿಯಲ್ಲಿ ಕೊರಗುತ್ತಿದ್ದಾನೆ. ಯೋಚಿಸತೊಡಗಿದ್ದಾನೆ – ಒಂದೊಮ್ಮೆ ಹಸ್ತಿನೆಯ ಸಿಂಹಾಸನವೇರುವಲ್ಲಿ ಸಮರ್ಥ ಉತ್ತರಾಧಿಕಾರಿ ಇರದಂತಾಗಿತ್ತು. ಜೇಷ್ಠನಾದ ತಾನು ಅಂಧನಾಗಿದ್ದು, ಅಂಗವೈಕಲ್ಯದ ಕಾರಣ ಬಾಹಿರನಾಗಿದ್ದೆ. ಧರ್ಮಾತ್ಮನಾದರೂ ವಿದುರ ದಾಸಿ ಪುತ್ರನಾದ ಕಾರಣ ಅಧಿಕಾರ ದಾಯಿತ್ವ ಹೊಂದಿರಲಿಲ್ಲ. ಹಾಗಾಗಿ ಉಳಿದ ಮಧ್ಯಮ ಅರ್ಹತೆಯ ತಮ್ಮ ಪಾಂಡು, ಚರ್ಮ ರೋಗಗ್ರಸ್ಥನಾಗಿದ್ದರೂ ಗಜಪುರದ ಸಿಂಹಾಸನಾರೂಢನಾಗುವ ಭಾಗ್ಯ ಪಡೆದಿದ್ದನು. ಸಮರ್ಥ ವೀರನಾಗಿ ಚಕ್ರವರ್ತಿಯೂ ಆಗಿ ಆಳ್ವಿಕೆ ನಡೆಸಿದ್ದ. ಆತನ ಮರಣದ ಬಳಿಕ, ಅರಾಜಕತೆ ಉಂಟಾಗಬಾರದೆಂದು ಕಾರ್ಯಕಾರಿಣಿ ರಾಜನಾಗಿ, ಹಸ್ತಿನೆಯ ರಾಜ ಸಿಂಹಾಸನ ಏರಬೇಕಾಗಿ ಬಂತು. ಆ ಬಳಿಕ ಅಂತಹ ಕೊರತೆ ಮಾಯವಾಗಿ ನೂರಾರು ಮಂದಿ ರಾಜಕುಮಾರರು ಹಸ್ತಿನೆಯ ಅರಮನೆ ತುಂಬಿ ತುಳುಕಿಸಿದ್ದರು. ಆದರೆ ಕಾಲಚಕ್ರ ತಿರುಗಿ ಧಾರ್ತರಾಷ್ಟ್ರರು ಮತ್ತು ಪಾಂಡು ಪುತ್ರರ ನಡುವೆ ದಾಯಾದಿ ಕಲಹದಿಂದ ಕಾರಣ ಪಡೆದು ಮಹಾಸಂಗ್ರಾಮವಾಯಿತು. ಏಕಛತ್ರದ ಅಡಿಯಲ್ಲಿ ಕೌರವರಾಗಿ ಒಮ್ಮತದಿಂದ ಇರಬೇಕಾದವರು ಇಬ್ಭಾಗವಾಗಿ ಮಹಾಭಾರತ ಯುದ್ಧದಲ್ಲಿ ಸರ್ವನಾಶವಾಗಿ ಹೋಗಿ ಪಾಂಡುಪುತ್ರರು ಐವರು ಮಾತ್ರ ಉಳಿದಿದ್ದಾರೆ. ಪಾಂಡು ಕುಮಾರರಿಗೆ ಪಿತನಿಲ್ಲ. ಧೃತರಾಷ್ಟ್ರನಾದ ತನಗೆ ಪುತ್ರರಿಲ್ಲ. ಈ ಹೊತ್ತು ಮಹಾವೃಕ್ಷವಾಗಿ ವೃತ್ತಾಕಾರದಲ್ಲಿ ಕೊಂಬೆಗಳನ್ನು ಚಾಚಿ ಹೆಮ್ಮರವಾಗಿದ್ದ ತಾನು ಮಕ್ಕಳ ಮರಣದಿಂದಾಗಿ ಮೋಟುಮರದಂತಾಗಿದ್ದೇನೆ. ಎಂದು ಪರಿ ಪರಿಯಾಗಿ ಅವಲೋಕನ ಮಾಡುತ್ತಾ ಮರುಗುತ್ತಿದ್ದಾನೆ.
ಹೀಗೆ ತಾಳಲಾಗದ ಪುತ್ರ ವಿಯೋಗದಿಂದ ಬೆಂದು ಬಸವಳಿದು ಧೃತಿಗೆಟ್ಟು ಧೃತರಾಷ್ಟ್ರ ಕಂಗಾಲಾಗಿದ್ದಾನೆ. ಆಗ ಅಲ್ಲಿಗೆ ಬಂದ ಮಂತ್ರಿಯೂ ಸೋದರನೂ ಆದ ವಿದುರ ತನ್ನ ಅಣ್ಣನನ್ನು ಸಂತೈಸತೊಡಗಿದನು. “ಅಣ್ಣಾ! ನೀನು ಯಾಕಾಗಿ ದುಃಖಿಸುತ್ತಿರುವೆ? ಜೀವನ ಇರುವುದು ಅನುಭವವನ್ನು ನೀಡುವುದಕ್ಕಾಗಿ. ನಾವೇನು ಮಾಡಿದ್ದೇವೊ ಅದಕ್ಕೆ ತದ್ರೂಪವಾದುದು ನಮಗೊದಗಿ ಬರುತ್ತದೆ. ಆ ಕಾಲದಲ್ಲಿ ಅದನ್ನು ಅನುಭವಿಸದ ಹೊರತು ಅನ್ಯ ವಿಧಿಯಿಲ್ಲ. ದುಃಖಿಗಳಿಗಾಗಿಯೆ ಮಹಾತ್ಮರು ಹೇಳಿರುವ ವಿಚಾರವನ್ನು ನಾವು ಸ್ಮರಿಸಬೇಕು. ಏನೆಂದರೆ ಇದು ಮರ್ತ್ಯಲೋಕ. ಇಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಮೃತ್ಯುವನ್ನು ಹೊಂದ ಬೇಕಾದುದು ನಿಯಮ. ಹಾಗಾಗಿ ಸಾವು ಎಂಬುವುದು ಕಟ್ಟಿಟ್ಟ ಕಟು ಸತ್ಯ. ಜೀವರಾಶಿಗಳಾದ ನಾವೆಲ್ಲರೂ ಕಾಲ ಪ್ರೇರಿತರು. ಮಾತ್ರವಲ್ಲ ಕಾಲದ ಅಧೀನರು ಕೂಡ ಎಂಬುವುದನ್ನು ಮರೆಯುವಂತಿಲ್ಲ. ನಮ್ಮ ಜೀವನ ಎಂಬ ಪ್ರಕ್ರಿಯೆ ಕಸುಬಿನಲ್ಲಿ ಕುಲಾಲನ ವೃತ್ತಿಯಂತೆ. ಜನ್ಮ ಎಲ್ಲರಿಗೂ ಸಮಾನವಾಗಿ ಆ ಕುಂಬಾರನು ಯಾವ ರೀತಿ ಭೇದವಿಲ್ಲದೆ ಮಣ್ಣನ್ನು ಹದಗೊಳಿಸಿ ಚಕ್ರದ ಮೇಲಿಡುತ್ತಾನೊ ಅದೇ ರೀತಿಯಾಗಿರುತ್ತದೆ. ಇಲ್ಲಿ ಚಕ್ರ ಜನ್ಮ ಭೂಮಿಯ ಸ್ಥಾನ ಹೊಂದುತ್ತದೆ. ಆದರೆ ಕೆಲ ಕೆಲವು ಮಣ್ಣ ಪಾತ್ರೆಗಳು ಚಕ್ರದ ಮೇಲೆಯೆ ಒಡಕಾಗಿ ಹೋಗುತ್ತವೆ. ಇನ್ನು ಕೆಲವು ತಟ್ಟಿ ಮೆತ್ತುತ್ತಾ ಆಕಾರ ನೀಡುವಾಗ ಭಗ್ನಗೊಳ್ಳುವುದಿದೆ. ಮತ್ತೂ ಮುಂದುವರಿದು ಕೆಲವು ರೂಪ ಪಡೆದು ಪೂರ್ಣವಾದರೂ ಚಕ್ರದಿಂದ ಮೇಲಕ್ಕೆತ್ತುವಾಗ ತುಂಡಾಗುತ್ತವೆ. ಸುರಕ್ಷಿತವಾಗಿ ರೂಪುಗೊಂಡು ಚಕ್ರದಿಂದ ಮೇಲಕ್ಕೆತ್ತಿದರೂ ಕೆಲವು ಸುಡುವಾಗ ಒಡೆದು ಹೋಗುತ್ತವೆ. ಸುಟ್ಟ ಬಳಿಕ ಶೇಖರಿಸಿಟ್ಟಲ್ಲಿ ಜಾರಿ ಎಷ್ಟೋ ನಿಷ್ಪ್ರಯೋಜಕವಾಗುತ್ತವೆ. ಬಳಿಕ ಮಾರಲು ಒಯ್ಯುವಾಗ ತಾಗಿ, ಮಾರಿದರೂ ಬಳಸುವಾಗ ಜಾರಿ ಬಿದ್ದು ನಾಶವಾಗುತ್ತಲೆ ಇರುತ್ತದೆ. ಅಂತೂ ಎಲ್ಲಾದರೂ, ಹೇಗಾದರು ಒಂದೆಡೆ ನಷ್ಟವಾಗಲಿದೆ ಎಂಬುವುದು ನಿತ್ಯ ಸತ್ಯ ವಿಚಾರ. ಹಾಗೆಯೆ ನಾವು ಜೀವರು ರೂಪು ತಳೆಯುವಾಗ, ತಳೆಯುತ್ತಿರುವಾಗ ತಳೆದ ಮೇಲೆ ನಾಶ ಹೊಂದುತ್ತಲೆ ಇರುತ್ತೇವೆ. ಅದಕ್ಕಾಗಿ ಮರುಗಿದರೆ ನಮ್ಮಷ್ಟು ಮೂರ್ಖರು ಯಾರೂ ಇರಲಾರರು. ಯಾಕೆಂದರೆ ಒಂದು ದಿನ ಈಗ ಸುಸ್ಥಿತಿಯಲ್ಲಿದ್ದು ಮುಂದೊಂದು ದಿನ ಒಡೆದು ಮರಳಿ ಮೂಲ ಧಾತುವಾದ ಮಣ್ಣು ಸೇರಲಿರುವ ಪಾತ್ರೆಗೆ ಸಮಾನರು ಆಗಿದ್ದೇವೆ. ಈಗ ಅಳುತ್ತಿರುವ ನಾವು ಭವಿಷ್ಯದ ಒಂದು ದಿನ ಸಾಯುವ ಮುಖೇನ ಆದಿಯನ್ನು ಸೇರುವವರೇ ಅಲ್ಲವೆ? ಹಾಗಾಗಿ ನಿನ್ನ ದುಃಖ ಕೇವಲ ನಿನಗೆ ವೇದನೆ ನೀಡಬಲ್ಲುದು ಹೊರತು ಪರಿಹಾರವನ್ನಲ್ಲ. ಇಂದು ಸತ್ತವರಿಗಾಗಿ ನಾಳೆ ಸಾಯುವವರು ಅಳುತ್ತೇವೆಯೆ ಹೊರತು ಬೇರೆ ಗುಟ್ಟು ಇದರಲ್ಲಿ ಉಳಿದಿಲ್ಲ ಎಂಬ ಮೂಲ ಸತ್ಯವನ್ನು ಮನಗಾಣಬೇಕು. ಇನ್ನೂ ವಿಶ್ಲೇಷಿಸುವುದಾದರೆ ಶರೀರ ಮೌಲ್ಯ ಹೊಂದಿಲ್ಲ, ಅದು ಕೇವಲ ಮಾಧ್ಯಮ ಅಥವಾ ಸಾಧನ. ಗುರುತು, ಸಂಬಂಧ ಇರುವುದು ನಶ್ವರವಾದ ಈ ಶರೀರಕ್ಕೆ ಮಾತ್ರ. ಆದರೆ ಅತ್ಯಮೂಲ್ಯವಾದ ಆತ್ಮವನ್ನು ಯಾರೂ ಗಮನಿಸುವುದಿಲ್ಲ. ಇಂದು ಈ ಶರೀರದಲ್ಲಿದ್ದು ಮಗ, ಸೊಸೆ, ಅಮ್ಮ, ಅಪ್ಪ, ಪತ್ನಿ, ಸೋದರ, ಸೋದರಿ, ಮಿತ್ರ, ಬಂಧು ಆಗಿದ್ದರೂ, ಆತ್ಮ ನಾಶವಾಗದೆ ಶಾಶ್ವತವಾಗಿ ಉಳಿದಿರುತ್ತದೆ. ಆತ್ಮ ನಾಶ ಹೊಂದುವುದೂ ಇಲ್ಲ, ಪ್ರಾಪಂಚಿಕ ಸಂಬಂಧವನ್ನು ಬೆಳೆಸುವುದೂ ಇಲ್ಲ. ಶರೀರ ಮಾಧ್ಯಮದಿಂದ ಮಾತ್ರ ಆತ್ಮ ಇರುವವರೆಗೆ ಸಂಬಂಧ ಜೀವಂತವಾಗಿರುತ್ತದೆ. ಶರೀರ ತೊರೆದ ಆತ್ಮ ಇನ್ಯಾವುದೊ ಹೊಸ ಶರೀರವನ್ನು ಹೊಂದಿ ಮತ್ತೆ ಹುಟ್ಟು ಪಡೆಯುತ್ತದೆ. ಹಾಗೆ ಹುಟ್ಟು ಪಡೆದ ಶರೀರ ನಮ್ಮೆದುರು ಬಂದರೂ ಅನ್ಯ ಶರೀರಾಂತರ್ಗತ ಆತ್ಮವನ್ನು ಮಗನೋ, ಅಪ್ಪನೋ ಅಥವಾ ಇನ್ಯಾವ ಮೂಲ ಸಂಬಂಧವೋ ಎಂದು ಗುರುತಿಸಲಾಗದು. ಹಾಗೆಯೆ ಈಗ ನಮ್ಮೊಳಗಿರುವ ಆತ್ಮದಿಂದಾಗಿ ನಮ್ಮ ಶರೀರ ಜೀವಂತವಿದೆ. ಮುಂದೆ ನಮ್ಮ ಶರೀರದಿಂದ ಆತ್ಮ ಪ್ರತ್ಯೇಕವಾದರೆ ಇಂದು ನಮಗಿರುವ ಹೆಸರು ಶರೀರಕ್ಕೆ ಮಾತ್ರ ಸೀಮಿತವಾಗಿ ಹೆಣ ಎಂದು ಕರೆಸಿಕೊಂಡು ಸುಡಲ್ಪಟ್ಟು ಪಂಚಭೂತಗಳಲ್ಲಿ ಲೀನವಾಗುತ್ತದೆ. ಆದರೆ ನಮ್ಮ ಶರೀರವಾಸಿಯಾಗಿದ್ದ ಆತ್ಮ ಮತ್ತೆ ಮತ್ತೆ ಹುಟ್ಟಿ ಬರುತ್ತಲೆ ಇರುತ್ತದೆ. ಆತ್ಮಗಳಿಗೆ ಇರದ ಸಂಬಂಧವನ್ನು ಈ ನಶ್ವರವಾದ ಶರೀರಗಳಲ್ಲಿ ಕಾಣುತ್ತಾ, ಭಾವನೆಗಳನ್ನು ಬೆಸೆದು, ಕಳಕೊಂಡಾಗ ಅಳುವುದು ಯಾವ ನ್ಯಾಯ? ಹೊಸ ಶರೀರದಿಂದ ಹುಟ್ಟು ಪಡೆದ ಆತ್ಮಕ್ಕೆ ಅದಕ್ಕೆ ಸಾಧನವಾದ ಅನ್ಯ ಶರೀರಗಳು ಮಾತಾ ಪಿತರೋ, ಅನ್ಯ ಸಂಬಂಧಿಗಳೋ ಆಗಿರುತ್ತಾರೆ. ಈಗ ನಾವು ಯಾರಿಗಾಗಿ ಮರುಗಬೇಕು ಹೇಳು ಅಣ್ಣಾ? ಅಳಿಯದೆ ನಿರಂತರ ಪ್ರಕ್ರಿಯೆ ನಿರತವಾದ ಆತ್ಮಕ್ಕೋ? ಅಲ್ಲ ದಹಿಸಲ್ಪಡಲೆಂದೆ ರೂಪುಗೊಂಡ ದೇಹಕ್ಕೊ? ಒಂದೊಂದು ಜನ್ಮಕ್ಕೂ ಬೇರೆ ಬೇರೆಯದೇ ಆದ ಸಂಬಂಧಿಕರು ಇರುತ್ತಾರೆ. ಬೇರೆ ಬೇರೆ ಜಾತಿ, ಕುಲ, ವರ್ಣಗಳೂ ಹೊಂದಿ ಬರುತ್ತವೆ. ಒಮ್ಮೆ ಶರೀರ ತ್ಯಜಿಸಿದ ಮೇಲೆ ಯಾವ ಸ್ಮರಣೆಯನ್ನೂ ಉಳಿಸದ, ಅಲ್ಪ ಕಾಲದ ಜೀವನದಲ್ಲಿ ಬದುಕಿದ್ದಾಗ ಮಾತ್ರ ಬಂಧವಿರಿಸಿದ್ದ ಕಾರಣಕ್ಕಾಗಿ ಅಳಬೇಕೋ ಹೇಳು?
ಅಣ್ಣಾ! ಅವಿವೇಕಿಗೆ ನಿತ್ಯವೂ ನೂರಾರು ದುಃಖ, ಸಾವಿರಾರು ಭಯ ಇರುತ್ತದೆ. ಆದರೆ ಸತ್ಯ ಅರಿತವನಿಗೆ ಇದ್ಯಾವುದೂ ಇರುವುದಿಲ್ಲ. ದೇಹದ ವ್ಯಾಧಿಗಳನ್ನು ಔಷಧೋಪಚಾರದಿಂದ ಗುಣ ಪಡಿಸುವಂತೆ, ಮನಸ್ಸಿಗಂಟುವ ಈ ದುಃಖವೂ ಒಂದು ವಿಧದ ವ್ಯಾಧಿಯೆ ಆಗಿದೆ. ಅದನ್ನು ವಿವೇಕದಿಂದ ಗುಣಪಡಿಸಬೇಕು. ಎಂದು ವಿದುರ ತಿಳಿಸಿ ಹೇಳಿದನು. ಆ ಬಳಿಕ ವಿದುರನು ಅಣ್ಣನ ಸಮಾಧಾನಕ್ಕಾಗಿ ಒಂದು ಕಥೆಯನ್ನು ಹೇಳಲಾರಂಭಿಸಿದನು…
ಮುಂದುವರಿಯುವುದು…






















































