ಭಾಗ – 460
ಭರತೇಶ ಶೆಟ್ಟಿ, ಎಕ್ಕಾರ್

ದುರ್ಯೋಧನನಿಗೆ ಮಹಾಭಾರತ ಯುದ್ಧವನ್ನು ಗೆದ್ದಷ್ಟು ಸಂಭ್ರಮ. ಯಾಕೆಂದರೆ ಭೀಮ ಧರೆಗುರುಳಿದ್ದಾನೆ. ಆತನ ದೃಷ್ಟಿಯಲ್ಲಿ ಮಣ್ಣು ಮುಕ್ಕಿದ್ದಾನೆ ಎಂಬಷ್ಟು ಮಹದಾನಂದ. ಆ ಸಂತಸದಲ್ಲಿ “ಹೇ ಕೃಷ್ಣಾ! ಕಪಟನಾಟಕ ಸೂತ್ರಧಾರಾ! ಯಾಕೆ ಹೀಗಾಯ್ತು? ನೀನಿದ್ದೂ ಭೀಮ ಈ ಸ್ಥಿತಿಗೆ ಹೇಗೆ ಬೀಳಲು ಸಾಧ್ಯವಾಯಿತು? ನಿನ್ನ ಲೀಲೆ ಕ್ಷೀಣಿಸಿತೆ? ಅಲ್ಲಾ ನನ್ನ ಬಲವರ್ಧನೆಯಾಯಿತೆ? ನಮ್ಮ ಬಳಿ ಚತುರಂಗ ಸೇನಾಬಲವಿದ್ದಾಗ ರಂಗನ ಬಲವಿದ್ದ ಪಾಂಡವರು ಗೆಲ್ಲುತ್ತಿದ್ದರು. ಈಗ ಏಕಾಂಗಿಯಾಗಿ ನಾನು ಭೀಮನನ್ನು ಉರುಳಿಸಿದ್ದೇನೆ. ನೋಡು ಲೀಲಾ ಮಾನುಷನೇ! ಹಿಡಿಂಬ, ಕೀಚಕ, ಜಟಾಸುರ, ಬಕ, ಅಲಾಯುಧ ಮೊದಲಾದ ರಾಕ್ಷಸರನ್ನು ಸಂಹರಿಸಿದ್ದನೆಂಬ ಕಥನವಾರ್ತೆ ಕೇಳಿದ್ದೇನೆ. ಆತನೂ ಒಬ್ಬ ರಕ್ಕಸನಂತೆ ನನ್ನ ತಮ್ಮಂದಿರನ್ನು ಕೊಂದದ್ದನ್ನು ನೋಡಿದ್ದೇನೆ. ಈಗ ನೋಡು ಕೃಷ್ಣಾ… ಬಿದ್ದು ಕೊನೆಯುಸಿರೆಳೆಯಲು ಒದ್ದಾಡುತ್ತಿದ್ದಾನೆ. ಗಾಳಿಯೊಂದಿಗೆ ಮಣ್ಣೂ ಆತನ ಮೂಗಿನೊಳಗೆ ಹೋಗಿ ಹೊರಬರುತ್ತಿದೆ. ನನ್ನ ಮಹದಾಸೆಯಾದ ಭೀಮನ ಮರಣ ಇನ್ನೇನು ಸ್ವಲ್ಪ ಹೊತ್ತಲ್ಲಿ ಆಗಲಿದೆ. ನೋಡು ಯದುಕುಲ ತಿಲಕಾ! ಕಣ್ತುಂಬಾ ನೋಡು ಪಾಂಡವ ಪ್ರಿಯನೇ! ಏನು ಮಾಡುವೆ ಈಗ? ನಿನ್ನ ಮಾಯೆ ಮಂಕಾಯಿತೆ? ಲೀಲೆ ನೆಲೆ ತಪ್ಪಿತೆ?” ಎಂದು ಹಂಗಿಸಿ ಭಂಗಿಸಿ ಕೇಕೆ ಹಾಕಿ ನಗತೊಡಗಿದನು.
ಇತ್ತ ಅರ್ಜುನ, ಧರ್ಮರಾಯ, ನಕುಲ ಸಹಿಸಲಾಗದಷ್ಟು ಆತಂಕ, ಭಯ, ದುಃಖಕ್ಕೆ ಒಳಗಾಗಿದ್ದಾರೆ. ಸಹದೇವ ತನ್ನ ಅಣ್ಣಂದಿರಿಗೆ ಧೈರ್ಯ ತುಂಬುತ್ತಾ, ತಾಳ್ಮೆಗೆಡದಿರಿ ಎಂದು ಧೈರ್ಯದ ಮಾತನ್ನು ಹೇಳುತ್ತಾ ಇದ್ದಾನೆ. ಕೃಷ್ಣ ಮೌನಕ್ಕೆ ಶರಣಾಗಿದ್ದಾನೆ.
ಭೀಮ ಮತಿ ಕಳಕೊಂಡಿರಲಿಲ್ಲ. ಹಾಗೆಂದು ವಿಸ್ಮೃತಿಯಾಗುತ್ತಿದೆ. ರಕ್ತ ಬಸಿದು ಹರಿಯುತ್ತಿದೆ. ಕಳಾಹೀನನೂ, ನಿಸ್ತೇಜನೂ ಆಗಿ ಕವುಚಿ ಬಿದ್ದವನು ಏಳುತ್ತಿಲ್ಲ. ಭೀಮಸೇನನೂ ಮಾರುತ ನಂದನ ಮಾರುತಿ. ವಾಯುದೇವನಿಗೆ ಮಗನ ಸ್ಥಿತಿ ಮರುಕ ತಂದಿತೊ ಏನೋ… ವೈಶಂಪಾಯನ ಸರೋವರದ ನೀರನ್ನು ಹೊತ್ತು ಮಂದ ಮಾರುತನಾಗಿ ಭೀಮನ ಕಾಯದ ಸುತ್ತ ಶೀತಲನಾಗಿ ಮುಖ, ಬೆನ್ನು, ಕಣ್ಣು, ಮೂಗುಗಳ ಸುತ್ತ ಆವರಿಸಿ ಬೀಸುತ್ತಾ ಮಗನನ್ನು ಸಾವರಿಸಿಕೊಳ್ಳಲು ಪ್ರೇರೇಪಿಸುವಂತೆ ಬೀಸತೊಡಗಿದನು. ಆಗ ರಕ್ತ ತುಂಬಿ ಅರೆ ಮುಚ್ಚಿದ್ದ ಕಣ್ಣನ್ನು ತೆರೆದನು. ಬಾಹುಗಳು ಸೆಟೆದುಕೊಂಡವು. ಬೆರಳುಗಳು ಮುಷ್ಟಿಕಟ್ಟಿದವು. ನೋಡುತ್ತಿದ್ದಂತೆಯೆ ಪವಾಡವೆಂಬಂತೆ ಹೊರಳಿ ಜಿಗಿದು ಎದ್ದು ನಿಂತ ಭೀಮ ಗದೆಯನ್ನೆತ್ತಿ ಬೀಸಿ ಹೆಗಲೇರಿಸಿದನು. ಭೀಮನ ಚೇತರಿಕೆ ನೋಡಿ ಪಾಂಡವ ಪಕ್ಷ ಉತ್ತೇಜನ ನೀಡುತ್ತಾ ಜಯಘೋಷ ಕೂಗತೊಡಗಿದರು. ಭೀಮ ತನ್ನನ್ನು ಹುರಿದುಂಬಿಸುತ್ತಿದ್ದ ಸಹೋದರರನ್ನು ನೋಡುತ್ತಾ ಒಂದು ಸುತ್ತು ತಿರುಗಿದನು. ಆಗ ಅರ್ಜುನ “ಅಣ್ಣಾ ಭೀಮಸೇನಾ! ಏನು ನೋಡುತ್ತಿರುವೆ? ನೀನೇ ಗೆಲ್ಲುವೆ. ದುರ್ಯೋಧನನ್ನು ಕೊಲ್ಲುವೆ” ಎಂದು ಉದ್ಘೋಷಣೆ ಮಾಡುತ್ತಾ ತನ್ನ ತೊಡೆಯನ್ನೆತ್ತಿ ತಟ್ಟುತ್ತಾ ಉತ್ತೇಜನ ನೀಡಿದನು. ಅರ್ಜುನನ್ನು ನೋಡಿದಾಕ್ಷಣ ಆತನಿತ್ತ ಸಂಜ್ಞೆಯಿಂದ ತನ್ನ ಪ್ರತಿಜ್ಞೆ ಭೀಮನಿಗೆ ಸ್ಮರಣೆಗೆ ಬಂತು.
ಕೇಸರಿಯಂತೆ ಘರ್ಜನೆ ಮಾಡುತ್ತಾ ದುರ್ಯೋಧನನ್ನು ಮತ್ತೆ ಯುದ್ದಕ್ಕೆ ಆಹ್ವಾನಿಸಿದನು. ಮತ್ತೆ ಆರಂಭವಾದ ಗದಾಯುದ್ಧ ಕ್ಷಿಪ್ರವಾಗಿ ಸಾಗತೊಡಗಿತು. ಭೀಮ ದುರ್ಯೋಧನರ ಗದೆಯ ಚಲನೆಯ ಮಂಡಲ ಕಾಣಿಸದಷ್ಟು ತ್ವರಿತ ಗತಿಯನ್ನು ಪಡೆದಿದೆ. ಇಬ್ಬರೂ ಅಪ್ರತಿಮ ಸಾಹಸಿಗಳಾಗಿ ಹೊಡೆದಾಡುತ್ತಿದ್ದಾರೆ. ಬಿರುಸಿನಿಂದ ಗದಾಯುದ್ದ ಸಾಗುತ್ತಿದ್ದಂತೆಯೇ ದುರ್ಯೋಧನ ಭೀಮನ ಪೆಟ್ಟನ್ನು ತಪ್ಪಿಸಿ ಜಾರಿಕೊಳ್ಳಲು ಮೇಲಕ್ಕೆ ಹಾರಿ ನೆಲಕ್ಕೆ ಜಿಗಿಯುವ ಯತ್ನದಲ್ಲಿದ್ದನು. ಈ ಮಧ್ಯೆ ಗಾಳಿಯಲ್ಲಿದ್ದ ಕೌರವನನ್ನು ಹೊಡೆದುರುಳಿಸಲು ಭೀಮನಿಗೆ ಸುಲಭದ ಅವಕಾಶ ಒದಗಿತು. ಬೀಸಿದ ಗದೆಯ ಅತಿಬಲಯುತವಾದ ಹೊಡೆತ ದುರ್ಯೋಧನನ ತೊಡೆಯನ್ನು ಅಪ್ಪಳಿಸಿ ಘಾತಿಸಿತು. ಭೀಮನ ರುಧಿರಮುಖಿ ಗದಾಘಾತದಿಂದ ಕೌರವನ ತೊಡೆಗಳೆರಡೂ ಮುರಿಯಲ್ಪಟ್ಟು ನಡುಮುರಿದು ಬಿದ್ದ ಮರದಂತೆ ದೊಪ್ಪೆಂದು ನೆಲದ ಮೇಲೆ ಬಿದ್ದನು. ಹೀಗೆ ಬೀಳುವಾಗ ಕೈಯಲ್ಲಿದ್ದ ಗದೆಯೂ ಕೈಜಾರಿ ಹಾರಿ ದೂರ ಬಿದ್ದು ಬಿಟ್ಟಿತು. ವೃಕೋದರ ಭೀಮನ ಹೊಡೆತದಿಂದ ತೊಡೆ ಮುರಿದು ಬಿದ್ದ ಕೌರವ ಒದ್ದಾಡುತ್ತಿದ್ದರೂ ಸೊಂಟದ ಮೇಲ್ಭಾಗವಷ್ಟೆ ಅಲುಗಾಡುತ್ತಿದೆ. ಕೆಳಭಾಗದ ನಿಯಂತ್ರಣವೇ ಇಲ್ಲವಾಗಿದೆ.
ಮುಂದುವರಿಯುವುದು…






















































