30.5 C
Udupi
Monday, January 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 418

ಭರತೇಶ ಶೆಟ್ಟಿ, ಎಕ್ಕಾರ್

ಕೃಷ್ಣ ಹೀಗೆ ವಿಸ್ತಾರವಾಗಿ ನಮುಚಿ ಮತ್ತು ದೇವರಾಜನ ಕಥೆ ಹೇಳಿದರೂ ಅರ್ಜುನನ ಮೇಲೆ ಪೂರ್ಣ ಪ್ರಮಾಣದ ಪ್ರಭಾವ ಬೀರಿದಂತಿಲ್ಲ. ಕರ್ಣನ ಬಗ್ಗೆ ಅದ್ಯಾವುದೊ ಅಗೋಚರ ಬಾಂಧವ್ಯ, ಕರುಣೆ ಮನಮಾಡಿ ಯುದ್ದದಲ್ಲಿ ತೊಡಗುವಲ್ಲಿ ವಿಳಂಬಿಸಿದನು. “ಕೃಷ್ಣಾ! ಕರ್ಣನ ಈ ಸ್ಥಿತಿ ಕಾಣುವಾಗ ನನಗೇಕೊ ಕಾರುಣ್ಯ ಭಾವ ಜಾಗೃತವಾಗುತ್ತಿದೆ. ಒಬ್ಬ ಸಮರ್ಥ ಯೋಧ ಈ ರೀತಿಯ ಪರಿಭವಕ್ಕೆ ಒಳಗಾಗಿರುವಾಗ ಪ್ರಹರಿಸಲು ಬೇಕಾದ ವೈರಭಾವದ ಜಾಗದಲ್ಲಿ ಬಾಂಧವ್ಯ ತುಂಬಿಕೊಳ್ಳುತ್ತಿದೆ. ಮಿತ್ರನಲ್ಲದಿದ್ದರೂ ಅಸಹಾಯಕನಾಗಿರುವ ಈತನ ಬಗ್ಗೆ ಮರುಕ ಉತ್ಪನ್ನವಾಗುತ್ತಿದೆ” ಎಂದನು.

ಆಗ ಶ್ರೀ ಕೃಷ್ಣ ಪರಮಾತ್ಮ “ಈ ಕರ್ಣ ಮಿತ್ರನಲ್ಲ ನಿನ್ನ ಶತ್ರು. ಈ ಹಿಂದೆ ದ್ರೌಪದಿಯ ವಸ್ತ್ರಾಪಹಾರ ಯತ್ನ ನಡೆದಾಗ ಕೇಕೆ ಹಾಕಿ ಅಪಶಬ್ದಗಳಿಂದ ನಿಂದಿಸಿದ್ದನು ಮರೆತೆಯಾ? ವ್ಯಗ್ರನಾಗಿ ನೀನು ಆತನ ವಧೆಗೈಯುವ ಶಪಥ ವಾಕ್ಯ ನುಡಿದಿದ್ದೆ. ಅದಾದರೂ ನೆನಪಿದೆಯೆ? ಅದೆಲ್ಲ ಇರಲಿ ನಿನ್ನ ಅಗ್ರಜ ಧರ್ಮಜನಿಗೆ ಇಂದು ಸೂರ್ಯಾಸ್ಥದೊಳಗೆ ಕರ್ಣನ ವಧೆಗೈದು ಬರುವೆನೆಂದು ನುಡಿದು ಬಂದ ವಚನ ಸ್ಮರಣೆಯಲ್ಲಿದೆಯೊ? ಇದೆಲ್ಲದಕ್ಕಿಂತಲೂ, ಚಕ್ರವ್ಯೂಹ ಹೊಕ್ಕ ಪ್ರಿಯ ಕುಮಾರ ಅಭಿಮನ್ಯುವಿನ ಕೈಗಳನ್ನು ನಿರಾಯುಧನೂ, ಅಸಹಾಯಕನೂ ಆಗಿದ್ದ ಸಮಯ ನಿಷ್ಕರುಣಿಯಾಗಿ ಕತ್ತರಿಸಿ ಭಾರತರತ್ನನ ವಧೆಗೆ ಕಾರಣನಾದ ಸಂಗತಿ ನಿನಗೆ ವಿಸ್ಮರಣೆಯಾಗಲು ಸಾಧ್ಯವಿಲ್ಲ ತಾನೆ? ನಿರಾಯುಧನೂ, ರಥವಿಹೀನನೂ ಆಗಿದ್ದ ಅಭಿಮನ್ಯುವಿನ ಬೆಂಗಡೆಯಲ್ಲಿ ನಿಂತು ಕರ ಛಾಪಗಳನ್ನು ತುಂಡರಿಸಿದ ಕರ್ಣನಿಗೆ ತನ್ನ ತಪ್ಪಿಗೆ ಸಮಾನ ಸ್ಥಿತಿಯಲ್ಲಿ ಶಿಕ್ಷೆ ಅನುಭವಿಸುವ ಕಾಲ ಕೂಡಿ ಬಂದಿದೆ. ಈಗಲೂ ನಿನಗೆ ಅಂತಹ ಕಾರ್ಯಕ್ಕೆ ತೊಡಗಿ ಘೋರ ಪಾತಕಗೈದ ಅಪರಾಧಿಗೆ ಕ್ಷತ್ರಿಯನಾಗಿ ದಂಡನೆ ನೀಡುವ ಮನಸ್ಸಾಗುತ್ತಿಲ್ಲವೆ? ಎಂದು ಪ್ರಶ್ನಿಸಿದನಿ.

ಅರ್ಜುನನ ಮನಸ್ಸಿಗಾವರಿಸಿದ್ದ ಭಾವ, ನಡು ಮಧ್ಯಾಹ್ನ ಸೂರ್ಯನಿಗೆ ಆವರಿಸಿದ್ದ ಗ್ರಹಣ ಮುಕ್ತವಾಗಿ ಪ್ರಜ್ವಲಿಸುವಂತೆ ಹೂಂಕರಿಸಿದನಿ. ಗಾಂಡೀವವನ್ನೆತ್ತಿ ಧನುಷ್ಟೇಂಕಾರಗೈದನು. ಬಿರುಸಾಗಿ ಸೆಳೆದ ಟಂಕಾರ ಧ್ವನಿ ದಶದಿಕ್ಕುಗಳಲ್ಲೂ ಮಾರ್ದನಿಸಿತು. ಯುದ್ಧದ ಮುನ್ಸೂಚನೆಯಾಗಿ ಹೀಗೆ ಕರ್ಣನನ್ನು ಎಚ್ಚರಿಸಿದನು. ಆ ಬಳಿಕ ಸರಸರನೆ ಐದು ತೀಕ್ಷ್ಣ ಶರಗಳನ್ನು ರಥಕ್ಕೆ ಗುರಿಯಾಗಿ ಪ್ರಯೋಗಿಸಿ ಧ್ವಜ, ಧ್ವಜದಂಡಾದಿಗಳನ್ನು ತುಂಡರಿಸಿದನು. ಸಾರಥ್ಯ ಪೀಠದಲ್ಲಿದ್ದ ಶಲ್ಯನನ್ನೂ ಗಾಯಗೊಳಿಸಿದನು. ಇಷ್ಟಾಗುವಾಗ ಕರ್ಣನಿಗೆ ಆಕ್ರಮಣದ ಪೂರ್ಣ ಸ್ಥಿತಿ ತಿಳಿದಾಗಿತ್ತು. ಪ್ರತಿ ಆಕ್ರಮಣಕ್ಕೆ ಸಿದ್ಧನಾಗುವ ಅವಕಾಶವೂ ಲಭಿಸಿತ್ತು. ಹೀಗಿರಲು ಅರ್ಜುನ ತನಗೆ ಪರಶಿವೆ ಅನುಗ್ರಹಿಸಿದ್ದ ಆಂಜಲಿಕ ಮಹಾಸ್ತ್ರವನ್ನು ಶಿಂಜಿನಿಗೆ ಜೋಡಿಸಿ ಕರ್ಣನ ಕಂಠಕ್ಕೆ ಗುರಿಯಿಟ್ಟು ಪ್ರಯೋಗಿಸಿದನು. ಅತ್ತ ಗಗನದಿಂದ ಪಡುವಣಾಂಬುಧಿಯತ್ತ ಸೂರ್ಯ ಜಾರುತ್ತಿದ್ದನು. ಇಲ್ಲಿ ಕರ್ಣನ ಶಿರವೂ ಮುಂಡದಿಂದ ಕತ್ತರಿಸಲ್ಪಟ್ಟು ಧರೆಗುರುಳಿ ಬಿತ್ತು. ಸಹಸ್ರಕವಚ ದಂಬೋದ್ಭವ ತನ್ನ ಪ್ರಾರಬ್ಧ ಕರ್ಮಫಲಗಳನ್ನು ಅನುಭವಿಸಿ ನರನಾರಾಯಣರ ಸಮಕ್ಷದಲ್ಲಿ ತಾನು ಅಪೇಕ್ಷಿಸಿದಂತೆ ಶೂರನಾಗಿ ಕಾದಾಡಿ, ಮರಣ ಪ್ರಾಪ್ತಿಸಿಕೊಂಡು ವೀರಮರಣವನ್ನಪ್ಪಿದ್ದಾನೆ.

ಪಾಂಡವರ ಪಕ್ಷದಲ್ಲಿ ವಿಜಯೋತ್ಸವ ಆರಂಭವಾಯಿತು. ವಾದ್ಯ ವಾದನ, ಜಯಘೋಷ ಮೊಳಗತೊಡಗಿತು. ಕೌರವನ ಬಹು ವಿಶ್ವಾಸದ ಮಿತ್ರ ಕರ್ಣ ಸೂರ್ಯನ ಜೊತೆ ಅಸ್ತಮಿಸಿದ್ದಾನೆ. ಛಿದ್ರವಾಗಿ ಭಗ್ನಗೊಂಡಿದ್ದ ಬರಿದಾದ ರಥವನ್ನು ಶಿಬಿರದತ್ತ ನಡೆಸುತ್ತಾ ಶಲ್ಯನು ಹಿಂದಿರುಗಿದನು.

ಯುದ್ಧ ವಿರಾಮದ ಶಂಖನಾದದೊಂದಿಗೆ ಹದಿನೇಳನೆ ದಿನದ ಭಾರತ ಯುದ್ಧ ಮುಕ್ತಾಯವಾಗಿದೆ.

ಅರ್ಜುನನೂ ಶಿಬಿರಕ್ಕೆ ಬಂದು ಧರ್ಮರಾಯನನ್ನು ಕಂಡು ನಮಿಸಿದನು. ಕರ್ಣನನ್ನು ವಧಿಸಿದ ವಾರ್ತೆ ತಿಳಿಸಿದಾಗ ಅಣ್ಣ ಧರ್ಮಜ ಬರಸೆಳೆದಪ್ಪಿ ಆಶೀರ್ವದಿಸಿದನು. ಅತ್ತ ಕೌರವರ ಶಿಬಿರದಲ್ಲಿ ದುರ್ಯೋಧನನ ಸ್ಥಿತಿ ಹೇಳತೀರದು…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page