ಭಾಗ – 457
ಭರತೇಶ ಶೆಟ್ಟಿ, ಎಕ್ಕಾರ್

ಅತ್ಯಂತ ಪರಮ ಶ್ರೇಷ್ಠತಮವಾದ, ಅದ್ವಿತೀಯ ಪಾವಿತ್ರ್ಯತೆಯನ್ನು ಹೊಂದಿರುವ ಕುರುಕ್ಷೇತ್ರದಲ್ಲಿ ಯಾರಾದರೂ ದಾನ ಧರ್ಮ ಮಾಡಿದರೆ ಅದರ ಫಲ ಸಹಸ್ರ ಪಟ್ಟು ವೃದ್ಧಿಸುತ್ತದೆ. ಯಾರು ಕುರುಕ್ಷೇತ್ರದಲ್ಲಿ ದೀರ್ಘಕಾಲ ವಾಸಮಾಡುತ್ತಾರೊ ಅವರು ನರಕವನ್ನು ಸಂದರ್ಶಿಸುವುದಿಲ್ಲ. ಕುರುಕ್ಷೇತ್ರದಿಂದ ವಾಯುವಿನ ಮೂಲಕವಾಗಿ ಒಯ್ಯಲ್ಪಡುವ ಧೂಳಿನ ಕಣ ಯಾವನ ತಲೆಯ ಮೇಲೆ ಬೀಳುವುದೊ ಅಂತಹ ವ್ಯಕ್ತಿ ಬಲು ಕೆಟ್ಟ ಕೆಲಸಗಳನ್ನು ಮಾಡಿದ್ದರೂ ಪಾವನನಾಗಿ ಪರಮಪದವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ.


ಅಂತಹ ಪುಣ್ಯಕ್ಷೇತ್ರ ಈಗ ರಣಕ್ಷೇತ್ರವಾಗಿ ಮಹಾಯಜ್ಞರೂಪದಲ್ಲಿ ಕೋಟಿ ಕೋಟಿ ಕ್ಷತ್ರಿಯ, ರಾಕ್ಷಸ, ಗಜ ತುರಗ, ವೀರ, ಶೂರರಾದಿಯಾಗಿ ಯಾರೆಲ್ಲ ಭಾಗಿಯಾಗಿ ಆ ಕ್ಷೇತ್ರದಲ್ಲಿ ಕೊನೆಯುಸಿರೆಳೆಯುತ್ತಿದ್ದಾರೊ ಅವರೆಲ್ಲರಿಗೂ ಸದ್ಗತಿಯನ್ನು ಕರುಣಿಸುತ್ತಿರುವ ಮೋಕ್ಷಧಾಮವಾಗಿದೆ. ಈ ಹೊತ್ತಿಗಾಗುವಾಗ ಪಾಂಡವರ ಏಳು ಅಕ್ಷೋಹಿಣಿ ಸೇನೆ, ಕೌರವರ ಹನ್ನೊಂದು ಅಕ್ಷೋಹಿಣಿ ಸೇನಾ ಸಹಿತ ಭೀಷ್ಮ, ದ್ರೋಣ, ಕರ್ಣ, ದ್ರುಪದ, ವಿರಾಟ, ಅಭಿಮನ್ಯು, ಘಟೋತ್ಕಚ, ಕೌರವ ಸೋದರರು, ಜಯದ್ರಥ, ಶಲ್ಯ, ಶಕುನಿ ಹೀಗೆ ಅಗಣಿತ ಮಹಾ ಪುರುಷರು ಧರೆಗೊರಗಿದ್ದಾರೆ. ಬಲರಾಮ ಈಗ ಈಗ ಕೊನೆಯ ಚರಣವಾಗಿ ನಿನ್ನ ಶಿಷ್ಯರಾದ ಭೀಮ ದುರ್ಯೋಧನರು ಯುದ್ಧ ಸನ್ನದ್ಧರಾಗಿದ್ದಾರೆ ಎಂದು ತ್ರಿಕಾಲ ಜ್ಞಾನಿ ನಾರದರು ಬಲರಾಮನಿಗೆ ವಿವರಿಸಿದರು. ನಾರದರಿಂದಾಗಿ ತೀರ್ಥಾಟನೆಯಲ್ಲಿ ವ್ಯಸ್ಥನಾಗಿದ್ದ ಬಲರಾಮನಿಗೆ ವಾಸ್ತವ ರಾಜಕೀಯ ವಿಚಾರ ಸ್ಮರಣೆಗೆ ಬಂದು ಈ ಕೂಡಲೆ ತಾನು ಅತ್ತ ಸಾಗಬೇಕೆಂಬ ಮನಸ್ಸಾಯಿತು.
ಪರಂತಪನಾದ ಬಲರಾಮನು ಸರಸ್ವತಿಯನ್ನು ಹಾಡಿ ಹೊಗಳಿದ ನಂತರ ಪ್ರೇಮಪೂರ್ವಕವಾಗಿ ಪದೆ ಪದೆ ಸರಸ್ವತಿ ನದಿಯ ಕಡೆ ನೋಡುತ್ತಾ, ಮತ್ತೆ ಎದ್ದು ಓಡಿ ಹೋಗಿ ಭಕ್ತಿ ಪೂರ್ವಕ ಸ್ತುತಿಗೈಯುತ್ತಾ ಮುಳುಗೇಳುತ್ತಾ ತನ್ಮಯನಾಗಿ ತೀರ್ಥಸ್ನಾನಗೈಯತೊಡಗಿದನು. ಮನಸೋ ಇಚ್ಚೆ ತೀರ್ಥ ಸ್ನಾನಗೈದು ಯಥೇಚ್ಚವಾಗಿ ಋಷಿ ಮುನಿಗಳಿಗೆ, ಸತ್ಪಾತ್ರರಿಗೆ ದಾನ ಧರ್ಮವನ್ನಿತ್ತು ಸತ್ಕರಿಸಿ ಆಶೀರ್ವಾದ ಪಡೆದನು. ಕುರುಕ್ಷೇತ್ರದ ರಣಧಾರುಣಿಯತ್ತ ಸಾಗಲು ನಾರದ ಮಹರ್ಷಿಯ ಅನುಮತಿ ಪಡೆದು ಸಿದ್ಧನಾದನು. ತನಗಾಗಿ ದಿವ್ಯಾಶ್ವಗಳನ್ನು ಕಟ್ಟಿ ಸಜ್ಜಾಗಿದ್ದ ಉಜ್ವಲರಥವನ್ನೇರಿ ಯದು ಶ್ರೇಷ್ಠ ಬಲರಾಮ ಮತ್ತೊಮ್ಮೆ ಸಾರಸ್ವತ ಕ್ಷೇತ್ರವನ್ನು ಕಣ್ತುಂಬ ನೋಡಿ ವಂದಿಸಿದನು. ಶೀಘ್ರವಾಗಿ ಸಾಗಬಲ್ಲ ರಥ ಸಾಗಲು ಅಪ್ಪಣೆ ನೀಡಿ ಎಲ್ಲರಿಗೂ ವಂದಿಸಿ ಕುರುಕ್ಷೇತ್ರದತ್ತ ಬಂದನು.
ಆದರೆ ಕುರುಕ್ಷೇತ್ರದಲ್ಲಿ ಪಾಂಡವ – ಕೌರವರು ಯಾರೂ ಕಾಣುತ್ತಿಲ್ಲ. ಬದಲಾಗಿ ಕೊಳೆತು ನಾರುವ ಹೆಣಗಳ ರಾಶಿ, ಅಂಗಾಂಗ ಛೇದನಗೊಂಡು ಬಿದ್ದ ವೀರರ ಕಾಯಗಳು, ಸತ್ತು ಬಿದ್ದಿರುವ ಗಜ ತುರಗಗಳು, ಹರಿದ ರಕ್ತದಿಂದಾದ ಕೆನ್ನೀರ ಕೆರೆಗಳು.. ಭೀಬತ್ಸಕರ ದೃಶ್ಯ ನೋಡಲು ಭಯಂಕರವಾಗಿದೆ. ನರಿ, ತೋಳ, ರಣಹದ್ದುಗಳಾದಿಯಾಗಿ ಮಾಂಸ ಭಕ್ಷಿಸುವ ಮೃಗಪಕ್ಷಿಗಳು, ಶಾಕಿಣಿ, ಡಾಕಿಣಿಯಾದಿ ಪಿಶಾಚಗಳು ತುಂಬಿ ಸಂಭ್ರಮಿಸುವಂತೆ ಕಂಡಿತು. ಒಟ್ಟಾರೆಯಾಗಿ ಕುರುಜಾಂಗಣದಲ್ಲಿ ಮಾರಿಗೌತಣವಿತ್ತಂತೆ ಭ್ರಮೆಯಾಗುತ್ತಿತ್ತು ಬಲರಾಮನಿಗೆ. ಎಲ್ಲಿದ್ದಾರೆ ಎಂಬ ಸುಳುಹನ್ನು ಅರಸಿ ಬಂದರೆ, ದ್ವೈಪಾಯಣ ಸರೋವರದ ಬಳಿ ಅಳಿದುಳಿದ ಪಾಂಡವ ಸೇನೆ, ಸಹಿತ ಪಾಂಡವರು, ಏಕಾಂಗಿ ಕೌರವನನ್ನು ಹಾಗು ಕೃಷ್ಣ ನಿನ್ನನ್ನು ಕಾಣುವಂತಾಯಿತು ಎಂದು ತೀರ್ಥಯಾತ್ರಾ ವಿಚಾರಗಳನ್ನು ಬಲರಾಮ ಸೋದರನಾದ ಕೃಷ್ಣನಿಗೆ ವಿವರಿಸಿ ಹೇಳಿದನು.
ಇತ್ತ ಭೀಮ ದುರ್ಯೋಧನರ ಗದಾಯುದ್ದಕ್ಕೆ ಸಕಲ ಸಿದ್ಧತೆಯಾಗಿದೆ. ಹದಿನೆಂಟನೆಯ ದಿನದ ಮಹಾಯುದ್ದಕ್ಕೆ ಮುಹೂರ್ತ ನಿಗದಿಯಾಗಿದೆ.
ಮುಂದುವರಿಯುವುದು…







