25.4 C
Udupi
Sunday, March 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 454

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೪೫೪ ಮಹಾಭಾರತ

ಮಹಾತೀರ್ಥ ಪ್ರದೇಶದಲ್ಲಿ ಬಲರಾಮನಿಗೆ ನಾರದ ಮಹರ್ಷಿಯ ಸಂದರ್ಶನ, ಯಥೋಚಿತ ಸತ್ಕಾರಗಳಾದ ಬಳಿಕ ಅವರು ಆ ತೀರ್ಥ ಪ್ರದೇಶದ ಮಹಿಮೆ ಮತ್ತು ಕುರುವಂಶದ ಧರ್ಮಯುದ್ಧ, ಆ ಮಹಾಸಂಗ್ರಾಮ ಸಾಗುತ್ತಿರುವ ಕುರುಕ್ಷೇತ್ರದ ಮಹಿಮೆಯನ್ನು ವಿವರಿಸತೊಡಗಿದರು.

ನಾರದರು ಹೇಳತೊಡಗಿದರು “ಬಲರಾಮಾ! ನಾವು ಸಂಧಿಸಿರುವ ಈ ಸಾರಸ್ವತ ಮಹಾತೀರ್ಥ ಮಹಾಮಹಿಮಾನ್ವಿತ ಕ್ಷೇತ್ರ. ಹಿಂದೆ ಇಲ್ಲಿ ಕುಣಿಗರ್ಗ ಎಂಬ ಮಹಾ ತಪಸ್ವಿಯಾದ ಋಷಿ ಆಶ್ರಮವಾಸಿಯಾಗಿದ್ದನು. ಬಹು ವರ್ಷಗಳ ತಪಃಶಕ್ತಿಯಿಂದ ಕಡು ಚೆಲುವೆಯಾದ, ಸುಂದರ ಹುಬ್ಬುಳ್ಳ ಮಗಳೊಬ್ಬಳನ್ನು ಮನೋ ಸಂಕಲ್ಪದಿಂದ ಸೃಷ್ಟಿಸಿದನು. ಆ ಅತಿ ಸುಂದರಿಯಾದ ಮಗಳಿಗೆ ಬೇಕು ಬೇಕಾದ ಜ್ಞಾನಾತಿಶಯ ಶಕ್ತಿಗಳನ್ನು ಅನುಗ್ರಹಿಸಿದ್ದರು. ನಿಷ್ಕಳಂಕಳಾದ ಋಷಿಕನ್ಯೆ ತನ್ನ ತಂದೆ ಎಷ್ಟು ಒತ್ತಾಯ ಮಾಡಿ, ಮದುವೆಯಾಗಬೇಕು ಮಗಳೇ ಎಂದಾಗಲೂ ಒಪ್ಪದೆ, ತನಗೆ ಅನುರೂಪನಾದ ಪತಿ ಸಿಗುತ್ತಿಲ್ಲ, ಸಿಕ್ಕಿದರೆ ಮದುವೆಯಾಗುವೆ ಎಂದು ಮುಂದೂಡುತ್ತಿದ್ದಳು. ವೃದ್ಧನಾದ ಕುಣಿಗರ್ಗನು ಕಾಲಾಂತರದಲ್ಲಿ ಶರೀರ ತ್ಯಜಿಸಿ ಸ್ವರ್ಗಸ್ಥನಾದನು.

ಅನಿಂದಿತೆಯಾದ (ಯಾವ ದೋಷವೂ ಇಲ್ಲದ) ಋಷಿಕನ್ಯೆ ಘೋರ ಅರಣ್ಯ ಮಧ್ಯೆ ಆಶ್ರಮದಲ್ಲಿದ್ದು ನಿರ್ಭಯಳಾಗಿ ಉಗ್ರ ತಪಸ್ಸನ್ನಾಚರಿಸುತ್ತಾ ದೇವಾನು ದೇವತೆಗಳನ್ನು, ಪಿತೃಗಳನ್ನು ಸಂತುಷ್ಟಿಗೊಳಿಸುತ್ತಿದ್ದಳು. ಕಾಲ ಕಳೆದಂತೆ ದೇಹ ಕೃಶಗೊಂಡು ಮುಪ್ಪು ಆವರಿಸಿದರೂ, ವ್ಯಥೆ ಪಡದೆ ತನ್ನ ತಪಸ್ಸಾಧನೆಯಿಂದ ಕೃತಾರ್ಥಳಾಗಿದ್ದೇನೆ ಎಂದು ಭಾವಿಸುತ್ತಿದ್ದಳು. ಹೀಗಿರಲು ಒಂದು ದಿನ ಇನ್ನು ನಡೆದಾಡಲೂ ಶಾರೀರಿಕ ಶಕ್ತಿ ಇಲ್ಲದಷ್ಟು ಮುದುಕಿಯಾಗಿರುವ ತನ್ನ ಕಾಯದ ಬಗ್ಗೆ ಯೋಚಿಸಿ ಒಂದು ತೀರ್ಮಾನಕ್ಕೆ ಬಂದಳು. ತಪಸ್ಸನ್ನು ನಿಲ್ಲಿಸಿ ಪ್ರಾಣತ್ಯಾಗಗೈದು ಪುಣ್ಯಲೋಕ ಸೇರುವುದು ಉಚಿತ. ಹೀಗೆ ನಿರ್ಣಯಿಸಿ ಅಂದುಕೊಂಡಂತೆ ಮಾಡಲು ಸಿದ್ಧಳಾದ ಋಷಿಕನ್ಯೆ ಯಾವುದೊ ಕಾರಣದಿಂದ ಸಂಚರಿಸುತ್ತಿದ್ದ ನನ್ನ (ನಾರದರ) ಕಣ್ಣಿಗೆ ಗೋಚರಿಸಿದಳು. ಬಂದು ವಿಚಾರಿಸಿ ವಿಚಾರ ತಿಳಿದು “ಮಹಾವ್ರತಳೇ! ನಿನಗೆ ಈ ತನಕ ವಿವಾಹ ಸಂಸ್ಕಾರವಾಗಿರುವುದಿಲ್ಲ. ಇನ್ನೂ ಕನ್ಯೆಯಾಗಿಯೆ ಉಳಿದಿರುವೆ. ಹಾಗಾಗಿ ನೀನು ಬಯಸಿರುವ ಪುಣ್ಯ ಲೋಕ ಪ್ರಾಪ್ತವಾಗದು. ಅದಕ್ಕಾಗಿ ನೀನು ಮತ್ತೆ ಜನ್ಮ ತಳೆದು ಬರಬೇಕಾದೀತು. ದೇವಲೋಕದಿಂದ ಬರುತ್ತಿರುವ ನಾನು, ಅಲ್ಲಿ ನಿನ್ನ ವಿಚಾರ ಬಂದಾಗ ಚರ್ಚೆಯಾದ ವಿಚಾರ ತಿಳಿದು ಹೇಳುತ್ತಿದ್ದೇನೆ. ನೀನು ಅಪಾರವಾದ ತಪಸ್ಸನ್ನೂ, ಅಮಿತ ಪುಣ್ಯ ಬಲವನ್ನೂ, ಶಕ್ತಿಯನ್ನೂ ಸಂಪಾದಿಸಿ ಪುಣ್ಯಲೋಕ ಏರುವ ಯೋಗ್ಯತಾವಂತಳಾಗಿರುವೆ. ಆದರೆ ಸಂಸ್ಕಾರವನ್ನು ಪೂರ್ಣ ಮಾಡದ ಕಿಂಚಿತ್ ಕೊರತೆ ನಿನಗೆ ತೊಡಕಾಗಬಾರದು. ಆ ಬಗ್ಗೆ ಯೋಚಿಸಿ ತೀರ್ಮಾನಿಸುವಷ್ಟು ಜ್ಞಾನ ನಿನಗಿದೆ” ಎಂದು ಸೂಚಿಸಿದ್ದೆನು.

ಈ ಬಗ್ಗೆ ಯೋಚನಾಮಗ್ನಳಾದ ಋಷಿಕನ್ಯೆ ವಿವಾಹ ಸಂಸ್ಕಾರ ಹೊಂದುವ ನಿಶ್ಚಯ ಮಾಡಿದವಳಾಗಿ ಋಷಿ ಸಮೂಹದತ್ತ ಬಂದು ಒಂದು ಘೋಷಣೆಯನ್ನು ಮಾಡಿದಳು. “ಸಾಧು ಶಿರೋಮಣಿಗಳೇ! ನಿಮ್ಮಲ್ಲಿ ಯಾರಾದರೂ ನನ್ನ ಪಾಣಿಗ್ರಹಣ ಮಾಡಿದ್ದೇ ಆದರೆ ಅವರಿಗೆ ನಾನು ಈ ತನಕ ಮಾಡಿರುವ ತಪಸ್ಸಿನ ಪುಣ್ಯಫಲಶಕ್ತಿಯ ಅರ್ಧ ಭಾಗವನ್ನು ಅರ್ಪಿಸುತ್ತೇನೆ”

ಋಷಿಕನ್ಯೆ ಈ ರೀತಿ ಘೋಷಿಸಿದಾಗ ಎಲ್ಲರೂ ನಿರುತ್ತರರಾದರು. ಆದರೆ ಗಾಲವ ಮಹರ್ಷಿಯ ಮಗನಾದ ಶೃಂಗವಂತ ಎಂಬ ಯುವ ಋಷಿ ಮುಂದೆ ಬಂದು ಅವಳ ಪಾಣಿಯನ್ನು ಗ್ರಹಣ ಮಾಡಿದನು. ವೈವಾಹಿಕ ಸಂಸ್ಕಾರಕ್ಕೆ ಮುನ್ನ ಒಂದು ನಿಬಂಧನೆಯನ್ನು ಅವಳ ಮುಂದಿಟ್ಟನು. ಏನೆಂದರೆ “ಹೇ ಶೋಭನಳೇ! ನಾನು ನಿನ್ನನ್ನು ವರಿಸಿದ ನಂತರ ಒಂದು ರಾತ್ರಿ ಮಾತ್ರ ಸಂಸಾರ ಮಾಡುತ್ತೇನೆ. ಈ ಶರತ್ತು ಒಪ್ಪಿಗೆಯಾಗುವುದಾದರೆ ನಿನ್ನನ್ನು ವಿವಾಹವಾಗುತ್ತೇನೆ.”

ಒಪ್ಪಿಗೆ ಎಂಬಂತೆ ಕುಣಿಗರ್ಗ ಮಹರ್ಷಿಯ ಮಗಳು ಪ್ರತಿವಚನವಿತ್ತು ತನ್ನ ಕೈಯನ್ನು ಗಾಲವ ಮಹರ್ಷಿಯ ಮಗ ಶೃಂಗವಂತನ ಕರದಲ್ಲಿಟ್ಟಳು. ವಿವಾಹವು ವಿಧಿವತ್ತಾಗಿ ಸಾಗಿತು, ಋಷಿ ಸಮೂಹ ಹರಸಿ ಹಾರೈಸಿತು. ದೇವಾನುದೇವತೆಗಳು ಪುಷ್ಪವೃಷ್ಟಿ ಸುರಿಸಿದರು.

ವಚನವಿತ್ತಂತೆ ಪತಿಯ ಜೊತೆ ಅಂದಿನ ಒಂದು ದಿನದ ರಾತ್ರಿ ಕಳೆಯಲು ಬಂದ ಋಷಿಕನ್ಯೆ ಮುದುಕಿಯಾಗಿರಲಿಲ್ಲ. ಸೌಂದರ್ಯದ ಗಣಿ, ಶ್ರೇಷ್ಟವಾದ ವರ್ಣ, ಸುಂದರವಾದ ಹುಬ್ಬು, ಮೋಹಕ ಕಂಗಳು, ಸಮತೂಲಿತವೂ ಪುಷ್ಠಿಯೂ ಆದ ಅಂಗಸೌಷ್ಟವ, ದಿವ್ಯಾಭರಣಧರಣೆಯೂ, ಸುಗಂಧ ಲೇಪಿತೆಯೂ ಆಗಿ ಸಾಕ್ಷಾತ್ ದೇವತೆಯಂತೆ ಕಂಗೊಳಿಸುತ್ತಾ, ಕಾನನವನ್ನು ಬೆಳಗುವ ಪ್ರಭೆಯನ್ನು ಸೂಸುತ್ತಾ ತನ್ನ ಪತಿ ಶೃಂಗವಂತನ ಬಳಿ ಬಂದಳು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page