ಭಾಗ – 409
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೦೯ ಮಹಾಭಾರತ
ಕರ್ಣ ಮತ್ತು ಶಲ್ಯರ ನಡುವಿನ ವಾಕ್ಸಮರ ವಾರ್ತೆ ಕೇಳಿ ಮಧ್ಯಸ್ಥಿಕೆ ವಹಿಸಲು ದುರ್ಯೋಧನ ಬರುತ್ತಿದ್ದರೂ, ಅಷ್ಟರಲ್ಲಾಗಲೆ ಶಲ್ಯನು ಕರ್ಣನಿಂದಾದ ತನ್ನ ದೇಶ ಮತ್ತು ದೇಶೀಯರ ನಿಂದಾವಾಕ್ಯಗಳಿಗೆ ಪ್ರತಿಯಾಗಿ “ಹೇ ಕರ್ಣಾ! ನನ್ನ ಬಟ್ಟಲಲ್ಲಿ ನೊಣವಿದೆ ಎಂದು ಬೆರಳು ತೋರಿಸುವ ಮೊದಲು ನಿನ್ನ ತಟ್ಟೆಯಲ್ಲಿರುವ ಹೆಗ್ಗಣವನ್ನು ಬಿಸಾಡುವತ್ತ ಗಮನ ಹರಿಸಬೇಕಿತ್ತು. ನಮ್ಮ ಮಾದ್ರಾದೇಶದಲ್ಲಿ ಅದೆಷ್ಟೊ ವೈವಿಧ್ಯಮಯ ಜನಾಂಗಗಳಿವೆ. ಅದರಲ್ಲಿ ಒಂದು ವರ್ಗವನ್ನಷ್ಟೆ ನೀನು ಕಂಡಿರುವೆ. ಸ್ವೇಚ್ಚೆಯಿಂದ ಬದುಕುವ ಅನಾಗರಿಕವಾದ ಒಂದು ವರ್ಗ ನಮ್ಮಲ್ಲಿತ್ತು. ಯಾವಾಗ ಅವರ ಬಗ್ಗೆ ದೂರುಗಳು ಬಂದು ನಮ್ಮ ಗಮನ ಸೆಳೆದವೊ, ತಕ್ಷಣ ಕಾರ್ಯ ಪ್ರವೃತ್ತರಾಗಿ ಬಲವಂತದಿಂದ ಸಂಸ್ಕಾರವನ್ನು ಪಾಲಿಸುವಂತೆ ಒತ್ತಾಯಪೂರ್ವಕವಾಗಿ ಮಾದ್ರದೇಶೀಯರೇ ಆದ ಅವರಿಗೆ ಕಟ್ಟು ನಿಟ್ಟಿನ ವ್ಯವಸ್ಥೆ ಮಾಡಲಾಗಿದೆ. ಆ ರೀತಿಯ ವರ್ತನೆಗೆ ಕಾರಣವೇನೆಂದು ಅರಿತುಕೊಂಡು ಶಿಕ್ಷಣ, ಶೌಚ, ಧರ್ಮಾಧರ್ಮಗಳ ವ್ಯತ್ಯಾಸ, ಆಚಾರ ವಿಚಾರಗಳನ್ನೂ ಕಲಿಸಿಕೊಡಲಾಗಿದೆ. ಈಗ ಅಂತಹ ಅನಾಗರೀಕತೆ ನಮ್ಮದ್ದಾದ ಮಾದ್ರ ದೇಶದಲ್ಲಿಲ್ಲ. ಎಂದೋ ಒಂದು ಕಾಲದಲ್ಲಿ, ಒಂದು ವರ್ಗ ಆ ರೀತಿ ಇತ್ತು ಎಂಬ ಕಾರಣದಿಂದ ಅವರಂತೆಯೆ ಎಲ್ಲರೂ ಎಂದು ಸಮಷ್ಟಿಯಾಗಿ ದೂಷಣೆ ಮಾಡುವಲ್ಲಿ ನಿನ್ನ ಅಲ್ಪಮತಿ ಅನಾವರಣಗೊಂಡು ಪ್ರಕಟವಾಗಿದೆ. ನೀನು ಯಾವುದನ್ನೂ ಪೂರ್ಣ ಅಧ್ಯಯನ ಮಾಡದೆ ತನಗೆಲ್ಲಾ ಗೊತ್ತಿದೆ ಎಂದು ಹೇಳುವ ವರ್ಗದವನೆಂದು ಈ ವಿಚಾರದಲ್ಲೂ ಸಾಬೀತು ಪಡಿಸಿದಂತಾಯಿತು.
ನಿನ್ನದ್ದಾದ ಅಂಗದೇಶದ ಬಗ್ಗೆ ನನಗೆ ಪೂರ್ಣ ಮಾಹಿತಿ ಇದೆ. ಅಂತಹ ನಿಖರ ಆಧಾರದಲ್ಲಿ ಅಂಗದೇಶದ ರಾಷ್ಟ್ರೀಕೃತ ಗುಣಗಳನ್ನು ಹೇಳುತ್ತೇನೆ ಕೇಳು. ನಿನಗೆ ಭಿಕ್ಷೆಯಾಗಿ ದೊರೆತ, ನಿನ್ನ ಒಡೆತನದ ಅಂಗದೇಶದಲ್ಲಿ ಯಾರಾದರು ರೋಗ ರುಜಿನಾದಿಗಳಿಗೆ ತುತ್ತಾದರೆ ಬಾಂಧವ್ಯ ಮರೆತು ಕಾಡಿಗಟ್ಟಿಯೋ ಇಲ್ಲ ನಾಡಿನಿಂದ ಹೊರ ಹಾಕಿಯೊ ತೊರೆದು ಬಿಡುವುದು ಪದ್ದತಿ. ಅಂತಹ ನಿಷ್ಕಾರುಣ್ಯ ಜನರಿರುವ ದೇಶಕ್ಕೆ ನಿನ್ನಂತಹ ಸ್ವಾರ್ಥಿ, ಸಮಯಸಾಧಕನೋರ್ವ ಕೇವಲ ಹೆಸರಿಗೆ ಮಾತ್ರ ರಾಜನಾದದ್ದು ಪ್ರಜೆಗಳ ದುರಾದೃಷ್ಟ. ನೀನೇನಾದರು ರಾಜನಾಗಿ ಆ ದೇಶಕ್ಕೆ ಕೊಡುಗೆ ನೀಡಿದ್ದು ಇದೆಯೆ? ಇದ್ದಷ್ಟು ಕಾಲ ಹಸ್ತಿನೆಯಲ್ಲಿ ಇದ್ದು, ಚಂದ್ರವಂಶೀಯರ ಸುಸಂಸ್ಕೃತ ಸಂಸಾರವನ್ನು ಹಾಳುಗೆಡವಿದ ಕುಲಗೇಡಿ ನೀನು ಎಂದರೆ ಖಂಡಿತಾ ತಪ್ಪಾಗಲಾರದು. ನೀನು ರಾಜನಾದ ಬಳಿಕವಂತೂ ಉಂಟಾದ ಅರಾಜಕತೆಯ ಪರಿಣಾಮ, ಆ ದೇಶದಲ್ಲಾದ ಅವ್ಯವಸ್ಥೆಗಳು ಹೇಳತೀರದು. ಗುಂಪುಗಾರಿಕೆ, ಬಲಾಢ್ಯರ ಪುಂಡಾಟಿಕೆ, ದೌರ್ಜನ್ಯಗಳಿಗೆ ಮಿತಿಯಾದರೂ ಇದೆಯಾ? ಸಂಸ್ಕಾರ ಹೀನರಾಗಿ ಜನ ತಮ್ಮ ಸುಂದರಿ ಪತ್ನಿಯರನ್ನು ಮಾರುವ, ಹೆಣ್ಮಕ್ಕಳನ್ನು ವಿಕ್ರಯಿಸಿ ವ್ಯಾಪಾರ ಮಾಡುವಷ್ಟರವರೆಗಿನ ಪರಮ ಅಧರ್ಮದ ನೀತಿ ಧರ್ಮಸಮ್ಮತ ಎಂಬಂತೆ ಆಗಿ ಹೋಗಿದೆ. ಹೀಗೆಲ್ಲಾ ಆಗಿದ್ದರೂ ನಿನಗೆ ತಿಳಿದಿದೆಯೊ ಇಲ್ಲವೋ ಗೊತ್ತಿಲ್ಲ, ನಿನ್ನ ಮಾಹಿತಿಗಾಗಿ ಅಂಗ ದೇಶದ ಉತ್ತಮ ವಿಚಾರಗಳನ್ನು ತಿಳಿಸುತ್ತೇನೆ. ಸುಜ್ಞಾನಿಗಳು, ಸಂಸ್ಕಾರವಂತರು, ಸದ್ಗುಣ ಶೀಲರು, ತಪಸ್ವಿಗಳು, ವೀರ ಪುರುಷರು, ನ್ಯಾಯ ಪಾಲಕರು, ಧರ್ಮಾತ್ಮರೂ ಆದವರು ಈಗಲೂ ಅಂಗದೇಶದಲ್ಲಿ ಇದ್ದಾರೆ. ಅಂತಹ ಜನರು ಸಂಕಷ್ಟದಿಂದ ಬದುಕುವಂತಾದದ್ದು ನಿನ್ನ ದುರ್ಬಲ ಆಡಳಿತದಿಂದ. ಈ ಉತ್ತಮ ಗುಣಿಗಳಲ್ಲಿ ಹಲವರು ಬಾಹ್ಯ ಒತ್ತಡ, ದೌರ್ಜನ್ಯದಿಂದ, ಅನಾಗರಿಕ ವರ್ತನೆಗಳಿಂದ ಅಸಹನೀಯ ಸ್ಥಿತಿಗೆ ಬಿದ್ದು, ಒತ್ತಡದಿಂದ ಮನ ಪರಿವರ್ತನೆಯಾಗಿ ಸಂಸ್ಕಾರ ತೊರೆದು ದೇಶಾಚಾರವನ್ನು ಅವಲಂಬಿತರಾದ ಘಟನೆಗಳೂ ಸಾಕಷ್ಟಿವೆ ಎಂಬ ಸತ್ಯವೂ ನನಗೆ ತಿಳಿದಿದೆ.
ಇನ್ನೂ ಒಂದು ವಿಚಾರ ನೆನಪಿಸುತ್ತೇನೆ. ಈ ಯುದ್ಧಾರಂಭಕ್ಕೆ ಮೊದಲು ಆಚಾರ್ಯ ಭೀಷ್ಮರೊಂದು ದಿನ ನಿನಗೆ ನೀತಿ ಪಾಠ ಮಾಡಿದ್ದರು. ಸಾಧ್ಯವಾದರೆ ಅದನ್ನೊಮ್ಮೆ ಜ್ಞಾಪಿಸಿಕೋ. ಅಂದು ರಣತಂತ್ರದ ಯೋಜನೆ ರೂಪಿಸುವಾಗ ರಥಿ, ಮಹಾರಥಿ, ರಥಗಳು, ಆಯುಧ ಸಂಗ್ರಹದ ಕುರಿತಾದ ಗಣನೆ ನಡೆಯುತ್ತಿತ್ತು. ಆಗ ಯಾವುದೊ ಕಾರಣದಿಂದ ನಿನ್ನ ಬಗ್ಗೆ ಅಸಂತುಷ್ಟರಾದ ಆಚಾರ್ಯ ಭೀಷ್ಮರು ಉಪಯುಕ್ತವಾದ ಕೆಲವು ಸಲಹೆಗಳನ್ನು ನಿನಗಿತ್ತಿದ್ದರು. ಅವರು ಹೇಳಿದ್ದರಲ್ಲಿ ನನಗೆ ನೆನಪಿರುವ, ಈಗಿನ ನಮ್ಮ ವಿವಾದಕ್ಕೆ ಪೂರಕವಾದ ಕೆಲವನ್ನು ಸ್ಮರಿಸಿ ಹೇಳುತ್ತೇನೆ ಕೇಳು. ಅವರಂದಂತೆ, ಕರ್ಣಾ! ಮೊದಲು ನಿನ್ನ ಬಗ್ಗೆ ನೀನು ತಿಳಿದುಕೊಂಡಿರುವ “ನಾನು ಮಹಾನ್” ಎಂಬ ಭ್ರಮೆಯನ್ನು ತೊರೆದು ಬಿಡಬೇಕು. ಇಲ್ಲವಾದರೆ ಅದೇ ಅಹಂ ಆಗಿ ಬೆಳೆದು, ಕಾಲಾಂತರದಲ್ಲಿ ನಿನ್ನ ನಾಶಕ್ಕೆ ಕಾರಣವಾಗುತ್ತದೆ. ಅದಕ್ಕೂ ಮೊದಲು ನಿನ್ನಲ್ಲಿರುವ ದೋಷಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಆಗ ನೀನು ಕ್ರೋಧಮುಕ್ತನಾಗಿ ಶಾಂತನಾಗುವೆ, ಪರಿಣಾಮವಾಗಿ ವಿವೇಚನೆ ಮಾಡಬಲ್ಲ ಪ್ರಶಾಂತತೆ ಮನದಲ್ಲಿ ಮೂಡಿ, ಸಮರ್ಥವಾದ ನಿರ್ಣಯಗಳನ್ನು ಕೈಗೊಳ್ಳಲು ಶಕ್ತನಾಗುವೆ. ಇನ್ನು ನೀನು ಮಾತು ಮಾತಿಗು ವರ್ಣಭೇದವನ್ನು ಮುಂದಿಟ್ಟು ಬೊಟ್ಟು ಮಾಡಿ ತೋರುವ ಬುದ್ದಿ ಹೊಂದಿರುವೆ. ಎಲ್ಲಾ ಕಡೆ ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ವೈಶ್ಯರು ಇರುತ್ತಾರೆ. ಉತ್ತಮ ವ್ರತಗಳನ್ನು ಪಾಲಿಸುವ ಸಾಧ್ವಿ ಶಿರೋಮಣಿ ಸ್ತ್ರೀಯರು ಎಲ್ಲ ವರ್ಣದಲ್ಲೂ ಇರುತ್ತಾರೆ. ಸಾಧನೆಯಿಂದ ಸಾಧಕರಾಗಿ ವಿಶೇಷ ಸ್ಥಾನ ಏರಿದ ಪುರುಷರೂ ಎಲ್ಲ ವರ್ಣದಲ್ಲೂ ಇದ್ದಾರೆ. ಹಾಗೆಯೆ ದುಷ್ಟರು, ದುರುಳರು, ಅನ್ಯಾಯಿ, ಅಧರ್ಮಿಗಳು ಸಕಲ ವರ್ಣಗಳಲ್ಲೂ ಇರುತ್ತಾರೆ. ಹಾಗಿದ್ದರೆ ಇದರ ಸಾರಾಂಶ ಏನು? ಉತ್ತಮ ಮತ್ತು ನಿಕೃಷ್ಟರಾದವರು ತಾವು ಯಾವ ವರ್ಣದಲ್ಲಿದ್ದರೂ, ತಮ್ಮದ್ದಾದ ಮನಸ್ಥಿತಿ, ಗುಣ ಮತ್ತು ಕೃತ್ಯಗಳಿಂದ ಅವರು ಏನು ಎಂದು ನಿರ್ಣಯಿಸಲ್ಪಡುತ್ತಾರೆ ಹೊರತು, ವರ್ಣದಿಂದಲ್ಲ. ವರ್ಣದ ಕಾರಣದಿಂದಾಗಿ ಸಾಧನೆಯ ಪಥ ತುಸು ಕಷ್ಟವಾಗಿರಬಹುದು, ಆದರೆ ಯಾವಾತ ಏನನ್ನಾದರು ಕಠಿಣ ಮಾರ್ಗ ಕ್ರಮಿಸಿ ಸಾಧಿಸಿದರೆ ಅದು ಅವಿಸ್ಮರಣೀಯವಾಗಿ ಉಳಿದು ಬಿಡುತ್ತದೆ. ಸುಲಭವಾಗಿ ಪಡೆದದ್ದು ಅಷ್ಟೆ ಸರಳವಾಗಿ ನಷ್ಟಗೊಳ್ಳುತ್ತದೆ. ಯಾವುದೆ ಒಂದು ಪ್ರದೇಶ, ಪ್ರಾಂತ, ದೇಶ ಅತ್ಯುತ್ತಮವೂ ಆಗಿರುವುದಿಲ್ಲ. ಹಾಗೆಂದು ಕೆಟ್ಟದ್ದೂ ಆಗಿರುವುದಿಲ್ಲ. ಒಂದಕ್ಕೆ ಹೋಲಿಸಿದರೆ ಇನ್ನೊಂದಕ್ಕೆ ವ್ಯತ್ಯಾಸಗಳಂತೂ ಖಂಡಿತಾ ಇದ್ದೇ ಇರಬಹುದು. ಅದೇ ಕಾರಣದಿಂದ ಇಂತಹ ದೇಶ, ಅಥವಾ ಈ ಪ್ರದೇಶದ ಜನರು ಸಮಗ್ರವಾಗಿ ದುಷ್ಟರು ಅಥವಾ ತುಂಬಾ ಒಳ್ಳೆಯವರು ಎಂದು ಧೃಡೀಕರಿಸಿ ಹೇಳಲಾಗದು. ಕಾರಣ ಅಲ್ಲೂ ಒಳಿತು ಕೆಡುಕುಗಳ ಮಿಶ್ರಣವಿರುತ್ತದೆ. ಸಾಮಾನ್ಯವಾಗಿ ಮನುಷ್ಯರ ಸ್ವಭಾವ ಸಹಜ ಗುಣವೇನೆಂದರೆ, ಮತ್ತೊಬ್ಬರ ದೋಷಕಥನವನ್ನು ಗುರುತಿಸಿ, ಸುಲಲಿತವಾಗಿ ವರ್ಣಿಸಲು ಕಲಿತುಕೊಳ್ಳುತ್ತಾರೆ. ಅದೇ ಶ್ರಮ ವಿನಿಯೋಗಿಸಿ ತಮ್ಮದ್ದಾದ ದೋಷಗಳನ್ನು ಕಂಡುಕೊಂಡು ತಿದ್ದಿಕೊಳ್ಳುವಲ್ಲಿ ವಿಫಲರಾಗುತ್ತಾರೆ
ಹೀಗೆ ಅಂದು ನಿನ್ನ ಬಗ್ಗೆ ಸಮಗ್ರವಾಗಿ ಗುಣಗ್ರಾಹಿಗಳು, ವಯೋ ವೃದ್ಧರು, ಜ್ಞಾನವೃದ್ದರೂ ಆದ ಭೀಷ್ಮಾಚಾರ್ಯರು ಹೇಳಿರುವಾಗ ಮತ್ತೆ ನಾನೇನು ಹೊಸತಾಗಿ ನಿನ್ನ ಗುಣಾವಲೋಕನಗೈದು ಹೇಳಲು ಬಾಕಿ ಉಳಿದಿದೆ ಹೇಳು?” ಹೀಗೆ ಶಲ್ಯನು ಮಾರ್ಮಿಕವಾಗಿ ಕರ್ಣನ ಮನಮುಟ್ಟುವಂತೆ ಪ್ರತ್ಯುತ್ತರ ನೀಡಿದನು.
ಆ ಸಮಯಕ್ಕಾಗಲೇ ಅಲ್ಲಿ ಬಂದು ಮುಟ್ಟಿದ ಕೌರವ, ಶಲ್ಯ ಮತ್ತು ಕರ್ಣ ಇಬ್ಬರನ್ನೂ ಕರೆದು ನೀವಿಬ್ಬರು ಪರಸ್ಪರ ವಾದ ವಿವಾದ ನಿರತರಾದರೆ ನಿಮ್ಮೊಳಗೆ ವೈರ ಉತ್ಪನ್ನವಾಗುತ್ತದೆ. ಪರಿಣಾಮವಾಗಿ ನಮ್ಮ ನಾಶ ನಮ್ಮಿಂದಲೆ ಆಗ ತೊಡಗುತ್ತದೆ. ಆದ ಕಾರಣ ನಿಮ್ಮ ವಾಗ್ಯುದ್ದವನ್ನು ನಿಲ್ಲಿಸಿ ಈರ್ವರೂ ಶತ್ರುದಮನದತ್ತ ಗಮನ ಹರಿಸಬೇಕು. ನೀವೀರ್ವರೂ ಶ್ರೇಷ್ಟ ಯೋಧರೂ, ವಿವೇಕಿಗಳೂ, ಸಮರ್ಥರೂ ಆಗಿದ್ದೀರಿ. ಆಪತ್ಕಾಲದಲ್ಲಿ ಬಹಿರಂಗದ ವೈರಿಗಳಿಗೆ ನಮ್ಮೊಳಗಿನ ಒಡಕು ಸಹಾಯ ಒದಗಿಸುತ್ತದೆ. ನಿಮಗಿಬ್ಬರಿಗೂ ಕರ ಜೋಡಿಸಿ ಬೇಡುತ್ತೇನೆ, ಇನ್ನು ಮುಂದಕ್ಕೆ ನಿಮ್ಮಿಬ್ಬರಲ್ಲಿ ಯಾರೊಬ್ಬರೂ ಒಂದು ನಿಂದಾವಾಕ್ಯವನ್ನೂ ಆಡಬಾರದು. ಮಿತ್ರ ಕರ್ಣಾ, ನೀನಾದರು ಸಹಿಸಿಕೋ! ಏನೇ ಮಾನಸಿಕ ನೋವಾದರೂ ಯುದ್ದ ಗೆದ್ದ ಬಳಿಕ ಒಮ್ಮತದ ಒಪ್ಪಂದದಿಂದ ಬಗೆಹರಿಸೋಣ. ಈಗ ಹಿರಿಯನೂ, ಅನುಭವಿಯೂ, ಶ್ರೇಷ್ಟ ಮಹಾರಥಿಯೂ, ನಿನ್ನ ಸಾರಥಿಯೂ ಆಗಿರುವ ಮಾದ್ರೇಶನ ಆಜ್ಞಾಪಾಲಕನಾಗಿ ಯುದ್ಧಮಾಡು. ಒಂದೊಮ್ಮೆಗೆ ನಿನಗೆ ಶಲ್ಯ ಭೂಪತಿಯ ಮಾತು ಅಹಿತ ಎಣಿಸಿದರೂ ನನಗಾಗಿ ಸಹಿಸಿಕೋ. ಮರು ಮಾತಾಡದೆ ಒಪ್ಪಿ ಅವನ ನಿರ್ದೇಶನದಂತೆ ಅನುವರ್ತಿಯಾಗಿ ಮುಂದುವರಿಯಬೇಕು. ನಮ್ಮ ಉಳಿವಿಗೆ – ಗೆಲುವಿಗೆ ಇದೊಂದು ಮಾತ್ರ ಉಳಿದಿರುವ ಮಾರ್ಗ. ನೀನು ನನ್ನ ಕೋರಿಕೆ ಮನ್ನಿಸಿ ಅನುಸರಿಸುವೆ ಎಂಬ ವಿಶ್ವಾಸವಿದೆ” ಎಂದು ಕೈ ಜೋಡಿಸಿ ಬೇಡಿದನು.
ಹೀಗೆ ಕುರುನಾಯಕ ದುರ್ಯೋಧನ ದೈನ್ಯತೆಯಿಂದ ಪ್ರಾರ್ಥಿಸಿದಾಗ ಶಲ್ಯ ಮತ್ತು ಕರ್ಣ ಇಬ್ಬರೂ ಸಮ್ಮತಿಸಿದರು. ಮತ್ತೆ ಚರ್ಚೆ ಬೆಳೆಸಲಿಲ್ಲ. ಮತ್ಯಾವ ಪ್ರಶ್ನೋತ್ತರಗಳೂ ಹೊರಬರಲಿಲ್ಲ. ಶತ್ರು ಸೇನೆಗೆ ಅಭಿಮುಖವಾಗಿ ಮುನ್ನುಗ್ಗುತ್ತಾ ಕರ್ಣ ಉಗ್ರವಾಗಿ ಪ್ರಹರಿಸ ತೊಡಗಿದನು.
ಹೀಗೆ ಯುದ್ದ ಮರು ಸಂಘಟನೆಯಾಗಿ ಸಾಗುವಾಗ ಶಲ್ಯ ಭೂಪತಿ ದುರ್ಯೋಧನನ್ನು ಕರೆಸಿ ಕ್ಷಿಪ್ರವಾಗಿ ಪರಸ್ಪರ ಯೋಜನೆ ರೂಪಿಸಿ ಕೊಂಡರು. ಅದರಂತೆ ಚದುರಿ ಹೋಗಿದ್ದ ಕುರುಸೇನೆಯನ್ನು ಮರು ಜೋಡಿಸಿ ವ್ಯೂಹ ಕ್ರಮದಲ್ಲಿ ಸಜ್ಜುಗೊಳಿಸಿ ಕೊಂಡರು. ಯಾಕೆಂದರೆ ಒಂದೆಡೆ ಅರ್ಜುನ ಘೋರ ಕಾನನಕ್ಕೆ ಹತ್ತಿದ ಕಾಡ್ಗಿಚ್ಚಿನಂತೆ ಕುರು ಸೇನೆಯನ್ನು ಭಸ್ಮೀಭೂತಗೊಳಿಸತೊಡಗಿದ್ದ. ಒಣ ಹುಲ್ಲಿನಂತೆ ಕುರುಸೇನೆ ಸರ್ವನಾಶವಾಗುತ್ತಿತ್ತು.
ಕುರುಸೇನೆ ಹೊಸ ತಂತ್ರಕ್ಕೆ ಸಿದ್ಧವಾಯಿತು. ಹೀಗಾಗುತ್ತಲೇ ಪಾಂಡವ ಸೇನೆಯೂ ವ್ಯೂಹವಾಗಿ ಪುನಾರಚನೆಗೊಳ್ಳ ತೊಡಗಿತು. ಭೀಮ ಪ್ರಧಾನ ಸೇನಾರಕ್ಷಕನಾದರೆ, ಸೇನಾನಾಯಕ ದೃಷ್ಟದ್ಯುಮ್ನ ಒಂದು ಪಾರ್ಶ್ವದ ರಕ್ಷಕನಾದ. ಮತ್ತೊಂದೆಡೆ ಸಾತ್ಯಕಿ ರಕ್ಷಣೆಗೆ ಸ್ಥಿತನಾದ. ನಕುಲ ಸಹದೇವರು ಸೇನಾ ಹಿಂಭಾಗದಿಂದ ಬಲ ತುಂಬಿದರೆ, ಚೇತರಿಸಿಕೊಂಡು ಬಂದಿದ್ದ ಯುಧಿಷ್ಟಿರ ಸೇನೆಯ ಮಧ್ಯ ಭಾಗದಿಂದ ಯುದ್ಧ ಸಂಘಟಿಸಿ ಸೇನೆಯ ಸಂರಕ್ಷಕನಾಗಿದ್ದಾನೆ. ಕೃಷ್ಣಾರ್ಜುನರು ವ್ಯೂಹದ ಮುಂಚೂಣಿಯಲ್ಲಿ ಕಾಣಿಸಿಕೊಂಡರು.
ಇತ್ತ ಶರದ್ವಂತರಾದ ಕೃಪ – ಅಶ್ವತ್ಥಾಮರು ಸೇನೆಯ ಎಡ – ಬಲ ಭಾಗದಲ್ಲಿ, ಶಲ್ಯ ಕರ್ಣರು ಮುಂದೆ ಮುಂಚೂಣಿಯಲ್ಲಿ ಮಧ್ಯ ಭಾಗವನ್ನು ತಮ್ಮದಾಗಿಸಿದರು. ಸಾತ್ವತ ವಂಶೀಯ ಕೃತವರ್ಮ ವ್ಯೂಹದ ದಕ್ಷಿಣ ಭಾಗ, ಗಾಂಧಾರದ ಶಕುನಿ ಸೇನೆ ಸಹಿತವಾಗಿ ಉತ್ತರ ಭಾಗದಿಂದಲೂ, ದುರ್ಯೋಧನ ವ್ಯೂಹ ಮಧ್ಯದಲ್ಲಿ, ದುಶ್ಯಾಸನಾದಿ ಕೌರವ ಸೋದರರು ವ್ಯೂಹದ ಹಿಂಭಾಗದಲ್ಲೂ ಸ್ಥಿತರಾದರು.
ಹೀಗಿರಲು ಧರ್ಮರಾಯ ಅರ್ಜುನನಲ್ಲಿಗೆ ಬಂದು “ಪಾರ್ಥಾ! ಈಗಿನ ಸಮಯ ವೈರಿ ಸೇನೆ ನಮಗಿಂತ ಅಧಿಕವಾಗಿ ಕಾಣಿಸುತ್ತಿದೆ. ಮೇಲಾಗಿ ವ್ಯೂಹದ ಪರಿಧಿಯಂತೆ ಅಭೇಧ್ಯ ರೀತಿಯಲ್ಲಿ ಮಹಾರಥಿಗಳು ಸ್ಥಿತರಾಗಿದ್ದಾರೆ. ನಿನ್ನಿಂದ ಈ ವ್ಯೂಹ ನಾಶದ ಮಹತ್ಕಾರ್ಯವಾಗಬೇಕು” ಎಂದನು.
ಬದ್ದಾಂಜಲಿಯಾದ ಧನಂಜಯ, “ಅಣ್ಣಾ! ನೀನು ಹೇಳಿದಂತೆಯೆ ತೊಡಗುವೆ. ನಿನ್ನ ಆಜ್ಞೆ ಮೀರಿ ನಾನು ನಡೆಯಲಾರೆ. ಯುದ್ದಶಾಸ್ತ್ರದಲ್ಲಿ ವ್ಯೂಹ ನಾಶದ ಯಾವೆಲ್ಲ ತಂತ್ರಗಳಿವೆಯೊ ಅವೆಲ್ಲ ಉಪಾಯಗಳನ್ನೂ ನಾನು ಮಾಡುವೆ. ಆದರೆ ಈ ರೀತಿಯ ವ್ಯೂಹದ ನಾಶವಾಗ ಬೇಕಾದರೆ ವ್ಯೂಹ ಪ್ರಧಾನನನ್ನು ವಧಿಸಬೇಕು ಇಲ್ಲಾ ತೊಲಗಿಸಬೇಕು. ಹಾಗಾಗಿ ನಾನು ಮೊದಲಾಗಿ ಕರ್ಣನನ್ನು ಎದುರಿಸಿ ಹೋರಾಡುತ್ತೇನೆ. ನೀವೆಲ್ಲರು ನಮ್ಮ ಸೇನಾ ರಕ್ಷಣೆ ಮಾಡುತ್ತಾ, ಶತ್ರು ಸೇನೆಯ ವಿನಾಶಕರಾಗಿ” ಎಂದು ನುಡಿದನು.
ಇತ್ತ ಶಲ್ಯ ಮತ್ತು ಕರ್ಣ ಪಾಂಡವ ಸೇನೆಯ ತಂತ್ರಗಳ ಕುರಿತಾಗಿ ಅವಲೋಕಿಸಿ ಬಲಾಬಲಗಳ ವಿಮರ್ಷೆ ನಿರತರಾಗಿದ್ದಾರೆ. ಇನ್ನೇನು ಕರ್ಣಾರ್ಜುನರ ನೇರ ಹಣಾಹಣಿಯಾಗಲಿದೆ. ಅದಕ್ಕೂ ಮೊದಲು ಯೋಗ್ಯ ತಂತ್ರಗಾರಿಕೆಗಾಗಿ ಸಾರಥಿ ಮತ್ತು ರಥಿಕನ ನಡುವೆ ಸಮಾಲೋಚನೆ ಸಾಗುತ್ತಿದೆ.
ಮುಂದುವರಿಯುವುದು…



















