23.9 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 407

ಭರತೇಶ ಶೆಟ್ಟಿ ಎಕ್ಕಾರ್

ಸಂಚಿಕೆ ೪೦೭ ಮಹಾಭಾರತ

ಒಂದೆಡೆ ಏಕರಥದಲ್ಲಿರುವ ಶಲ್ಯ ಕರ್ಣರು ಯುದ್ಧಗೈಯುತ್ತಿರುವ ಮಧ್ಯೆ ತಮ್ಮೊಳಗೆ ಒಮ್ಮತ ಮೂಡದೆ ವಾಗ್ಯುದ್ಧ ನಿರತರಾಗಿದ್ದಾರೆ. ಅತ್ತ ರಣರಂಗ ಪ್ರವೇಶಿಸಿದ ಕೃಷ್ಣಾರ್ಜುನರು ಉಗ್ರವಾಗಿ ಕುರುಸೇನೆಯ ಮೇಲೆ ಎರಗತೊಡಗಿದ್ದಾರೆ. ತಮಗೆದುರಾದ ಮಹಾರಥರಾದ ಶ್ರುತಂಜಯ, ಸೌಶ್ರುತಿ, ಚಂದ್ರದೇವ, ಸತ್ಯಸೇನ ಮೊದಲಾದವರೊಡನೆ ಪ್ರಳಯಾಂತಕನಂತೆ ಬವರ ನೀಡಿದ ಪಾರ್ಥ ಕೆಲ ಕ್ಷಣಗಳಲ್ಲಿ ಅವರನ್ನೆಲ್ಲ ಸವರಿ ನಾಶಗೊಳಿಸಿದನು.

ಇತ್ತ ಪಾಂಡವ ಪಕ್ಷದ ಮಹಾರಥಿ ಪಾಂಡ್ಯರಾಜನು ವಿಜ್ರಂಭಿಸುತ್ತಾ ಒಂದು ಪಾರ್ಶ್ವದಲ್ಲಿ ಮೆರೆಯುತ್ತಿದ್ದಾನೆ. ಪಾಂಡ್ಯರಾಜನು ಮಹಾ ಪರಾಕ್ರಮಿ ಹೌದಾದರೂ, ಸ್ವಭಾತಃ ಅಹಂಕಾರಿ. ತಾನು ಭೀಷ್ಮ, ದ್ರೋಣ, ಕೃಪ, ಕರ್ಣ, ಅಶ್ವತ್ಥಾಮ ಸಹಿತ ಕೃಷ್ಣಾರ್ಜುನರಿಗಿಂತಲೂ ಪ್ರಬಲ ವಿಕ್ರಮಿ. ಧನುರ್ವೇದ ವಿದ್ಯೆಯಲ್ಲಿ ಇವರೆಲ್ಲರಿಗಿಂತಲೂ ತಾನೇ ಶ್ರೇಷ್ಟ ಎಂದು ಭಾವಿಸಿ, ಅನ್ಯರಲ್ಲಿ ಹೇಳಿಕೊಳ್ಳುತ್ತಲೂ ಇದ್ದವನು. ಆತನ ಅಭಿಪ್ರಾಯಕ್ಕೆ ಪೂರಕವಾಗಿ ಈ ಹಿಂದೆ ಸಾಗಿದ್ದ ಹದಿನಾರು ದಿನಗಳಲ್ಲಿ ಈತ ತನಗೆದುರಾಗಿದ್ದ, ಕರ್ಣ, ಕೃತವರ್ಮ, ಕೃಪಾದಿ ಮಹಾವೀರರನ್ನು ಸೋಲಿಸಿದ್ದನು. ಕುರುಸೇನೆಯ ಮೈತ್ರಿ ರಾಜರನೇಕರನ್ನು ಸಂಹರಿಸಿ ಸೇನಾನಾಶಕ್ಕೂ ಕಾರಣನಾಗಿದ್ದಾನೆ. ಇಂದು ಕೂಡ ಕುರು ಸೇನೆಯ ಗಜ ಪಡೆ, ಅಶ್ವದಳ, ಪದಾತಿ, ರಥಿ, ಮಹಾರಥಿಗಳನ್ನು ಧ್ವಂಸಗೈಯುತ್ತಾ ಮುಂದೊತ್ತಿ ಬರುತ್ತಿದ್ದಾನೆ. ತನಗೆದುರಾದ ಪುಲಿಂದ, ಖಸ, ಬಾಹ್ಲಿಕ, ನಿಶಾದ, ಆಂಧ್ರ, ಕುಂತಳ, ದಾಕ್ಷಿಣಾತ್ಯ, ಭೋಜ ಇವೇ ಮುಂತಾದ ದೇಶಗಳ ರಣಕರ್ಕಶರಾದ ಶೂರವೀರರನ್ನು ತನ್ನ ಶರಪ್ರಯೋಗ ಕೌಶಲದಿಂದ ಪ್ರಾಣರಹಿತರನ್ನಾಗಿ ಮಾಡುತ್ತಿದ್ದಾನೆ. ಕೌರವರ ಚತುರಂಗ ಸೇನೆ ಪಾಂಡ್ಯರಾಜನ ರೌದ್ರವತಾರದ ಯುದ್ದ ಪ್ರದರ್ಶನದಿಂದಾಗಿ ಧ್ವಂಸಗೊಳ್ಳುತ್ತಿದೆ. ಈ ಸಮಯ ಗುರುಪುತ್ರ ಅಶ್ವತ್ಥಾಮ ಎದುರಾಗಿ ಬಂದು ಪಾಂಡ್ಯರಾಜನನ್ನು ತಡೆದು ಸಮದಂಡಿಯಾಗಿ ಹೋರಾಡತೊಡಗಿದನು. ಧನುರ್ವೇದ ಶಾಸ್ತ್ರ ವಿದ್ಯೆ ಸಂಪೂರ್ಣವಾಗಿ ಅನಾವರಣಗೊಂಡಿದೆ. ಒಬ್ಬರನ್ನು ಇನ್ನೊಬ್ಬರು ಮೀರಿಸುವಂತೆ ರಣಭಯಂಕರವಾದ ಯುದ್ಧ ನಿರತರಾಗಿದ್ದಾರೆ. ಇವರ ಯುದ್ದ ಎಷ್ಟು ವೇಗ ಮತ್ತು ತೀವ್ರವಾಗಿತ್ತೆಂದು ಉದಾಹರಿಸುವುದಾದರೆ ಇಬ್ಬರ ರಥಗಳ ಹಿಂದೆ ಆಯುಧ ಪೂರೈಸುವ ಸಹಾಯಕ ದಳ ಈಗಾಗಲೆ ಎಂಟು ಹತ್ತು ಬಂಡಿ ಪೂರ್ತಿ ಬಾಣಗಳನ್ನು ಇವರಿಬ್ಬರ ರಥದಲ್ಲಿ ತುಂಬಿದರೂ ಖಾಲಿಯಾಗುತ್ತಿದೆ ಹೊರತು ಜಯಾಪಜಯ ನಿರ್ಣಯವಾಗಿಲ್ಲ. ಹೀಗೆ ಸಾಗಿದ ಯುದ್ಧದಲ್ಲಿ ಗದೆ, ತೋಮರ, ಪರಶು, ಕಟಾರಿ, ಕತ್ತಿ ಕಾಳಗಗಳು ನಡೆದವಾದರೂ ಇಬ್ಬರೂ ಮತ್ತಷ್ಟು ಉಗ್ರರಾಗುತ್ತಿದ್ದಾರೆ ಹೊರತು ಯಾರೊಬ್ಬನೂ ಸೋಲುತ್ತಿಲ್ಲ. ಮತ್ತೆ ಶರ ಪೂರಣೆಯಾದಾಗ ಧನುರ್ಯುದ್ದ ಆರಂಭ ಗೊಂಡಿತು. ಬಹು ಹೊತ್ತು ಸಾಗಿದ ಇವರೀರ್ವರ ಕದನದಲ್ಲಿ ಮತ್ತೂ ಯಥಾಸ್ಥಿತಿ ಮುಂದುವರಿದಾಗ ಗುರುಪುತ್ರ ದ್ರೌಣಿ ತನ್ನ ಯುದ್ದ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತಾ ಹೋದನು. ಮೊದಲು ಒಂದು ಬಾಣ ಪ್ರಯೋಗವಾಗುವ ಸಮಯದಲ್ಲಿ ಈಗ ಇಪ್ಪತ್ತು ಮಾರ್ಗಣಗಳ ಪ್ರಯೋಕ್ತನಾಗಿದ್ದಾನೆ. ಈ ಕ್ಷಿಪ್ರ ಯುದ್ದ ಪರಿಕ್ರಮದಲ್ಲಿ ಆರಂಭದಲ್ಲಿ ಸಮಾನನಾಗಿದ್ದರೂ, ಹೊತ್ತು ಕಳೆಯುತ್ತಿದ್ದಂತೆ ಬಸವಳಿದು ದಣಿದ ಪಾಂಡ್ಯರಾಜನನ್ನು ಅಶ್ವತ್ಥಾಮನ ಒಂದೊಂದೇ ಶರಗಳು ಘಾಸಿಗೊಳಿಸತೊಡಗಿದವು. ಗಾಯಾಳುವಾದ ಪಾಂಡ್ಯರಾಜನ ಗತಿ ನಿಧಾನವಾಗುತ್ತಿದ್ದಂತೆ ಅವಕಾಶ ಬಳಸಿಕೊಂಡ ಅಶ್ವತ್ಥಾಮ ಇನ್ನಷ್ಟು ಉಗ್ರನಾಗಿ ನಾರಾಚಗಳನ್ನೆಸೆದು ಪಾಂಡ್ಯರಾಜನ ಶರೀರಾದ್ಯಂತ ಚುಚ್ಚಿ ಸೀಳಿದನು. ಪರಿಣಾಮ ರಥದಿಂದ ಕುಸಿದು ಬಿದ್ದ ಪಾಂಡ್ಯರಾಜ ವೀರೋಚಿತ ವೀರಮರಣವನ್ನಪ್ಪಿದನು.

ಮತ್ತೊಂದೆಡೆ ಯುಯುತ್ಸು ಅತ್ಯುಗ್ರನಾಗಿ ಸಮರ ಸಾರುತ್ತಿದ್ದಾನೆ. ರಾಜ ಧೃತರಾಷ್ಟ್ರನಿಗೆ ಸಖಿಯಲ್ಲಿ ಜನಿಸಿದ ಈತ, ಪಿತನ ಸಂತತಿಯಾಗಿ ದುರ್ಯೋಧನನಿಗೆ ಸೋದರನು ಹೌದು. ಹೀಗಿದ್ದರೂ ಯುದ್ಧಾರಂಭ ಸಮಯದಲ್ಲಿ ಭೀಷ್ಮ ಸೇನಾಧಿಪತ್ಯದ ಮೊದಲ ದಿನವೇ ಕೌರವ ಪಕ್ಷ ತೊರೆದು, ತಾನು ನ್ಯಾಯ ಧರ್ಮ ಇರುವ ಪಕ್ಷವನ್ನು ಬಯಸುತ್ತೇನೆ ಎಂದು ಪಾಂಡವ ಪಕ್ಷ ಸೇರಿ ಕೊಂಡಿದ್ದನು. ಈ ತನಕ ಯುಯುತ್ಸು ಕೂಡ ಪಾಂಡವ ಪಕ್ಷಕ್ಕೆ ಮಹತ್ತರ ಕೊಡುಗೆ ನೀಡುತ್ತಾ ಬಂದಿದ್ದಾನೆ. ಅತುಲ ವಿಕ್ರಮಿಯೂ, ಮಹಾ ಪ್ರತಾಪಿಯೂ ಆಗಿರುವ ಈತನಿಗೆ ಅದ್ಬುತ ಪರಾಕ್ರಮಿಯಾದ ಉಲೂಕ ಮತ್ತು ಆತನ ಮಹಾಸೇನೆ ಈ ದಿನ ಎದುರಾಗಿದೆ. ಯುಯುತ್ಸು – ಉಲೂಕರ ಮಧ್ಯೆ ಘನಘೋರ ಸಂಗ್ರಾಮ ಸಾಗಿ ಕೊನೆಗೆ ಯುಯುತ್ಸು ಪರಾಭವಗೊಳ್ಳುತ್ತಿರುವ ಸಮಯ ಧನುರ್ಧರ ಧನಂಜಯ ಸಹಾಯಿಯಾಗಿ ಬಂದು ರಕ್ಷಣೆ ಮಾಡಿದ. ಅರ್ಜುನ ರಣೋಗ್ರನಾಗಿ ಉಲೂಕರನ್ನೂ ಸಂಹರಿಸಿದ.

ಹೀಗೆ ಕೃಷ್ಣಾರ್ಜುನರು ರಣಾಂಗಣದೆಲ್ಲೆಡೆ ಪ್ರದಕ್ಷಿಣೆಗೈಯುತ್ತಾ, ಕರ್ಣನನ್ನು ಹುಡುಕುತ್ತಾ ಬರುವಾಗ ತಮಗೆದುರಾದ ಶತ್ರುಗಳನ್ನು ಕ್ಷಿಪ್ರ ಗತಿಯಲ್ಲಿ ವಧಿಸುತ್ತಾ ಸಾಗಿ, ಈಗ ಕರ್ಣನ ರಥದ ಸಮೀಪಕ್ಕೆ ಬರುತ್ತಿದ್ದಾರೆ. ಪಾರ್ಥನ ಪ್ರತಿಜ್ಞೆ ಪೂರಣೆಯಾಗಲು ಇಂದಿನ ದಿನಾಂತ್ಯದೊಳಗೆ ಕರ್ಣನ ವಧೆಯಾಗಬೇಕು.

ಇತ್ತ ಕರ್ಣ ಶಲ್ಯರ ಮಧ್ಯೆ ವಾಕ್ಸಮರ ಸಾಗುತ್ತಲೆ ಯುದ್ಧ ಮಾಡುತ್ತಿದ್ದಾನೆ ರಾಧೇಯ. ಶಲ್ಯ ಅರ್ಜುನನೇ ಅತಿಬಲ ಪರಾಕ್ರಮಿ, ಅಸ್ತ್ರ ಶಸ್ತ್ರ ಸಂಚಯದಲ್ಲಾಗಲಿ, ಪ್ರಯೋಗ ಪರಿಕ್ರಮದಲ್ಲಾಗಲಿ ಆತನಿಗೆ ಸರಿ ಸಮಾನರು ಯಾರೂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಿ ವಾದಿಸುತ್ತಿದ್ದಾನೆ

ಆಗ ಕರ್ಣನು “ಶಲ್ಯ ಭೂಪತಿ, ನಾನೂ ಗುಣ ಮತ್ಸರಿಯಲ್ಲ. ಈ ಹಿಂದೆ ಹಲವು ಬಾರಿ ಕೌರವನ ಜೊತೆ ಅರ್ಜುನನ ವಿಶೇಷಣಗಳನ್ನು ಸಾಕಷ್ಟು ವರ್ಣಿಸಿದ್ದೇನೆ. ಮಾತ್ರವಲ್ಲ ಆತನೊಬ್ಬ ಪರಿಪೂರ್ಣ ಧನುರ್ಧಾರಿ ಎಂಬುವುದು ನನಗೂ ಗೊತ್ತಿದೆ. ಅರ್ಜುನ ಅತಿ ಶ್ರೇಷ್ಟನೂ, ಮಹಾರಥಿಗಳಿಗೆ ಅತಿ ಮಹಾರಥಿ ಎಂಬ ಸತ್ಯವೂ ನನಗೆ ತಿಳಿದಿದೆ. ಮಾತ್ರವಲ್ಲ ಅರ್ಜುನನ ಜೊತೆ ಈಗಾಗಲೆ ಹಲವು ಬಾರಿ ಯುದ್ಧವನ್ನೂ ಮಾಡಿ ಆತನ ಯುದ್ಧಕ್ರಮವನ್ನು ಕಂಡು ಅನುಭವಿಸಿದ ಅನುಭವಿ ನಾನು. ನೀನು ಏನು ಅರ್ಜುನನ ಬಗ್ಗೆ ಕೇಳಿ ತಿಳಿದಿರುವೆಯೋ! ಅದಕ್ಕಿಂತ ನೂರ್ಮಡಿ ಪಾರ್ಥನ ಬಗ್ಗೆ ಹೆಚ್ಚಿಗೆಯಾಗಿ ಪ್ರತ್ಯಕ್ಷ ತಿಳಿದವನು ನಾನು. ಇದನ್ನೆಲ್ಲ ನನಗೆ ನೀನು ಹೇಳಿ ಹೊಸತಾಗಿ ತಿಳಿಸಿ ಕೊಡಬೇಕಾಗಿಲ್ಲ. ಇಂದು ಯುದ್ಧ ಸಾಗುತ್ತಿರುವುದು ಕೌರವ – ಪಾಂಡವರಿಗೆ. ಕೌರವ ಪಕ್ಷದಲ್ಲಿರುವ ನೀನು ನಿನ್ನ ಪಕ್ಷೀಯನಾದ ನನ್ನ ಕ್ಷಮತೆ, ಸಾಮರ್ಥ್ಯವನ್ನು ಗುರುತಿಸಿ ಶ್ಲಾಘನೆ ಮಾಡಬೇಕು. ನನಗೆ ಅಂತಹ ಹೊಗಳಿಕೆಯ ಅಪೇಕ್ಷೆಯಿಲ್ಲ. ಆದರೆ ನೀನು ಹಾಗೆ ಪ್ರೋತ್ಸಾಹಿಸಿದಾಗ, ನಾನು ಮತ್ತಷ್ಟು ಪ್ರೇರಣೆ ಪಡೆದು ಉತ್ಸಾಹಿತನಾಗುವೆ.

ಈ ತನಕ ನನ್ನೆದುರು ನನ್ನನ್ನು ನಿನ್ನಂತೆ ನಿಕೃಷ್ಟವಾಗಿ ದೂಷಿಸಲು ಯತ್ನಿಸಿದ ಯಾರೊಬ್ಬರನ್ನೂ ದಂಡಿಸದೆ ಬಿಟ್ಟವನಲ್ಲ. ಇಂದು ನೀನಾಡಿದ ಒಂದೊಂದು ಕ್ರೂರ ನಿಂದನೆಗೂ, ಅಷ್ಟೇ ಕ್ರೌರ್ಯದಿಂದ ನಿನ್ನನ್ನು ವಧಿಸಿ ಬಿಡುತ್ತಿದ್ದೆ. ಆದರೆ ಹಾಗೆ ಮಾಡಿದೆನಾದರೆ, ನನ್ನ ಸ್ವಾರ್ಥಕ್ಕಾಗಿ ಮಿತ್ರ ಕೌರವನಿಗೆ ಅಪಚಾರ ಎಸಗಿದಂತಾಗುತ್ತದೆ. ನೀನೇನು ದೋಷಗಳನ್ನು ಮಾಡಿದರೂ ಪೂರ್ಣ ಮನದಿಂದ ಸಹಿಸಿ, ಕ್ಷಮಿಸುತ್ತಿದ್ದೇನೆ. ಮಾದ್ರೇಶ! ಕರ್ಣಾರ್ಜುನರ ನಡುವೆ ಹಲವು‌ ಬಾರಿ‌ ಮುಖಾಮುಖಿ ಯುದ್ಧ ಆಗಿದ್ದರೂ, ಫಲಿತಾಂಶ ಏನಾಗಿದೆಯೋ ಅದು ನಗಣ್ಯ, ಆದರೆ ಇಂದು ಮಾತ್ರ ಹಾಗಾಗದು. ಅರ್ಜುನನ ವಧೆಗೈಯುವ ನನ್ನ ಪ್ರತಿಜ್ಞೆ ಪೂರೈಸದೆ ಬಿಡಲಾರೆ. ಇಂದಿನ ದಿನಾಂತ್ಯ ಪಾರ್ಥನ ಪಾರ್ಥಿವ ಶರೀರ ರಣಾಂಗಣದಿಂದ ಹೋಗುವುದು ನಿಶ್ಚಿತ. ಆ ಅದ್ವಿತೀಯ ಕಾರ್ಯ ಸಾಧನೆಗೆ ನಿನ್ನ ಪೂರ್ಣ ಸಹಕಾರ ನನಗೆ ಬಹಳಷ್ಟು ಅಗತ್ಯವಿದೆ. ಅಷ್ಟು ಮಾತ್ರವಲ್ಲ ರಥಕಲ್ಪ – ಅಶ್ವಹೃದಯ ಬಲ್ಲ ಸಮರ್ಥ ಸಾರಥಿಯಾದ ನಿನ್ನಿಂದ ಮಹತ್ತರವಾದ ಸಹಾಯದ ಅಪೇಕ್ಷೆಯೂ ಇದೆ. ನಾನು ಈ ಹಿಂದೆ ವಿಜಯ ಎಂಬ ಬ್ರಾಹ್ಮಣನೋರ್ವನಿಂದ ಶಾಪಗ್ರಸ್ಥನಾಗಿದ್ದೇನೆ ಆ ಶಾಪ ವೃತ್ತಾಂತದ ಕಥೆಯನ್ನು ಸಾರಥಿಯಾದ ನಿನಗೆ ವಿವರಿಸಿ ಹೇಳ ಬೇಕಾಗಿದೆ” ಎಂದು ಶಲ್ಯನತ್ತ ನೋಡಿ ಆ ಕಥನವನ್ನು ಹೇಳಲಾರಂಭಿಸಿದನು

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page