ಭಾಗ 405
ಭರತೇಶ ಶೆಟ್ಟಿ, ಎಕ್ಕಾರ್

ಕುರುಕ್ಷೇತ್ರದಲ್ಲಿ ಶಲ್ಯ ಸಾರಥ್ಯದ ಕರ್ಣನೆದುರು ದೃಷ್ಟದ್ಯುಮ್ನ ಮತ್ತು ಸಾತ್ಯಕಿ ರಕ್ಷಣಾತ್ಮಕವಾಗಿ ಹೋರಾಡುತ್ತಾ ವ್ಯಸ್ಥಗೊಳಿಸಿದ್ದಾರೆ. ಭೀಮ – ಕೌರವರನ್ನೂ, ನಕುಲ ಸಹದೇವರು ಜೊತೆಯಾಗಿ ಅಶ್ವತ್ಥಾಮ, ಕೃಪರ ವಿರುದ್ದವೂ ಸಮರ ಸಾರುತ್ತಿದ್ದಾರೆ.
ಆದರೆ ಕರ್ಣ ಮಾತ್ರ ಅತ್ಯಂತ ಕುತೂಹಲಿಗನಾಗಿ ಅರ್ಜುನ ಇಂದೇಕೆ ಎನಗೆ ಇದಿರಾಗಿ ಬರುತ್ತಿಲ್ಲ? ಎಂಬ ಪ್ರಶ್ನೆಯಲ್ಲಿ ಮುಳುಗಿದ್ದಾನೆ. ಮನದ ಭಾವ ಶಲ್ಯನಲ್ಲಿ ಹೇಳಬೇಕೆಂಬ ಹೆಬ್ಬಯಕೆ ಒತ್ತರಿಸಿ ಬರುತ್ತಿದ್ದರೂ, ಕೇಳಿದರೆ ಏನು ಅಪಸ್ವರ ಕೇಳಬೇಕಾದಿತು ಎಂದು ಭಾವಿಸಿ ಹಾಗೆ ಸುಮ್ಮನುಳಿದಿದ್ದನು. ಆದರೂ ತಡೆಯಲಾಗದೆ ಶಲ್ಯನ ಬಳಿ ಅರ್ಜುನನ ಬಗ್ಗೆ ವಿಚಾರಿಸಿ ಬಿಟ್ಟನು.
ಕರ್ಣ ಕೇಳಿದೊಡನೆ ವ್ಯಗ್ರನಾದ ಮಾದ್ರೇಶ. “ಹೇ ಕರ್ಣಾ! ನೀನು ಈಗಾಗಲೆ ಬಹುಮಾನ ಕೊಡುವೆ, ಕೃಷ್ಣಾರ್ಜುನರನ್ನು ತೋರಿಸಿ ಎಂದು ಕೆಲ ಸಮಯದ ಕೆಳಗೆ ಘೋಷಿಸಿರುವೆ. ಆಗ ನಿನಗೆ ನಾನು ಅರ್ಥವಾಗುವಂತೆ ತಿಳಿ ಹೇಳಿದ್ದರೂ, ಮತ್ತೆ ಅದೆ ಗುಂಗಿನಲ್ಲಿ ಮುಳುಗಿರುವೆ. ಸಾತ್ಯಕಿಯ ವಿರುದ್ದ ಹೋರಾಡುತ್ತಿರುವ ನಿನ್ನ ಯುದ್ದ ಪರಿಕ್ರಮದಲ್ಲಿ ಆ ಭಾವ ವ್ಯತ್ಯಾಸ ಕಾಣುತ್ತಿದ್ದೇನೆ. ನಿನಗೆ ಈಗಲೂ ಹೇಳುತ್ತೇನೆ ಕೇಳು, ನಿನ್ನಿಂದ ಅರ್ಜುನನನ್ನು ಗೆಲ್ಲಲಾಗದು. ಕಲಿ ಪಾರ್ಥ ನಿನ್ನ ಎದುರು ಬಂದರೆ, ನೀನೆಂದುಕೊಂಡಂತೆ ಸುಲಭದ ತುತ್ತಾಗಲಾರರು. ನೀನು ಬಯಸುತ್ತಿರುವ ಆ ಈರ್ವರು ಅತಿಭಾರದ ಕಲ್ಲುಗಳು. ಅವರಿಬ್ಬರನ್ನು ಕುತ್ತಿಗೆಗೆ ಬಿಗಿದು ಈ ರಣವೆಂಬ ಮಹಾಸಾಗರವನ್ನು ಈಜಿ ದಡಸೇರಲು ಹೊರಟರೆ, ನೀನು ಮುಳುಗಿ ಸಾಯುವೆ. ಆ ಇಬ್ಬರು ಕಲ್ಲುಗಳಂತೆ ನಿನ್ನನ್ನು ಮುಳುಗಿಸುತ್ತಾರೆ ಹೊರತು ಈಸಿ ಜೈಸಲು ಬಿಡಲಾರರು ಎಂಬ ಸತ್ಯ ತಿಳಿದುಕೊಳ್ಳಬೇಕು. ನೀನು ಕೌರವನಿಗೆ ಜಯ ಒದಗಿಸಿ ಕೊಡಬೇಕೆಂಬ ಬಯಕೆಯಿದ್ದರೆ ಅಶ್ವತ್ಥಾಮಾದಿಗಳು ವ್ಯೂಹವಾಗಿ ಅರ್ಜುನನನ್ನು ಆವರಿಸಿ ಕಾದಾಡಲಿ. ಅವನೊಬ್ಬನನ್ನುಳಿದು ಅನ್ಯರ ನಾಶಗೈಯುವ ಕಾರ್ಯದಲ್ಲಿ ನೀನು ತೊಡಗಿಕೋ. ಅದನ್ನು ಬಿಟ್ಟು ಅರ್ಜುನನ್ನು ಬಯಸಿದೆಯಾದರೆ ಅದು ನಿನ್ನ ಮುಕ್ತಾಯಕ್ಕೆ ಕಾರಣವಾದರೂ ಆಗಬಹುದು” ಎಂದು ವಿವರಿಸಿ ಹೇಳಿದನು.
ಕರ್ಣನಿಗೆ ಶಲ್ಯನ ಮಾತು ಅಪ್ರಿಯವಾಗಿ ಅಸಹನೀಯ ಸಿಟ್ಟನ್ನು ಉಂಟು ಮಾಡಿತು. ಪರಿಣಾಮವಾಗಿ “ಹೇ ಮಾದ್ರೇಶ ನೀನು ಕೇವಲ ಮಿತ್ರಮುಖ ( ತೋರಿಕೆಗೆ ಮಿತ್ರ – ನಿಜದಲ್ಲಿ ಶತ್ರು) ನಂತೆ ವರ್ತಿಸುತ್ತಿರುವೆ. ನಾನು ನನ್ನ ಬಾಹುಬಲದ ಮೇಲೆ ವಿಶ್ವಾಸವಿದ್ದು ಅರ್ಜುನನ ವಧೆಗೆ ಸನ್ನದ್ಧನಾಗಿರುವೆ. ನೀನು ಶತ್ರುವೇ ಬಲಾಢ್ಯ ಎಂದು ವರ್ಣಿಸುತ್ತಿರುವೆ. ಆದರೆ ಒಂದು ವಿಚಾರ ತಿಳಿದುಕೋ, ಸಾಕ್ಷಾತ್ ಇಂದ್ರನ ವಜ್ರಾಯುಧಧರನಾಗಿ ಬಂದರೂ ಎದುರಿಸಿ ಹೋರಾಡಬಲ್ಲ ಸಮರ್ಥ ನಾನು. ಹೀಗಿರುವಾಗ ಮನುಷ್ಯ ಮಾತ್ರನಾದ ಅರ್ಜುನನ್ನು ವೈಭವೀಕರಿಸಿದ ಮಾತ್ರಕ್ಕೆ ನನ್ನ ಗುರಿಯಿಂದ ಚ್ಯುತನಾಗಲಾರೆ” ಎಂದನು.
“ಹೇ ಕರ್ಣಾ! ನಿನ್ನಂತಹ ಮೂರ್ಖ ಸೇನಾಪತಿ ಕೌರವನ ಸೋಲಿಗೆ ಕಾರಣವಾದೀತು ಹೊರತು, ಜಯವನ್ನು ಖಂಡಿತಾ ಕಾಣಿಸಲಾರೆ. ನನ್ನ ಮಾತು ಸತ್ಯವೋ ಸುಳ್ಳೋ ಎಂಬ ವಿಶ್ವಾಸ ಬರಿದು ಮಾತಿನಿಂದ ಸಮರ್ಥನೆ ಮಾಡಲಾಗದು. ಯಾವಾಗ ಪಾರ್ಥನ ತೀಕ್ಷ್ಣ ಶರಗಳು ನಿನ್ನ ಶರೀರ ಹೊಕ್ಕು ನುಸುಳುತ್ತವೋ, ಆ ಅಸಹನೀಯ ನೋವಿನ ಅನುಭವವಾದಾಗ ನಿನಗೆ ಅರಿವಾಗುವುದು. ಅಂತಹ ಕ್ಷಣವಷ್ಟೆ ನಿನಗೆ ಅರ್ಜುನ ಏನು ಎಷ್ಟು ಎಂಬುವುದು ಅರ್ಥ ಮಾಡಿಸಬಲ್ಲುದು. ಆ ತನಕ ಎಷ್ಟು ಹೇಳಿದರೂ ಗೋರ್ಗಲ್ಲ ಮೇಲೆ ನೀರೆರೆದಂತೆ. ನಾಯಿ ಬೊಗಳಿದರೆ ಹೆದರುವ ಪ್ರಾಣಿಗಳು ಮಾತ್ರ ಬೆದರುತ್ತವೆ. ಹಾಗೆಂದು ಸಿಂಹದ ಮುಂದೆ ನಿಂತು ಬೊಗಳಿದರೆ ಸಿಂಹ ಭಯಗೊಳ್ಳಲು ಸಾಧ್ಯವಿದೆಯೆ? ಹಾಗೆ ಮಾಡುವುದರಿಂದ ಪರಿಣಾಮ ಏನಾದೀತೆಂದು ಬೇರೆ ವರ್ಣಿಸಿ ಹೇಳುವುದು ಅನಗತ್ಯ. ನಿನ್ನಂತಹ ಗ್ರಾಮಸಿಂಹನಿಗೆ ಮೃಗರಾಜ ಕೇಸರಿ ಅರ್ಜುನ ಅಂಜುವುದುಂಟೆ? ” ಎಂದು ದೂಷಣೆ ಮಾಡಿದನು.
ಹೀಗೆ ಶಲ್ಯ ಕರ್ಣನನ್ನು ತುಚ್ಚ ಭಾವದಿಂದ ನಿಂದಿಸಿದಾಗ ರಾಧೇಯನ ಮೈಯೆಲ್ಲಾ ಕೋಪದಿಂದ ಉರಿಯತೊಡಗಿತು. ಶಲ್ಯನ ಅಭಿಪ್ರಾಯಕ್ಕೆ ಪ್ರತಿಯಾಗಿ “ಗುಣವಂತನಿಗೆ ಮಾತ್ರ ಇತರರ ಸುಗುಣ ಕಾಣಲು ಸಾಧ್ಯ. ದುರ್ಗುಣಿಗೆ ಅನ್ಯರ ಸದ್ಗುಣ ಅರಿಯಲು ಸಾಧ್ಯವೆ? ಹಾಗಾಗಿಯೆ ನಿನಗೆ ನನ್ನ ಗುಣ ವಿಶೇಷಗಳು ಅಗೋಚರವಾಗಿವೆ. ಅರ್ಜುನ ಮಾತ್ರ ವೀರನೆ? ನಾನೇನು ಧನುರ್ಬಾಣ ತೊರೆದು ಸೀರೆಯುಟ್ಟು, ಹೂ ಮುಡಿದು ಬಳೆ ತೊಟ್ಟಿರುವೆನೆ? ನನ್ನ ಮತ್ತು ಅರ್ಜುನ ಇಬ್ಬರ ಬಗ್ಗೆಯೂ ನೀನು ತಿಳಿದಿರುವುದು ಬಹಳ ಕಡಿಮೆ. ಅದೂ ಅರ್ಜುನನ ವಿಚಾರದಲ್ಲಿ ನಾನು ಬಲ್ಲ ಅರ್ಧದಷ್ಟು ಜ್ಞಾನವೂ ನಿನಗಿಲ್ಲ. ನನ್ನ ಬತ್ತಳಿಕೆಯಲ್ಲೂ ರಕ್ತಭೋಜಿಯಾದ ಬಾಣಗಳು ಬಹಳಷ್ಟಿವೆ. ಪಾರ್ಥನ ರಕ್ತ ಹೀರಲು ಸಿದ್ಧವಾಗಿವೆ. ಶಲ್ಯಾ! ನೀನು ಈ ತನಕ ಎಂದಾದರು ಮಹಾ ಯುದ್ಧದ ಭಾಗಿಯಾಗಿರುವೆಯಾ? ಅನನುಭವಿಯಾದ ನಿನಗೆ ಭಯವಾಗುತ್ತಿದೆ. ಪ್ರಾಣ ರಕ್ಷಣೆಗಾಗಿ ಈ ರೀತಿ ನನ್ನನ್ನು ಭೀತನಾಗಿಸುವ ಹುನ್ನಾರ ಮಾಡುತ್ತಿರುವೆ. ನಿನ್ನ ಯೋಗ್ಯತೆ ಅಂತಹುದು. ಪಾಪಭೂಯಿಷ್ಠವಾದ, ಕುತ್ಸಿತ ಬುದ್ಧಿಯ ಜನರ ದೇಶದಲ್ಲಿ ಹುಟ್ಟಿ ಬೆಳೆದ ನಿನ್ನ ಬುದ್ದಿಯೂ ಅಂತಹದ್ದು ಆಗಿರುವುದು ಅಚ್ಚರಿಯ ವಿಚಾರವಲ್ಲ. ದುರ್ನಡತೆಯ ಮಾದ್ರದೇಶದ ಸ್ತ್ರೀಯರ ಬಗ್ಗೆ ಕಲಾವಿದರು ಹಾಡು ರಚಿಸಿ ಅನ್ಯ ದೇಶದ ರಾಜರ ಆಸ್ಥಾನದಲ್ಲಿ ನಾಟಕವಾಡಿ ರಂಜನೆ ನೀಡುತ್ತಾರೆ. ಮಾದ್ರ ದೇಶದ ಬಗ್ಗೆ ಇರುವ ಗಾದೆಗಳ ಬಗ್ಗೆ ನೀನೂ ತಿಳಿದಿರಬಹುದು. ಮಾದ್ರ ದೇಶದ ಜನರು ಮಿತ್ರದ್ರೋಹಿಗಳೆಂದು ಪ್ರಸಿದ್ಧರಾದವರು. ನೀನೂ ಅದಕ್ಕೆ ಹೊರತಾದವನಲ್ಲ. ಅದೆ ಕಾರಣಕ್ಕಾಗಿ ರೂಢಿಯಲ್ಲಿ ನಿಷ್ಕಾರಣವಾಗಿ ಯಾರನ್ನಾದರು ದ್ವೇಷಿಸಿದರೆ ಅಂತಹ ಜನರನ್ನು ಮಾದ್ರಕರು ಎಂದು ಹೆಸರಿಟ್ಟು ಕರೆಯುತ್ತಾರೆ. ಮಾದ್ರ ದೇಶೀಯರಿಗೆ ಸಂಸ್ಕಾರವೆ ಇಲ್ಲ. ಸೌಹಾರ್ದಯುತ ಬದುಕು ಅಂದರೆ ಏನೆಂದು ತಿಳಿದಿಲ್ಲ. ಅದು ದೇಶದವನಾದ ನಿನ್ನಿಂದ ನಾನು ಹೇಗೆ ಸದ್ಗುಣ ಅಪೇಕ್ಷೆ ಮಾಡಲು ಸಾಧ್ಯ? ಅದಕ್ಕೆ ಪ್ರಾಜ್ಞರು ಮದ್ರದೇಶೀಯರು ಶತ್ರುತ್ವ – ಮಿತ್ರತ್ವ ಎರಡೂ ವಿಭಾಗಕ್ಕೂ ಸಲ್ಲದವರು ಎಂದು ಹೇಳಿರುವುದು. ಶೌಚದ ವಿಚಾರದಲ್ಲೂ ಅತಿ ನೀಚರಾದ ನಿಮ್ಮ ಜೊತೆ ಸಹಯೋಗ ಮಾಡಿರುವುದು ಅಪರಾಧ. ಮದ್ಯ ಕುಡಿದು, ಮೈಯ ವಸ್ತ್ರ ಬಿಚ್ಚಿ ಎಸೆದು ಬೆತ್ತಲೆ ಕುಣಿಯುವ ಮಾನಗೆಟ್ಟ, ತಾವು ಇಚ್ಚಿಸಿದ ಪರ ಪುರುಷರೊಡನೆ ಸಂಗ ಮಾಡುವ ಹೆಂಗಸರಿಗೆ ಹುಟ್ಟಿದ ಆ ದೇಶವಾಸಿಗಳಲ್ಲಿ ಇಂತಹ ಸಂಸ್ಕಾರ ಹೀನ ಗುಣವಿರುವುದು ವಿಸ್ಮಯದ ವಿಚಾರವಲ್ಲ. ನನ್ನ ಬಗ್ಗೆ ದುರ್ವಚನ ಆಡುವ ಮೊದಲು ನೀನು ಒಂದು ಸತ್ಯ ತಿಳಿಯಬೇಕು. ನಾನು ಮಿತ್ರ ಕೌರವನಿಗಾಗಿ ಸರ್ವ ಸಮರ್ಪಣೆಗೆ ಸಿದ್ದ. ಕಡೆ ಪಕ್ಷ ಪ್ರಾಣತ್ಯಾಗದ ಸ್ಥಿತಿ ಬಂದರೂ ಅಳುಕದೆ ಅದಕ್ಕೂ ಸನ್ನದ್ಧನಾಗುವೆ. ಅಂತಹ ನನಗೆ ವ್ಯಭಿಚಾರಿಣಿಗಳಾದ ಕೇಶಾಗ್ರದಿಂದ ಪಾದಮೂಲದವರೆಗೆ ಹೇಳಬಹುದಾದಷ್ಟು ನೀಚ ಚರಿತ್ರೆಯ ಸ್ತ್ರೀ ಪುರುಷರಿಗೆ ಜನಿಸಿದ ಮಾದ್ರದೇಶೀಯನಾದ ನಿನ್ನಂತಹ ದುರ್ಜನರಿಂದ ಧರ್ಮೋಪದೇಶವೆ? ನೀನು ಪಾಂಡವರ ಪಕ್ಷಪಾತಿಯಾಗಿದ್ದು, ನಮ್ಮ ಪಕ್ಷದ ನಾಶಕ್ಕಾಗಿ ಪಾಂಡವರಿಂದಲೆ ನಿಯುಕ್ತನಾಗಿರುವ ಆತತಾಯಿ” ಎಂದೆಲ್ಲಾ ಹೇಳಿ ಮನಬಂದಂತೆ ಕರ್ಣನೂ ಜರೆದನು.
ಯಾವಾಗ ಕರ್ಣನು ತನ್ನ ಸಾರಥಿ ಶಲ್ಯನ ಬಗ್ಗೆ ಮತ್ತು ಆತನ ಜನ್ಮಭೂಮಿ ಮತ್ತು ಅಲ್ಲಿನ ಮಾತೆಯರ ಬಗ್ಗೆ ನಿಕೃಷ್ಟವಾಗಿ ನಿಂದಿಸಿದನೊ! ಆಗ ಶಲ್ಯನು ಅಸಹ್ಯವಾದ ರೋಷಾವೇಶಕ್ಕೆ ಒಳಗಾದನು. “ಹೇ ನೀಚ ಕುಲದ ಅಧಮನೇ, ನಿನಗೆ ನನ್ನ ಬಗ್ಗೆ, ನನ್ನ ದೇಶ ಮತ್ತು ಮಾತೆಯರ ಬಗ್ಗೆ ಮಾತನಾಡುವ ಕನಿಷ್ಟ ಯೋಗ್ಯತೆಯೂ ಇಲ್ಲ. ನೀನು ಯಾರು? ಏನು? ಎಂದು ತಿಳಿಯದ ಬೇವಾರಿಸು ಬದುಕನ್ನು ಬದುಕುವ ಬೀದಿನಾಯಿಗೆ ಸಮನಾಗಿರುವೆ. ಯಾರದೊ ಹಂಗಿನರಮನೆಯಲ್ಲಿ ಬಿಟ್ಟಿ ಕೂಳಿಗೋಸ್ಕರ ಪಾದ ನೆಕ್ಕುವ ಕಾರ್ಯ ಮಾಡುತ್ತಿರುವೆ. ನನ್ನ ವಂಶದ ಬಗ್ಗೆ ನೀನು ಎಳ್ಳಷ್ಟೂ ತಿಳಿದಿಲ್ಲ. ಯಾಗ ಯಜ್ಞಾದಿಗಳನ್ನು ನಿರಂತರ ಮಾಡುತ್ತಾ ಬಂದಿರುವ ಹಿರಿಯರ ಸುಕೃತ ಫಲದ ಬಲವಿರುವ ವಂಶದಲ್ಲಿ ಜನಿಸಿದ್ದೇನೆ. ಸಂಗ್ರಾಮದಲ್ಲಿ ಮೂರ್ಧಾಭಿಷಿಕ್ತರಾದ ಮೇಲೆ ಹೆದರಿ ಓಡದೆ, ಎದೆಗೊಟ್ಟು ಹೋರಾಡಿ ಗೆದ್ದು ಅಥವಾ ಮಡಿದು ಅಂತ್ಯ ಕಂಡಂತಹ ಮಹಾತ್ಮರ ವಂಶಜ ನಾನು. ನೀನು ಇಂದಿನ ತನಕ ಬದುಕಿರುವುದು ರಣರಂಗದಿಂದ ಓಡಿ ಅಡಗಿ ಬದುಕಿದ ಕಾರಣ. ಇಲ್ಲವಾಗಿದ್ದರೆ ಈ ತನಕ ನೀನು ಸೋತು ಓಡಿದ ಲೆಕ್ಕ ಹಾಕಿದರೆ ಎಷ್ಟೋ ಬಾರಿ ಸತ್ತು ಹೋಗಿರುವೆ. ಶವ ಸದೃಶನಾಗಿದ್ದರೂ, ಮತ್ತೂ ಔದತ್ಯ ತೋರುತ್ತಿರುವೆ. ನಾಚಿಗೆಗೆಟ್ಟವನೆ! ನಿನಗೆ ಅನ್ಯರತ್ತ ಬೆರಳು ತೋರುವ ಯೋಗ್ಯತೆಯೆ ಇಲ್ಲ. ನಾನು ವಿದ್ರೋಹಿ ಎಂದಿರುವೆಯಾ? ನಾನೊಬ್ಬ ಮಹಾರಥಿಯಾಗಿದ್ದರೂ, ವಹಿಸಿರುವ ಪಕ್ಷದ ಜಯಕ್ಕಾಗಿ ಕುಲಹೀನ, ನೀಚನಾದಂತಹ ನಿನ್ನ ರಥದ ಸಾರಥ್ಯ ವಹಿಸಿರುವೆ. ಪಕ್ಷ ನಾಯಕನ ಒತ್ತಾಸೆ ವ್ಯಕ್ತವಾದಾಗ, ನನ್ನ ವೈಯಕ್ತಿಕ ಪ್ರತಿಷ್ಟೆ ಬದಿಗಿರಿಸಿ ಅಪೇಕ್ಷಿತ ಕಾರ್ಯವೆಸಗಲು ಒಪ್ಪಿ ಬಂದಿರುವೆ. ಸಮರದ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳುವ ಮೊದಲು ನಾನು ಹೇಳುವ ಅನುಭವದ ವಿಚಾರ ತಿಳಿದುಕೊಳ್ಳಬೇಕಿತ್ತು. ಸಮಾವಸ್ಥೆ ಅಥವಾ ವಿಷಮಾವಸ್ಥೆ, ರಥಿಯ ಪ್ರಬಲತೆ ಮತ್ತು ದೌರ್ಬಲ್ಯ, ರಥದ ಕುದುರೆಗಳ ಪರಿಶ್ರಮ, ಆಯುಧಗಳ ಪರಿಜ್ಞಾನ, ಜಯಾಪಜಯ ಸೂಚಿಸುವ ಮೃಗ ಪಕ್ಷಿಗಳ ಧ್ವನಿಗಳ ಅರಿವು, ಶಲ್ಯ ಚಿಕಿತ್ಸೆ ( ಬಾಣಗಳಿಂದ, ಆಯುಧಗಳಿಂದಾಗುವ ತೀವ್ರ ಗಾಯಗಳ ಶೀಘ್ರ ಉಪಶಮನದ ಚಿಕಿತ್ಸೆ) ಅಸ್ತ್ರ – ಮಹಾಸ್ತ್ರ ಪ್ರಯೋಗಕ್ಕೆ ಸೂಕ್ತ ಹಂತ, ವೈರಿ ಪ್ರಯೋಗಿಸುವ ಅಸ್ತ್ರಗಳು, ಶುಭಾಶುಭ ಶಕುನಗಳು ಈ ಎಲ್ಲಾ ವಿಚಾರ ಸೂಕ್ಷ್ಮಗಳನ್ನು ಬಲ್ಲವನಾಗಿರುವೆ. ಇಂತಹ ವಿಶೇಷ ಗುಣಗಳಿರುವುದರಿಂದಲೆ ನಿನ್ನನ್ನು ಎಚ್ಚರಿಸುತ್ತಾ ಮಾರ್ಗದರ್ಶನ ಮಾಡುತ್ತಿರುವೆ. ಅರ್ಥ ಮಾಡಿಕೊಳ್ಳಲಾಗದೆ ಅನುಮಾನಿಸುವ ಬುದ್ದಿ ಜಾಗೃತವಾಗಿರುವುದು ನಿನ್ನ ದೌರ್ಭಾಗ್ಯ.” ಎಂದು ವಿಸ್ತೃತವಾಗಿ ವಿವರಿಸಿದನು. ಇಷ್ಟಕ್ಕೆ ನಿಲ್ಲಿಸದೆ
ಮುಂದುವರಿಸುತ್ತಾ ದೃಷ್ಟಾಂತ ಸಹಿತವಾದ ಒಂದು ಪ್ರಕರಣದ ಕಥೆ ಹೇಳಲು ಆರಂಭಿಸಿದನು ಶಲ್ಯ…
ಮುಂದುವರಿಯುವುದು….



















