21.1 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 401

ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೦೧ ಮಹಾಭಾರತ

ಶಲ್ಯನು ಸಾರಥ್ಯವಹಿಸಲು ಒಪ್ಪಿಗೆ ನೀಡಿರುವುದು ಮತ್ತು ಕರ್ಣ ಉಗ್ರವಾದ ಪ್ರತಿಜ್ಞೆಗೈದು ಯುದ್ದಕ್ಕೆ ಸಜ್ಜಾಗಿ ಕಟಿಬದ್ದನಾಗಿ ನಿಂತಿರುವುದನ್ನು ಕಂಡ ದುರ್ಯೋಧನನು ಅತ್ಯಂತ ಸಂತುಷ್ಟನಾದನು. ವಿಜಯ ಸಂಪಾದನೆಯ ಆಸೆ ಗರಿಗೆದರಿತು. ಹರ್ಷದಲ್ಲಿ ಉನ್ಮಾದ ಹೊಂದಿದವನಾಗಿ ಹೇಳತೊಡಗಿದನು “ಮದ್ರರಾಜ! ತ್ರಿಪುರಾಸುರರ ಯುದ್ಧ ಸಮಯದಲ್ಲಿ ಈಶ್ವರನಿಗೆ ಬ್ರಹ್ಮದೇವನು ಯಾವ ರೀತಿಯಲ್ಲಿ ಹಿತಕರ ಸಾರಥಿಯಾಗಿದ್ದನೊ, ವರ್ತಮಾನ ಕಾಲದಲ್ಲಿ ಪಾರ್ಥನಿಗೆ ಕೃಷ್ಣ ಹೇಗೆ ಪೂರ್ಣ ಬಲದ ಸಹಕಾರ ನೀಡುತ್ತಿದ್ದಾನೊ, ಅದಕ್ಕಿಂತ ಮಿಗಿಲಾದ ರೀತಿಯಲ್ಲಿ ನೀವು ನಮ್ಮ ಜಯಕ್ಕಾಗಿ ಸರ್ವದಾ ಪ್ರಯತ್ನಶೀಲರಾಗಿರಿ. ಹಾಗಾದಲ್ಲಿ ನೀವೀರ್ವರನ್ನು ತಡೆಯಬಲ್ಲವರು ಯಾರೂ ಇರಲಾರರು” ಎಂದನು.

ಈ ಮಾತನ್ನು ಕೇಳಿಸಿಕೊಂಡ ಶಲ್ಯ ಭೂಪತಿ ಉತ್ತರರೂಪವಾಗಿ ಹೇಳತೊಡಗಿದನು “ದುರ್ಯೋಧನಾ! ನಾನು ಕೆಲವೊಂದು ಆದೇಶರೂಪವೂ, ನೀತಿಬೋಧೆಯೂ ಆಗಿರತಕ್ಕ ವಿಷಯಗಳನ್ನು ಹೇಳುತ್ತೇನೆ. ಕರ್ಣ ಈ ವಿಚಾರಗಳನ್ನು ತಪ್ಪದೆ ಪಾಲಿಸಿದರೆ ನಾನು ಆತನಿಗೆ ಸಹಕಾರಿಯಾಗಿ ಇರಬಲ್ಲೆ. ತನ್ನನ್ನು ತಾನು ನಿಂದಿಸಿಕೊಳ್ಳುವುದು; ತನ್ನನ್ನು ತಾನು ಪ್ರಶಂಸಿಕೊಳ್ಳುವುದು; ಇತರರನ್ನು ಯಾವಾಗಲೂ ಹೊಗಳುತ್ತಾ ಸ್ತೋತ್ರ ಮಾಡುತ್ತಿರುವುದು; ಇತರರನ್ನು ಸದಾ ನಿಂದಿಸುತ್ತಿರುವುದು ಈ ನಾಲ್ಕು ವಿಧದ ವ್ಯವಹಾರಗಳಿವೆ. ಆರ್ಯರಾದವರಿಗೆ ಈ ನಾಲ್ಕು ಉಪಕ್ರಮಗಳು ನಿಷಿದ್ಧವಾಗಿವೆ. ಅಂತಹ ಕೃತಿಗಳನ್ನು ಕರ್ಣ ಯಾವ ಕಾರಣಕ್ಕೂ ನನ್ನ ಜೊತೆಗಿರುವಾಗ ಮಾಡಕೂಡದು.

ಮಾತ್ರವಲ್ಲ, ಕ್ಷತ್ರಿಯನಾದವನಿಗೆ ಆತನ ಪ್ರಾಬಲ್ಯ ಮತ್ತು ದೌರ್ಬಲ್ಯ ಎರಡೂ ಸರಿಯಾಗಿ ತಿಳಿದಿರಬೇಕು. ಪ್ರಾಬಲ್ಯವನ್ನು ಬಳಸಿಕೊಂಡು, ದೌರ್ಬಲ್ಯವಿರುವ ವಿಭಾಗವನ್ನು ದೂರವಿರಿಸಿಕೊಳ್ಳುವ ಚಾಣಾಕ್ಷತೆ ರಕ್ತಗತವಾಗಿರಬೇಕು ನನ್ನ ವಿಚಾರದಲ್ಲಿ ತಿಳಿಯುವ ಬಯಕೆಯಿದ್ದರೆ, ಸಾರಥಿಯಾಗಿ ನನಗಿರುವ ಅಧಿಕ ಸಾಮರ್ಥ್ಯವೇನೆಂದರೆ ಪ್ರಮಾದವಿಲ್ಲದೆ ರಥದ ಗತಿ ನಿಯಂತ್ರಣ, ವಿರೋಧಿಯ ಪ್ರಚೋದನೆಯ ಪರಿಕ್ರಮಕ್ಕೆ ಸರಿರೂಪದ ಪ್ರತಿಕ್ರಿಯೆಯನ್ನು ಅರಿತು ಸಾಧಿಸಬಲ್ಲೆ. ಅಶ್ವಚಾಲನಾ ಜ್ಞಾನ, ವಿದ್ಯೆ, ಚಿಕಿತ್ಸೆ, ರಥಕಲ್ಪ, ರಥ ಮತ್ತು ರಥಿಕನ ರಕ್ಷಣೆ, ಸಾರಥಿಯಾದ ನನ್ನ ಹಾಗು ಅಶ್ವಗಳ ಸಂರಕ್ಷಣೆ ಮಾಡಬಲ್ಲೆ. ಈ ಎಲ್ಲ ಸಾರಥ್ಯದ ಗುಣ ವಿಶೇಷಣಗಳು ದೇವೇಂದ್ರನ ಸಾರಥಿಯಾದ ‘ಮಾತಲಿ’ ಹೊಂದಿದ್ದಾನೆ. ಆತನಿಗೆ ಸರಿಸಮಾನ ಸಾರಥ್ಯ ಮಾಡಬಲ್ಲ ಚತುರ ನಾನಾಗಿದ್ದೇನೆ. ಇವಿಷ್ಟು ನನ್ನ ಪ್ರಾಬಲ್ಯಗಳೆಂದು ತಿಳಿದಿದ್ದೇನೆ. ಈ ವಿಚಾರವನ್ನು ನಾನು ಕರ್ಣನ ಮುಂದೆ ಹೇಳಿದ ಕಾರಣ, ಓರ್ವ ಮಹಾರಥಿಗೆ ಆತನ ಸಹರಥಿಯಾಗಿರುವ ಸಾರಥಿ ತಿಳಿಸಿ ಸ್ಥೈರ್ಯ ತುಂಬಿದರೆ, ರಥಿಕ ತನ್ನ ಶಕ್ತಿಯನ್ನು ಉತ್ತೇಜನಗೊಳಿಸಿ ಇಮ್ಮಡಿಗೊಳಿಸಬಹುದು. ಕರ್ಣಾ! ನೀನು ಅರ್ಜುನನಿಗೆ ಇದಿರಾಗಿ ಯುದ್ದ ಮಾಡುವಾಗ ಯಾವುದೆ ರೀತಿಯ ಆತಂಕ, ರಥ ರಕ್ಷಣೆ, ಕುದುರೆಗಳ ಸುರಕ್ಷತೆ, ಸಾರಥಿಯ ಸಂರಕ್ಷಣೆಯ ಕುರಿತಾಗಿ ಗಮನ ಹರಿಸಿ ವಿಚಲಿತನಾಗಬೇಕಾಗಿಲ್ಲ. ಮಾತ್ರವಲ್ಲದೆ ರಥಿಕನಾದ ನಿನ್ನ ರಕ್ಷಣೆಯನ್ನೂ ಅರ್ಧಾಂಶ ಭಾಗ ನಾನು ಮಾಡಬಲ್ಲೆ ಎಂಬ ಧೈರ್ಯ ತುಂಬಿ ನಿನ್ನನ್ನು ಪ್ರೋತ್ಸಾಹಿಸುತ್ತಿದ್ದೇನೆ. ಇಂತಹ ಸುಸ್ಥಿತಿಯ ಸೌಕರ್ಯ ಒದಗಿದಾಗ ಏಕಾಗ್ರ ಚಿತ್ತನಾಗಿ ಎದುರಾಳಿ ಅರ್ಜುನನ್ನು ಎದುರಿಸಿ ಸೋಲಿಸುವುದಷ್ಟೆ ನಿನ್ನ ಕೈಂಕರ್ಯವಾಗುತ್ತದೆ. ಇದಿಷ್ಟು ತಿಳಿದ ಬಳಿಕ ನನ್ನ ದೌರ್ಬಲ್ಯವೇನೆಂದು ನೀನು ಅರಿತಿರಬೇಕು. ಎಲ್ಲಿ ನನಗೆ ಅಪಮಾನವಾಗುವುದೊ, ಅಲ್ಲಿ ಒಂದೊ ಅಂತಹವರನ್ನು ನಾಶಗೊಳಿಸುವೆ, ಇಲ್ಲ ಅಂತಹ ಕೃತ್ಯವೆಸಗಿದವರು ನನ್ನ ಆತ್ಮೀಯರು, ಬಾಂಧವರು, ಸ್ವಜನರು ಆಗಿದ್ದರೆ ಅವರನ್ನು ಸಂಬಂಧದ ಕಾರಣಕ್ಕೆ ಮನ್ನಿಸಿ, ನನ್ನ ಭಾಗಕ್ಕೆ ಅಕ್ಷಮ್ಯ ಎನಿಸುವ ಅಪರಾಧ ಎಸಗಿದುದಕ್ಕಾಗಿ ತೊರೆದುಬಿಡುವೆ. ಮತ್ತೆಂದೂ ಅವರಿಗೆ ನನ್ನಿಂದ ಸಹಯೋಗ ಒದಗದು. ಇದನ್ನು ತಿಳಿದವನಾಗಿ ಒಂದು ಸುಸ್ಪಷ್ಟ ಶರತ್ತನ್ನು ನಾನೀಗಾಗಲೆ ಹೇಳಿದ್ದೇನೆ. ನಾನು ನೀಡುವ ಯಾವುದೇ ಸಲಹೆ, ನಿರ್ದೇಶನವನ್ನು ನೀನು ತಪ್ಪದೆ ಪಾಲಿಸತಕ್ಕದ್ದು. ಎಲ್ಲಿಯಾದರೂ ನೀನು ನನ್ನ ಮಾತು ಕೇಳದೆ ವ್ಯತಿರಿಕ್ತವಾಗಿ ವರ್ತಿಸಿದೆಯಾದರೆ, ಆ ಕ್ಷಣವೆ ನಿನ್ನ ರಥದ ಸಾರಥ್ಯ ತೊರೆದು ಇಳಿದು ಹೋಗುತ್ತೇನೆ. ಈ ಎಚ್ಚರಿಕೆಯನ್ನು ಮರೆಯದೆ ಪಾಲಿಸಿದೆಯಾದರೆ ನೀನು ಅಜೇಯನಾಗಿಯೂ, ಅಪ್ರತಿಮ ಸಾಹಸಿಯಾಗಿಯೂ ಸಾಧನೆ ಮಾಡುವೆ” ಎಂದು ಬಹಳ ವಿರಳವಾಗಿ ವಿವರಿಸಿ ಹೇಳಿದನು.

ಕರ್ಣನಿಗೆ ಶಲ್ಯನ ಆತ್ಮ ವಿಮರ್ಷಾತ್ಮಕ ನಿಲುವು ಎಷ್ಟರ ಮಟ್ಟಿಗೆ ಒಪ್ಪಿಗೆಯಾಗಿತ್ತೋ! ತಿಳಿಯದು. ಆದರೂ ಅನ್ಯವಚನವಾಡಲು ಅವಕಾಶವಿಲ್ಲದ ಕಾರಣ “ಆಯಿತು ಒಪ್ಪಿದ್ದೇನೆ” ಎಂದಷ್ಟೆ ಹೇಳಿ ಸಮ್ಮತಿ ಸೂಚಿಸಿದನು.

ಹೀಗೆ ಹದಿನೇಳನೆ ದಿನ ನಾಳೆಯ ಸೂರ್ಯೋದಯದ ಬಳಿಕದ ಯುದ್ದ ಸಿದ್ಧತೆಯನ್ನು ಸಮಾಲೋಚಿಸಿ ಕೌರವ ಪಕ್ಷೀಯರು ವಿರಮಿಸಿ ವಿಶ್ರಾಂತರಾದರು.

ಪ್ರಾತಃಕಾಲದಲ್ಲೆದ್ದು, ನಿತ್ಯವಿಧಿ ಪೂರೈಸಿ ಎಲ್ಲರು ಸಮರಕ್ಕೆ ಸಜ್ಜಾದರು. ಕೌರವ – ಮಾದ್ರೇಶ ಶಲ್ಯನ ಬಳಿ ಬಂದು ವಂದಿಸಿ ನಿಂತು “ಭೂಪತಿ! ಇಂದಿನ ಯುದ್ಧದಲ್ಲಿ ಕರ್ಣನ ರಥದ ಶ್ರೇಷ್ಟ ಕುದುರೆಗಳನ್ನು ನಿಯಂತ್ರಿಸಬೇಕು. ನಿಮ್ಮಿಂದ ರಕ್ಷಿತನಾದ ರಾಧೇಯ ಖಂಡಿತವಾಗಿ ಕೌಂತೇಯಯನ್ನು ಪರಾಜಿತನನ್ನಾಗಿಸುತ್ತಾನೆ ಎಂಬ ವಿಶ್ವಾಸ ನನಗಿದೆ” ಎಂದನು. ಶಲ್ಯನು “ಆಗಲಿ” ಎಂದು ಸಮ್ಮತಿಸಿದನು.

ಕರ್ಣನು ತನ್ನ ನಿತ್ಯದ ಸಾರಥಿಯನ್ನು ಕರೆದು ರಥವನ್ನು ಸಜ್ಜುಗೊಳಿಸಲು ಆದೇಶ ನೀಡಿದನು. ಅಂತೆಯೆ ಇಂದ್ರ ನಗರಿಯಂತೆ ಸಕಲ ವ್ಯವಸ್ಥೆ, ಆಯುಧಗಳು, ಸಕಲ ಯುದ್ಧ ಸಂಬಾರಗಳು ಜೋಡಿಸಲ್ಪಟ್ಟ, ಮಂಗಳಕರವಾದ ಉತ್ತಮ ರಥ ಸಿದ್ಧವಾಯಿತು. ಬ್ರಹ್ಮವಿದರಾದ ಪುರೋಹಿತರು ಸ್ವಸ್ತಿವಾಚನಗಳಿಂದ ಸಂಪ್ರೋಕ್ಷಿಸಿ, ಯಥಾವಿಧಿಯಾಗಿ ಸಂಪೂಜಿಸಿ ಪ್ರದಕ್ಷಿಣೆಗೈದು ದೇವತಾಪ್ರಾರ್ಥನೆಗೈದು ರಕ್ಷಾ ಸ್ತೋತ್ರ ಪಠಿಸಿದರು.

ಕರ್ಣನು ಮತ್ತೊಮ್ಮೆ ಸೂರ್ಯೋಪಾಸನೆಗೈದು ಜಗಚಕ್ಷುವಿಗೆ ನಮಿಸಿದನು. ರಥವನ್ನು ಸ್ಪರ್ಶಿಸಿ ಶಿರಬಾಗಿ ವಂದಿಸಿದನು. ತನ್ನ ಬಳಿಯಲ್ಲಿ ಇದ್ದ ಮಾದ್ರಾ ನರೇಶ ಶಲ್ಯ ಭೂಪತಿಯತ್ತ ತಿರುಗಿ ಪ್ರಣಾಮಗಳನ್ನು ಸಲ್ಲಿಸಿ, ರಥಾರೋಹಣಗೈಯಲು ಕೇಳಿಕೊಂಡನು. ಕರ್ಣನ ಪ್ರಾರ್ಥನೆಯಂತೆ ಶಲ್ಯನು – ಸಿಂಹವು ಪರ್ವತವನ್ನೇರುವ ಗಾಂಭೀರ್ಯದಿಂದ ದುರ್ದಶವಾದ, ವಿಶಾಲ ಮತ್ತು ಶ್ರೇಷ್ಟವಾದ ಕರ್ಣನ ರಥವನ್ನೇರಿದನು. ತನ್ನ ರಥದಲ್ಲಿ ಶಲ್ಯ ಭೂಪ ಸ್ಥಿತನಾದುದನ್ನು ಕಂಡು ಕರ್ಣನು ವಿದ್ಯುತ್ತಿನಿಂದ ಕೂಡಿದ ಮೇಘಗಳ ಮೇಲೆ ಸೂರ್ಯನು ಪ್ರತಿಷ್ಟಿತನಾಗುವಂತೆ ರಥವೇರಿ ಉಪವಿಷ್ಟನಾದನು.

ಆಗ ದುರ್ಯೋಧನ ಕರ್ಣನ ರಥದ ಬಳಿಬಂದು “ಮಿತ್ರ ಕರ್ಣಾ! ನಿನ್ನ ಬಗ್ಗೆ ಮೊದಲಿನಿಂದಲೂ ಅಪಾರ ವಿಶ್ವಾಸವಿರಿಸಿಕೊಂಡಿದ್ದೇನೆ. ಇಂದಿನ ಯುದ್ಧದಲ್ಲಿ ನೀನು ಶ್ರೇಷ್ಟ ಧನುಷ್ಮಂತರ ಸಮಕ್ಷದಲ್ಲಿ ಭೀಷ್ಮ ದ್ರೋಣರಿಂದ ಮಾಡಲಾಗದೆ ಇರುವ ದುಷ್ಕರವಾದ ಕರ್ಮವನ್ನು ಸಾಧಿಸಿ ತೋರಬೇಕು” ಎಂದನು.

ದುರ್ಯೋಧನ ಹೀಗೆ ಹೇಳುತ್ತಿದ್ದಂತೆಯೆ ಕರ್ಣ ತನ್ನ ದಿವ್ಯ ಧನುಸ್ಸಿನ ಹೆದೆಯೇರಿಸಿ ಶಿಂಜಿನಿಯನ್ನು ಬಿಗಿದು ಟೇಂಕರಿಸಿದನು. ಇದನ್ನು ನೋಡುತ್ತಿದ್ದ ಕೌರವ ಪಕ್ಷದ ಸೈನ್ಯ ರಣೋತ್ಸಾಹದಿಂದ ಜಯಘೋಷ ಕೂಗುತ್ತಾ, ರಣ ಭೇರಿ, ವಾದ್ಯ, ಶಂಖನಾದ ಗೈಯುತ್ತಾ ವೀರಾವೇಶ ತೋರತೊಡಗಿತು. ಮಹಾರಥಿ ಕರ್ಣ ರಥಾರೂಢನಾಗಿ ಮಂದರ ಪರ್ವತ ಶಿಖರದಲ್ಲಿ ಶೋಭಿಸುವ ಸೂರ್ಯನಂತೆ ಕಂಗೊಳಿಸುತ್ತಿದ್ದಾನೆ. ರಥ ಕುರುಕ್ಷೇತ್ರದತ್ತ ಶಲ್ಯ ಸಾರಥ್ಯದಲ್ಲಿ ಸಾಗುತ್ತಿದೆ. ಇನ್ನೇನು ಕೆಲ ಕ್ಷಣದಲ್ಲಿ ಹದಿನೇಳನೆಯ ದಿನದ ಯುದ್ಧಾರಂಭವಾಗಲಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page